ಕಲೆ-ಸಾಹಿತ್ಯ ಧರ್ಮ-ಅಧ್ಯಾತ್ಮ ಲೇಖನಗಳು ಸಾಧಕರಿಗೆ ನಮನ

ಪಾಂಡಿತ್ಯ, ಕಾವ್ಯಶಕ್ತಿ, ದೈವತ್ವದ ಶ್ರೀ ಜಗನ್ನಾಥದಾಸರು

ಆ. 27- ಜಗನ್ನಾಥದಾಸರ ಆರಾಧನೆ- ತದಂಗವಾಗಿ ನುಡಿ ನಮನ

ಕನ್ನಡ ನಾಡಿನ ಹರಿದಾಸರಲ್ಲಿ ಪ್ರಮುಖ, ಆಧ್ಯಾತ್ಮಿಕ ಸಾಹಿತ್ಯವನ್ನು ಶ್ರೀಮಂತಗೊಳಿಸಿದವರಲ್ಲಿ ಜಗನ್ನಾಥದಾಸರು ಒಬ್ಬರು. ಪುರಂದರದಾಸ, ವಿಜಯದಾಸ, ಗೋಪಾಲದಾಸ ಮತ್ತು ಜಗನ್ನಾಥದಾಸರನ್ನು ಒಟ್ಟಿಗೆ ದಾಸಚತುಷ್ಟಯರೆಂದು ನಿರ್ದೇಶಿಸುವ ಸಂಪ್ರದಾಯವಿದೆ. ಕನ್ನಡ ಭಕ್ತಿ ಸಾಹಿತ್ಯದ ಮೇರುಶೃಂಗ ಜಗನ್ನಾಥದಾಸರು. ಹರಿಕಥಾಮೃತ ಸಾರವನ್ನು ನಾಡ ಜನತೆಗೆ ನೀಡಿದ ಶ್ರೇಷ್ಟರು.

ಕರ್ನಾಟಕದ ಪರಂಪರೆಯಲ್ಲಿ ಶ್ರೀ ಜಗನ್ನಾಥದಾಸರ ಚರಿತ್ರೆ ಮೈನವಿರೇಳಿಸುವ ಭಕ್ತಿ ಸಿಂಚನ, ಆನಂದ ಭಾಷ್ಪಗಳ ತುಂದಿಲ. ಶ್ರೀ ಪುರಂದರದಾಸರ ನಂತರ ಹೆಚ್ಚು ಕೀರ್ತನೆಗಳನ್ನು ಕನ್ನಡದಲ್ಲಿ ರಚಿಸಿರುವವರು ಶ್ರೀ ಜಗನ್ನಾಥದಾಸರೇ. ಇವರು ಹೆಚ್ಚು ಸುಳಾದಿಗಳನ್ನೂ, ಉಗಾಭೋಗಗಳನ್ನೂ ರಚಿಸಿದ್ದಾರೆ. ಇವರ `ಹರಿಕಥಾಮೃತಸಾರ’ ಭಕ್ತಿ ವೈರಾಗ್ಯಗಳ ಮೇರು ಕೃತಿ. ಜಗನ್ನಾಥದಾಸರು ಹರಿಕಥಾಮೃತಸಾರದಲ್ಲಿ ಪಾಕಶಾಸ್ತ್ರ, ಆರೋಗ್ಯ ಶಾಸ್ತ್ರ, ಪ್ರಸೂತಿಕಾ ಶಾಸ್ತ್ರ, ನರನಾಡಿಗಳ ವೈಖರಿಯನ್ನು ತಿಳಿಸುವ ಶರೀರ ರಚನಾ ಶಾಸ್ತ್ರ ಮುಂತಾದ ತಿಳಿಸುವ ಶರೀರ ರಚನಾ ಶಾಸ್ತ್ರ ಮುಂತಾದ ಅನೇಕ ವಿಷಯಗಳಲ್ಲಿ ಭಕ್ತಿಯನ್ನು ಗುರುತಿಸಿರುವ ಒಂದು ಆಧ್ಯಾತ್ಮಗ್ರಂಥ. ಜೀವ ಜೀವರಲ್ಲಿ ತಾರತಮ್ಯ ಮತ್ತು ದೇವತೆಗಳಲ್ಲಿ ಅಂತಸ್ತುಗಳನ್ನು ವಿವರಿಸುವ ಬೇಧ ಗ್ರಂಥ.

ಶ್ರೀ ಜಗನ್ನಾಥದಾಸರ ಜನನ ರಾಯಚೂರು ಜಿಲ್ಲೆ, ಮಾನ್ವಿ ತಾಲೂಕಿನ ಬ್ಯಾಗವಟ್ಟ ಎಂಬ ಗ್ರಾಮದಲ್ಲಿ ತಾಯಿ ಲಕ್ಷ್ಮಮ್ಮ, ತಂದೆ ನರಸಿಂಹದಾಸರೆಂದು ಪ್ರಸಿದ್ಧವಾಗಿದ್ದ ಶ್ರೀ ನರಸಪ್ಪನವರ ಪುತ್ರ. ತಿರುಪತಿ ತಿಮ್ಮಪ್ಪನ ವರಪ್ರಸಾದದಿಂದ ಜನಿಸಿದ ಕಾರಣ ಇವರಿಗೆ ಶ್ರೀನಿವಾಸ ಎಂದು ನಾಮಕರಣವಾಯಿತು. ಶ್ರೀನಿವಾಸ ಬಾಲಕನಿದ್ದಾಗಲೇ ಅಶುಕವಿಯಾಗಿದ್ದ. ಹೆತ್ತವರ ಪ್ರೋತ್ಸಾಹದಿಂದ ತಾರುಣ್ಯಕ್ಕೆ ಮುಂಚೆಯೇ ಪಾಂಡಿತ್ಯಗಳಿಸಿ ಶ್ರೀನಿವಾಸಚಾರ್ಯನಾದ. ಇವರ ವಿದ್ಯಾ ಗುರುಗಳು ಶ್ರೀರಾಘವೇಂದ್ರ ಮಠದ ಬಲರಾಮಚಾರ್ಯರು.

ಗುರುಗಳ ಕರುಣ:
ಪಾಂಡಿತ್ಯವಲ್ಲದೆ ಶ್ರೀನಿವಾಸಚಾರ್ಯರಲ್ಲಿ ಕವಿತಾಶಕ್ತಿಯು ದೈವದತ್ತವಾಗಿತ್ತು. ಸಂಸ್ಕೃತ ಮತ್ತು ಕನ್ನಡದಲ್ಲಿ ನಿಂತ ಹಾಗೆ ಶ್ಲೋಕಗಳನ್ನು ರಚಿಸಿ ಹೇಳುತ್ತಿದ್ದರು. ಇದರಿಂದ ಆಚಾರ್ಯರ ಬಗ್ಗೆ ಜನರಿಗೆ ಬಹಳ ಅದರ ಬೆಳೆಯತೊಡಗಿತು. ಇವರ ಪಾಂಡಿತ್ಯ ತಿಳಿದ ಮಂತ್ರಾಲಯ ಮಠದ ಶ್ರೀ ವರದೇಂದ್ರತೀರ್ಥರು ಸೀನಪ್ಪನನ್ನು ಕರೆದು ನೀನು ಮಹಾಕವಿಯಾಗಿರುವಂತೆ, ನಿನ್ನ ವಾಣಿಯನ್ನು ನಮಗಿಷ್ಟು ಪರಿಚಯ ಮಾಡು ಎಂದದ್ದೇ ತಡ `ವರದೇಂದ್ರ ಪಂಚರತ್ನ’ ಎಂಬ ಹೆಸರಿನ ಐದು ಶ್ಲೋಕಗಳನ್ನು ವಿವಿಧ ವೃತ್ತಗಳಲ್ಲಿ ರಚಿಸಿ ಶ್ರೀಗಳಿಗೆ ಅರ್ಪಿಸಿದರು. ಸೀನಪ್ಪನ ಪಾಠವನ್ನು ನೋಡಿದ ಗುರುಗಳು ಬೆರಗಾದರು, ಗುರುಗಳ ಸನ್ನಿಧಿಯಲ್ಲಿಯೇ ಪಾಠವನ್ನು ಪ್ರಾರಂಭಿಸಿ, ನ್ಯಾಯಸುಧೆಯಲ್ಲಾಗಲಿ, ವ್ಯಾಸತ್ರಯದಲ್ಲಾಗಲೀ ಶ್ರೀನಿವಾಸನಿಗೆ ಸದೃಶರು ಮತ್ತೊಬ್ಬರಿಲ್ಲ ಎನಿಸಿದರು.

ಜಗನ್ನಾಥದಾಸರು ಸಹ್ಲಾದ (ಪ್ರಹಾದ ರಾಜರ ತಮ್ಮ) ರಾಜರ ಅಂಶ ಸಂಭೂತರು. ದಾಸರಾಗುವ ಮುನ್ನ ಸಂಸ್ಕøತ ಭಾಷಾ ನಿಪುಣರಾಗಿದ್ದರು. ಕನ್ನಡದಲ್ಲಿ ಬರೆಯುವುದು, ಓದುವುದು ಇವರಿಗೆ ಕೀಳರಿಮೆ ಎನಿಸುತ್ತಿತ್ತು. ಇವರಿಗೆ ಕನ್ನಡ ಪಾಂಡಿತ್ಯವನ್ನು ಪಡೆದಿರುವವರನ್ನು ವಿದ್ವಾಂಸರೆಂದು ಒಪ್ಪಿಕೊಳ್ಳುವ ಮನಸ್ಸಿರಲಿಲ್ಲ. ಇವರ ಸಮಕಾಲೀನರೇ ಆದ ಶ್ರೀ ವಿಜಯದಾಸರು ಕನ್ನಡದಲ್ಲಿ ಅಪಾರ ಪಾಂಡಿತ್ಯ ಹೊಂದಿದ್ದರು. ಶ್ರೀನಿವಾಸಚಾರ್ಯರಿಗೆ ವಿಜಯದಾಸರೆಂದರೆ ಭಕ್ತಿ ಭಾವನೆಯೇ ಇರಲಿಲ್ಲ. ಆದರೆ ಹರಿಚಿತ್ತ ಬೇರೆಯೇ ಇತ್ತು. ವಿಜಯದಾಸಉರ ಮಾನ್ವಿಗೆ ಬಂದಾಗ ಬೇಡಲು ಶ್ರೀನಿವಾಸಚಾರ್ಯರ ಮನೆಗೂ ಹೋದರು. ಶ್ರೀನಿವಾಸಚಾರ್ಯರು ವಿಜಯದಾಸರನ್ನು ಗೌರವ ಕೊಡದೇ ಶಿಷ್ಯನಿಗೆ ಒಂದು ಹಿಡಿ ಅಕ್ಕಿಯನ್ನು ಹಾಕುವಂತೆ ಹೇಳಿದರು. ಇದನ್ನೆಲ್ಲಾ ಗಮನಿಸದೆ ವಿಜಯದಾಸರು ಹನುಮಂತನ ದೇವಸ್ಥಾನದಲ್ಲಿ ನಡೆಯುವ ಪೂಜೆಗೆ ಬರುವಂತೆ ಆಚಾರ್ಯರನ್ನು ಆಹ್ವಾನಿಸಿದರು. ಆದರೆ ಅವರು ಉದರ ಶೂಲೆಯ ನೆಪ ಒಡ್ಡಿ, ಆಹ್ವಾನವನ್ನು ಧಿಕ್ಕರಿಸಿದರು.

ಇದರ ಫಲವಾಗಿ ಕೆಲವು ಕಾಲದ ನಂತರ ಶ್ರೀನಿವಾಸಚಾರ್ಯರಿಗೆ ಅಸಾಧ್ಯ ಉದರ ಬೇನೆ ಪ್ರಾರಂಭವಾಯಿತು. ಔಷಧೋಪಚಾರಗಳಿಂದ ಫಲ ದೊರಕದೇ ಉದರ ಶೂಲೆ ಉಲ್ಬಣವಾಯಿತು. ನಿರ್ವಾಹವಿಲ್ಲದೆ ವಿಜಯದಾಸರಿಗೆ ಶರಣಾದರು. ಶ್ರೀನಿವಾಸಚಾರ್ಯರು ವಿಜಯದಾಸರಿಗೆ ಸೋದರಳಿಯ. ಅವರನ್ನು ಪ್ರೀತಿಯಿಂದ ಅವರನ್ನು ಪ್ರೀತಿಯಿಂದ ಮಾತನಾಡಿಸಿ ಉಪಚರಿಸಿ ಸಮಾಧಾನ ಮಾಡಿ, ವೇಣೀಸೋಮಪುರದಲ್ಲಿದ್ದ ತಮ್ಮ ಶಿಷ್ಯ ಭಾಗಣ್ಣನವರಲ್ಲಿಗೆ ಹೋದರೆ ರೋಗ ಗುಣವಾಗುವುದೆಂದು ಆಶೀರ್ವದಿಸಿದರು.

ತಮ್ಮಲ್ಲಿಯೇ ಆಗಾಧ ಶಕ್ತಿ ಇದ್ದರೂ ಆಚಾರ್ಯರ ಶಿಷ್ಯರಾದ ಯೋಗಾಚಾರ್ಯರಾದ ಗೋಪಾಲದಾಸರ ಬಳಿಗೆ ಕಳುಹಿಸಿದರು. ಅವರು ಅಭಿಮಂತ್ರಿಸಿಕೊಟ್ಟ ಎರಡು ರೊಟ್ಟಿ ಮತ್ತು ಯೋಗ ವಿದ್ಯೆಯ ಫಲವಾಗಿ ಅವರಿಗೆ ಉದರ ಶೂಲೆ ನಿವಾರಣೆಯಾಯಿತು. ಈ ಕಾರಣದಿಂದಲೇ ಶ್ರೀನಿವಾಸಚಾರ್ಯರಲ್ಲಿ ಪೂರ್ಣ ಬದಲಾವಣೆ ಕಂಡುಬಂದಿತ್ತು. ಆಚಾರ್ಯರು ಹೆಚ್ಚು ಸಮಯವನ್ನು ಸಜ್ಜನರ ಸಂಘಕ್ಕೆ ಮೀಸಲಿಟ್ಟರು. ಅವರಲ್ಲಿದ್ದ ಬಿಂಕ, ಸ್ವಪ್ರತಿಷ್ಠೆ, ಅಹಂಕಾರಗಳು ನಾಶವಾಗಿ ಹರಿದಾಸರ ಬಳಗಕ್ಕೆ ಸೇರಿಕೊಂಡರು. ಈ ನಿದರ್ಶನದಿಂದ ಅವರ ಜೀವನದ ಎರಡನೇ ಘಟ್ಟ ಪ್ರಾರಂಭವಾಯಿತು.

ವಿಜಯದಾಸರ ಆಜ್ಞೆಯಂತೆ ಗೋಪಾಲದಾಸರು ಶ್ರೀನಿವಾಸಚಾರ್ಯರಿಗೆ ತಮ್ಮ ಆಯುಸ್ಸಿನಲ್ಲಿ 40 ವರ್ಷಗಳನ್ನು ದಾನ ಮಾಡಿದರು. ಅದರಿಂದ ಶ್ರೀನಿವಾಸಚಾರ್ಯರು ಮತ್ತೆ ಬದುಕಿದರು ಮತ್ತು ತಮಗೆ ದಾಸದೀಕ್ಷೆ ಕೊಡಬೇಕೆಂದು ಕೇಳಿಕೊಂಡರು. ಗೋಪಾಲದಾಸರು ಇವರನ್ನು ಪಂಢರಪುರಕ್ಕೆ ಕಳುಹಿಸಿದರು. ಪಂಡಿತೋಹಂ ಎಂದು ಬೀಗುತ್ತಿದ್ದ ಆಚಾರ್ಯರು ದಾಸೋಹಂ ಜೀವನಕ್ಕಿಳಿದರು. ಜಗನ್ನಾಥ ವಿಠಲನಿಗೆ ದಾಸರಾಗಿ ಜಗನ್ನಾಥ ವಿಠಲ ಎಂಬ ನಾಮಾಂಕಿತವನ್ನು ಪಡೆದರು. ಚಂದ್ರಭಾಗನದಿಯಲ್ಲಿ ಸ್ನಾನ ಮಾಡುವಾಗ ಜಗನ್ನಾಥ ವಿಠಲನೆಂಬ ಅಂಕಿತವಿದ್ದ ಶಿಲೆ ತಮ್ಮ ತಲೆಗೆ ತಾಕಿದ್ದರಿಂದ ಭಾವ ಪರವಶರಾದರು. ಆಚಾರ್ಯರಿಗಾದ ಆನಂದವನ್ನು ಒಂದು ಭಜನೆ ರೂಪದಲ್ಲಿ ಹಾಡಿದರು. ಅದಿಂನಿಂದಲೇ ಇವರು ಜಗನ್ನಾಥ ದಾಸರಾಗಿ `ಎಂದು ಕಾಂಬೆನೋ ಪಾಂಡುರಂಗ ವಿಠ್ಠಲ ಮೂರುತಿಯ’, “ಕಂಡೆ ಪಂಡರಿರಾಯನ!’, “ಪಾಲಿಸು ಪಂಡರಿಪುರಿರೇಯ’… ಇತ್ಯಾದಿ ಪದಗಳನ್ನು ರಚಿಸಿದರು.

ಶ್ರೀ ವಿಜಯದಾಸರ ಶಿಷ್ಯರಾದ ಶ್ರೀಗೋಪಾಲದಾಸರ ಯೋಗಾಭ್ಯಾಸ ಬಲದಿಂದ ಆಚಾರ್ಯರು ಪೂರ್ಣ ಯೋಗ ಜೀವನಕ್ಕೆ ಬದಲಾದರು. ಕಟ್ಟುನಿಟ್ಟಾದ ಯೋಗಾಭ್ಯಾಸದಿಂದಲೂ, ದ್ವೇಷ ಅಸೂಯೆಗಳನ್ನು ತೊರೆದಿದ್ದರಿಂದಲೂ ಇವರಿಗೆ ಪುನರ್ಜನ್ಮ ಬಂದಂತಾಗಿ ಲವಲವಿಕೆಯಿಂದ ಹರಿಸೇವೆ ಪ್ರಾರಂಭಿಸಿ, 80 ವರ್ಷಗಳವರೆಗೆ ಆಯುಷ್ಯವನ್ನು ವೃದ್ಧಿಸಿಕೊಂಡರು. ಆ ಅವಧಿಯಲ್ಲಿ ಇವರು ಅನೇಕ ತೀರ್ಥಕ್ಷೇತ್ರಗಳನ್ನು ಸಂದರ್ಶಿಸಿದರು. ರಾಯರಲ್ಲಿ ಇವರಿಗೆ ಅಸದೃಶವಾದ ಭಕ್ತಿ. ಇವರು ರಾಯರ ಮಠದ ಶಿಷ್ಯರಲ್ಲದೆ ಆ ಮಠದ ಮೂರು ನಾಲ್ಕು ಸ್ವಾಮಿಗಳಿಗೆ ಅತ್ಯಂತ ಪ್ರಿಯವಾಗಿದ್ದರು. ಪ್ರಾಣೇಶದಾಸರು ಮತ್ತು ಕರ್ಜಗಿದಾಸರು ಇವರಿಗೆ ಮುಖ್ಯ ಶಿಷ್ಯರು. ಮಂತ್ರಾಲಯಕ್ಕೆ ಬಂದ ದಾಸರು ಗುರು ರಾಘವೇಂದ್ರ ಸ್ವಾಮಿಗಳನ್ನು ಕುರಿತು ‘ರಾಯ ಬಾರೋ ತಂದೆತಾಯಿ ಬಾರೋ| ನಮ್ಮನ್ನು ಕಾಯಿಬಾರೋ ಮಾಯಿಗಳ ಮರ್ಧಿಸಿದ ರಾಘವೇಂದ್ರ’ ಎಂದು ಕೊಂಡಾಡಿದ್ದಾರೆ. ತಿರುಪತಿಯ ಶ್ರೀನಿವಾಸನನ್ನು ಕುರಿತ ಅವರ ‘ದೊಡ್ಡವರ ಕಾಯ್ದು ದೇನರಿದು, ಪರಮ ದಡ್ಡರನು ಕಾಯುವುದೇ ಬಿರುದು’ ಕೃತಿ ಜನಮಾನಸದಲ್ಲಿ ಹಸಿರಾಗಿದೆ. ಶ್ರೀನಿವಾಸಚಾರ್ಯರು ಜಗನ್ನಾಥದಾಸರಾಗಿ ಅನೇಕಾನೇಕ ಹರಿಭಕ್ತಿ ಕೃತಿಗಳನ್ನು ರಚನೆ ಮಾಡಿದ್ದಾರೆ. ಅವರು ವಿಜಯದಾಸರನ್ನು ‘ರತುನ ದೊರೆಕಿತಲ್ಲಾ ಎನಗೆ ದಿವ್ಯ ರತುನ ದೊರಕಿತಲ್ಲಾ’ ಎಂದು ಮನಃಪೂರ್ವಕವಾಗಿ ಸುತ್ತಿಸಿದ್ದಾರೆ. ಅಂತೆಯೇ ‘ಗೋಪಾಲದಾಸರಾಯ ನಿನ್ನಯ ಪಾದ ನಾ ಪೊಂದಿದೆನು ನಿಶ್ಚಯ’ ಎಂದು ತಮ್ಮ ಗುರುಗಳನ್ನು ಕೊಂಡಾಡಿದ್ದಾರೆ.

ದಾಸಕೂಟಕ್ಕೆ ಶಿಖರ ಪ್ರಾಯರಾಗಿದ್ದು, ಇವರಲ್ಲಿ ವ್ಯಾಸದಾಸ ಸಾಹಿತ್ಯಗಳೆರಡು ಸಮಾವೇಶಗೊಂಡಿದ್ದವು. ದಾಸ ಸಾಹಿತ್ಯದಲ್ಲಿ ಇವರೊಬ್ಬ ಟಿಪ್ಪಣ್ಯಾಚಾರ್ಯರಿದ್ದಂತೆ. ದಾಸರು ಅನೇಕ ಅಮೂಲ್ಯ ಕೃತಿಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಅತ್ಯಂತ ಪ್ರಮುಖವು ಜನಪ್ರಿಯವೂ ಆದುದು. ಶ್ರೀ ಜಗನ್ನಾಥದಾಸರು ರಚಿಸಿರುವ ಅಪಾರ ಸಾಹಿತ್ಯ ಒಂದು ಅನನ್ಯ ವಿಶ್ವಕೋಶ. ಶ್ರೀ ಹರಿಕಥಾಮೃತಸಾರ ಇವರ ಮಣಿಮುಕುಟ. ಈ ಗ್ರಂಥದಲ್ಲಿ 986 ಭಾಮಿನಿ ಷಟ್ಪದಿ ಪದ್ಯಗಳಿವೆ. ಇದರ ಹೆಸರೇ ಸೂಚಿಸುವಂತೆ ಭಗವಂತನಾದ ಹರಿಯ ಗುಣ ಪರಿಪೂರ್ಣತ್ವದ ವಿಶೇಷ ಗ್ರಂಥ. ಕನ್ನಡದಲ್ಲೇ ರಚಿಸಿದ್ದರೂ ಎಲ್ಲಾ ಭಾಷೆಗಳಲ್ಲೂ ಪ್ರಸಿದ್ಧ ಪಡೆದಿದೆ. ಈ ಸಾರ ಗ್ರಂಥದಲ್ಲಿ 32 ಸಂಧಿಗಳಿವೆ. ಪ್ರತಿ ಸಂಧಿಯ ಮೊದಲಲ್ಲಿ ಪಲ್ಲವಿಯನ್ನು ಸೇರಿಸಿಕೊಂಡು ಓದಬೇಕು. ಉಪನಿಷತ್ತು, ಪುರಾಣ, ಪಂಚರಾತ್ರಾಗಮ, ಪ್ರಕಾಶ ಸಂಹಿತೆಯೇ ಮೊದಲಾದ ಅನೇಕ ಗ್ರಂಥಗಳು, ಶಾಸ್ತ್ರಗಳ ಸಾರವೆಲ್ಲ ಇದರಲ್ಲಿ ಸಂಗ್ರಹೀತವಾಗಿವೆ. ಇಂತಹ ಗ್ರಂಥ ಹರಿದಾಸ ಸಾಹಿತ್ಯದಲ್ಲಿ ಹಿಂದೆಂದೂ ರಚಿತವಾಗಿರಲಿಲ್ಲ. ಮುಂದೆಯೂ ರಚಿತವಾಗಲಿಲ್ಲ.

ಇದರಲ್ಲಿ ಮಧ್ವಮತದ ಅತ್ಯಂತ ಕ್ಲಿಷ್ಟ ಪ್ರಮೇಯಗಳು ವಿಸ್ತಾರವಾಗಿದೆ. ಕರ್ಜಗಿ ದಾಸರು ಇದಕ್ಕೆ ಫಲಸ್ತುತಿಯನ್ನು ರಚಿಸಿರುತ್ತಾರೆ. ಹರಿಕಥಾಮೃತಸಾರ ಕನ್ನಡನಾಡಿನಲ್ಲಿ ಅಲ್ಲದೆ ನೆರೆಯ ಪ್ರಾಂತಗಳಲ್ಲೂ ತುಂಬ ಜನಪ್ರಿಯವಾಗಿದೆ. ಇದರ 19 ವಿವಿಧ ಮುದ್ರಣಗಳಿವೆ. ಸಂಸ್ಕøತ ಭಾಷೆಯಲ್ಲಿ ಗ್ರಂಥಕ್ಕೆ ಟೀಕೆ ರಚಿಸಲಾಗಿದೆ. ಈಚೆಗೆ ಇದು ಇಂಗ್ಲೀಷ್‍ಗೂ ಭಾಷಾಂತರವಾಗಿದೆ. ಇದಲ್ಲದೆ ದಾಸರು ಸಹಸ್ರಾರು ಸುವ್ವಾಲಿ, 200 ಸುಳಾದಿಗಳು ಉಪಲಬ್ಧವಿದೆ. ಅಪೂರ್ವ ಪದಬಂಧ, ನಿರರ್ಗಗಳ ಶೈಲಿಯ ಓಟ, ಅಸಾಧಾರಣ ಶಾಸ್ತ್ರಜ್ಞಾನ, ವಿಷಯ ವೈವಿಧ್ಯ, ಆಳವಾದ ಭಕ್ತಿ, ಅರ್ಥ ಗಾಂಭೀರ್ಯ, ಸಿದ್ಧಾಂತದ ಸಮರ್ಥ ಪ್ರತಿಪಾದನೆಗಳಿಂದ ಈತನ ಕೃತಿಗಳು ತುಂಬಿದೆ. ಕೀರ್ತನೆಗಳು, ನುಡಿಗಳು ಹೇಗೋ ಹಾಗೆ. ಹರಿಕಥಾಮೃತಸಾರದಂತೆಯೇ ಜಗನ್ನಾಥದಾಸರು ರಚಿಸಿರುವ ಮತ್ತೊಂದು ಮೇರು ಕೃತಿ ತತ್ತ್ವಸುವ್ವಾಲಿ ದಾಸರಿಂದ ರಚಿತವಾದ 600 ನುಡಿಗಳ ಪ್ರಮೇಯಗರ್ಭಿತವಾದ ಭಗವದ್ಭಕ್ತಿಯನ್ನು ಹುಟ್ಟಿಸುವ, ಸರಸ ತ್ರಿಪದಿ ಕಾವ್ಯ.

ದಾಸರು ಕನ್ನಡದ ‘ನ್ಯಾಯಸುಧಾ’ ಎಂದು ಪ್ರಸಿದ್ಧವಾದ ‘ಹರಿಕಥಾಮೃತಸಾರ’ದ ಮೂಲಕ ಅಮೂಲ್ಯ ಆಧ್ಯಾತ್ಮಿಕ ಪ್ರಮೇಯಗಳ ಭಾವಾರ್ಥಗಳನ್ನು ಸರಳ ಸುಂದರ ಭಾಮಿನಿ ಷಟ್ಪದಿಯ ಪದ್ಯರೂಪದಲ್ಲಿ ಸಾದರಪಡಿಸಿದ್ದಾರೆ. ಸತ್ಯ, ಸಾಮಥ್ರ್ಯ, ಅನುಭಾವಗಳಲ್ಲಿ ಕುಮಾರವ್ಯಾಸನ ಭಾರತಕ್ಕೆ ಸರಿಸಮಕ್ಕೆ ನಿಲ್ಲುವ ‘ಹರಿಕಥಾಮೃತಸಾರ’ ಭಾಮಿನಿ ಷಟ್ಪದಿಯ ಸೊಬಗನ್ನು ಇಮ್ಮಡಿಗೊಳಿಸಿದೆ. ಶ್ರೀಜಗನ್ನಾಥದಾಸರು ಹರಿಕಥಾಮೃತಸಾರ ಕೃತಿಯನ್ನು ತಮ್ಮ ಸುಮಾರು 70-80ರ ವಯಸ್ಸಿನಲ್ಲಿ ಬರೆದಿದ್ದಾರೆ.

ಇದು 32 ಸಂಧಿಗಳುಳ್ಳ 988 ಭಾಮಿನಿ ಷಟ್ಪದಿಗಳಿಂದ ಕೂಡಿದೆ. ಕಾವ್ಯಾಲಂಕಾರದ ಪ್ರತಿಯೊಂದು ಸಂಧಿಯೂ ಸ್ವತಂತ್ರ. ಈ ಗ್ರಂಥದಲ್ಲಿ ತತ್ವಗಳಿವೆ. ಇಲ್ಲಿ ಶಾಸ್ತ್ರವೂ ಕಾವ್ಯವಾಗಿ ಮೇಳೈಸಿದೆ. ಅಂತೆಯೇ ಇದೊಂದು ಪ್ರಾಸಾಧಿಕ ಗ್ರಂಥ. ಗುರುಹಿರಿಯರ ಆಜ್ಞೆಯಿಂದ ರಚನೆಯಾದದ್ದು. ಅವರೇ ಹೇಳುವಂತೆ,-

‘ಬುದ್ಧಿವಿದ್ಯಾಬಲದಿ ಪೇಳಿದ ಶುದ್ಧಕಾವ್ಯದಲ್ಲತತ್ವ ಸುಪದ್ಧತಿಗಳನು ತಿಳಿದ ಮಾನವನಲ್ಲ ಬುಧರಿಂದ| ಮಧ್ವವಲ್ಲಭ ತಾನೆ ಹೃದಯದೊಳಿದ್ದು ನುಡಿದಂದಲಿ ನುಡಿದೆನಪದ್ಧತಿಗಳ ನೋಡದಲೆ ಕಿವಿಗೊಟ್ಟಾಲಿಪುದು’.
ತಟಿಕೋಟಿನಿಭ ಕಾಯೋ ಜಗನ್ನಾಥ ವಿಠಲಯ್ಯ, ವಿಠಲಯ್ಯಾ ಎಂದು ಹೇಳುತ್ತಾ ಶ್ರೀನಿವಾಸಚಾರ್ಯರು ಜಗನ್ನಾಥದಾಸರಾಗಿ ಲೋಕ ವಂದ್ಯರಾದರು. ಭಾದ್ರಪದ ಶುದ್ಧ ನವಮಿ ಸಾಯುಜ್ಯ ಹೊಂದಿದರು.
ಜಲಜ್ಯೇಷ್ಠ ನಿಭಾಕಾರಂ | ಜಗದೀಶ ಪದಾಶ್ರಯಂ | ಜಗತೀತಲ ವಿಖ್ಯಾತಂ | ಜಗನ್ನಾಥ ಗುರುಂ ಭಜೆ ||

|| ಶ್ರೀಕೃಷ್ಣಾರ್ಪಣಮಸ್ತು ||

-ಡಾ. ಗುರುರಾಜ ಪೋಶೆಟ್ಟಿಹಳ್ಳಿ, ಸಂಸ್ಕೃತಿ ಚಿಂತಕರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಇಂದಿನ ಐಕಾನ್- ಕಪ್ಪು ಜಿಂಕೆ ಎಂದು ಕೀರ್ತಿ ಪಡೆದ ವಿಲ್ಮಾ ರುಡಾಲ್ಫ್

Upayuktha

ವೀರ ಸಾವರ್ಕರ್ ಜನ್ಮದಿನ: ಅಪ್ರತಿಮ ಕ್ರಾಂತಿ ಜ್ಯೋತಿಗೆ ನುಡಿನಮನ

Upayuktha

ಎಪಿಎಂಸಿ ಕಾಯ್ದೆ ತಿದ್ದುಪಡಿ: ರೈತರ ಸ್ಥಿತಿ ಬಾಣಲೆಯಿಂದ ಬೆಂಕಿಗೆ..!?

Upayuktha