ಅಬುಧಾಬಿ: ಆರಂಭದಲ್ಲಿ ಅಬ್ಬರಿಸಿದ್ದ ಚೆನ್ನೈ ಇದೀಗ ಮುಗ್ಗರಿಸತೊಡಗಿದರೆ, ಯುವಕರ ಹವಾದೊಂದಿಗೆ ಸನ್ರೈಸರ್ಸ್ ಪುಟಿದೆದ್ದಿದ್ದು ಸತತ 2ನೇ ಜಯ ದಾಖಲಿಸಿದೆ. ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡವು ಕಳಪೆ ಆಟ ಪ್ರದರ್ಶಿಸಿದ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 7 ರನ್ಗಳ ಜಯ ಸಾಧಿಸಿದೆ.
ಟಾಸ್ ಗೆದ್ದ ಸನ್ರೈಸರ್ಸ್ ಕಪ್ತಾನ ಡೇವಿಡ್ ವಾರ್ನರ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಪಂದ್ಯದ ಮೊದಲ ಓವರ್ನಲ್ಲೇ ಹೈದರಾಬಾದ್ಗೆ ಆಘಾತ ಎದುರಾಯಿತು. ಜಾನ್ ಬೇರ್ಸ್ಟಾ ಶೂನ್ಯಕ್ಕೆ ಔಟಾದರು. ಬಳಿಕ 2ನೇ ವಿಕೆಟ್ಗೆ ಕಪ್ತಾನ ಡೇವಿಡ್ ವಾರ್ನರ್ ಹಾಗೂ ಮನೀಶ್ ಪಾಂಡೆ 46 ರನ್ಗಳ ಪಾಲುದಾರಿಕೆ ಮಾಡಿದರು. ಆದರೆ ರನ್ ಗಳಿಕೆ ಅಷ್ಟೇನೂ ಚುರುಕಾಗಿರಲಿಲ್ಲ. ವಾರ್ನರ್ 29 ಎಸೆತಗಳಲ್ಲಿ 28 ರನ್ ಗಳಿಸಿದರೆ, ಪಾಂಡೆ 21 ಎಸೆತಗಳಲ್ಲಿ 29 ರನ್ ಗಳಿಸಿದರು. 11ನೇ ಓವರ್ಗೆ ಇವರಿಬ್ಬರೂ ಔಟಾದರು. ಕೇನ್ ವಿಲಿಯಮ್ಸನ್ (9) ಕೂಡಾ ಹೆಚ್ಚು ಹೊತ್ತು ನಿಲ್ಲಲಿಲ್ಲ. 11 ಓವರ್ ಅಂತ್ಯದ ವೇಳೆಗೆ 4 ವಿಕೆಟ್ ನಷ್ಟಕ್ಕೆ ತಂಡ ಕೇವಲ 69 ರನ್ ಅಷ್ಟೇ ಗಳಿಸಿತ್ತು. ಆದರೆ ನಂತರ ಪಂದ್ಯಕ್ಕೆ ಹೊಸ ದಿಕ್ಕು ನೀಡಿದವರು ಯುವ ಆಟಗಾರರಾದ ಪ್ರಿಯಾಮ್ ಗರ್ಗ್ ಹಾಗೂ ಅಭಿಷೇಕ್ ಶರ್ಮಾ ಜೋಡಿ. ತಂಡಕ್ಕೆ ಅತ್ಯಗತ್ಯವಾಗಿದ್ದ ಕ್ಷಿಪ್ರಗತಿಯ ರನ್ ಗಳಿಕೆಗೆ ಇವರಿಬ್ಬರೂ ಕೈ ಹಾಕಿದರು. 36 ಎಸೆತಗಳಲ್ಲಿ ಭರ್ಜರಿ 77 ರನ್ಗಳ ಜತೆಯಾಟವಾಡಿದರು. ಗರ್ಗ್ ಕೇವಲ 26 ಎಸೆತಗಳಲ್ಲಿ ಆಕರ್ಷಕ 51 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 31 ರನ್ ಕಲೆ ಹಾಕಿದರು. ಚೆನ್ನೈ ತಂಡದ ಕಳಪೆ ಫೀಲ್ಡಿಂಗ್ ಇವರಿಗೆ ವರದಾನವಾಯಿತು. ಅನೇಕ ರನೌಟ್, ಕ್ಯಾಚ್ ಅವಕಾಶಗಳನ್ನು ಚೆನ್ನೈ ಕೈಚೆಲ್ಲಿತು. ಅಂತಿಮವಾಗಿ ಸನ್ರೈಸರ್ಸ್ ಹೈದರಾಬಾದ್ 20 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 164 ರನ್ ಗಳಿಸಿತು.
ಚೆನ್ನೈ ಪರ ದೀಪಕ್ ಚಹಾರ್ ಗರಿಷ್ಠ 2 ವಿಕೆಟ್ ಗಳಿಸಿದರು. ಶಾರ್ದೂಲ್ ಠಾಕೂರ್ ಹಾಗೂ ಪಿಯೂಷ್ ಚಾವ್ಲಾ ತಲಾ 1 ವಿಕೆಟ್ ಗಳಿಸಿದರು.
ಹೈದರಾಬಾದ್ನ ಈ ಉತ್ತಮ ಮೊತ್ತವನ್ನು ಬೆನ್ನತ್ತಿ ಹೊರಟ ಚೆನ್ನೈನ ಆರಂಭ ಕಳಪೆಯಾಗಿತ್ತು. ಶೇನ್ ವಾಟ್ಸನ್ ಕೇವಲ 1 ರನ್ ಗಳಿಸಿ ಔಟಾದರು. ಅಂಬಟಿ ರಾಯುಡು (8), ಕೇಧಾರ್ ಜಾಧವ್ (3) ಕೂಡಾ ಅದೇ ಹಾದಿ ಹಿಡಿದರು. 8 ಓವರ್ ಕಳೆಯುವ ವೇಳೆಗೆ 4 ಪ್ರಮುಖ ವಿಕೆಟ್ಗಳನ್ನು ಕಳೆದುಕೊಂಡ ಚೆನ್ನೈ ಕೇವಲ 42 ರನ್ ಗಳಿಸಿತ್ತು. ಈ ಹಂತದಲ್ಲಿ ತಂಡಕ್ಕೆ ಆಧಾರವಾದವರು ಧೋನಿ-ರವೀಂದ್ರ ಜಡೇಜಾ ಜೋಡಿ. ಇವರಿಬ್ಬರೂ ತಂಡದ ರನ್ ಗಳಿಕೆಗೆ ವೇಗ ನೀಡಿದರು. ಆದರೆ ಅದು ತಂಡವನ್ನು ಜಯದ ರೇಖೆ ದಾಟಿಸಲು ಸಾಧ್ಯವಾಗಲಿಲ್ಲ. ಜಡೇಜಾ 35 ಎಸೆತಗಳಲ್ಲಿ 50 ರನ್ ಗಳಿಸಿದರು. ಮಹೇಂದ್ರ ಸಿಂಗ್ ಧೋನಿ 36 ಎಸೆತಗಳಲ್ಲಿ 47 ರನ್ ಗಳಿಸಿ ನಾಟೌಟ್ ಆಗಿ ಉಳಿದರು. ಜಡೇಜಾ ಔಟ್ ಆದ ಕೊನೇ ಹಂತದಲ್ಲಿ ಸ್ಯಾಮ್ ಕುರನ್ (15) ಬಂದರಾದರೂ ತಂಡವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಅಂತಿಮವಾಗಿ 20 ಓವರ್ಗಳಲ್ಲಿ ಚೆನ್ನೈ 5 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿ ಸೋಲೊಪ್ಪಿಕೊಂಡಿತು.
ಹೈದರಾಬಾದ್ ಪರ ಟಿ ನಟರಾಜನ್ ಗರಿಷ್ಠ 2 ವಿಕೆಟ್ ಗಳಿಸಿದರು. ಭುವನೇಶ್ವರ್ ಕುಮಾರ್ ಹಾಗೂ ಅಬ್ದುಲ್ ಸಮದ್ ತಲಾ 1 ವಿಕೆಟ್ ಗಳಿಸಿದರು.
ಹೈದರಾಬಾದ್ ಹಾಗೂ ಚೆನ್ನೈ ಎರಡೂ ತಂಡಗಳಿಗೆ ಇದು ನಾಲ್ಕನೇ ಪಂದ್ಯವಾಗಿತ್ತು. ಹೈದರಾಬಾದ್ ಇದೀಗ 2 ಪಂದ್ಯ ಗೆದ್ದು 2 ರಲ್ಲಿ ಸೋತಿದೆ. ಇದೇ ವೇಳೆ ಚೆನ್ನೈ 3 ಪಂದ್ಯಗಳಲ್ಲಿ ಸೋತು ಕೇವಲ 1ರಲ್ಲಿ ಗೆದ್ದಿದೆ.
ಐಪಿಎಲ್ 2020: ಮಿಂಚಿದ ಶುಬ್ಮನ್ ಗಿಲ್, ಸನ್ರೈಸರ್ಸ್ ವಿರುದ್ಧ ನೈಟ್ ರೈಡರ್ಸ್ ಜಯಭೇರಿ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.