ಅಬುಧಾಬಿ: ಬೆಂಗಳೂರಿನ ನಾಯಕ ಕೊಹ್ಲಿಯ ಸಿಡಿಲಬ್ಬರಕ್ಕೆ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ತತ್ತರಿಸಿ ಹೋಗಿದೆ. ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಚೆನ್ನೈ ಮತ್ತೊಮ್ಮೆ ಕಳಪೆ ಪ್ರದರ್ಶನ ನೀಡಿದ್ದು, ಬೆಂಗಳೂರಿನ ಎದುರು 37 ರನ್ಗಳಿಂದ ಶರಣಾಗಿದೆ.
ಬೆಂಗಳೂರು ಕಪ್ತಾನ ಕೊಹ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರೋನ್ ಫಿಂಚ್ (2) ಬೇಗನೆ ಔಟಾದರೂ ಎರಡನೇ ವಿಕೆಟ್ಗೆ ವಿರಾಟ್ ಕೊಹ್ಲಿ ಹಾಗೂ ದೇವದತ್ ಪಡಿಕ್ಕಲ್ ತಂಡವನ್ನು ಆಧರಿಸಿದರು. ತೀರಾ ಚುರುಕಾಗಿ ರನ್ ಗಳಿಕೆಯಾಗದಿದ್ದರೂ, ವಿಕೆಟ್ ಕಾಪಾಡಿಕೊಂಡು 53 ರನ್ ಜತೆಯಾಟ ನೀಡಿದರು. ಪಡಿಕ್ಕಲ್ 33 ರನ್ ಗಳಿಸಿ ಔಟಾದ ಬೆನ್ನಲ್ಲೇ ಬೆಂಗಳೂರಿಗೆ ಮತ್ತೊಂದು ಶಾಕ್ ಎದುರಾಯಿತು. ತಂಡದ ನೆಚ್ಚಿನ ಆಟಗಾರರಾದ ಎಬಿ ಡಿ ವಿಲಿಯರ್ಸ್ ಶೂನ್ಯಕ್ಕೆ ಔಟಾಗಿ ಪೆವಿಲಿಯನ್ಗೆ ಮರಳಿದರು. ಆದರೆ ಕೊಹ್ಲಿ ಧೃತಿಗೆಡಲಿಲ್ಲ. ಬೀಸು ಹೊಡೆತಗಳ ಮೂಲಕ ಚುರುಕಿನ ರನ್ ಗಳಿಕೆಗೆ ಕೈ ಹಾಕಿದರು. ಶಿವಂ ದುಬೆ ಕೂಡಾ ಕೈಜೋಡಿಸಿದರು. 14.3 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 93 ರನ್ ಗಳಿಸಿ ಸಂಕಷ್ಟದಲ್ಲಿದ್ದ ಬೆಂಗಳೂರಿನ ದೆಸೆ ಬದಲಾಯಿಸಿದ್ದು ಕೊನೆಯ 5 ಓವರ್ಗಳು. ಕೊಹ್ಲಿ ಹಾಗೂ ದುಬೆ ಮುರಿಯದ ಐದನೇ ವಿಕೆಟ್ ಜತೆಯಾಟದಲ್ಲಿ 63 ರನ್ ಕಲೆ ಹಾಕಿದರು. ಈ ಸೀಸನ್ನಲ್ಲಿ ಮೊದಲ ಬಾರಿಗೆ ಮೈಚಳಿ ಬಿಟ್ಟು ಆಡಿದ ಕೊಹ್ಲಿ 52 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 4 ಬೌಂಡರಿಗಳ ಸಹಿತ ಭರ್ಜರಿ 90 ರನ್ ಗಳಿಸಿದರು. ದುಬೆ 14 ಎಸೆತಗಳಲ್ಲಿ 22 ರನ್ ಗಳಿಸಿದರು. ಇಬ್ಬರೂ ಅಜೇಯರಾಗುಳಿದರು. 20 ಓವರ್ಗಳ ಅಂತ್ಯಕ್ಕೆ ಬೆಂಗಳೂರು 4 ವಿಕೆಟ್ ನಷ್ಟಕ್ಕೆ 169 ರನ್ಗಳ ಉತ್ತಮ ಮೊತ್ತವನ್ನು ಗಳಿಸಿತು.
ಚೆನ್ನೈ ಪರ ಶಾರ್ದೂಲ್ ಠಾಕೂರ್ ಗರಿಷ್ಠ 2 ವಿಕೆಟ್ ಗಳಿಸಿದರು. ಪಡಿಕ್ಕಲ್ ಹಾಗೂ ವಿಲಿಯರ್ಸ್ ಅವರ ಪ್ರಮುಖ ವಿಕೆಟ್ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡಿದ್ದರು. ದೀಪಕ್ ಚಹರ್ ಹಾಗೂ ಸ್ಯಾಮ್ ಕುರನ್ ತಲಾ 1 ವಿಕೆಟ್ ಗಳಿಸಿದರು.
ಐಪಿಎಲ್ 2020: ವಿಲಿಯರ್ಸ್ ನೆರವಿಂದ ಬೆಂಗಳೂರಿಗೆ ಮುಂಬೈ ವಿರುದ್ಧ ಸೂಪರ್ ಗೆಲುವು
ಬೆಂಗಳೂರಿನ ಸವಾಲನ್ನು ಬೆನ್ನತ್ತಿ ಹೊರಟ ಚೆನ್ನೈ ಆರಂಭದಿಂದಲೂ ನಿಧಾನಗತಿಯ ಆಟವಾಡಿತು. ಆರಂಭಿಕ ಆಟಗಾರರಾದ ಶೇನ್ ವಾಟ್ಸನ್ (14) ಹಾಗೂ ಫಫ್ ಡು ಪ್ಲೆಸಿಸ್(8) ಭದ್ರ ಬುನಾದಿ ಹಾಕುವಲ್ಲಿ ವಿಫಲರಾದರು. ಚೆನ್ನೈಗೆ ತುಸು ಆಧಾರವಾಗಿದ್ದು ಅಂಬಟಿ ರಾಯುಡು ಹಾಗೂ ನಾರಾಯಣ್ ಜಗದೀಶನ್. 3ನೇ ವಿಕೆಟ್ಗೆ ಇವರಿಬ್ಬರು ಉತ್ತಮ 54 ರನ್ಗಳ ಜತೆಯಾಟ ನೀಡಿದರು. ರಾಯುಡು 42 ರನ್ ಗಳಿಸಿ ತಂಡದ ಗರಿಷ್ಠ ಸ್ಕೋರರ್ ಎನಿಸಿದರು. ಜಗದೀಶನ್ 33 ರನ್ ಗಳಿಸಿದರು. ಬಳಿಕ ಬ್ಯಾಟಿಂಗ್ಗೆ ಬಂದವರಲ್ಲಿ ನಾಯಕ ಮಹೇಂದ್ರ ಸಿಂಗ್ ಧೋನಿ ಗಳಿಸಿದ 10 ರನ್ ದೊಡ್ಡ ಮೊತ್ತವಾಗಿದೆ. ಉಳಿದವರಾರೂ ಎರಡಂಕಿಯನ್ನು ತಲುಪಲೇ ಇಲ್ಲ. ಅಂತಿಮವಾಗಿ 20 ಓವರ್ಗಳ ಅಂತ್ಯಕ್ಕೆ 8 ವಿಕೆಟ್ ಕಳೆದುಕೊಂಡ ಚೆನ್ನೈಗೆ ಗಳಿಸಲು ಶಕ್ತವಾಗಿದ್ದು ಕೇವಲ 132 ರನ್. ಪರಿಣಾಮವಾಗಿ ಬೆಂಗಳೂರು 37 ರನ್ಗಳ ಭರ್ಜರಿ ಜಯ ಸಂಪಾದಿಸಿತು.
ಬೆಂಗಳೂರು ಪರ ಕ್ರಿಸ್ ಮೋರಿಸ್ ಗರಿಷ್ಠ 3 ವಿಕೆಟ್ ಕಿತ್ತರಲ್ಲದೆ, ಒಂದು ರನೌಟ್ ಕೂಡಾ ಮಾಡಿದರು. ವಾಷಿಂಗ್ಟನ್ ಸುಂದರ್ 2 ವಿಕೆಟ್ ಪಡೆದರು. ಇಸುರು ಉಡಾನಾ ಹಾಗೂ ಯಜುವೇಂದ್ರ ಚಹಾಲ್ ತಲಾ 1 ವಿಕೆಟ್ ಗಳಿಸಿದರು.
ಐಪಿಎಲ್ 2020: ಹೈದರಾಬಾದ್ನ ಯುವ ಹವಾದ ಎದುರು ಸೋತ ಚೆನ್ನೈ
ರಾಯಲ್ ಚಾಲೆಂಜರ್ಸ್ ಬೆಂಗಳೂರು ಆಡಿದ 6 ಪಂದ್ಯಗಳಲ್ಲಿ, 4 ಪಂದ್ಯಗಳನ್ನು ಗೆದ್ದುಕೊಂಡಿದ್ದರೆ, 2ರಲ್ಲಿ ಸೋಲು ಕಂಡಿದೆ. ಚೆನ್ನೈ ಸೂಪರ್ ಕಿಂಗ್ಸ್ ತಾನಾಡಿದ 7 ಪಂದ್ಯದಲ್ಲಿ ಬರೋಬ್ಬರಿ 5ರಲ್ಲಿ ಸೋಲು ಕಂಡಿದೆ. ಜಯ ಗಳಿಸಿದ್ದು 2ರಲ್ಲಿ ಮಾತ್ರ. ಆರಂಭದಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದ ಚೆನ್ನೈ ಇದೀಗ ನಿರಂತರವಾಗಿ ಕಳಪೆ ಪ್ರದರ್ಶನ ನೀಡುತ್ತಿದೆ.
ಐಪಿಎಲ್ 2020: ಶ್ರೇಯರ್, ನಾರ್ಜೆ ಅಮೋಘ ಪ್ರದರ್ಶನ, ಕೋಲ್ಕತಾ ವಿರುದ್ಧ ಡೆಲ್ಲಿ ಜಯಭೇರಿ
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ