ಗ್ರಾಮಾಂತರ ಪ್ರಮುಖ ಸ್ಥಳೀಯ

ರಾಜ್ಯ ಮಟ್ಟದ ಶಾಲಾ ಕಲೋತ್ಸವ: ಇನ್ನು ಉಳಿದಿರುವುದು 9 ದಿನಗಳು ಮಾತ್ರ

ಕಾಸರಗೋಡು: ಗಡಿನಾಡ ಮಣ್ಣು ರಾಜ್ಯ ಮಟ್ಟದ ಶಾಲಾ ಕಲೋತ್ಸವಕ್ಕೆ ಸಿದ್ಧವಾಗಿದೆ. 28 ವರ್ಷಗಳ ಹಿಂದೆ ಇಲ್ಲಿ ನಡೆದಿದ್ದ ಮಹಾ ಕಲಾ ಪ್ರವಾಹ ಮತ್ತೆ ಇಲ್ಲಿ ಅನುರಣಿಸಲಿದೆ. ಮಹಾನ್ ಕಲಾಮೇಳದ ಆರಂಭಕ್ಕೆ ಇನ್ನು ಉಳಿದಿರುವುದು 9 ದಿನಗಳು ಮಾತ್ರ.

ಈ ನಿಟ್ಟಿನಲ್ಲಿ ಜಿಲ್ಲೆಗೆ ಆಗಮಿಸಲಿರುವ ಅತಿಥಿಗಳನ್ನು ಯಾವ ರೀತಿ ಸ್ವಾಗತಿಸಬಹುದು ಎಂಬ ಯೋಜನೆ-ಯೋಚನೆಗಳೊಂದಿಗೆ ಜಿಲ್ಲೆಯ ಜನ ಭೇದ-ಭಾವ ಮರೆತು ಕೈಜೋಡಿಸಿದ್ದಾರೆ. ಕನ್ನಡ, ತುಳು, ಮಲೆಯಾಳಂ ಭಾಷೆಗಳ ವ್ಯತ್ಯಾಸಗಳಿಲ್ಲದೆ ಬೇರೆ ಬೇರೆ ಜಿಲ್ಲೆಗಳಿಂದ ಬರುವ ಮಂದಿಯನ್ನು ಭವ್ಯವಾಗಿ ಸ್ವಾಗತಿಸಿ, ಗಡಿನಾಡ ವೈವಿಧ್ಯವನ್ನು ಅವರಿಗೆ ತೋರುವ ನಿಟ್ಟಿನಲ್ಲಿ ವ್ಯವಸ್ಥೆಗಳು ಭರದಿಂದ ಸಾಗುತ್ತಿವೆ.

ಚಂದ್ರಗಿರಿ ನದಿಯ ದಕ್ಷಿಣ ಭಾಗದ ಕಾಞಂಗಾಡು ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ನ.28ರಿಂದ ಡಿ.1 ವರೆಗೆ ಈ ಕಲೋತ್ಸವ ಜರುಗಲಿದೆ. ತುಳುನಾಡಿನ ಪುಂಡಿಯಿಂದ ತೊಡಗಿ ಗೋಳಿಬಜೆ, ಪೋಡಿಯ ವರೆಗೆ, ಪಾಯಸದಿಂದ ಹಿಡಿದು ಹೋಳಿಗೆ ವರೆಗೆ, ಕಾಸರಗೋಡು ಸೀರೆಯಿಂದ ತೊಡಗಿ ತಳಂಗರೆ ಟೊಪ್ಪಿ ವರೆಗೆ ಸಾಂಸ್ಕೃತಿಕ ವಿವಿಧತೆಯನ್ನು ಈ ವೇಳೆ ನಾಡು ತೆರೆದಿಡಲಿದೆ.

28 ವರ್ಷಗಳ ಹಿಂದೆ ಇಲ್ಲಿ ನಡೆದಿದ್ದ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ವೇಳೆ ಇಲ್ಲಿನ ಆತಿಥ್ಯ, ಭಾಷಾ, ಸಂಸ್ಕೃತಿಯ ವಿವಿಧತೆಗಳೇ ಇತರರಿಗೆ ಆಕಷರ್ಣೆಯಾಗಿದ್ದುವು. ಅದಕ್ಕಿಂತಲೂ ಹಲವು ಪಟ್ಟು ಅಧಿಕ ವ್ಯವಸ್ಥೆಗಳೊಂದಿಗೆ ಈ ಬಾರಿಯ ಕಲೋತ್ಸವ ಸಿದ್ಧಗೊಳ್ಳುತ್ತಿದೆ. 28 ವೇದಿಕೆಗಳಲ್ಲಿ ಕಲೆಗಳ ಮಹಾಪೂರ ಪ್ರಸ್ತುತಗೊಳ್ಳಲಿದ್ದರೆ, ಸ್ಥಳೀಯ ಮನೆಗಳು ಅತಿಥಿಗಳ ಸ್ವಾಗತಕ್ಕೆ ಸಜ್ಜುಗೊಂಡಿವೆ. ಕಾಸರಗೋಡಿನ ಅತಿಥಿ ಸತ್ಕಾರಕ್ಕೆ ಮತ್ತೆ ಕಲೋತ್ಸವ ಕೈಗನ್ನಡಿಯಾಗಲಿದೆ.

ವೈಭವದ ಜೊತೆಗೆ ಸ್ವಚ್ಛತೆಗೂ ಆದ್ಯತೆ:
ವೈಭವದ ಜೊತೆಗೆ ಶುಚಿತ್ವದ ವಿಚಾರದಲ್ಲೂ ಈ ಬಾರಿಯ ರಾಜ್ಯ ಮಟ್ಟದ ಶಾಲಾ ಕಲೋತ್ಸವ ಇತರರಿಗೆ ಮಾದರಿಯಾಗಲಿದೆ. ಕುಟುಂಬಶ್ರೀ ಸ್ವಸಹಾಯ ಸಂಘದ ಕಾರ್ಯಕರ್ತರು ಈ ನಿಟ್ಟಿನಲ್ಲಿ ಅಹೋರಾತ್ರಿಯ ಯತ್ನ ನಡೆಸುತ್ತಿದ್ದಾರೆ. ಕಲೋತ್ಸವ ನಡೆಯುವ ವೇದಿಕೆಗಳು, ಚಪ್ಪರಗಳು ಮತ್ತು ಅವುಗಳ ಆಸುಪಾಸಿನ ಪ್ರದೇಶಗಳು, ವಿದ್ಯಾರ್ಥಿಗಳು ಮತ್ತು ಪೋಷಕರು ತಗುವ ತಾಣಗಳ ಪರಿಸರವನ್ನು ಶುಚಿಯಾಗಿರಿಸುವ ನಿಟ್ಟಿನಲ್ಲಿ ಹಸುರು ಸಂಹಿತೆಯ ದೌತ್ಯ ಹೊತ್ತುಕೊಂಡು ಇವರು ದುಡಿಮೆ ನಡೆಸಲು ಸಜ್ಜಾಗಿದ್ದಾರೆ. ಕಾಞಂಗಾಡ್ ನಗರಸಭೆ ವ್ಯಾಪ್ತಿಯ ಎರಡು ಸಿ.ಡಿ.ಎಸ್.ಗಳಿಂದ ಸುಮಾರು 80 ಹರಿತ ಕ್ರಿಯಾ ಸೇನೆ ಸದಸ್ಯರು ಶುಚೀಕರಣದ ಚಟುವಟಿಕೆಗಳಿಗೆ ನೇಮಕಗೊಂಡಿದ್ದಾರೆ. ಕಲೋತ್ಸವ ಆರಂಭಕ್ಕೆ ಎರಡು ದಿನಗಳ ಮುನ್ನವೇ (ನ.26ರಿಂದಲೇ) ಇವರು ಕರ್ತವ್ಯಕ್ಕೆ ಹಾಜರಾಗುವರು. ಡಿ.2 ವರೆಗೆ ಇವರ ಕರ್ತವ್ಯ ಉಂದುವರಿಯುವುದು. ವೇದಿಕೆ, ಚಪ್ಪರ, ಶೌಚಾಲಯ, ತಂಗುವ ತಾಗಳು ಇತ್ಯಾದಿಗಳ ಶುಚೀಕರಣ ಪ್ರತಿದಿನ ಆಗಾಗ ನಡೆಯಲಿದೆ. ಪ್ರತಿಯೊಂದು ಕಡೆ ಬೆಳಗ್ಗೆ, ಮಧ್ಯಾಹ್ನ, ಸಂಜೆ, ರಾತ್ರಿ ತಲಾ ಇಬ್ಬರಿರುವ ಮೂರು ತಂಡ ದಿನಂಪತ್ರಿ ಶುಚೀಕರಣ ನಡೆಸಲಿದೆ. ಕ್ರಿಯಾ ಸೇನೆಗೆ ಬೇಕಾದ ಶುಚೀಕರಣ ಸಲಕರಣೆ ಕಲೋತ್ಸವ ಕಲ್ಯಾಣ ಸಮಿತಿ ಒದಗಿಸಲಿದೆ. ಕಲೋತ್ಸವ ಮುಕ್ತಾಯಗೊಂಡ ನಂತರ ಡಿ.2ರಂದು ವಹಿಸಿಕೊಂಡ ಆಯಾ ಕೇಂದ್ರಗಳನ್ನು ಸಮಗ್ರ ಶುಚೀಕರಣಗೊಳಿಸಿದ ನಂತರವೇ ಅಧಿಕಾರಿಗಳು ಇವರನ್ನು ಬೀಳ್ಕೊಡಲಿದ್ದಾರೆ.

ವಿಶಿಷ್ಟವಾಗಿರುವ ಸ್ವಾಗತ ಗಾಯನ:
ಭಾಷೆ ಮತ್ತು ಸಂಸ್ಕೃತಿಯ ವೈವಿಧ್ಯದ ಹಿನ್ನೆಲೆಯಿರುವ ಕಾಸರಗೋಡು ಜಿಲ್ಲೆಯಲ್ಲಿ ಈ ಬಾರಿ ನಡೆಯುತ್ತಿರುವ ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಎಲ್ಲ ಅಂಗಗಳೂ ವಿಶಿಷ್ಟ ವಾಗಿರಬೇಕು ಎಂದು ಸಂಘಟಕ ಸಮಿತಿ ಬಯಸಿದರೆ ಅದು ಅತಿಶಯೋಕ್ತಿಯಲ್ಲ. ಈ ನಿಟ್ಟಿನಲ್ಲಿ ಸ್ವಾಗತ ಗಾನ ಕೂಡ ವಿಶೇಷತೆಯಿಂದ ಕೂಡಿದೆ. ಮಲೆಯಾಳಂ ನ ಮಹಾಕವಿ ಕುಟ್ಟಮತ್ ಅವರ ಮೊಮ್ಮಗ ಕೆ.ವಿ. ಮಣಿಕಂಠನ್ ಅವರು ಈ ಹಾಡು ರಚಿಸಿದ್ದಾರೆ. ಇವರು ಚಟ್ಟಂಚಾಲ್ ಹೈಯರ್ ಸೆಕೆಂಡರಿ ಶಾಲೆಯ ಮುಖ್ಯ ಶಿಕ್ಷಕರಾಗಿದ್ದಾರೆ. ಜಿಲ್ಲೆಯ ಸಾಂಸ್ಕೃತಿಕ, ಭೌಗೋಳಿಕ, ಸಾಹಿತ್ಯಿಕ ಹಿನ್ನೆಲೆಗಳನ್ನು ಒಳಗೊಂಡು ಈ ಕವನ ರಚನೆಯಾಗಿದೆ. ಮಹಾಕವಿ ಕುಟ್ಟಮತ್ ಅವರೂ ಕಾವ್ಯ ಪ್ರಪಂಚದಲ್ಲಿ ಗುರುತಿಸಿಕೊಂಡದ್ದೂ ಇದೇ ಛಾಪಿನಿಂದ. ಜೊತೆಗೆ ಇದೇ ಕವಿಯ ಹುಟ್ಟೂರಲ್ಲಿ ಈ ಬಾರಿಯ ರಾಜ್ಯ ಮಟ್ಟದ ಕಲೋತ್ಸವವೂ ನಡೆಯುತ್ತಿದೆ ಎಂಬುದು ಗಮನಾರ್ಹ.

15 ನಿಮಿಷದ ಗಾಯನ ಅವಧಿ ಹೊಂದಿರುವ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದವರು ಹಿರಿಯ ಸಂಗೀತಗಾರ ಕಾಞಂಗಾಡ್ ರಾಮಚಂದ್ರನ್ ಅವರು. 60 ಮಂದಿ ಶಿಕ್ಷಕರು ಈ ಹಾಡನ್ನು ಕಲೋತ್ಸವದ ಉದ್ಘಾಟನೆ ಸಮಾರಂಭದಲ್ಲಿ ಹಾಡಲಿದ್ದಾರೆ.

Related posts

ಕಾಶಿಪಟ್ಣ: ಮನೆ ಹಾಗೂ ಕೊಟ್ಟಿಗೆಗೆ ಹಾನಿ

Sushmitha Jain

ಅಖಿಲ ಭಾರತ ವಿವಿ ಕ್ರೀಡಾಕೂಟ: 3ನೇ ದಿನ ನಡಿಗೆ, ಸ್ಟೀಪಲ್ ಚೇಸ್‍ನಲ್ಲಿ ಕೂಟ ದಾಖಲೆ

Upayuktha

ಆದಾಯ ಸ್ಥಿರಗೊಳ್ಳುವವರೆಗೂ ಜಿಎಸ್‌ಟಿ ದರ ಬದಲಾವಣೆ ಇಲ್ಲ: ಸುಶೀಲ್ ಕುಮಾರ್ ಮೋದಿ

Upayuktha