ನಗರ ಪ್ರಮುಖ ಸ್ಥಳೀಯ

ಕೋವಿಡ್-19: ಕರ್ನಾಟಕದ ಗಡಿ ಮುಚ್ಚಿದರೆಂದು ಹುಯಿಲೆಬ್ಬಿಸುತ್ತಿರುವ ಕೇರಳ

ಕಾಸರಗೋಡು, ಕಣ್ಣೂರು ಜಿಲ್ಲೆಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಹೆಚ್ಚಿಸುವುದು ಬಿಟ್ಟು ಕರ್ನಾಟಕದ ಮೇಲೆ ಗೂಬೆ ಕೂರಿಸಲು ಮುಂದಾದ ಕೇರಳ

ಮಂಗಳೂರು: ದೇಶಾದ್ಯಂತ ಹಬ್ಬುತ್ತಿರುವ ಕೊರೊನಾ ವೈರಸ್ ಸಾಂಕ್ರಾಮಿಕವನ್ನು ಹತ್ತಿಕ್ಕುವ ದೃಷ್ಟಿಯಿಂದ ಇಡೀ ಭಾರತದಲ್ಲಿ ಲಾಕ್‌ಡೌನ್‌ ಘೋಷಿಸಿ ಒಂದು ವಾರವೇ ಆಯ್ತು. ಮಾರ್ಚ್‌ 22ರ ಭಾನುವಾರದಂದು ಜನತಾ ಕರ್ಫ್ಯೂ ಆಚರಿಸಿದ ಬಳಿಕ 21 ದಿನಗಳ ದೇಶವ್ಯಾಪಿ ಲಾಕ್‌ಡೌನ್‌ ಅನ್ನು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದರು.

ಈ ಲಾಕ್‌ಡೌನ್‌ ರಾಜ್ಯ ರಾಜ್ಯಗಳ ಗಡಿಯಲ್ಲಿ ಮಾತ್ರವಲ್ಲ, ಹಳ್ಳಿ ಹಳ್ಳಿಗಳ ಗಡಿಯಲ್ಲೂ ಜಾರಿಯಲ್ಲಿರುತ್ತದೆ. ಜನತೆ ಒಂದು ಹಳ್ಳಿಯಿಂದ ಇನ್ನೊಂದು ಹಳ್ಳಿಗೂ ಅನಗತ್ಯ ತಿರುಗಾಟ ಮಾಡುವಂತಿಲ್ಲ ಎಂದು ಪ್ರಧಾನಿ ಸ್ಪಷ್ಟವಾಗಿಯೇ ಹೇಳಿದ್ದರು. ಕೇಂದ್ರ ಸರಕಾರದ ಈ ಆದೇಶದ ಮೇರೆಗೆ ಕರ್ನಾಟಕ ಸರಕಾರ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತಗಳು ಕೇರಳದೊಂದಿಗಿನ ಎಲ್ಲ ಗಡಿಗಳನ್ನು ಮುಚ್ಚಿದ್ದವು.

ಭಾರತದಲ್ಲಿ ಕೊರೊನಾ ಸಾಂಕ್ರಾಮಿಕದ ಕೇಂದ್ರಸ್ಥಾನ ಎಂಬ ಕುಖ್ಯಾತಿಗೆ ಕಾಸರಗೋಡು ಇಂದು ಪಾತ್ರವಾಗಿದೆ. ಒಂದು ಕಾಲದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಅವಿಭಾಜ್ಯ ಅಂಗವಾಗಿದ್ದ, ಕನ್ನಡಿಗರೇ ಬಹುಸಂಖ್ಯಾತರಾಗಿದ್ದ ಕಾಸರಗೋಡನ್ನು ರಾಜಕೀಯ ಷಡ್ಯಂತ್ರಗಳ ಮೂಲಕ ಕೇರಳಕ್ಕೆ ಸೇರಿಸಲಾಯಿತು. ಅಂದಿನಿಂದ ಅಲ್ಲಿನ ಕನ್ನಡಿಗರ ಕೂಗಿಗೆ ಬೆಲೆಯೇ ಇಲ್ಲದಂತಾಯಿತು. ಕೇರಳ ಸರಕಾರ ವ್ಯವಸ್ಥಿತವಾಗಿ ಕಾಸರಗೋಡಿನ ಕನ್ನಡಿಗರ ಹಕ್ಕುಗಳನ್ನು ಮೊಟಕುಗೊಳಿಸುತ್ತ ಮಲಯಾಳೀಕರಣ ಮಾಡುತ್ತಲೇ ಬಂತು. ಕನ್ನಡಗಿರು ಬಹುಸಂಖ್ಯಾತರಾಗಿರುವುದನ್ನು ತಪ್ಪಿಸಲು ಕಣ್ಣೂರು ಜಿಲ್ಲೆಯ ಕೆಲವು ಭಾಗಗಳನ್ನು ಸೇರಿಸಿ ಕಾಸರಗೋಡನ್ನೇ ಪ್ರತ್ಯೇಕ ಜಿಲ್ಲೆಯಾಗಿಸಿ ಕನ್ನಡಿಗರು ಇನ್ನಷ್ಟು ಅಲ್ಪಸಂಖ್ಯಾತರಾಗುವಂತೆ ಮಾಡಿತು ಕೇರಳ ಸರಕಾರ. ಅದೆಲ್ಲವೂ ಹಳೆಯ ಕತೆಯಾಯ್ತು.

ಇಷ್ಟಾದರೂ ಕಾಸರಗೋಡಿನ ಅಭಿವೃದ್ಧಿಗೆ ಕೇರಳ ಸರಕಾರ ಗಮನ ಹರಿಸಲೇ ಇಲ್ಲ. ಕಾಸರಗೋಡಿನ ಜನತೆ ಅಷ್ಟೇ ಅಲ್ಲ, ನೆರೆಯ ಕಣ್ಣೂರು ಜಿಲ್ಲೆಯ ಜನತೆಯೂ ಆರೋಗ್ಯ ಸೌಲಭ್ಯ, ಶಿಕ್ಷಣ ಮುಂತಾದ ಸೌಲಭ್ಯಗಳಿಗಾಗಿ ನೆರೆಯ ಕರ್ನಾಟಕವನ್ನೇ ನೆಚ್ಚಿಕೊಳ್ಳಬೇಕಾಗಿದೆ. ಎಲ್ಲವೂ ಸರಿಯಾಗಿದ್ದಾಗ ಈ ಅವಲಂಬನೆಯಿಂದ ಯಾರಿಗೂ ತೊಂದರೆಯಿರಲಿಲ್ಲ. ದಕ್ಷಿಣ ಕನ್ನಡವೂ ಸೇರಿದಂತೆ ಕೇರಳಕ್ಕೆ ತಾಗಿಕೊಂಡಿರುವ ಕರ್ನಾಟಕದ ಜಿಲ್ಲೆಗಳು ತೆರೆದ ತೋಳಿನಿಂದ ಕೇರಳಿಗರನ್ನು ಸ್ವಾಗತಿಸಿದವು.

ಆದರೆ ಕೇರಳದ ಅಸಡ್ಡೆಯಿಂದಾಗಿ ಕಾಸರಗೋಡು ಇಂದು ಮಹಾಮಾರಿ ಕೊರೊನಾ ಸಾಂಕ್ರಾಮಿಕದ ಕೇಂದ್ರಸ್ಥಾನವೆನಿಸಿಬಿಟ್ಟಿದೆ. ಚೀನಾದಲ್ಲಿ ವುಹಾನ್ ನಗರ ಕೊರೊನಾದ ಎಪಿಸೆಂಟರ್‌ (ಕೇಂದ್ರಸ್ಥಾನ) ಎನಿಸಿದಂತೆ ಕಾಸರಗೋಡು ಮೂಲದ ಮಂದಿ ಕೊಲ್ಲಿ ರಾಷ್ಟ್ರಗಳಿಂದ ಮರಳಿ ತವರಿಗೆ ಬಂದಾಗ ಕೊರೊನಾ ಸಾಂಕ್ರಾಮಿಕವನ್ನೂ ಹೊತ್ತು ತಂದರು. ಮಾತ್ರವಲ್ಲ ಬಂದವರು ವೈದ್ಯರ ಸಲಹೆಯಂತೆ ಸುಮ್ಮನೆ ಮನೆಯಲ್ಲಿರದೆ ಮದುವೆ, ಮುಂಜಿ, ಸಾರ್ವಜನಿಕ ಸಮಾರಂಭ ಎಂದು ಊರೆಲ್ಲ ತಿರುಗಿ ಎಲ್ಲರಿಗೂ ಕೊರೊನಾ ಹಂಚಿಬಿಟ್ಟರು.

ಮುಖ್ಯವಾಗಿ ಕಾಸರಗೋಡಿನ ಒಬ್ಬವ್ಯಕ್ತಿ ಮಾಡಿದ ಸಾಮಾಜಿಕ ಅಪರಾಧದಿಂದ ಕಾಸರಗೋಡು ಮತ್ತು ಮಂಜೇಶ್ವರದ ಶಾಸಕರು ಕೂಡ ಇಂದು ಕ್ವಾರಂಟೈನ್‌ನಲ್ಲಿ ಇರುವ ಪರಿಸ್ಥಿತಿ ಬಂದಿದೆ. ಕಾಸರಗೋಡಿನ ಬಹುತೇಕ ಕೊರೊನಾ ಪ್ರಕರಣಗಳು ಗಲ್ಫ್ ರಾಷ್ಟ್ರಗಳಿಂದ ಆಮದಾಗಿರುವವುಗಳು. ಅಲ್ಲಿ ಸೂಕ್ತ ಚಿಕಿತ್ಸೆ ಸೌಲಭ್ಯ ಇಲ್ಲವೆಂಬ ಕಾರಣಕ್ಕೆ ಸಹಜವಾಗಿಯೇ ಮಂಗಳೂರನ್ನು ಉತ್ತರ ಕೇರಳಿಗರು ಆಶ್ರಯಿಸುತ್ತಾರೆ.

ಕಾಸರಗೋಡಿನಲ್ಲಿ ಹಬ್ಬಿದ ಕೊರೊನಾ ಸಂಕ್ರಾಮಿಕ ದಕ್ಷಿಣ ಕನ್ನಡಕ್ಕೆ ಬಾರದೆ ಇರಲಿ ಎಂಬ ಮುಂಜಾಗ್ರತೆ ಕ್ರಮವಾಗಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಯಾವಾಗ ಎಲ್ಲ ಗಡಿಗಳನ್ನೂ ಮುಚ್ಚಿತೋ ಕಾಸರಗೋಡಿನ ಜನಸಾಮಾನ್ಯರಿಗಿಂತಲೂ ರಾಜಕೀಯ ಪುಡಾರಿಗಳು, ಅವರೊಂದಿಗೆ ನಿಕಟ ಸಖ್ಯ ಹೊಂದಿರುವ ಕೆಲವು ಸಂಘಟನೆಗಳು ಹುಯಿಲೆಬ್ಬಿಸತೊಡಗಿವೆ. ಕರ್ನಾಟಕದ ಗಡಿಗಳನ್ನು ತೆರೆಸಬೇಕೆಂಬ ಒತ್ತಡ ತರುತ್ತಿವೆ.

ಆದರೆ ಯಾವುದೇ ಕಾರಣಕ್ಕೂ ರಾಜ್ಯಗಳು ತಮ್ಮ ಗಡಿಗಳನ್ನು ಸಂಪೂರ್ಣ ಮುಚ್ಚಿ ಒಂದೆಡೆಯಿಂದ ಇನ್ನೊಂದೆಡೆಗೆ ಕೊರೊನಾ ಸೋಂಕು ಹರಡದಂತೆ ನೋಡಿಕೊಳ್ಳಬೇಕೆಂದು ಕೇಂದ್ರ ಸರಕಾರ ಸ್ಪಷ್ಟ ನಿರ್ದೇಶನ ನೀಡಿದೆ. ಈ ನಿರ್ದೇಶನವನ್ನು ಕರ್ನಾಟಕ ಹಾಗೂ ದಕ್ಷಿಣ ಕನ್ನಡ ಜಿಲ್ಲಾಡಳಿತ ಯಥಾವತ್ ಪಾಲಿಸಿವೆ. ಇಷ್ಟೇ ಹೊರತು ನೆರೆಯ ಕಾಸರಗೋಡು ಅಥವಾ ಕೇರಳದವರಿಗೆ ನಾಗರಿಕ ಸೌಲಭ್ಯಗಳನ್ನು ನಿರಾಕರಿಸಬೇಕು ಎಂಬ ಕಾರಣಕ್ಕಲ್ಲ.

ಜಿಲ್ಲಾಡಳಿತ ಹಾಗೂ ಪೊಲೀಸ್ ಆಡಳಿತ ಕೇವಲ ತಡೆಬೇಲಿಗಳನ್ನಿಟ್ಟು ಗಡಿ ಮುಚ್ಚಿದ್ದು ಹೆಚ್ಚು ಪರಿಣಾಮಕಾರಿಯಾಗಲಿಲ್ಲ ಎಂಬ ಕಾರಣಕ್ಕೆ ಗಡಿ ರಸ್ತೆಗಳಲ್ಲಿ ಮಣ್ಣಿನ ತಡೆಗೋಡೆ ನಿರ್ಮಿಸಿ ಸಂಪರ್ಕ ಕಡಿದು ಹಾಕಿವೆ. ಕೇರಳ ಸರಕಾರ ಕಾಸರಗೋಡಿನಲ್ಲಿ ವಿಶೇಷ ಆರೋಗ್ಯ ಸೌಲಭ್ಯಗಳನ್ನು ಒದಗಿಸುವುದು ಬಿಟ್ಟು ಕರ್ನಾಟಕದ ಮೇಲೆ, ದಕ್ಷಿಣ ಕನ್ನಡ ಜಿಲ್ಲಾಡಳಿತದ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದೆ.

ಕೇರಳ- ಕರ್ನಾಟಕ ಗಡಿ ಸಮಸ್ಯೆ ಸುಪ್ರೀಂ ಕೋರ್ಟಿಗೆ:
ಈ ಹುನ್ನಾರದ ಭಾಗವಾಗಿಯೇ ಕಾಸರಗೋಡಿನ ಸಂಸದ ಎಂ.ಪಿ ರಾಜಮೋಹನ ಉಣ್ಣಿತ್ತಾನ್‌ ಇಂದು ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿ ಕರ್ನಾಟಕದ ಗಡಿಗಳನ್ನು ತೆರೆಸಬೇಕು ಎಂದು ಆಗ್ರಹಿಸಿದ್ದಾರೆ. ಈ ಅರ್ಜಿಯನ್ನು ಶೀಘ್ರವೇ ವಿಚಾರಣೆಗೆ ಸ್ವೀಕರಿಸಬೇಕು ಎಂದು ಅವರ ವಕೀಲ ಹ್ಯಾರಿಸ್‌ ಬೀರಾನ್ ಸುಪ್ರೀಂ ಕೋರ್ಟ್‌ ರಿಜಿಸ್ಟ್ರಾರ್‌ ಅವರಲ್ಲಿ ಒತ್ತಾಯಿಸಿದ್ದಾರೆ.

ಆದರೆ ಇಡೀ ದೇಶವೇ ಕೊರೊನಾ ಮಹಾಮಾರಿಯ ವಿರುದ್ಧ ಸಮರದಲ್ಲಿ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಸಾರ್ವಜನಿಕ ಹಿತಕ್ಕಾಗಿ ಕೈಗೊಂಡಿರುವ ಗಡಿ ಮುಚ್ಚುಗಡೆ ನಿರ್ಧಾರವನ್ನು ಸುಪ್ರೀಂ ಕೋರ್ಟ್ ಕೂಡ ಈಗ ವಿಚಾರಣೆಗೆ ಎತ್ತಿಕೊಳ್ಳಲಾರದು ಎಂದು ಕಾನೂನು ಪರಿಣತರು ಅಭಿಪ್ರಾಯಪಡುತ್ತಾರೆ. ಆರೋಗ್ಯ ತುರ್ತು ಸ್ಥಿತಿಯ ಹಿನ್ನೆಲೆಯಲ್ಲಿ ಆಡಳಿತಾತ್ಮಕವಾಗಿ ಕೈಗೊಂಡಿರುವ ಲಾಕ್‌ಡೌನ್ ನಿರ್ಧಾರದ ಅನ್ವಯ ಗಡಿಗಳ ಮುಚ್ಚುಗಡೆಯನ್ನು ಸುಪ್ರೀಂ ಕೋರ್ಟ್ ಕೂಡ ಈ ಹಂತದಲ್ಲಿ ವಿಚಾರಣೆಗೆ ಪರಿಗಣಿಸಲಾರದು.

ವಾಸ್ತವದಲ್ಲಿ ದಕ್ಷಿಣ ಕನ್ನಡದ ಸ್ಥಳೀಯರಲ್ಲಿ ಯಾವುದೇ ಕೊರೊನಾ ಪ್ರಕರಣಗಳೂ ಈವರೆಗೆ ದೃಢಪಟ್ಟಿಲ್ಲ. ಶಂಕೆಯ ಮೇರೆಗೆ ಕ್ವಾರಂಟೈನ್‌ನಲ್ಲಿ ಇರುವವರು ಒಬ್ಬೊಬ್ಬರಾಗಿ ತಮ್ಮ ಪ್ರತ್ಯೇಕವಾಸದ ಅವಧಿ ಮುಗಿಸಿ ಆರೋಗ್ಯವಂತರಾಗಿಯೇ ಹೊರಬರುತ್ತಿದ್ದಾರೆ. ಈಗ ದೃಢಪಟ್ಟಿರುವ ಅಷ್ಟೂ ಪ್ರಕರಣಗಳು ಕೇರಳ ಮೂಲದವರದ್ದೇ ಆಗಿವೆ. ಈ ಹಿನ್ನೆಲೆಯಲ್ಲೇ ದಕ್ಷಿಣ ಕನ್ನಡ ಜಿಲ್ಲಾಡಳಿತ ಮುಂಜಾಗ್ರತೆ ಕ್ರಮವಾಗಿ ಕಾಸರಗೋಡಿನಿಂದ ಕೊರೊನಾ ಸಾಂಕ್ರಾಮಿಕ ದ.ಕ ಜಿಲ್ಲೆಗೆ ಹಬ್ಬದಿರಲಿ ಎಂದು ಗಡಿಗಳನ್ನು ಮುಚ್ಚುವ ನಿರ್ಧಾರ ಕೈಗೊಂಡಿದೆ.

ಒಂದು ವೇಳೆ ಮಂಗಳೂರಿನ ಆಸ್ಪತ್ರೆಗಳ ಸಾಮರ್ಥ್ಯ ಮೀರಿ ಕೊರೊನಾ ಸೋಂಕು ಪೀಡಿತರು ಇಲ್ಲಿನ ಆಸ್ಪತ್ರೆಗಳಲ್ಲಿ ದಾಖಲಾಗಲು ಬಂದರೆ ಪರಿಸ್ಥಿತಿ ಕೈಮೀರಿ ಹೋಗಬಹುದು. ಸಾಂಕ್ರಾಮಿಕವು ಸಮುದಾಯ ಹಂತದಲ್ಲಿ ಹರಡಲು ಆರಂಭವಾಗಬಹುದು ಎಂಬ ಆತಂಕದಿಂದ ದಕ್ಷಿಣ ಕನ್ನಡ ಜಿಲ್ಲಾಡಳಿತ ಗಡಿಗಳನ್ನು ಮುಚ್ಚಿದೆ.

ಕಾಸರಗೋಡಿನಲ್ಲಿ ಎಲ್ಲವೂ ಸರಿ ಇದ್ದಾಗ ಅದನ್ನು ಕಬಳಿಸಿ ನೀರು ಕುಡಿದ ಕೇರಳವೀಗ ಕೊರೊನಾ ಸಾಂಕ್ರಾಮಿಕ ಬಂದ ಸಮಯದಲ್ಲಿ ಇಡಿಯಾಗಿ ಕಾಸರಗೋಡನ್ನು ಕರ್ನಾಟಕಕ್ಕೆ ಸೇರಿಸಿಬಿಡುವ ತರಾತುರಿಯಲ್ಲಿದೆಯೇ ಎಂಬ ವ್ಯಂಗ್ಯವಾದ ಪ್ರಶ್ನೆಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.

ಕೇರಳದ ಹಾಲಿಗೆ ತಮಿಳುನಾಡು ನಿಷೇಧ:
ಕೊರೊನಾ ಸಾಂಕ್ರಾಮಿಕ ಕೇರಳದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಮುಂಜಾಗ್ರತೆ ಕ್ರಮವಾಗಿ ಕೇರಳದಿಂದ ಬರುತ್ತಿದ್ದ ಹಾಲನ್ನು ತಮಿಳುನಾಡು ಇದೀಗ ನಿಷೇಧಿಸಿದೆ. ಸದ್ಯಕ್ಕೆ ಕೇರಳದ ಹಾಲನ್ನು ಸ್ವೀಕರಿಸದಿರಲು ತಮಿಳುನಾಡು ನಿರ್ಧರಿಸಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೊರೊನಾ ವೈರಸ್ ನಿಯಂತ್ರಣ: ಅಗತ್ಯ ಮುಂಜಾಗ್ರತೆಗೆ ಉಡುಪಿ ಜಿಲ್ಲಾಧಿಕಾರಿ ಸೂಚನೆ

Upayuktha

ಸುಬ್ರಹ್ಮಣ್ಯದಲ್ಲಿ ಗೃಹರಕ್ಷಕರಿಗೆ ದಿನಸಿ ಕಿಟ್ ವಿತರಣೆ

Upayuktha

ಡಿ.ಜೆ. ಹಳ್ಳಿ ಪ್ರಕರಣ: ಪರಪ್ಪನ ಅಗ್ರಹಾರದಿಂದ ಹೊರಬಂದ ಮಾಜಿ ಮೇಯರ್​ ಸಂಪತ್ ರಾಜ್

Sushmitha Jain