ಅಬುಧಾಬಿ: ನಿರ್ಣಾಯಕ ಪಂದ್ಯದಲ್ಲಿ ಆಲ್ರೌಂಡ್ ಆಟ ಪ್ರದರ್ಶಿಸುವ ಮೂಲಕ ಸನ್ರೈಸರ್ಸ್ ಹೈದರಾಬಾದ್ ಮುಂಬೈ ಇಂಡಿಯನ್ಸ್ ಅನ್ನು ಸೋಲಿಸಿದ್ದಷ್ಟೇ ಅಲ್ಲ, ಮೂರನೇ ಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿತು. ಶಾರ್ಜಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಹೈದರಾಬಾದ್ ತಂಡವು 10 ವಿಕೆಟ್ಗಳ ಭರ್ಜರಿ ಜಯ ಸಾಧಿಸಿತು.
ಈಗಾಗಲೇ ಅಗ್ರಸ್ಥಾನಿಯಾಗಿ ಪ್ಲೇ ಆಫ್ ಪ್ರವೇಶಿಸಿದ್ದ ಮುಂಬೈಗೆ ಈ ಪಂದ್ಯ ಪ್ಲೇ ಆಫ್ಗೆ ಅಭ್ಯಾಸ ಪಂದ್ಯವಾಗಿತ್ತಷ್ಟೆ. ಆದರೆ ಸನ್ರೈಸರ್ಸ್ಗೆ ಮುಂದಿನ ಸುತ್ತು ಪ್ರವೇಶಿಸಲು ಗೆಲ್ಲುವುದು ಅನಿವಾರ್ಯವಾಗಿತ್ತು. ಸನ್ರೈಸರ್ಸ್ ಗೆಲುವಿನೊಂದಿಗೆ ಮೂರು ತಂಡಗಳಾದ ಹೈದರಾಬಾದ್, ಬೆಂಗಳೂರು ಹಾಗೂ ಕೋಲ್ಕತಾ ತಲಾ 14 ಅಂಕಗಳನ್ನು ಹಂಚಿಕೊಂಡಿವೆ. ಆದರೆ ರನ್ರೇಟ್ನಲ್ಲಿ ಹೈದರಾಬಾದ್ ಮುಂದಿದ್ದು (0.608) 3ನೇ ಸ್ಥಾನಕ್ಕೆ ಏರಿತು. ಬೆಂಗಳೂರು (-0.172) ರನ್ರೇಟ್ನೊಂದಿಗೆ ನಾಲ್ಕನೇ ಸ್ಥಾನಿಯಾಯಿತು. ಕೋಲ್ಕತಾ (-0.214) ರನ್ ರೇಟ್ನೊಂದಿಗೆ 5ನೇ ಸ್ಥಾನಕ್ಕೆ ತಳ್ಳಲ್ಪಟ್ಟಿತು, ಅಲ್ಲದೆ ಟೂರ್ನಿಯಿಂದ ಹೊರಹೋಯಿತು.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಹೈದರಾಬಾದ್ ತಂಡದ ನಾಯಕ ಡೇವಿಡ್ ವಾರ್ನರ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮೊದಲು ಬ್ಯಾಟಿಂಗ್ಗೆ ಇಳಿದ ಮುಂಬೈ ಇಂಡಿಯನ್ಸ್ ಆಟಗಾರರು ಆರಂಭದಿಂದಲೇ ನೆಲಕಚ್ಚಿ ನಿಂತು ಆಡಲೇ ಇಲ್ಲ. ನಾಯಕ ರೋಹಿತ್ ಶರ್ಮಾ (4) ಬೇಗನೆ ಔಟಾದರು. ನಂತರ ತಂಡಕ್ಕೆ ತುಸು ಆಧಾರವಾದವರು ಕ್ವಿಂಟನ್ ಡಿ ಕಾಕ್ (25), ಸೂರ್ಯಕುಮಾರ್ ಯಾದವ್ (36) ಹಾಗೂ ಇಶಾನ್ ಕಿಶನ್ (33). ಬಳಿಕ ಮಧ್ಯಮ ಕ್ರಮಾಂಕ ಹಠಾತ್ತನೆ ಕುಸಿಯುತು. ಕೃನಾಲ್ ಪಾಂಡ್ಯ (0), ಸೌರಭ್ ತಿವಾರಿ (1) ಬಂದಷ್ಟೇ ವೇಗವಾಗಿ ವಾಪಸ್ ಹೋದರು. ಈ ಹಂತದಲ್ಲಿ ಕಿರನ್ ಪೊಲಾರ್ಡ್ ತಂಡವು ಸಾಧಾರಣ ಮೊತ್ತ ಗಳಿಸುವಲ್ಲಿ ನೆರವಾದರು. ಕೇವಲ 25 ಎಸೆತಗಳಲ್ಲಿ 4 ಸಿಕ್ಸರ್ ಹಾಗೂ 2 ಬೌಂಡರಿ ಸಹಿತ 41 ರನ್ ಸಿಡಿಸಿದರು. ಅಂತಿಮವಾಗಿ ಮುಂಬೈ ಇಂಡಿಯನ್ಸ್ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 149 ರನ್ ಕಲೆ ಹಾಕಿತು.
ಹೈದರಾಬಾದ್ ಪರ ಶಹಬಾಜ್ ನದೀಮ್ ಅತ್ಯಂತ ಮೊನಚು ದಾಳಿ ನಡೆಸಿದರು. 4 ಓವರ್ಗಳಲ್ಲಿ ಕೇವಲ 19 ರನ್ ನೀಡಿ 2 ಪ್ರಮುಖ ವಿಕೆಟ್ ಗಳಿಸಿದರು. ಸಂದೀಪ್ ಶರ್ಮಾ ಗರಿಷ್ಠ 3 ವಿಕೆಟ್ ಕಿತ್ತರು. ಜೇಸನ್ ಹೋಲ್ಡರ್ 2 ವಿಕೆಟ್ ಗಳಿಸಿದರೆ, ರಷೀದ್ ಖಾನ್ 1 ವಿಕೆಟ್ ಪಡೆದರು.
ಈ ಸಾಧಾರಣ ಮೊತ್ತವನ್ನು ಸನ್ರೈಸರ್ಸ್ ಹೈದರಾಬಾದ್ ಲೀಲಾಜಾಲವಾಗಿ ಬೆನ್ನಟ್ಟಿತು. ಆರಂಭಿಕ ಆಟಗಾರರಾದ ನಾಯಕ ಡೇವಿಡ್ ವಾರ್ನರ್ ಹಾಗೂ ವೃದ್ಧಿಮಾನ್ ಸಾಹಾ ಅವರೇ ಕೊನೆ ತನಕ ನಿಂತ ತಂಡ ಗೆಲುವಿನ ದಡ ಸೇರುವಂತೆ ನೋಡಿಕೊಂಡರು. ವಾರ್ನರ್ 58 ಎಸೆತಗಳಲ್ಲಿ 1 ಸಿಕ್ಸರ್, 10 ಬೌಂಡರಿ ಸಹಿತ 85 ರನ್ ಸಿಡಿಸಿದರೆ, ಸಾಹಾ ಅವರು 45 ಎಸೆತಗಳಲ್ಲಿ 1 ಸಿಕ್ಸರ್, 7 ಬೌಂಡರಿ ಸಹಿತ 58 ರನ್ ಗಳಿಸಿದರು. 17.1 ಓವರ್ಗಳಲ್ಲೇ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 151 ರನ್ ಗಳಿಸುವ ಮೂಲಕ ವಿಜಯದ ನಗೆ ಬೀರಿತು.
ಮುಂಬೈ ಪರ ವಿಕೆಟ್ ಗಳಿಸುವಲ್ಲಿ ಯಾವುದೇ ಆಟಗಾರರು ಸಫಲರಾಗಲಿಲ್ಲ. ಕೃನಾಲ್ ಪಾಂಡ್ಯಾ 3.1 ಓವರ್ಗಳಲ್ಲಿ 37 ರನ್ ನೀಡಿ ದುಬಾರಿ ಬೌಲರ್ ಎನಿಸಿಕೊಂಡರು.
ಮುಂದಿನ ಪಂದ್ಯಗಳು
ಗುರುವಾರ (ನ.5) ರಾತ್ರಿ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಮುಂಬೈ ಇಂಡಿಯನ್ಸ್ ಮಧ್ಯೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಇದರಲ್ಲಿ ವಿಜೇತ ತಂಡವು ನೇರವಾಗಿ ಫೈನಲ್ ಪ್ರವೇಶಿಸಲಿದೆ. ಸೋತ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲಿದೆ. ಶುಕ್ರವಾರ (ನ.6) ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಧ್ಯೆ ಎಲಿಮಿನೇಟರ್ ಪಂದ್ಯ ನಡೆಯಲಿದೆ. ಇದರಲ್ಲಿ ಗೆದ್ದ ತಂಡವು ಎರಡನೇ ಕ್ವಾಲಿಫೈಯರ್ ಪಂದ್ಯ ಆಡಲು ಅರ್ಹತೆ ಪಡೆಯಲಿದೆ. ಸೋತ ತಂಡವು ಹೊರಹೋಗಲಿದೆ. ಭಾನುವಾರ (ನ.8)ರಂದು ಎರಡನೇ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಮಂಗಳವಾರ (ನ.10) ರಾತ್ರಿ ಫೈನಲ್ ಪಂದ್ಯ ನಡೆಯಲಿದೆ.
ಐಪಿಎಲ್ 2020: ಗೆದ್ದು ದ್ವಿತೀಯ ಸ್ಥಾನಿಯಾದ ಡೆಲ್ಲಿ, ಸೋತರೂ ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು!
ಐಪಿಎಲ್ 2020: ಬೆಂಗಳೂರನ್ನು ಸೋಲಿಸಿ ಪ್ಲೇ ಆಫ್ ಸ್ಥಾನ ಗಟ್ಟಿಗೊಳಿಸಿದ ಮುಂಬೈ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ