ಲೇಖನಗಳು ಲೈಫ್‌ ಸ್ಟೈಲ್- ಆರೋಗ್ಯ

ಏನಿದು ಇರಿಟೇಬಲ್ ಬೊವೆಲ್ ಸಿಂಡ್ರೋಮ್?

ಸಾಂದರ್ಭಿಕ ಚಿತ್ರ (ಚಿಕ್ರಕೃಪೆ: ಡೈಲಿ ಎಕ್ಸ್‌ಪ್ರೆಸ್ ಯುಕೆ)

ಸೇವಿಸಿದ ಆಹಾರ ಜೀರ್ಣಗೊಂಡ ನಂತರ ಅದರಲ್ಲಿದ್ದ ಸತ್ವಗಳನ್ನು ಹೀರಿಕೊಳ್ಳುವಲ್ಲಿ, ಬೇಡವಾದ ಅಂಶಗಳನ್ನು ಹೊರಹಾಕುವಲ್ಲಿ ಕರುಳು ಮಹತ್ವದ ಪಾತ್ರ ನಿರ್ವಹಿಸುತ್ತದೆ. ಇದರಲ್ಲಿ ಎರಡು ವಿಧ. ಅವುಗಳೇ ದೊಡ್ಡ ಕರುಳು ಮತ್ತು ಸಣ್ಣ ಕರುಳು. ಇವೂ ಸಹ ಕೆಲವೊಮ್ಮೆ ದೀರ್ಘಾವಧಿಯ ಹೊಟ್ಟೆ ನೋವಿಗೆ ಕಾರಣವಾಗುತ್ತವೆ. ಹೊಟ್ಟೆ ನೋವಿಗೆ ಕಾರಣವಾಗಬಲ್ಲ ಕರುಳಿನ ಪ್ರಮುಖ ತೊಂದರೆಯೇ ಇರಿಟೇಬಲ್ ಬೊವೆಲ್ ಸಿಂಡ್ರೋಮ್ (ಐಬಿಎಸ್) ಅಥವಾ ಕೆರಳುವ ಕರುಳು.

ಈ ಸ್ಥಿತಿಗೆ ಅಸಹಜ ಆಹಾರ ಪದ್ಧತಿ, ವಾಯುಪ್ರಕೋಪ, ಸೋಂಕು ಮತ್ತಿತರ ಅಂಶಗಳೇ ಪ್ರಮುಖ ಕಾರಣ. ಈವರೆಗೂ ಐಬಿಎಸ್‍ಗೆ ಕರುಳಿನಲ್ಲಿರುವ ನರಗಳ ತೀವ್ರತೆರನಾದ ಪ್ರತಿಸ್ಪಂದನೆಯೇ ಕಾರಣ ಎಂದು ತಿಳಿಯಲಾಗಿತ್ತು. ಆದರೆ, ಪ್ರತಿಕೂಲ  ಪರಿಸ್ಥಿತಿಯಲ್ಲಿ ಕರುಳಿನ ನರಗಳು ಸೂಕ್ತ ರೀತಿಯಲ್ಲಿ ಸ್ಪಂದಿಸದೇ ಇರುವುದೇ ಐಬಿಎಸ್‍ಗೆ ಕಾರಣ ಎಂದು ಹೊಸ ಸಂಶೋಧನೆಯಲ್ಲಿ ಕಂಡುಕೊಳ್ಳಲಾಗಿದೆ.

ಮ್ಯೂನಿಚ್ ತಾಂತ್ರಿಕ ವಿಶ್ವ ವಿದ್ಯಾಲಯದ ವಿಜ್ಞಾನಿಗಳು ಐಬಿಎಸ್ ಕುರಿತು ವಿಸ್ತೃತ ಅಧ್ಯಯನ ನಡೆಸಿದ್ದು, ಇದೊಂದು ಆಂಗಿಕ ಅಸ್ವಸ್ಥತೆಯೂ ಆಗಿದೆ ಎಂದಿದ್ದಾರೆ.

ಕಾರಣವೇನು?
ಅಸಹಜ ಆಹಾರ ಪದ್ಧತಿ, ಅಸಿಡಿಟಿ, ಅತಿಯಾದ ಜಂಕ್-ಫುಡ್‌ ಸೇವನೆ ಐಬಿಎಸ್ ಗೆ ಪ್ರಮುಖ ಕಾರಣ ಎನ್ನಲಾಗಿದೆ. ಕೆಲವೊಮ್ಮೆ ಕರುಳಿನ ಸೋಂಕು ಕೂಡ ಕಾರಣವಾಗುತ್ತದೆ. ಇನ್ನೂ ಕೆಲ ಕಾರಣಗಳು ಹೀಗಿವೆ:

  • ದೀರ್ಘಕಾಲೀನ ಮಲಬದ್ಧತೆ
  • ಭೇದಿ
  • ಅತಿಯಾದ ಮಾನಸಿಕ ಒತ್ತಡ
  • ಮಾನಸಿಕ ಉದ್ವೇಗ
  • ಸದಾ ಖಿನ್ನತೆಯಿಂದಿರುವುದು

ಪಿತ್ತಕೋಶ (ಗಾಲ್‌ಬ್ಲ್ಯಾಡರ್) ಕೆಟ್ಟರೆ ಏನಾದೀತು ಗೊತ್ತೇ?

ವಯಸ್ಸಿನ ಹಂಗಿಲ್ಲ
ಇರಿಟೇಬಲ್ ಬೊವೆಲ್ ಸಿಂಡ್ರೋಮ್ ಸಾಮಾನ್ಯವಾಗಿ ವಯಸ್ಕರಲ್ಲಿ, ವೃದ್ಧರಲ್ಲೇ ಹೆಚ್ಚಾಗಿ ಕಂಡುಬರುತ್ತದೆ. ಆದರೆ, ಇತ್ತೀಚೆಗೆ ಯುವಕರು, ಎಳೆಯ ಮಕ್ಕಳೂ ಐಬಿಎಸ್‍ಗೆ ತುತ್ತಾಗುತ್ತಿದ್ದಾರೆ. ಆಧುನಿಕ, ಒತ್ತಡದ ಜೀವನ ಶೈಲಿಯೇ ಇದಕ್ಕೆ ಕಾರಣ ಎನ್ನಲಾಗಿದೆ.

ಐಬಿಎಸ್ ಲಕ್ಷಣಗಳು:
ಇರಿಟೇಬಲ್ ಬೊವೆಲ್ ಸಿಂಡ್ರೋಮ್ ಅಥವಾ ಕೆರಳಿದ ಕರುಳು ಹಲವು ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇವುಗಳಲ್ಲಿ ಪ್ರಮುಖವಾದ್ದು ಕರುಳಿನ ಅಸಹಜ ಚಲನೆ. ಇದರಿಂದಾಗಿ, ಹೊಟ್ಟೆ ಚುರುಗುಟ್ಟುವುದು, ಕಿಬ್ಬೊಟ್ಟೆಯಲ್ಲಿ ಅತಿಯಾದ ನೋವು, ಹೊಟ್ಟೆ ತೊಳೆಸುವಿಕೆ ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತವೆ.

ಮಲಗಿದ್ದಾಗ ಹೊಟ್ಟೆಯೊಳಗೆಲ್ಲ ಏನೋ ಹರಿದಾಡಿದಂತಾಗುವುದು, ಹೊಟ್ಟೆ ಉಬ್ಬರಿಸುವುದಕ್ಕೂ ಐಬಿಎಸ್ ಕಾರಣವಾಗುತ್ತದೆ. ಕೆಲವೊಮ್ಮೆ ಇದರಿಂದಾಗಿ ಕರುಳಿನ ಉರಿಯೂತವೂ ಉಂಟಾಗುತ್ತದೆ.

ಚಿಕಿತ್ಸೆ ಅವಶ್ಯ
ಇರಿಟೇಬಲ್ ಬೊವೆಲ್ ಸಿಂಡ್ರೋಮ್‍ನಲ್ಲಿ ಪ್ರಮುಖವಾಗಿ ಎರಡು ವಿಧ. ಒಂದು ತಾತ್ಕಾಲಿಕವಾದರೆ ಇನ್ನೊಂದು ದೀರ್ಘಕಾಲಿಕ. ಭೇದಿ, ಮಲಬದ್ಧತೆಯಂಥ ಸಮಸ್ಯೆಗಳಿಂದಾಗಿ ಉಂಟಾಗುವ ಐಬಿಎಸ್ ತಾತ್ಕಾಲಿಕ. ಭೇದಿ, ಮಲಬದ್ಧತೆ ಗುಣಮುಖರಾಗುತ್ತಿದ್ದಂತೆ ಇದೂ ಗುಣವಾಗುತ್ತದೆ. ಆದರೆ, ದೀರ್ಘಕಾಲೀನ ಐಬಿಎಸ್‍ಗೆ ಚಿಕಿತ್ಸೆ ಪಡೆಯುವುದು ಅತೀ ಅವಶ್ಯ. ಇದರಿಂದ ಹರ್ನಿಯಾದಂಥ ಗಂಭೀರ ಆರೋಗ್ಯ ಸಮಸ್ಯೆ ಉಂಟಾಗುವ ಸಾಧ್ಯತೆಯೂ ಇದೆ.

ದೀರ್ಘಕಾಲೀನ ಐಬಿಎಸ್ ಮಾರಣಾಂತಿಕ ಕಾಯಿಲೆ ಅಲ್ಲವಾದರೂ ಸಾಕಷ್ಟು ದೈಹಿಕ ಸಮಸ್ಯೆಗಳಿಗೆ ಕಾರಣವಾಗುವುದರಿಂದ ಚಿಕಿತ್ಸೆ ಅನಿವಾರ್ಯ. ಅಸಿಡಿಟಿಯಂಥ ಸಮಸ್ಯೆಯಿಂದ ಬಳಲುತ್ತಿರುವವರು ಮೊದಲು ಅದನ್ನು ಗುಣಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಕರುಳಿನ ಅಸಹಜ ಚಲನೆ ನಿಯಂತ್ರಿಸಲಾಗದು. ಮಾನಸಿಕ ಒತ್ತಡ ನಿವಾರಣೆ, ಖಿನ್ನತೆ ದೂರವಾಗಿಸುವುದೂ ಅಷ್ಟೇ ಅನಿವಾರ್ಯ.

-ಉಪಯುಕ್ತ ಮಾಹಿತಿ

Related posts

ಹ್ಯಾಪಿ ಟೀಚರ್ಸ್ ಡೇ

Harshitha Harish

ಏನಿದು ಹಿಂಡು ಪ್ರತಿಬಂಧಕತೆ? ಸಾಂಕ್ರಾಮಿಕಗಳ ತಡೆಗೆ ಇದು ಹೇಗೆ ಸಹಕಾರಿ?

Upayuktha

ಕನಸುಗಳ ವಿಶ್ಲೇಷಣೆ (dream therapy): ಪ್ರಾಚೀನ ಸ್ವಪ್ನಶಾಸ್ತ್ರವನ್ನು ಒಪ್ಪಿದ ಆಧುನಿಕ ವಿಜ್ಞಾನ

Upayuktha