ಲೇಖನಗಳು ಲೇಖನಗಳು-ಅಧ್ಯಾತ್ಮ

ದೇವರನ್ನೇ ತನ್ನತ್ತ ತಿರುಗಿಸಿಕೊಂಡ ಕನಕ…

ಡಿಸೆಂಬರ್ 3 ಕನಕದಾಸ ಜಯಂತಿ ನಿಮಿತ್ತ ವಿಶೇಷ ಲೇಖನ…

ವಿಶ್ವಕ್ಕೆ ಭಕ್ತಿಯ ಹೊಸ ಪರಿಕಲ್ಪನೆಯನ್ನು ಪರಿಚಯಿಸಿದ ಈ ನಾಡಿನ ಹೆಮ್ಮೆ, ನಮ್ಮ ಕನಕದಾಸರು. ದೇವಸ್ಥಾನದೊಳಗೆ ತಮ್ಮನ್ನು ಬಿಡದೇ ದೇವರನ್ನು ದರ್ಶಿಸಲು ತಮಗೆ ಅವಕಾಶ ಕೊಡದವರೆದುರಿಗೆ ಅದೇ ದೇವಸ್ಥಾನದಲ್ಲಿರುವ ದೇವರನ್ನೇ ತನ್ನತ್ತ ತಿರುಗಿಸಿಕೊಂಡು ಒಳಗೆ ಬಿಡದವರು ಬೆರಗಿನಿಂದ ಬಾಯಿ ಬಾಯಿ ಬಿಡುವಂತೆ ಮಾಡಿದವರು. ನಾಡಿನ ಭಕ್ತಿ ಪಂಥವನ್ನು ಸಮೃದ್ಧಗೊಳಿಸಿ ವೈಚಾರಿಕ ನೆಲೆಯಲ್ಲಿ ವಿಶ್ವಕ್ಕೆ ಸಂದೇಶ ನೀಡಿದಂಥ ದಾಸ ಶ್ರೇಷ್ಠರಿವರು. ಭಕ್ತಿಯ ಹಸಿವನ್ನು ಒಡಲಲ್ಲಿರಿಸಿಕೊಂಡಿದ್ದವರು.

ದಾಸ ಸಾಹಿತ್ಯವೆಂದಾಕ್ಷಣವೇ ನೆನಪಿಗೆ ಬರುವವರು ಕನಕದಾಸರು ಮತ್ತು ಪುರಂದರ ದಾಸರು. ಇವರು ದಾಸ ಸಾಹಿತ್ಯದ ಎರಡು ಕಣ್ಣುಗಳು. 1509ರಲ್ಲಿ ಇಂದಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಕುರುಬ ಜನಾಂಗದ ಬಚ್ಚಮ್ಮ-ಬೀರಪ್ಪನವರ ಮಗನಾಗಿ ಜನಿಸಿ, 1609ರಲ್ಲಿ ಬಯಲಲ್ಲಿ ಬಯಲಾದ ಶತಾಯುಗಳಿವರು. ಏಕೋ ಏನೋ ಕನಕರು ಇತ್ತೀಚೆಗೆ ನನಗೆ ಬಹಳ ಕಾಡಿದರು. ಅವರ ಕುರಿತು ಚಿಂತನ ಮಾಡಿದ್ದರ ಪರಿಕಲ್ಪನೆಗಳ ಫಲಿತ ಬಹುದೊಡ್ಡ ಅಗಾದತೆಯನ್ನು ತೋರುತ್ತವೆ.

‘ಎಲ್ಲಾರು ಮಾಡುವುದು ಹೊಟ್ಟೆಗಾಗಿ, ಗೇಣು ಬಟ್ಟೆಗಾಗಿ’ ಎಂಬುದು ಕನಕರ ಬಹು ದೊಡ್ಡ ಸಿದ್ದಾಂತವಾಗಿದೆ. ಇಂದಿನ ವೇಗದ ಬದುಕಿನಲ್ಲಿ ಮನುಷ್ಯ ಸ್ವಾರ್ಥ ಮತ್ತು ಸಂಗ್ರಹ ಬುದ್ದಿಯ ದುರಾಶೆಯಿಂದ ಏನೆಲ್ಲವನ್ನೂ ಸಾಧಿಸಿದ್ದರೂ, ಗಳಿಸಿದ್ದರೂ ಇನ್ನೂ ಬೇಕೆಂಬ ತವಕದಲ್ಲಿ ನೆಮ್ಮದಿಯ ಕೊರತೆಯಿಂದ ಹತಾಶನಾಗಿದ್ದಾನೆ. ಆದರೆ ಏನೇ ಮಾಡಿದರೂ ಮಾಡುವುದೆಲ್ಲವೂ ಒಂದಿಷ್ಟು ಹೊಟ್ಟೆ ತುಂಬಿಕೊಳ್ಳಲು ಮತ್ತಿಷ್ಟು ಮೈ ಮುಚ್ಚಿಕೊಳ್ಳುವ ಬಟ್ಟೆಯ ಸಲುವಾಗಿ ಎಂಬುದರನ್ನು ಅರಿತಾಗ ಖಂಡಿತ ಆತ ಸರಳತೆಯ ಬದುಕನ್ನು ಆಯ್ದುಕೊಳ್ಳುತ್ತಾನೆ. ಆ ಸರಳ ಬದುಕಿನಲ್ಲಿ ದುರಾಶೆಗೆ ಅವಕಾಶವಿರುವುದಿಲ್ಲ. ದುರಾಶೆ ಇಲ್ಲವೆಂದಾದರೆ ಭ್ರಷ್ಟ ಮಾರ್ಗ ಅನುಸರಿಸದೇ ಪ್ರಾಮಾಣಿಕವಾಗಿ ಕಾಯಕ ಮಾಡಿ ತನ್ನ ಪ್ರಸಾದವನ್ನು ತಾನೇ ಸಂಪಾದಿಸಿಕೊಂಡು ಸಾಧ್ಯವಾದಷ್ಟು ಪರೋಪಕಾರಿಯಾಗಿ ಬದುಕಬಲ್ಲ. ಹೀಗಾದಾಗ ಒಬ್ಬ ವ್ಯಕ್ತಿ ಇನ್ನೊಬ್ಬರಿಗೆ ಮಾದರಿಯಾಗಿ ಇಡೀ ವ್ಯವಸ್ಥೆಯೇ ಆದರ್ಶಮಯವಾಗಿರುತ್ತದೆ. ಶಾಂತಿಯ ತಾಣವಾಗುತ್ತದೆ. ಹೀಗೆ ಸರಳತೆಯಿಂದ ಬದುಕುವ ವಿಚಾರವನ್ನು ಕೇವಲ ಅವರ ಒಂದು ವಾಕ್ಯ ನಮಗೆ ದಾರಿ ತೋರುತ್ತದೆ.

ಕನಕದಾಸರು ಅಂದಿನ ಪಟ್ಟಭದ್ರರ ಹಿಡಿತದಲ್ಲಿಯ ವ್ಯವಸ್ಥೆಯಲ್ಲಿ ತಾಂಡವವಾಡುತ್ತಿದ್ದ ಮೌಢ್ಯತೆ, ದೇವರ ಕುರಿತಾದ ಕಲ್ಪಿತ ನಂಬಿಕೆಗಳು, ವರ್ಗಭೇದ, ಜಾತಿಭೇದ, ಸ್ವಾರ್ಥ, ಸ್ವರ್ಗ-ನರಕಗಳ ಅವಾಸ್ತವಿಕ ಪರಿಕಲ್ಪನೆಗಳನ್ನೆಲ್ಲ ತಮ್ಮದೇ ಆದ ವಿಭಿನ್ನ ನೆಲೆಯಲ್ಲಿ ಚಿಂತಿಸುತ್ತಾರೆ. ಅವರ ಗುರುಗಳಾದ ವ್ಯಾಸರಾಯರೊಮ್ಮೆ ತಮ್ಮ ಶಿಷ್ಯರಿಗೆಲ್ಲಾ ಒಂದೊಂದು ಬಾಳೆ ಹಣ್ಣು ಕೊಟ್ಟು ‘ಯಾರೂ ಇಲ್ಲದ ಸ್ಥಳದಲ್ಲಿ ಈ ಹಣ್ಣನ್ನು ತಿಂದು ಬನ್ನಿ’ ಎಂದು ಕಳುಹಿಸಿರುವ ಪ್ರಕರಣವನ್ನೊಮ್ಮೆ ನೆನಪಿಸಿಕೊಳ್ಳಿ, ಉಳಿದವರೆಲ್ಲ ಯಾರೂ ಇಲ್ಲದ ಸ್ಥಳದಲ್ಲಿಯೇ ನಾವು ಬಾಳೆ ಹಣ್ಣನ್ನು ತಿಂದು ಬಂದಿದ್ದೇವೆ ಎನ್ನುತ್ತಾರೆ ಆದರೆ ಕನಕ ಮಾತ್ರ ಬಾಳೆ ಹಣ್ಣು ತಿನ್ನದೇ ‘ನನಗೆ ಯಾರೂ ಇಲ್ಲದ ಸ್ಥಳವೇ ಸಿಗಲಿಲ್ಲ, ಏಕೆಂದರೆ ಎಲ್ಲೆಡೆ ದೇವರಿದ್ದಾನಲ್ಲ’ ಎನ್ನುತ್ತಾನೆ.

ಇದು ಅಣು ಅಣುವಿನಲ್ಲಿಯೂ ದೇವರಿದ್ದಾನೆಂಬ ಅದ್ಭುತ ಪರಿಕಲ್ಪನೆಯನ್ನು ಬಾಲಕ ಕನಕನಲ್ಲಿ ಗುರುಗಳು ಅಂದೇ ಗುರುತಿಸುತ್ತಾರೆ. ಮುಂದೆ ಇದೇ ಕನಕ ದೇವರೆಂದರೆ ಕೇವಲ ಕಲ್ಲು, ಲೋಹ, ವಸ್ತು, ಮಣ್ಣುಗಳ ಮೂರ್ತಿಯಲ್ಲಿಲ್ಲ, ಆತ ಪರಮಾತ್ಮನಾಗಿ ಸರ್ವವ್ಯಾಪಿಯಾಗಿದ್ದಾನೆ. ಪರಮಾತ್ಮನ ಆತ್ಮಗಳು ಸಕಲ ಜೀವಿಗಳಲ್ಲಿ ಚೇತನವಾಗಿ ಆವರಿಸಿ ಜೀವಾತ್ಮವಾಗಿರುವುದರಿಂದ ಸಕಲ ಜೀವಿಗಳಲ್ಲಿಯೂ ದೇವರಿದ್ದಾನೆಂಬುದನ್ನು ಪ್ರತಿಪಾದಿಸುತ್ತಾನೆ. ನಾವು ಯಾವುದೋ ಒಂದು ಜೀವಿಗೆ ನೋವುಂಟು ಮಾಡಿದರೆ ಅದು ಪರಮಾತ್ಮನಿಗೆ ಮಾಡಿದಂತಾಗುತ್ತದೆ. ಎಲ್ಲಾ ಜೀವಿಗಳಲ್ಲಿ ಪರಮಾತ್ಮನಂಶ ಇರುವಾಗ ಯಾರು ಮೇಲು ಯಾರು ಕೀಳು? ಇದು ಕನಕರ ಪ್ರಶ್ನೆ.

ಕನಕರ ಸಾಹಿತ್ಯ ರಚನೆಯೇ ವಿಶಿಷ್ಟವಾದದ್ದು ಅವರು ಸಾಹಿತ್ಯ ರಚಿಸಬೇಕೆಂದು ರಚಿಸಲಿಲ್ಲ. ಅಂದಿನ ಅವ್ಯವಸ್ಥೆಯಲ್ಲಿದ್ದ ಅಸಮಾನತೆ, ವರ್ಣ/ವರ್ಗ ಬೇಧದಿಂದ ಸಾಮಾನ್ಯರು ಅನುಭವಿಸುತ್ತಿದ್ದ ನೋವಿನ ಧ್ವನಿಯಾಗಿ, ಆ ಧ್ವನಿಗೆ ಉತ್ತರವಾಗಿ ಅವರಿಂದ ಆಡುಭಾಷೆಯ ಜನಪದೀಯ ಶೈಲಿಯ ಸಾಹಿತ್ಯ ಹೊರ ಹೊಮ್ಮಿತ್ತು. ಸಂಸ್ಕøತವನ್ನು ಬದಿಗಿರಿಸಿ ಪಕ್ಕಾ ಆಡು ಮಾತಿನ ಸಾಹಿತ್ಯವನ್ನು ಬಳಸಿಕೊಂಡು ಅದರಲ್ಲಿ ಜನಪದದ ಜೀವದ್ರವ್ಯ ಹಾಗೂ ಒಂಚೂರು ಅಂತಃಕರಣವನ್ನು ಬೆರೆಸಿ ರಚಿಸಿದ ಸಾಹಿತ್ಯದ ಸಂದೇಶಗಳು ಜನಮಾನಸವನ್ನು ಅಪ್ಪಿಕೊಳ್ಳುತ್ತಿದ್ದವು. ಅವರನ್ನು ಒಪ್ಪಿಕೊಳ್ಳುವಂತೆ ಮಾಡುತ್ತಿದ್ದವು.

‘ಆತ್ಮ ಯಾವ ಕುಲ, ಜೀವ ಯಾವ ಕುಲ’? ಎಂದು ಪ್ರಶ್ನಿಸುವಲ್ಲಿ ಜಾತೀಯತೆಯನ್ನು ಮೆರೆದಾಡಿ ಕೋಮುದ್ವೇಷಕ್ಕೆ ತುಪ್ಪ ಸುರಿಯುವ ದುರಳ ಮನಸ್ಸಿಗರ ಮನಮುಟ್ಟುವಂತೆ ಆತ್ಮಕ್ಕೆ ಮತ್ತು ಜೀವಕ್ಕೆ ಇಲ್ಲದ ಕುಲ ನಿಮಗೇಕೆ? ಈ ‘ಕುಲ’ಎಂಬುದು ಬೇಕೆ? ಎಂಬುದು ಕನಕರ ಕನಿಕರದ ಕೂಗಾಗಿದೆ. ಕುಲಕ್ಕಾಗಿ ಹೊಡೆದಾಡುವವರಿಗೆ ‘ಕುಲ ಕುಲ ಕುಲವೆಂದು ಹೊಡೆದಾಡದಿರಿ, ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ?’ ಎಂಬ ಪ್ರಶ್ನೆಯ ಮೂಲಕ ಜಾತೀಯತೆಯ ಸಂಕುಚಿತ ಭಾವದಿಂದ ಹೊರ ತಂದು ಜಾತ್ಯತೀತತೆಯ ಮಾನವೀಯತೆಯಲ್ಲಿರುವ ಸಮತಾ ಭಾವವನ್ನು ಎಚ್ಚರಿಸುತ್ತಾರೆ. ಜಾತ್ಯತೀತ ಭಾವ ಎಲ್ಲರಲ್ಲಿ ತರವುದೇ ಕನಕರ ಒಡಲ ಹಸಿವಾಗಿತ್ತು. ಇದೇ ಅವರ ಅಳಲು ಮತ್ತು ತಲ್ಲಣವೂ ಆಗಿತ್ತು.

ಅವರ ಪ್ರಸಿದ್ದ ರಚನೆಯಾದ ರಾಮಧಾನ್ಯ ಚರಿತ್ರೆಯಲ್ಲಿ ವರ್ಗ ಅಸಮಾನತೆಯನ್ನು ಅಕ್ಕಿ ಮತ್ತು ರಾಗಿಯ ಮೂಲಕ ಬಿಂಬಿಸಿ ಕೊನೆಗೆ ಬಡವರನ್ನು ಪ್ರತಿನಿಧಿಸುವ ರಾಗಿಯ ಶ್ರೇಷ್ಠತೆಯನ್ನು ಮತ್ತು ಶ್ರಮಿಕರ ಆಹಾರದ ಮೌಲ್ಯವನ್ನು ಎತ್ತರಿಸಿ ಪ್ರತಿಬಿಂಬಿಸುವಲ್ಲಿ ಅವರ ಚಿಂತನೆಯ ವಿಶಿಷ್ಠತೆಯನ್ನು ಕಾಣಬಹುದಾಗಿದೆ. ಹೀಗೆ ಮೋಹನ ತರಂಗಿಣಿ, ನಳ ಚರಿತ್ರೆ, ಹರಿಭಕ್ತ ಸಾರ… ಕಾವ್ಯ ಸೃಷ್ಠಿಯ ಮೂಲಕ ಶ್ರೇಷ್ಠ ದಾಸ ಸಾಹಿತ್ಯದ ರೂವಾರಿಯಾಗುತ್ತಾರೆ. ಇದೇ ಸಂದರ್ಭದಲ್ಲಿ ತಮ್ಮನ್ನು ಸಾಮಾನ್ಯರಲ್ಲಿ ಸಾಮಾನ್ಯನೆಂದು ತಮ್ಮದೇ ದಾಸ ವಾಣಿಯಲ್ಲಿ ಬಿಂಬಿಸಿಕೊಳ್ಳುತ್ತಾರೆ. “ದಾಸ-ದಾಸರದಾಸಿಯರ ಮಗ ನಾನು, ಸಾಸಿರ ನಾಮದೊಡೆಯ ರಂಗಯ್ಯನ ಮನೆಯ ಶಂಕರದಾಸರ ಮನೆಯ ಮಂಕುದಾಸಯ್ಯ ನಾನು, ಬೊಂಕದಿ ಬಾಗಿಲನ ಕಾಯುವ ಬಡದಾಸ ನಾನಯ್ಯ ಕಾಳಿದಾಸರ ಮನೆಯ ಕೀಳು ದಾಸಯ್ಯ ನಾನು” ಎಂದು ಹೇಳಿಕೊಳ್ಳುವಲ್ಲಿ ಅವರ ಉನ್ನತ ವ್ಯಕ್ತಿತ್ವವನ್ನು ಕಾಣುತ್ತೇವೆ.

ನಮ್ಮಂಥ ಸಾಮಾನ್ಯರಾಗಿದ್ದರೆ ಎಲ್ಲೋ ದೂರದ ಸಂಬಂಧವೂ ಆಗದಂಥ ಉನ್ನತ ವ್ಯಕ್ತಿಗಳೊಂದಿಗೆ ನಮ್ಮನ್ನು ಗುರುತಿಸಿಕೊಂಡು ಉನ್ನತಿಕರಿಸಿಕೊಂಡು ಮೆರೆಯುತ್ತಿದ್ದೆವು. ಕನಕರ ಗುರುಗಳೊಮ್ಮೆ “ಸ್ವರ್ಗಕ್ಕೆ ಯಾರು ಹೋಗುತ್ತೀರಿ” ಎಂದಾಗ “ನಾನು” ಹೋದರೆ ಹೋದೇನು ಎಂಬುದು ಕನಕರ ಮಾರ್ಮಿಕ ಉತ್ತರವಾಗಿತ್ತು. ಆಗ ಅಲ್ಲಿದ್ದ ಕೆಲವರು ಕನಕ ಸ್ವರ್ಗಕ್ಕೆ ಹೋಗ್ತಾನಂತೆ ಎಂಬ ಕುಹಕದ ಭಾವದಲ್ಲಿದ್ದರು. ಆದರೆ ಕನಕರ ದೃಷ್ಠಿಯೇ ವಿಭಿನ್ನವಾಗಿತ್ತು. ಇಲ್ಲಿ ನಾನು ಎಂದರೆ ನಾನೆಂಬ ಅಹಂಕಾರವಾಗಿದೆ. ಆ ಅಹಂಕಾರ ನನ್ನಿಂದ ಹೋದರೆ ಸ್ವರ್ಗ ನನಗೆ ದೊರೆಯುತ್ತದೆ ಎಂಬ ಕನಕರ ನಿಲುವು ಗಮನಿಸಿದರೆ “ತಲೆ ತುಂಬ ಕಲಿಯೋಣ, ತಲೆ ಎತ್ತಿ ನುಡಿಯೋಣ, ತಲೆಬಾಗಿ ನಡೆಯೋಣ” ಎಂಬುದನ್ನು ಇಂಥ ಮಹಿಮರಿಂದ ತಿಳಿದುಕೊಳ್ಳಬೇಕಾಗಿದೆ.

“ಕನಕನ ಕಿಂಡಿ”ಯ ಪರಿಕಲ್ಪನೆ ನನಗೆ ಅತಿ ಹೆಚ್ಚು ಉತ್ಕøಷ್ಠವಾಗಿ ಕಾಣುತ್ತದೆ. ಕನಕರು “ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ, ನೀ ದೇಹದೊಳಗೋ ನಿನ್ನೊಳು ದೇಹವೋ” ಎಂಬ ತಮ್ಮ ದಾಸವಾಣಿಯ ಸಾಲಿನಲ್ಲಿ ಬಿಂಬಿಸಿದಂತೆ, ಪ್ರತಿಯೊಂದು ಜೀವಿಗಳ ಭೌತಿಕ ದೇಹ ಮತ್ತು ಆ ದೇಹದೊಳಗಿರುವ ಪರಮಾತ್ಮನಂಶವಾದ ಜೀವಾತ್ಮ ಇವೆರಡೂ ಒಂದಕ್ಕೊಂದು ಸಮಾಗಮಿತವಾಗಿರುವುದನ್ನು ಕಂಡುಕೊಂಡಿದ್ದವರು. ಹೀಗೆ ತಮ್ಮ ವಿಶಿಷ್ಠ ಭಕ್ತಿಯ ಪರಿಕಲ್ಪನೆಯ ಮೂಲಕ ಕನಕರು ತಮ್ಮ ದೇಹವೇ ದೇವಾಲಯವನ್ನಾಗಿಸಿಕೊಂಡು ತಮ್ಮೊಳಗಿರುವ ಜೀವಾತ್ಮನಲ್ಲಿಯೇ ಪರಮಾತ್ಮನನ್ನು ಕಂಡ ಅವರು ಉಡುಪಿಯ ದೇವಸ್ಥಾನದೊಳಗಿದ್ದ ಶ್ರೀ ಕೃಷ್ಣ(ಮೂರ್ತಿ)ನನ್ನು ದರ್ಶಿಸಬೇಕೆನ್ನುವ ಆಶೆ ಅವರಿಗೇಕೆ ಬಂತೋ? ಎಂಬ ಜಿಜ್ಞಾಸೆ ನನ್ನನ್ನು ಕಾಡುತ್ತಿತ್ತು.

ಈ ಕುರಿತು ಯೋಚಿಸಿದಾಗ ನನಗನಿಸಿದ್ದೇನೆಂದರೆ, ಕನಕನ ಕಿಂಡಿಯ ಭೌತಿಕತೆಯ ವಾಸ್ತವತೆಯ ಪ್ರಶ್ನೆಗಿಂತ ಈ ಪರಿಕಲ್ಪನೆಯ ಹಿಂದಿರುವ ವೈಚಾರಿಕ ತತ್ವವನ್ನು ಇಲ್ಲಿ ಚಿಂತಿಸಬೇಕಾಗಿದೆ. ಸಕಲ ಜೀವಿಗಳಲ್ಲಿಯೂ ದೇವರನ್ನು ಕಂಡ ಕನಕರಿಗೆ ದೇವಸ್ಥಾನದೊಳಗೆ ಪ್ರವೇಶಿಸಲು ಅವಕಾಶ ಕೊಡದ ಯಥಾಸ್ಥಿತಿವಾದಿಗಳ ವಿರೋಧದಲ್ಲಿಯೂ ದೇವಸ್ಥಾನದೊಳಗಿರುವ ಕಲ್ಲಿನ ಮೂರ್ತಿಯನ್ನು ಕಂಡು ದೇವರನ್ನು ಕಾಣಲೇಬೇಕೆಂಬ ತವಕ ಖಂಡಿತ ಇರಲಿಕ್ಕಿಲ್ಲ. ಆದರೆ ದೇವರನ್ನು ದರ್ಶಿಸಲು ಅವಕಾಶವಿಲ್ಲದವರ ಹತ್ತಿರವೇ ದೇವರು ಬರುತ್ತಾನೆ ಎಂಬುದನ್ನು ಅಲ್ಲಿ ಸ್ಥಾವರದಂತಿರುವ ಯಥಾಸ್ಥಿತಿವಾದಿ ಮನಸ್ಥಿತಿಯವರಿಗೆ ಮತ್ತು ಇಡೀ ಜಗತ್ತಿಗೆ ತಿಳಿಸಬೇಕಾಗಿತ್ತು.

ಕನಕರ ಭಕ್ತಿಯ ಕೂಗಿಗೆ ಯಥಾಸ್ಥಿತಿವಾದಿಗಳ ಬಂಧನದಲ್ಲಿದ್ದ ಉಡುಪಿಯ ಕೃಷ್ಣ ತನ್ನೆಲ್ಲ ಬಂಧನಗಳನ್ನು ಕಳಚಿಕೊಂಡು ಹಿಂದಕ್ಕೆ ತಿರುಗಿ ಗೋಡೆಗೆ ಕಿಂಡಿಯಾಗಿಸಿ, ಆ ಕಿಂಡಿಯ ಮೂಲಕ ಕನಕರಿಗೆ ದರ್ಶನ ಕೊಟ್ಟನಲ್ಲ ಇಲ್ಲಿ ಕೃಷ್ಣನಿಗಿಂತ ಕನಕನ ಭಕ್ತಿ ದೊಡ್ಡದೆನಿಸುತ್ತದೆ. ಇಲ್ಲಿ ಕೃಷ್ಣನ ತಿರುಗುವಿಕೆ ಕನಕರಿಗೆ ಅವಶ್ಯಕತೆ ಇರಲಿಲ್ಲವೆನಿಸುತ್ತದೆ, ಆದರೆ ಅಲ್ಲಿರುವ ಉನ್ನತ ಜಾತಿಯವರ ತೋರಿಕೆಯ ಭಕ್ತಿಗಿಂತ ತುಳಿತಕ್ಕೊಳಪಟ್ಟವರ ನೈಜ ಭಕ್ತಿಗೆ ಆ ದೇವರೇ ತಿರುಗುತ್ತಾನೆಂಬ ಪ್ರತಿಪಾದನೆ ಇಲ್ಲಿದೆ.

ಮತ್ತದು ಅಲ್ಲಿದ್ದ ಅಲ್ಪಮತಿಗಳ ಅನುಭವಕ್ಕೆ ಬರಬೇಕಾಗಿತ್ತು. ಏಕೆಂದರೆ ಎಲ್ಲರನ್ನು ಎಲ್ಲ ಜೀವಿಗಳನ್ನು ಸೃಷ್ಠಿಸಿದ್ದು ಅದೇ ದೇವರು/ಪರಮಾತ್ಮನು ತಾನೆ? ಆತನಿಗೆ ಯಾರಲ್ಲಿಯೂ ಮೇಲು ಕೀಳು ಭಾವವಿಲ್ಲ, ಎಲ್ಲರೂ ಸಮಾನರೆ “ದೇವರಿಗೆ ಕುಲವೇ ಇಲ್ಲ. ಕುಲ ವಿದ್ದವರಿಗೆ ಖಂಡಿತ ದೇವರಿಲ್ಲ”. ಕುಲವನ್ನು ತಮ್ಮ ತಮ್ಮ ಅವಕಾಶಕ್ಕಾಗಿ ಅವಕಾಶವಾದಿಗಳು ಸೃಷ್ಠಿಸಿಕೊಂಡಿರುವ ಒಂದು ಪೆಡಂಭೂತ. ದೇವರನ್ನು ಇಂಥವರೇ ದರ್ಶಿಸಬೇಕು, ಇಂಥವರೇ ಮುಟ್ಟಬೇಕು, ಇಂಥವರೇ ಪೂಜಿಸಬೇಕು… ಎಂಬೀ ಇತ್ಯಾದಿ ಕಟ್ಟಳೆಗಳೆಲ್ಲವೂ ಅವಕಾಶವಾದಿಗಳ ಕುತಂತ್ರವೆಂಬುದು ಅಂದಿನ ವ್ಯವಸ್ಥೆಗೆ ಕನಕರು ತಿಳಿಸಬೇಕಾಗಿತ್ತು. ಈ “ಕನಕನ ಕಿಂಡಿ”ಯ ಮೂಲಕ ಅಂದೇ ತಿಳಿಸಿದರು. ಆದರೆ ನಮಗಿಂದಿಗೂ ಈ ತತ್ವ ತಿಳಿದಿಲ್ಲವಾಗಿದೆ.

ಇಂಥ ಕನಕರು ಈ ಭೂಮಿಯಂತರಾಳದೊಳಕ್ಕೂ ಬೇರು ಬಿಟ್ಟಿರುವ ಜಾತೀಯತೆಯನ್ನು, ವರ್ಗಬೇಧವನ್ನು, ಅಸಮಾನತೆಯನ್ನು ಕಿತ್ತೊಗೆಯಲು ತಮ್ಮ ನುಡಿ ಮತ್ತು ನಡೆಗಳಿಂದ ಇದೇ ನೆಲದ ನೆಲೆಯಲ್ಲಿಯೇ ಪ್ರಯತ್ನಿಸುತ್ತಾರೆ. ಇನ್ನೊಬ್ಬರ ಹಸಿವನ್ನು, ನೋವನ್ನು ತಮ್ಮ ಹಸಿವು, ನೋವೆಂದೇ ಸಂಕಟಪಡುವಂಥ ದಾಸ ಶ್ರೇಷ್ಠರಾಗಿದ್ದರು. ಉಡುಪಿಯ ದೇವಸ್ಥಾನದೊಳಗಿದ್ದ ಶ್ರೀಕೃಷ್ಣ ಕನಕನ ಕಿಂಡಿಯತ್ತ ಹೊರಳುವಿಕೆಯ ಮೂಲಕ ಜಾತೀಯತೆಯಿಂದ ಜಾತ್ಯತೀತೆಯತ್ತ ತಿರುಗಿದ್ದರ ಪ್ರತೀಕವಾಗಿದ್ದಾನೆ.

ಆ ಕೃಷ್ಣನನ್ನು ತನ್ನತ್ತ ತಿರುಗಿಸಿಕೊಂಡ ಕನಕರು ಪರಿವರ್ತನೆಯ ಹರಿಕಾರರಾಗಿ ಸಮಾನತೆ ಪಾಠ ಹೇಳುವ ಶಿಕ್ಷಕರಾಗಿ, ಎಲ್ಲವೂ ಇದ್ದು ಏನೂ ಇಲ್ಲದಂತಿರುವ ದಾಸ ಬದುಕಿನ ಸರಳತೆಯ ಬದುಕನ್ನು ಬದುಕುವ ಸಂದೇಶವಾಹಕರಾಗಿ ನಮಗೆಲ್ಲ ಕಣ್ತೆರಿಸುತ್ತಿದ್ದಾರೆ. ದೇವರನ್ನು ಕಾಣಲಾಗಲಿಲ್ಲವಲ್ಲವೆಂದು ಒಡಲೊಳಗಿನ ದೇವನ ಹಸಿವಿದ್ದವರಿಗೆ ಭಕ್ತಿಯ ಆಹಾರವನ್ನಿತ್ತು ಅವರೊಳಗೇ ಇರುವ ದೇವರನ್ನು ಅವರಿಗೆ ತೋರುವ ಮೂಲಕ ಒಡಲಳಲನ್ನು ತಣಿಸಲು ಪ್ರಯತ್ನಿಸಿದ್ದಾರೆ. ತಾವು ಬಯಲಲ್ಲಿದ್ದು ಸ್ಥಾವರದೊಳಗಿದ್ದವರಿಗೆ ಮಾರ್ಗದರ್ಶಕರಾಗಿದ್ದಾರೆ.

– ಡಾ. ಗುರುರಾಜ ಪೋಶೆಟ್ಟಿಹಳ್ಳಿ (ಪ್ರಣವ)
ಸಂಸ್ಕೃತಿ ಚಿಂತಕರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನಿದ್ರಾಹೀನತೆ (ಇನ್ಸೊಮ್ನಿಯಾ) ಒಂದು ಕಾಯಿಲೆಯೇ…?

Upayuktha

ನೆನಪಿನ ಬುತ್ತಿಯಿಂದ: ಜ್ಯೋತಿ ಯಾವ ಜಾತಿ…

Upayuktha

ಅಕ್ಷರಲೋಕದ ಮಾತ್ರಿಕ ರವಿ ಬೆಳಗೆರೆ ಇನ್ನಿಲ್ಲವೆಂದರೆ ನಂಬಲಾದೀತೆ..?

Upayuktha