ಪ್ರಮುಖ ರಾಜ್ಯ

ಮೇಳಗಳ ವಿರುದ್ಧ ಅವಹೇಳನ, ಅಶಿಸ್ತಿನ ವರ್ತನೆಗಾಗಿ ಪಟ್ಲ ಸತೀಶ್ ಶೆಟ್ಟರಿಗೆ ಅವಕಾಶ ನೀಡಿಲ್ಲ: ಕಟೀಲು ಮೇಳದ ಯಜಮಾನರ ಸ್ಪಷ್ಟನೆ

ಕಟೀಲು: ಭಾಗವತ ಪಟ್ಲ ಸತೀಶ್ ಶೆಟ್ಟಿ ಅವರು ಒಂದು ವರ್ಷದಿಂದೀಚೆಗೆ ಕಟೀಲು ಮೇಳದ ಕಟ್ಟುಪಾಡುಗಳಿಗೆ ಅಗೌರವ ತೋರಿದ್ದು, ಅಶಿಸ್ತು ಪ್ರದರ್ಶಿಸುತ್ತಿದ್ದಾರೆ. ಅಲ್ಲದೆ ಅಶಿಸ್ತಿನ ಕಾರಣಕ್ಕೆ ಮೇಳದಿಂದ ವಜಾ ಮಾಡಲಾದ ಕಲಾವಿದರ ಗುಂಪು ಕಟ್ಟಿಕೊಂಡು ನಾನಾ ರೀತಿಯಲ್ಲಿ ಕಟೀಲು ಮೇಳಗಳ ಹೆಸರಿಗೆ ಮಸಿ ಬಳಿಯಲು ಹವಣಿಸುತ್ತಿದ್ದಾರೆ. ಈ ಎಲ್ಲ ಕಾರಣಕ್ಕೆ ಅವರನ್ನು ಪ್ರತ್ಯೇಕವಾಗಿ ಕರೆದು ಈ ವರ್ಷ ಮೇಳದಲ್ಲಿ ಭಾಗವತಿಕೆಗೆ ನಿಮಗೆ ಅವಕಾಶವಿಲ್ಲ ಎಂದು ಸ್ಪಷ್ಟವಾಗಿ ಮೊದಲೇ ತಿಳಿಸಲಾಗಿತ್ತು ಎಂದು ಕಟೀಲು ಮೇಳಗಳ ಸಂಚಾಲಕ ಕಲ್ಲಾಡಿ ದೇವಿಪ್ರಸಾದ್‌ ಶೆಟ್ಟಿ ಅವರು ಸ್ಪಷ್ಟಪಡಿಸಿದ್ದಾರೆ.

ಕಟೀಲು ಮೇಳಗಳ ಈ ವರ್ಷದ ತಿರುಗಾಟದ ಮೊದಲ ದಿನವಾದ ಶುಕ್ರವಾರ ಕಟೀಲಿನಲ್ಲಿ ನಡೆದ ಪ್ರಥಮ ಸೇವೆಯಾಟದ ಸಂದರ್ಭದಲ್ಲಿ ಪಟ್ಲ ಸತೀಶ್ ಶೆಟ್ಟಿ ಅವರನ್ನು ವೇದಿಕೆಯಿಂದ ಕೆಳಗಿಳಿಸಿದ ಪ್ರಸಂಗದಿಂದ ಹುಟ್ಟಿಕೊಂಡ ವಿವಾದದ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಕೆಲವು ಸ್ಪಷ್ಟನೆಗಳನ್ನು ನೀಡಿದರು.

ಕಳೆದ ಬಾರಿಯ ತಿರುಗಾಟದ ಕೊನೆಯ ದಿನವಾದ ಪತ್ತನಾಜೆ ದಿನದ ಸೇವೆಯಾಟದ ಬಳಿಕ ಮೊನ್ನೆ ನಡೆದ ಪ್ರಥಮ ಸೇವೆಯಾಟದ ವರೆಗೂ ಪಟ್ಲ ಸತೀಶ್ ಶೆಟ್ಟರು ನನ್ನನ್ನು ಭೇಟಿಯಾಗಿಲ್ಲ. ಮೇಳದ ಯಜಮಾನರಿಗೆ ಗೌರವ ನೀಡುವ ಸೌಜನ್ಯ ಕೂಡ ಇಲ್ಲದ ಅವರು ಮೇಳದ ಬಂಡಾಯ ಕಲಾವಿದರ ಪರವಾಗಿ ಮಾತನಾಡುತ್ತಾರೆ. ಮೇಳದ ಆಟಗಳನ್ನು ಏಲಂ ಮೂಲಕ ಹಂಚಬೇಕೆಂದು ವಾದಿಸುತ್ತಾರೆ’ ಎಂದು ಕಲ್ಲಾಡಿ ದೇವಿಪ್ರಸಾದ್ ಶೆಟ್ಟಿ ಹೇಳಿದರು.

‘ನಾನು ನಡೆದುಕೊಂಡ ರೀತಿಯಲ್ಲಿ ತಪ್ಪಿದ್ದರೆ ಅದನ್ನು ಪಟ್ಲ ಸತೀಶ್ ಶೆಟ್ಟರು ಸಾಬೀತುಪಡಿಸಲಿ. ಭಾಗವತಿಕೆಗೆ ಅವರಿಗೆ ಅವಕಾಶವಿಲ್ಲ ಎಂಬುದನ್ನು ಮುಂಚಿತವಾಗಿ ತಿಳಿಸಿಯೇ ಅವರನ್ನು ದೂರವಿರಿಸಿದ್ದೇವೆ. ಹಾಗಿದ್ದರೂ ಪ್ರಹಸನ ಸೃಷ್ಟಿಸಲು ವೇದಿಕೆಯೇರಿ ಭಾಗವತಿಕೆಗೆ ಆರಂಭಿಸುವ ನಾಟಕವಾಡಿದ್ದಾರೆ. ನಾವು ಬಲವಂತದಿಂದ ಕೆಳಗಿಳಿಸಿದ್ದೇವೆ ಎಂಬ ಭಾವನೆ ಬರುವಂತೆ ಸನ್ನಿವೇಶಗಳನ್ನು ಸೃಷ್ಟಿಸಿಕೊಂಡು ಅನುಕಂಪ ಗಿಟ್ಟಲು ಮುಂದಾಗಿದ್ದಾರೆ’ ಎಂದು ದೇವಿಪ್ರಸಾದ್ ಶೆಟ್ಟಿ ಅವರು ಆರೋಪಿಸಿದರು.

ಮೊದಲೇ ಕ್ರಮಕ್ಕೆ ಆಗ್ರಹಿಸಿದ್ದೆವು:
ಕಳೆದ ಒಂದು ವರ್ಷದಿಂದ ಪಟ್ಲ ಸತೀಶ್ ಶೆಟ್ಟರು ಕಟೀಲು ಮೇಳಗಳ ಬಗ್ಗೆ ಇಲ್ಲಸಲ್ಲದ ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತ ಮೇಳವಿರೋಧಿ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಇದನ್ನು ಬಹಳ ಮಂದಿ ಭಕ್ತರೂ ವಿರೋಧಿಸಿದ್ದರು. ಹೀಗಾಗಿ ಆಡಳಿತ ಮಂಡಳಿ ಪಟ್ಲ ಸತೀಶ್ ಶೆಟ್ಟರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸಂಚಾಲಕರಿಗೆ ಸೂಚಿಸಿದ್ದೆವು ಎಂದು ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತೇಸರ ಸನತ್‌ಕುಮಾರ್ ಶೆಟ್ಟಿ ಕೊಡೆತ್ತೂರು ತಿಳಿಸಿದರು.

ಪಟ್ಲ ಸತೀಶ್ ಶೆಟ್ಟರು ಮೇಳ ತಿರುಗಾಟದಲ್ಲಿರುವಾಗಲೇ ಪರ್ವ ನಿರ್ಧಾರದಂತೆ ಮುಂಬಯಿಯ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದಾರೆ. ಇದಕ್ಕೆ ಅವರು ಮೇಳದ ಅನುಮತಿ ಪಡೆದಿಲ್ಲ; ಅವರು ಮೇಳವನ್ನು ತೊರೆಯುವ ನಿರ್ಧಾರವನ್ನು ಮೊದಲೇ ಮಾಡಿಕೊಂಡಿದ್ದರು ಎಂಬುದನ್ನು ಈ ನಡೆಯೇ ಸೂಚಿಸುತ್ತದೆ ಎಂದು ಸನತ್ ಕುಮಾರ್ ಶೆಟ್ಟಿ ಹೇಳಿದರು.

ಕಟೀಲು ದೇವಸ್ಥಾನದ ಅರ್ಚಕರ ಪರವಾಗಿ ಮಾತನಾಡಿದ ವೇ. ಮೂ. ಹರಿನಾರಾಯಣ ಅಸ್ರಣ್ಣ, ತಮ್ಮ ಹಾಗೂ ಕಲ್ಲಾಡಿ ಮನೆತನಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನ ನಡೆಯುತ್ತಿದ್ದು ಇದು ಸರಿಯಲ್ಲ. ಪ್ರಥಮ ಸೇವೆಯಾಟವನ್ನು ಆಸ್ರಣ್ಣ ಕುಟುಬದವರು ವೀಕ್ಷಿಸುವ ಸಂಪ್ರದಾಯವಿಲ್ಲ. ಆದರೂ ಪ್ರಕರಣದಲ್ಲಿ ಆಸ್ರಣ ಕುಟುಂಬದ ಕೈವಡವಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಭಾಗವತಿಕೆಗೆ ಅವಕಾಶವಿಲ್ಲ ಎಂಬುದು ತಿಳಿದಿದ್ದರೂ ಪಟ್ಲ ಸತೀಶ್ ಶೆಟ್ಟರು ಏಕಾಏಕಿ ವೇದಿಕೆ ಏರಿ ನಾಟಕ ಸೃಷ್ಟಿಸಿದರು. ಇದು ಪೂರ್ವಯೋಜಿತ ಎಂಬಂತೆ ಕಂಡುಬರುತ್ತಿದೆ. ಮೇಳದ ಸಂಚಾಲಕರು ತಮ್ಮ ನಿರ್ಧಾರ ಕೈಗೊಳ್ಳಲು ಸ್ವತಂತ್ರರು ಎಂದು ಆಸ್ರಣ್ಣ ಸ್ಪಷ್ಟಪಡಿಸಿದರು.

ಸುದ್ದಿಗೋಷ್ಠಿಯಲ್ಲಿ ದೇಗುಲದ ಆನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಕಟೀಲಿನ ಅರ್ಚಕ ಲಕ್ಷ್ಮೀನಾರಾಯಣ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಕಮಲಾದೇವಿ ಪ್ರಸಾದ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಸದಾನಂದ ಆಸ್ರಣ್ಣ, ಸುಧೀರ್ ಶೆಟ್ಟ ಕೊಡೆತ್ತೂರುಗುತ್ತು, ಬಿಪಿನ್ ಪ್ರಸಾದ್ ಕೊಡೆತ್ತೂರುಗುತ್ತು ಉಪಸ್ಥಿತರಿದ್ದರು.

ಸಮಗ್ರ ವರದಿಗೆ ಸಚಿವರ ಸೂಚನೆ
ಕಟೀಲು ಮೇಳಗಳ ಸದ್ಯದ ಪರಿಸ್ಥಿತಿ ಮತ್ತು ನಡೆದ ಘಟನಾವಳಿಗಳ ಸಮಗ್ರ ವರದಿ ಸಲ್ಲಿಸುವಂತೆ ಧಾರ್ಮಿಕ ದತ್ತಿ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದ್ದಾರೆ.

ಇಂದು ಪ್ರತಿಭಟನೆ:
ಪಟ್ಲ ಸತೀಶ್ ಶೆಟ್ಟಿ ಅವರನ್ನು ಪ್ರಥಮ ಸೇವೆಯಾಟದ ವೇದಿಕೆಯಿಂದ ಕೆಳಗಿಳಿಸಿ ಅವಮಾನ ಮಾಡಲಾಗಿದೆ ಎಂದು ಆರೋಪಿಸಿರುವ ಪಟ್ಲ ಅಭಿಮಾನಿ ಬಳಗ, ಈ ಘಟನೆ ವಿರುದ್ಧ ಇಂದು ಮಧ್ಯಾಹ್ನ 2:30ಕ್ಕೆ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.

(ಉಪಯುಕ್ತ ನ್ಯೂಸ್ ಸುದ್ದಿಜಾಲ)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬಾಲಕಿಯರಿಗೆ ಗುರುಕುಲ: ಪ್ರವೇಶ ಅವಧಿ ವಿಸ್ತರಣೆ

Upayuktha

ಅಧಿಕ ರಕ್ತದೊತ್ತಡ ಎಂಬ ನಿಶ್ಯಬ್ಧ ಕೊಲೆಗಾರ… ಜೀವನಶೈಲಿ ಬದಲಾವಣೆಯೇ ಪರಿಹಾರ…

Upayuktha

ದ.ಕ. ಜಿಲ್ಲೆಯಲ್ಲಿ 16, ಉಡುಪಿಯಲ್ಲಿ 6, ಕಾಸರಗೋಡಿನಲ್ಲಿ1 ಪಾಸಿಟಿವ್

Upayuktha