ಕತೆ-ಕವನಗಳು

ಜೀವನಸಂದೇಶವನ್ನು ಸಾರುವ ಮುಕ್ತಕಗಳು

(ಸಾಂದರ್ಭಿಕ ಚಿತ್ರ)

ತಾಯಿಯೆಂದರೆ ದೇವಿ ಕಾಯುವಳು ಸುತರನ್ನು
ಬಾಯಿಗನ್ನವ ನೀಡಿ ಬಿಡದೆ ಸಲಹುವಳು|
ಮೀಯುವಳು ಕಠಿಣಭವ ತೊರೆಯಲ್ಲಿ –
ಯನುದಿನವು
ಸಾಯುವಳು ಪರಹಿತಕೆ – ಪುಟ್ಟಕಂದ ||  || ೧ ||

ನದಿಯ ಸಿಹಿನೀರಿನಲಿ ಕಡಲಜಲ ಸೇರಿದರೆ
ಹೃದಯವೊಪ್ಪದಿಹುದೆಂದಿಗು ಕುಡಿಯಲದನು|
ಸೊದೆಯನೀಂಟುತ ಮೆರೆದ ಗಡಣದಲಿ
ರಾಹುವಿರೆ
ಸುದತಿ ಶಿಕ್ಷಿಪಳವನ – ಪುಟ್ಟಕಂದ || || ೨ ||

ಮುರಹರನ ನೆನಸಿದರೆ ಅರಿಗಳೆದೆಯಲಿ
ನಡುಕ
ವರವಿತ್ತ ಬೊಮ್ಮನಿಗು ಪರಿಹರಿಸಲರಿದು|
ಕರಮುಗಿದು ಕಾಲ್ಪಿಡಿದು ನೆರೆಯತ್ತು ನಮಿಸಿ –
ದರೆ
ಹರಿಹರರು ಸಲಹುವರು – ಪುಟ್ಟಕಂದ || || ೩ ||

ಜ್ಞಾನ ವಿಜ್ಞಾನಗಳ ತಿಳಿವಳಿಕೆಯೆನ್ನದಿರು
ಮಾನವಂತನ ಸಂಹಿತೆಯೆ ತಿಳಿವ ಶಿಖರ |
ಜ್ಞಾನದಿಂ ಸುಜ್ಞಾನದಾಗರವ ಹದವರಿತು
ಜನಸುಖಕೆ ಬಳಸುವುದು – ಪುಟ್ಟಕಂದ ||  || ೪ ||

ಪುಸ್ತಕವನೋದದೆಯೆ ಮುಚ್ಚುವುದು ತರವಲ್ಲ
ಮಸ್ತಕದಿ ತುಂಬಿರಲಿ ಸಾಹಿತ್ಯಸಿರಿಯು |
ಹಸ್ತದೊಳಗಿರಬೇಕು ತಾಯ್ನುಡಿಯ ಹೊತ್ತ –
ಗೆಯು
ಕಸ್ತೂರಿ ಕನ್ನಡವು – ಪುಟ್ಟಕಂದ || || ೫ ||

ತನುಶುದ್ಧಿ ಮನಶುದ್ಧಿಯಾತ್ಮಶುದ್ಧಿಗೆ ಮೂಲ
ಧನಧಾನ್ಯ ಸಂಪತ್ತು ಇತಿಮಿತಿಯೊಳಿರಲು |
ಕಣಕಣದಿ ಬೆವರಹನಿ ಸುರಿಸಿ ದುಡಿಯಲು
ಬೇಕು
ಜನಹಿತವ ಸಾಧಿಸಲು – ಮುದ್ದುಕಂದ || || ೬ ||

ಆಮ್ರಫಲ ಸೊದೆಯನ್ನು ಸವಿದ ಚೆಲು –
ಕೋಗಿಲೆಯು
ತಾಮ್ರಪರ್ಣಿಯ ಬೆಲೆಯ ಹಾಡ ಹಾಡುವುದು|
ಧೂಮ್ರವರ್ಣದ ಕಪ್ಪೆ ಕೆಸರಿನಲಿ ವಟಗುಟ್ಟಿ
ನಮ್ರತೆಯ ಮರೆಯುವುದು – ಪುಟ್ಟಕಂದ || || ೭ ||

ಮೋಸ ಮಾಡಲು ಬೇಡ ಕುಹಕ ನುಡಿಯಲು
ಬೇಡ
ದೋಷವನು ತರಬೇಡ ನಿನ್ನ ಬದುಕಿನಲಿ |
ವಾಸುದೇವನ ಭಜಿಸಿ ಶುಚಿಗೊಳಿಸು ಮನ –
ವನ್ನು
ದಾಸ ನೀನಾಗುತಲಿ – ಪುಟ್ಟಕಂದ || || ೮ ||

ಬಾಳೆಹಣ್ಣನು ಸುಲಿದು ತಿನ್ನುವುದು ಬಲು –
ಸುಲಭ
ನಾಳೆ ಜೀವನ ನಡೆಸಲದು ವಿದ್ಯೆಯಲ್ಲ |
ತಾಳುತಲಿ ಕಷ್ಟವನು ಗಿಡನೆಟ್ಟು ಸಲಹಿದರೆ
ಬಾಳು ಬಂಗಾರ ವರ – ಪುಟ್ಟಕಂದ || || ೯ ||

ಕೆಸರಿನಲಿ ಹುಟ್ಟಿರುವ ತಾವರೆಯ ಚೆಲುಹೂವು
ಬಿಸಜನಾಭನ ಪೂಜೆಯಲಿ ಧನ್ಯವಹುದು |
ಹೊಸಜೀವ ನಿರ್ಮಿಸುವ ಬೊಮ್ಮನನೆ ಹಿಡಿ –
ದಿರಿಸಿ
ಹಸನಾಗಿ ಶೋಭಿಸುಗು – ಪುಟ್ಟಕಂದ || || ೧೦ ||

ಪರಿಮಳವ ಸೂಸುತಿಹ ಕುಸುಮವೊಂದೇ
ಸಾಕು
ಪರಿಸರದಿ ನರುಗಂಪ ತೀಡಿ ಪಸರಿಸಲು |
ನರನಾಗಿ ಜನಿಸಿದವನಿದನರಿತು ಬದುಕಿದರೆ
ನರಲೋಕ ಸುರಲೋಕ – ಪುಟ್ಟಕಂದ || || ೧೧ ||

ಇರುಳಿನಲಿ ಬೆಳಗುತಿಹ ತಾರೆಗಳು ಹಲವಿರಲು
ಸರಿಸಾಟಿಯಾಗುವವೆ ಪೂರ್ಣಚಂದಿರಗೆ |
ನರರ ಗುಂಪಿನಲೊಬ್ಬ ಕೋವಿದನಿರಲವನೆ
ಬರಮಂಗೆ ಸಮವಕ್ಕು – ಪುಟ್ಟಕಂದ || || ೧೨ ||

ಸಾಲವನು ಕೊಡಬೇಡ ಸಾಲವನು ತೆಗಿಬೇಡ
ಮೂಲವೆಷ್ಟಿಹುದೆಂದು ನೋಡಿ ನೀ ಬದುಕು |
ಬಾಲತುಂಡಾಗಿರುವ ನರಿಯ ಕಥೆಯರಿತವಗೆ
ಸೋಲಿರದು ಜೀವನದಿ – ಪುಟ್ಟಕಂದ || || ೧೩ ||

ಮಕ್ಕಳಾಟವು ಚಂದ ಮತ್ತೆ ಯೌವ್ವನ ಚಂದ
ಸುಕ್ಕುಗಟ್ಟಿರುವ ಮೈ ಚಂದ ಮುಪ್ಪಿನಲಿ |
ಸಿಕ್ಕಿರುವ ಅವಕಾಶಗಳನರಿತು ಬಳಸಿದರೆ
ದಕ್ಕುವುದು ನಿಜಸುಖವು – ಪುಟ್ಟಕಂದ || || ೧೪ ||

ದೇವದಾನವರೆಲ್ಲ ಹೋರಾಡಿ ದಣಿದಿರಲು
ರಾವಣನು ಸತ್ತಿಹನು ಮನುಜನಳವಿನಲಿ |
ಕಾವದೇವರ ನಂಬಿ ಬದುಕಿದರೆ ಬಾಳಿನಲಿ
ಸಾವಿನಲು ಸುಖವಿಹುದು – ಪುಟ್ಟಕಂದ || || ೧೫ ||

ಮಾನವಂತಿಕೆ ಬೇಕು ಮನುಜಕುಲದೇಳಿಗೆಗೆ
ದಾನವರ ಸಹಮತವು ದೊರಕದಿಹುದಿದಕೆ|
ಹಾನಿಮಾಡುವ ಜನರೆ ದಾನವರು ನೋಡಿದರೆ
ಹೀನತ್ವಕೆಳಸುವರು – ಪುಟ್ಟಕಂದ || || ೧೬ ||

ಸಂಸಾರ ಸಾಗರದಿ ಅಲೆಯುಂಟು ನೆಲೆ –
ಯುಂಟು
ಹಿಂಸೆಯನು ತೊರೆದಿರಲು ವಾತ್ಸಲ್ಯವುಂಟು |
ಹಂಸಪಕ್ಷಿಯ ಬಿಳುಪು ಮನದೊಳಗೆ ತುಂಬಿ –
ರಲು
ಕಂಸಾರಿ ಸಲಹುವನು – ಪುಟ್ಟಕಂದ || || ೧೭ ||

ಅಂಬಿಗನ ನಂಬಿದರೆ ಭಯವಿಲ್ಲ ಮನುಜರಿಗೆ
ಶಂಭುಸಖ ನಡೆಸುವನು ಜೀವನದ ಹಾಯಿ |
ಸಿಂಬಿಯೊಳು ಪವಡಿಸಿದ ಲಕುಮಿಪತಿಯೊಲಿ –
ದಿರಲು
ಇಂಬು ದೊರೆವುದು ನಿನಗೆ – ಪುಟ್ಟಕಂದ || || ೧೮ ||

ರಚನೆ:-
ವಿ.ಬಿ.ಕುಳಮರ್ವ, ಕುಂಬ್ಳೆ ✍

 

Related posts

ಭೂ ತಾಯ ಐಸಿರಿ

Harshitha Harish

ಕನಸು

Harshitha Harish

ಕವನ: ವಿಶ್ವ ಪುಸ್ತಕದ ದಿನ

Upayuktha