ಅಬುಧಾಬಿ: ಮತ್ತೊಮ್ಮೆ ಆಲ್ರೌಂಡ್ ಆಟ ಪ್ರದರ್ಶಿಸಿದ ಮುಂಬೈ ಇಂಡಿಯನ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು 5 ವಿಕೆಟ್ಗಳಿಂದ ಸೋಲಿಸಿದೆ. ಭಾನುವಾರ ರಾತ್ರಿ ಅಬುಧಾಬಿ ಶೇಖ್ ಝೈಯದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬೌಲಿಂಗ್ನಲ್ಲಿ ಮುಂಬೈನ ಕೃನಾಲ್ ಪಾಂಡ್ಯಾ ಮಿಂಚಿದರೆ, ಬ್ಯಾಟಿಂಗ್ನಲ್ಲಿ ಸೂರ್ಯಕುಮಾರ್ ಯಾದವ್ ಆರ್ಭಟಿಸಿದರು.
ಟಾಸ್ ಗೆದ್ದ ಡೆಲ್ಲಿಯ ಕಪ್ತಾನ ಶ್ರೇಯಸ್ ಅಯ್ಯರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆದರೆ ಮೊದಲ ಓವರ್ನಲ್ಲೇ ಪೃಥ್ವಿ ಶಾ (4) ನಿರ್ಗಮಿಸಿದರು. ಇದಾದ ಬಳಿಕ ಅಜಿಂಕ್ಯಾ ರಹಾನೆ (15) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. ಆದರೆ 3ನೇ ವಿಕೆಟ್ಗೆ ಶಿಖರ್ ಧವನ್ ಹಾಗೂ ನಾಯಕ ಶ್ರೇಯಸ್ ಅಯ್ಯರ್ ತಂಡವನ್ನು ಸಂಕಷ್ಟದಿಂದ ಕಾಪಾಡಿದರು. 85 ರನ್ಗಳ ಜತೆಯಾಟ ನೀಡಿ ತಂಡದ ಸ್ಕೋರ್ ಅನ್ನು 100ರ ಗಡಿ ದಾಟಿಸಿದರು. ಆದರೆ ಶ್ರೇಯಸ್ 42 ರನ್ ಗಳಿಸಿ ಔಟಾದರು. ಧವನ್ 52 ಎಸೆತಗಳಲ್ಲಿ ಭರ್ಜರಿ 69 ರನ್ ಗಳಿಸಿ ತಂಡದ ಸ್ಕೋರ್ ಅನ್ನು ಸಾಧಾರಣ ಮೊತ್ತದೊತ್ತ ಕೊಂಡೊಯ್ದರು. ಅಂತಿಮವಾಗಿ ಡೆಲ್ಲಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 162 ರನ್ ಗಳಿಸಿತು. ಆದರೆ ಇದು ತೀರಾ ಸವಾಲೊಡ್ಡುವ ಮೊತ್ತವೇನೂ ಆಗಿರಲಿಲ್ಲ.
ಮುಂಬೈ ಪರ ಕೃನಾಲ್ ಪಾಂಡ್ಯಾ 2 ಪ್ರಮುಖ ವಿಕೆಟ್ಗಳನ್ನು ಕಿತ್ತರು. ಟ್ರೆಂಟ್ ಬೋಲ್ಟ್ 1 ವಿಕೆಟ್ ಗಳಿಸಿದರು.
ಬಳಿಕ ಈ ಮೊತ್ತವನ್ನು ಬೆನ್ನತ್ತಿ ಹೊರಟ ಮುಂಬೈ ಉತ್ತಮ ಬುನಾದಿ ಹಾಕುವ ಮೊದಲೇ ನಾಯಕ ರೋಹಿತ್ ಶರ್ಮಾ (5) ನಿರ್ಗಮಿಸಿದರು. ಆದರೆ ಮತ್ತೊಬ್ಬ ಆರಂಭಿಕ ಆಟಗಾರರಾದ ಕ್ವಿಂಟನ್ ಡಿ ಕಾಲ್ ಹಾಗೂ ಸೂರ್ಯಕುಮಾರ್ ಯಾದವ್ 2ನೇ ವಿಕೆಟ್ಗೆ ಉತ್ತಮ ಜತೆಯಾಟ ನಿರ್ಮಿಸಿದರು. ಕಾಕ್ ಅವರು 36 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸಹಿತ 53 ರನ್ ಗಳಿಸಿದರು. ಯುವ ಆಟಗಾರ ಸೂರ್ಯಕುಮಾರ್ ಕೇವಲ 32 ಎಸೆತಗಳಲ್ಲಿ 1 ಸಿಕ್ಸರ್, 6 ಬೌಂಡರಿ ಸಹಿತ 53 ರನ್ ಗಳಿಸಿದರು. ಬಳಿಕ ಬಂದ ಇಶಾನ್ ಕಿಶನ್ 28 ರನ್ ಸಿಡಿಸಿ ತಂಡವನ್ನು ಗೆಲುವಿನ ಹಂತದತ್ತ ಕೊಂಡೊಯ್ದರು. ಅಂತಿಮವಾಗಿ ಕೆರಾನ್ ಪೊಲಾರ್ಡ್ ಹಾಗೂ ಕೃನಾಲ್ ಪಾಂಡ್ಯಾ ನಿರಾಯಾಸವಾಗಿ ಗೆಲುವಿನ ದಡ ಮುಟ್ಟಿಸಿದರು. ಇನ್ನೂ 2 ಎಸೆತಗಳು ಬಾಕಿ ಇರುವಂತೆಯೇ 5 ವಿಕೆಟ್ ನಷ್ಟಕ್ಕೆ ಮುಂಬೈ 166 ರನ್ ಗಳಿಸಿ 5 ವಿಕೆಟ್ನ ಜಯ ಸಾಧಿಸಿದರು.
ಡೆಲ್ಲಿ ಬೌಲರ್ಗಳು 5 ವಿಕೆಟ್ ಕಿತ್ತರಾದರೂ, ಗೆಲುವು ಕಸಿಯಲಾಗಲಿಲ್ಲ. ಕಗಿಸೋ ರಬಡಾ ಎಂದಿನಂತೆ ಡೆಲ್ಲಿ ಪರ ಉತ್ತಮ ಬೌಲಿಂಗ್ ನಡೆಸಿ 2 ವಿಕೆಟ್ ಗಳಿಸಿದರು. ಉಳಿದಂತೆ ಅಕ್ಸರ್ ಪಟೇಲ್, ಅಶ್ವಿನ್ ಹಾಗೂ ಸ್ಟೋನಿಸ್ ತಲಾ 1 ವಿಕೆಟ್ ಸಂಪಾದಿಸಿದರು.
ಮುಂಬೈ ಇಂಡಿಯನ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಲಾ 7 ಪಂದ್ಯಗಳನ್ನು ಆಡಿದ್ದು. ಇವುಗಳಲ್ಲಿ ಎರಡೂ ತಂಡಗಳು 7 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, 2ರಲ್ಲಿ ಸೋತಿವೆ.
ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ
ಐಪಿಎಲ್ 2020: ವಿಲಿಯರ್ಸ್ ನೆರವಿಂದ ಬೆಂಗಳೂರಿಗೆ ಮುಂಬೈ ವಿರುದ್ಧ ಸೂಪರ್ ಗೆಲುವು
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ