ಅಬುಧಾಬಿ: ಬೆಂಗಳೂರಿನ ಮೊನಚು ದಾಳಿ ಹಾಗೂ ಸಿಡಿದೆದ್ದ ಎಬಿ ಡಿ ವಿಲಿಯರ್ಸ್ ಅಬ್ಬರಕ್ಕೆ ಕೋಲ್ಕತಾ ನೈಟ್ ರೈಡರ್ಸ್ ಥಂಡಾ ಹೊಡೆದಿದೆ. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ ಸಾಂಘಿಕ ಪ್ರದರ್ಶನ ನೀಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೋಲ್ಕತಾವನ್ನು ಬರೋಬ್ಬರಿ 82 ರನ್ಗಳ ಅಂತರದಿಂದ ಸೋಲಿಸಿದೆ.
ಟಾಸ್ ಗೆದ್ದ ರಾಯಲ್ ಚಾಲೆಂಜರ್ಸ್ ಕಪ್ತಾನ ವಿರಾಟ್ ಕೊಹ್ಲಿ ಬ್ಯಾಟಿಂಗ್ ಆಯ್ದುಕೊಂಡರು. ಬೆಂಗಳೂರು ದಾಂಡಿಗರು ಕಪ್ತಾನನ ನಿರ್ಧಾರ ಸರಿಯಾಗಿಯೇ ಇತ್ತು ಎಂಬುದನ್ನು ನಿರೂಪಿಸುವಂತೆ ಆಟವಾಡಿದರು. ಮೊದಲ ವಿಕೆ್ಟ್ಗೆ ಅರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ 67 ರನ್ಗಳ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪಡಿಕ್ಕಲ್ 32 ರನ್ ಗಳಿಸಿದರೆ, ಫಿಂಚ್ 47 ರನ್ ಗಳಸಿದರು. ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ಸ್ ಜೋಡಿ ಮೂರನೇ ವಿಕೆಟ್ಗೆ 100 ರನ್ ಕಲೆ ಹಾಕಿದ್ದಲ್ಲದೆ, ಇಬ್ಬರೂ ಅಜೇಯರಾಗಿ ಉಳಿದರು. ಕೊಹ್ಲಿ 33 ರನ್ ಗಳಿಸಿದರು. ವಿಲಿಯರ್ಸ್ ಮತ್ತೊಮ್ಮೆ ಭರ್ಜರಿ ಪ್ರದರ್ಶನ ನೀಡಿ ಕೇವಲ 33 ಎಸೆತಗಳಲ್ಲಿ 6 ಸಿಕ್ಸರ್, 5 ಬೌಂಡರಿ ಸಹಿತ 73 ರನ್ ಸಿಡಿಸಿದರು. ಕ್ಷಿಪ್ರಗತಿಯಲ್ಲಿ ತಂಡದ ಸ್ಕೋರ್ ಏರುವಂತೆ ಮಾಡುವಲ್ಲಿ ವಿಲಿಯರ್ಸ್ ಪಾತ್ರ ಹಿರಿದಾಗಿತ್ತು. ಅಂತಿಮವಾಗಿ 20 ಓವರ್ಗಳಲ್ಲಿ ಕೇವಲ 2 ವಿಕೆಟ್ ನಷ್ಟಕ್ಕೆ ಬೆಂಗಳೂರು 194 ರನ್ ಕಲೆ ಹಾಕಿತು.
ಕೋಲ್ಕತಾ ಪರ ಯುವ ಬೌಲರ್ ಪ್ರಸಿದ್ಧ ಕೃಷ್ಣ ಹಾಗೂ ಆಂಡ್ರೆ ರಸೆಲ್ ತಲಾ 1 ವಿಕೆಟ್ ಗಳಿಸಿದರು. ಆದರೆ ರಸೆಲ್ 4 ಓವರ್ಗಳಲ್ಲಿ 42 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.
ಈ ದೊಡ್ಡ ಮೊತ್ತವನ್ನು ಬೆಂಬತ್ತಿ ಹೊರಟ ಕೋಲ್ಕತಾ ಸಾಧಾರಣ ಆರಂಭವನ್ನು ಪಡೆಯಿತು. ಟಾಮ್ ಬ್ಯಾಂಟನ್ (8) ಹಾಗೂ ಶುಬ್ಮನ್ ಗಿಲ್ 23 ರನ್ ಜತೆಯಾಟ ನೀಡಿದರು. ಇಡೀ ತಂಡದಲ್ಲಿ ಗಿಲ್ ಅತ್ಯಧಿಕ 34 ರನ್ ಗಳಿಸಿದರು. ನಂತರ ಬಂದವರಾರೂ ಹೆಚ್ಚುು ಹೊತ್ತು ಕ್ರೀಸ್ನಲ್ಲಿ ನಿಲ್ಲಲೇ ಇಲ್ಲ. ಮಧ್ಯಮ ಕ್ರಮಾಂಕ ಸಂಪೂರ್ಣವಾಗಿ ಕುಸಿದೇ ಹೋಯಿತು. ಕೋಲ್ಕತಾ ಬ್ಯಾಟಿಂಗ್ ಅದೆಷ್ಟು ಕಳಪೆಯಾಗಿತ್ತೆಂದರೆ, 8 ಆಟಗಾರರ ಸ್ಕೋರ್ ಒಂದಂಕಿ ದಾಟಲಿಲ್ಲ. ಇದ್ದುದರಲ್ಲಿ ಆಂಡ್ರೆ ರಸೆಲ್ ಹಾಗೂ ರಾಹುಲ್ ತ್ರಿಪಾಠಿ ತಲಾ 16 ರನ್ ಗಳಿಸಿ ತಂಡದ ಸ್ಕೋರ್ 100ರ ಗಡಿ ದಾಟಿಸಿದರು. ಅಂತಿಮವಾಗಿ ಕೋಲ್ಕತಾ 20 ಓವರ್ಗಳ ಅಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ ಕೇವಲ 112 ರನ್ ಗಳಿಸಿ 82 ರನ್ಗಳ ಹೀನಾಯ ಸೋಲು ಕಂಡಿತು.
ಬೆಂಗಳೂರು ಪರ ವಾಷಿಂಗ್ಟನ್ ಸುಂದರ್ 2 ವಿಕೆಟ್ ಹಾಗೂ ಯಶುವೇಂದ್ರ ಚಹಾಲ್ 1 ವಿಕೆಟ್ ಕೀಳುವ ಮೂಲಕ ಅಗ್ರ ಆಟಗಾರರನ್ನು ಮನೆಗಟ್ಟಿದರು. ನವದೀಪ್ ಸೈನಿ, ಮೊಹಮ್ಮದ್ ಸಿರಾಜ್, ಉಡಾನಾ ತಲಾ 1 ವಿಕೆಟ್ ಗಳಿಸುವ ಮೂಲಕ ಮಧ್ಯಮ ಕ್ರಮಾಂಕದ ಆಟಗಾರರು ಪತನಗೊಳ್ಳುವಂತೆ ನೋಡಿಕೊಂಡರು. ಕ್ರಿಸ್ ಮೋರಿಸ್ 2 ಬಾಲಂಗೋಚಿಗಳ ವಿಕೆಟ್ ಕಿತ್ತರು. ಚಹಾಲ್ ಬೌಲಿಂಗ್ ಅದೆಷ್ಟು ಮೊನಚಾಗಿತ್ತೆಂದರೆ, 4 ಓವರ್ಗಳಲ್ಲಿ ಕೇವಲ 12 ಬಿಟ್ಟುಕೊಟ್ಟರು. ಬಿಗುವಿನ ದಾಳಿ ನಡೆಸಿದ ಮೋರಿಸ್ ಕೂಡಾ 4 ಓವರ್ಗಳಲ್ಲಿ ಕೊಟ್ಟ ರನ್ ಕೇವಲ 17.
ಒಟ್ಟಾರೆ ಸಾಂಘಿಕ ಪ್ರದರ್ಶನ ಬೆಂಗಳೂರಿಗೆ ವರವಾಯಿತು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿರುವ 7 ಪಂದ್ಯಗಳಲ್ಲಿ 5 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, 2ರಲ್ಲಿ ಸೋತಿದೆ. ಕೋಲ್ಕತಾ ನೈಟ್ ರೈಡರ್ಸ್ ಕೂಡಾ 7 ಪಂದ್ಯಗಳನ್ನು ಆಡಿದ್ದು, 4 ಪಂದ್ಯಗಳನ್ನು ಗೆದ್ದುಕೊಂಡಿದೆ. 3 ಪಂದ್ಯಗಳಲ್ಲಿ ಸೋತಿದೆ.
ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ