ಆರೋಗ್ಯ ಲೇಖನಗಳು

ವೈದ್ಯಲೋಕದಲ್ಲಿ ಮಲಕ್ಕೂ ಬಂತು ಮೌಲ್ಯ…!!!

ಆರೋಗ್ಯವೇ ಭಾಗ್ಯ ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರವೇ ಆಗಿದೆ. ಆದರೆ ಬದಲಾಗುತ್ತಿರುವ ಜೀವನ ಶೈಲಿ, ಆಹಾರ ಪದ್ಧತಿ, ವಿಪರೀತವಾದ ಒತ್ತಡದ ಬದುಕು, ಅನಗತ್ಯವಾಗಿ ಉಪಯೋಗಿಸುವ ಮಾತ್ರೆಗಳು ಇವೆಲ್ಲವೂ ನಮ್ಮ ಆರೋಗ್ಯದ ಮೇಲೆ ವ್ಯತಿರಕ್ತ ಪರಿಣಾಮ ನಿರಂತರವಾಗಿ ಮಾಡುತ್ತಲೇ ಇದೆ. ಇವೆಲ್ಲವೂ ಅರಿವಿದ್ದರೂ ಜನರು ಮಾತ್ರ ಯಾಂತ್ರಿಕವಾದ ಬದುಕಿಗೆ ಜೋತು ಬಿದ್ದು, ಆರೋಗ್ಯವನ್ನು ಹಾಳುಗೆಡವುತ್ತಿರುವುದೇ ಈ ಶತಮಾನದ ಬಹುದೊಡ್ಡ ದುರಂತ ಎಂದರೂ ತಪ್ಪಲ್ಲ

ಹರೀಶ್ ದಿಲ್ಲಿಯ ಪ್ರತಿಷ್ಠಿತ ಬಹು ರಾಷ್ಟ್ರೀಯ ಕಂಪೆನಿಯಲ್ಲಿ ಉನ್ನತ ಅಧಿಕಾರಿ. ದಿನಕ್ಕೆ ಏನಿಲ್ಲವೆಂದರೂ 12 ರಿಂದ 18 ಗಂಟೆಗಳ ಸತತ ಕೆಲಸದ ಒತ್ತಡ. ಕಾಲಕಾಲಕ್ಕೆ ನಿಯಮಿತವಾದ ಸಮತೋಲನ ಆಹಾರ ಸೇವಿಸಲು ಸಮಯವಿಲ್ಲದಷ್ಟು ಕೆಲಸದ ಅನಿವಾರ್ಯತೆ. ಜೊತೆಗೆ ವ್ಯಾಯಾಮವಿಲ್ಲದ ಬದುಕು. ಹೀಗೆ ಹಲವಾರು ವರ್ಷಗಳ ದುಡಿತ ದೇಹದ ಆರೋಗ್ಯ ಹದಗೆಟ್ಟು, ಸಣ್ಣಪುಟ್ಟ ರೋಗಗಳಿಗೂ ಅನಗತ್ಯವಾಗಿ ಔಷಧಿ ಸೇವನೆ ಮಾಡತೊಡಗಿದ್ದ. ಕ್ರಮೇಣ ಆತ ವೈದ್ಯರ ಬಳಿ ಹೋಗಲೇ ಬೇಕಾದ ಅನಿವಾರ್ಯತೆ ಬಂದೊದಗಿತು. 40ರ ಹರೆಯದಲ್ಲಿಯೇ ಮಲವಿಸರ್ಜಿಸುವಾಗ ರಕ್ತಸ್ರಾವವಾಗುವುದು ಜೊತೆಗೆ ವಿಪರೀತ ನೋವು ಯಾತನೆ ಉಂಟಾಗಲು ತೊಡಗಿತ್ತು. ವೈದ್ಯರು ಆತನನ್ನು ಕೂಲಂಕುಶವಾಗಿ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಕೊಲನೋಸ್ಕೋಪಿ ಎಂದ ಪರೀಕ್ಷೆ ಮಾಡಿ ಆತನಿಗೆ ಅಲ್ಸರೇಟೀವ್ ಕೊಲೈಟೀಸ್ ಎಂಬ ರೋಗವಿರುವುದನ್ನು ಪತ್ತೆ ಹಚ್ಚಿದರು. ಹಲವು ವರ್ಷಗಳ ಕಾಲ ಈತ ಸ್ಟಿರಾಯ್ಡ್ ಸೇವಿಸಿದರೂ ಯಾವುದೇ ಧನಾತ್ಮಕ ಪರಿಣಾಮವಿರಲಿಲ್ಲ. ಸ್ಟಿರಾಯ್ಡ್ ಸೇವನೆಯಿಂದ ಆತನಿಗೆ ಅಡ್ಡ ಪರಿಣಾಮ ಬರತೊಡಗಿತ್ತು. ಕೊನೆಗೊಮ್ಮೆ ಆತ ದೆಹಲಿಯ ಪ್ರತಿಷ್ಠಿತ “ಅಪೋಲೊ” ಆಸ್ಪತ್ರೆಗೆ ಹೋದಾಗ ಹೊಸತಾಗಿ ಚಿಕಿತ್ಸೆ ವಿಧಾನವಾದ FMT (Fecal Microbiata Transplant) ಎಂಬ ಪರಿಷ್ಕರಿಸಿದ ಮಲ ಮಾತ್ರೆಯ ಮುಖಾಂತರ ಆರೋಗ್ಯವಂತ ವ್ಯಕ್ತಿಯ ದೇಹದಿಂದ ದೊರೆತ ಮಲವನ್ನು ಪರಿಷ್ಕರಿಸಿ ಕರುಳಿನ ಆಂತರಿಕ ವಾತಾವರಣವನ್ನು ಮರು ಸೃಷ್ಠಿಸಿ ರೋಗವನ್ನು ತಹ ಬಂದಿಗೆ ತರಲಾಯಿತು. ಈಗ ಹರೀಶ ಮೊದಲಿನಂತೆ ಉಲ್ಲಸಿತನಾಗಿ ಕೆಲಸಕ್ಕೆ ಹೋಗುವ ಹಂತಕ್ಕೆ ಬಂದಿರುವುದು ಮಲಮಾತ್ರೆಯ ಪರಿಣಾಮದಿಂದಲೇ ಎಂಬುದು ನಂಬಲೇ ಬೇಕಾದ ವಿಚಿತ್ರ ಸತ್ಯ.

ಏನಿದು ಅಲ್ಸರೇಟಿವ್ ಕೊಲೈಟೀಸ್?
ಅಲ್ಸರೇಟಿವ್ ಕೊಲೈಟೀಸ್ ಎಂಬುದು ದೊಡ್ಡ ಕರುಳು ಮತ್ತು ಗುದದ್ವಾರದ ಒಳ ಪದರವನ್ನು ಕಾಡುವ ಒಂದು ಖಾಯಿಲೆಯಾಗಿರುತ್ತದೆ. ಯಾಕಾಗಿ ಈ ರೋಗ ಬರುತ್ತದೆ ಎಂಬುದು ಪೂರ್ತಿಯಾಗಿ ತಿಳಿಯದಿದ್ದರೂ ವಂಶ ಪಾರಂಪರ್ಯವಾಗಿ ವಂಶ ವಾಹಿನಿಗಳಲ್ಲಿ, ಮತ್ತು ದೇಹದ ರಕ್ಷಣಾ ಪ್ರಕ್ರಿಯೆಯಲ್ಲಿ ವ್ಯತ್ಯಯವಾದಾಗ ಈ ರೋಗ ಕಾಣಿಸಿಕೊಳ್ಳುತ್ತದೆ. ಅದೇ ರೀತಿ ಕರುಳಿನ ಒಳಭಾಗದಲ್ಲಿರುವ ಆಂತರಿಕ ವಾತವರಣದಲ್ಲಿ ಉಂಟಾಗುವ ವ್ಯತ್ಯಾಸದಿಂದಾಗಿ ಕೂಡ ಈ ರೋಗ ಬರುವ ಸಾಧ್ಯತೆ ಹೆಚ್ಚಾಗಿರುತ್ತದೆ.
ದೊಡ್ಡ ಕರುಳಿನ ಒಳಭಾಗದಲ್ಲಿ ಇರುವ ಸೂಕ್ಷಾಣು ಜೀವಿಗಳು ದೇಹದ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಈ ರೋಗಾಣುಗಳ ಸಮೂಹವನ್ನು ಗಟ್ ಪ್ಲೋರಾ ಎಂದು ಕರೆಯಲಾಗುತ್ತದೆ. ಪ್ರಮುಖವಾಗಿ ಲ್ಯಾಕ್ಟೊಬಾಸಿಲಸ್ ಮತ್ತು ಇ ಕೊಲೈ ಎಂಬ ರೋಗಾಣು ಜೀವಿಗಳು ಕರುಳಿನ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ನಿರ್ವಹಿಸುತ್ತದೆ.

ಅನಾರೋಗ್ಯಕರವಾದ ಆಹಾರ ಪದ್ಧತಿ ಮತ್ತು ಜೀವನ ಶೈಲಿ ಮತ್ತು ಅತಿಯಾದ ಮಾನಸಿಕ ಒತ್ತಡವೂ ಈ ಆಂತರಿಕ ಸೂಕ್ಷಾಣು ಜೀವಿಗಳ ಸಮತೋಲನವನ್ನು ಹಾಳು ಮಾಡುವ ಸಾಧ್ಯತೆ ಇರುತ್ತದೆ ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಅದೇ ರೀತಿ ಯಕೃತಿನ ತೊಂದರೆ, ಕ್ರೋನ್ಸ್ ಎಂಬ ರೋಗ, ನರ ರೋಗವಾದ ಪಾರ್ಕಿನ್‍ಸನ್ಸ್ ರೋಗ, ಅತಿಯಾದ ಬೊಜ್ಜು ಮುಂತಾದವುಗಳು ಕರುಳಿನ ಆಂತರಿಕ ವಾತಾವರಣವನ್ನು ಹಾಳುಗೆಡವಿ ಈ ಅಲ್ಸರೇಟಿವ್ ಕೊಲೈಟಿಸ್ ರೋಗಕ್ಕೆ ಮುನ್ನುಡಿ ಬರೆಯುತ್ತದೆ. ಯಾವುದೇ ಒಂದು ನಿರ್ದಿಷ್ಟ ಕಾರಣದಿಂದ ಈ ರೋಗ ಬರುವುದೆಂದು ನಿರ್ಧರಿತವಾಗದೇ ಇರುವ ಕಾರಣದಿಂದಾಗಿ, ರೋಗದ ಚಿಕಿತ್ಸೆ ಕೂಡ ಬಹಳ ಕಷ್ಟಕರವಾಗಿರುತ್ತದೆ.

ಇತ್ತೀಚಿನ ದಿನಗಳಲ್ಲಿ ಈ ರೋಗಿಗಳ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು ಬೆಳೆಯುತ್ತಿರುವ ರಾಷ್ಟ್ರಗಳಲ್ಲಿ ಈ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ವಿಶ್ವದಾದ್ಯಂತ ಸುಮಾರು ಒಂದು ಲಕ್ಷದಲ್ಲಿ 20 ರಿಂದ 25 ಮಂದಿ ಈ ರೋಗದಿಂದ ಬಳಲುತ್ತಿದ್ದು, ಅಮೇರಿಕಾ, ಯುರೋಪ್ ದೇಶಗಳಲ್ಲಿ ಹೆಚ್ಚು ಕಂಡುಬಂದಿದೆ. ಇದೀಗ ಏಷ್ಯಾ ಖಂಡಕ್ಕೆ ಪಸರಿಸಿದ್ದು ಬಾರತ ಕೂಡಾ ಏಷ್ಯಾ ಖಂಡದಲ್ಲಿ ಅಗ್ರಸ್ಥಾನದಲ್ಲಿ ಅನುಸರಿಸುವುದು ಬಹಳ ಆತಂಕಕಾರಿ ವಿಚಾರವಾಗಿದೆ.

ರೋಗದ ಲಕ್ಷಣಗಳು ಏನು?
ರೋಗದ ತೀರ್ವತೆ ಮತ್ತು ಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿರುತ್ತದೆ. ಇದು ವ್ಯಕ್ತಿಯ ಜೀವನ ಶೈಲಿ, ಆಹಾರ ಪದ್ಧತಿ ಮತ್ತು ಭೌಗೋಳಿಕ ಹಿನ್ನಲೆಯನ್ನು ಅವಲಂಭಿಸಿರುತ್ತದೆ. ಸಾಮಾನ್ಯವಾಗಿ ಈ ರೋಗಿಗಳಲ್ಲಿ ಪದೇ ಪದೇ ರಕ್ತ ಮಿಶ್ರಿತ ಅತಿ ಬೇದಿ ಕಾಡುತ್ತಿರುತ್ತದೆ. ಇನ್ನು ಕೆಲವರಲ್ಲಿ ಬರಿ ಆತೀ ಬೇಧಿ ಅಥವಾ ಮಲಬದ್ಧತೆ ಉಂಟಾಗುವ ಸಾಧ್ಯತೆ ಇರುತ್ತದೆ. ಕೆಲವೊಮ್ಮೆ ಗಂಟುನೋವು, ನಿದ್ರಾಹೀನತೆ, ಬೆನ್ನಿನ ಕೆಲಭಾಗದಲ್ಲಿ ನೋವು, ಕಣ್ಣು ಕೆಂಪಾಗುವುದು, ಚರ್ಮದಲ್ಲಿ ತುರಿಕೆ, ಯಕೃತ್ತ್ ದೊಡ್ಡದಾಗುವುದು ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳಬಹುದು.

ಪತ್ತೆ ಹಚ್ಚುವುದು ಹೇಗೆ?
ರೋಗಿಯ ಜೀವನ ಶೈಲಿ, ಆಹಾರ ಪದ್ಧತಿ,ಬೌಗೋಳಿಕ ಹಿನ್ನಲೆ, ಕೆಲಸದ ಚರಿತ್ರೆಯನ್ನು ವೈದ್ಯರು ಕೂಲಂಕುಷವಾಗಿ ಅಧ್ಯಯನ ಮಾಡುತ್ತಾರೆ. ಬಳಿಕ ಆತನ ಮುಖ್ಯ ತೊಂದರೆಯನ್ನು ಆಧರಿಸಿ ಕೊಲೆನೋ ಸ್ಕೋಫಿ ಎಂಬ ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯಲ್ಲಿ ಗುಧದ್ವಾರದ ಮುಖಾಂತರ ಚಿಕ್ಕದಾದ ಉಪಕರಣವನ್ನು ಬಳ್ಳಿಯ ಮುಖಾಂತರ ಕರುಳಿನ ಒಳಭಾಗವನ್ನು ಪ್ರವೇಶಿಸಿ, ದೊಡ್ಡಕರುಳು ಮತ್ತು ಗುದದ್ವಾರದ ಒಳಪದರವನ್ನು ಕೂಲಂಕುಷವಾಗಿ ಪರೀಕ್ಷೆ ಮಾಡಲಾಗುತ್ತದೆ. ಸಾಮಾನ್ಯವಾಗಿ ಈ ಒಳಪದಕ್ಕೆ ಹಾನಿಯಾಗಿ ಒಳಪದರ ತನ್ನ ನೀರನ್ನು ಹೀರುವ ಸಾಮರ್ಥ್ಯವನ್ನು ಕಳೆದುಕೊಂಡಿರುತ್ತದೆ. ಒಳಪದರ ಬೋಳಾಗಿ ಮರುಭೂಮಿಯಂತಾಗಿರುವುದು ಈ ಪರೀಕ್ಷೆಯಲ್ಲಿ ಕಂಡುಬರುತ್ತದೆ.

ಚಿಕಿತ್ಸೆ ಹೇಗೆ?
ಅಲ್ಸರೇಟಿವ್ ಕೊಲೈಟಿಸ್ ಎನ್ನುವ ಈ ರೋಗದ ಚಿಕಿತ್ಸೆ ಬಹಳ ಕ್ಲಿಷ್ಠಕರವಾಗಿರುತ್ತದೆ. ದೊಡ್ಡಕರುಳು ತನ್ನ ಆಂತರಿಕವಾದ ವಾತಾವರಣದ ಸಮತೋಲನ ಕಳೆದುಕೊಂಡು, ಉಪಕಾರಿ ಸೂಕ್ಷ್ಮಾಣು ಜೀವಿಗಳು ಕೂಡಾ ತನ್ನ ಕೆಲಸವನ್ನು ಮಾಡಲು ಅಸಮರ್ಪಕವಾಗಿರುತ್ತದೆ. ಇದರಿಂದಾಗಿಯೇ ಅತಿಬೇದಿ ಮತ್ತು ರಕ್ತಸ್ರಾವ ಕೂಡಾ ಆಗುತ್ತದೆ. ಇದರ ಜೊತೆಗೆ ಕ್ಲಸ್ಟ್ರೀಡಿಯಾ ಡಿಪಿಸಿಲ್ ಎಂಬ ಬ್ಯಾಕ್ಟೀರಿಯ ಸೋಂಕು ಕರುಳಿನ ಒಳಭಾಗಕ್ಕೆ ಸೇರಿಕೊಂಡು ಮತ್ತಷ್ಟು ತೊಂದರೆ ನೀಡುತ್ತದೆ. ಈ ಹಂತದಲ್ಲಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ತಿಂಗಳು ಗಟ್ಟಲೆ ಆಂಟಿ ಬಯೋಟಿಕ್ ಔಷದಿ ತೆಗೆದುಕೊಳ್ಳಬೇಕಾದ ಅನಿವಾರ್ಯತೆ ಉಂಟಾಗುತ್ತದೆ. ಕೆಲವೊಮ್ಮೆ ಸ್ಟಿರಾಯ್ಡ್ ಸೇವನೆಯ ಅಗತ್ಯವೂ ಉಂಟಾಗುತ್ತದೆ. ಈವಾಗ ಈ ರೋಗದ ಚಿಕಿತ್ಸೆಯ ಬತ್ತಳಿಕೆಗೆ ಸೇರಿಕೊಂಡ ಹೊಸದೊಂದು ಅಸ್ತ್ರವೆಂದರೆ ಮಲಮಾತ್ರೆ ಅಥವಾ ಈಒಖಿ ಎಂದು ಆಂಗ್ಲಮಾತಲ್ಲಿ ಕರೆಯಲ್ಪಡುವ ಹೊಸದಾದ ಚಿಕಿತ್ಸೆ.

ಏನಿದು ಮಲಮಾತ್ರೆ?
ಆರೋಗ್ಯವಂತ ವ್ಯಕ್ತಿಯ ದೇಹದಿಂದ ಮಲವನ್ನು ಪಡೆಯಲಾಗುತ್ತದೆ. ಆ ಬಳಿಕ ಈ ಮಲವನ್ನು ಪರಿಷ್ಕರಿಸಿ, ನಿಗಧಿತವಾದ ಸಾಂದ್ರತೆಯುಳ್ಳ ಮಿಶ್ರಣವಾಗಿ ಮಾಡಲಾಗುತ್ತದೆ. ನಂತರ ಕೊಲೋನೋಸ್ಕೋಪಿ ಯ ಮುಖಾಂತರ ಕರುಳಿನ ಒಳಭಾಗಕ್ಕೆ ಸೇರಿಸಲಾಗುತ್ತದೆ. ಈ ಮೂಲಕ ಕರುಳಿನ ಒಳಪದರದಿಂದ ಕಳೆದು ಹೋದ ಪರೋಪಕಾರಿ ಸೂಕ್ಷ್ಮಾಣು ಜೀವಿಗಳನ್ನು ಪುನಃ ಸೇರಿಸಿ ಕರುಳಿನ ಒಳಭಾಗದ ಆಂತರಿಕ ವಾತಾವರಣವನ್ನು ಸಮತೋಲನಗೊಳಿಸಿ ಆರೋಗ್ಯವಂತ ಕರುಳಿನ ಒಳಪದರ ಸೃಷ್ಠಿಯಾಗಲು ಪೂರಕವಾದ ವಾತಾವರಣವನ್ನು ನಿರ್ಮಿಸಲಾಗುತ್ತದೆ. ಕೆಲವೊಮ್ಮೆ ಗುದದ್ವಾರದ ಮುಖಾಂತರ ಮಲಮಾತ್ರೆಗಳನ್ನು ಕರುಳಿನ ಒಳಭಾಗಕ್ಕೆ ಸೇರಿಸಲಾಗುತ್ತದೆ. ಅದೇ ರೀತಿ ಬಾಯಿಯ ಮುಖಾಂತರವೂ ಸೇವಿಸಲಾಗುವ ಮಲಮಾತ್ರೆಗಳು ಮಾರುಕಟ್ಟೆಯಲ್ಲಿ ಇದೀಗ ಲಭ್ಯವಿದೆ.
ಒಟ್ಟಿನಲ್ಲಿ ಆರೋಗ್ಯವಂತ ವ್ಯಕ್ತಿಯ ಮಲಕ್ಕೂ ಮೌಲ್ಯ ಬಂದಿರುವುದಂತೂ ಸತ್ಯವಾದ ಮಾತು. ಈ ಚಿಕಿತ್ಸೆಗೆ ಹೆಚ್ಚಿನ ಅಡ್ಡಪರಿಣಾಮ ಭೀರುವುದಿಲ್ಲ. 2 ರಿಂದ 90 ವರ್ಷದ ವ್ಯಕ್ತಿಗೂ ಈ ರೀತಿ ಚಿಕಿತ್ಸೆ ನೀಡಬಹುದಾಗಿದ್ದು, ಕೆಲವೊಮ್ಮೆ ವಾಂತಿ, ವಾಕರಿಕೆ, ಅತಿ ಭೇದಿ ಮತ್ತು ಹೊಟ್ಟೆಯಲ್ಲಿ ಗ್ಯಾಸ್ ತುಂಬಿದಂತೆ ಅನಿಸುವ ಸಾಧ್ಯತೆ ಇರುತ್ತದೆ. ಭಾರತದಲ್ಲಿ ಹಲವಾರು ಸೆಂಟರ್‌ಗಳಲ್ಲಿ ಈ ಚಿಕಿತ್ಸೆ ಲಭ್ಯವಿದ್ದು ಹೆಚ್ಚಿನ ಜನರಿಗೆ ಈ ಚಿಕಿತ್ಸಾ ವಿಧಾನ ಇನ್ನೂ ತಲುಪಿಲ್ಲ. ಮಲಮಾತ್ರೆಯ ಸಾಮರ್ಥ್ಯದ ಬಗ್ಗೆ ಮತ್ತು ಚಿಕಿತ್ಸಾ ಪದ್ಧತಿ ಬಗ್ಗೆ ಇನ್ನೂ ಹೆಚ್ಚು ಸಂಶೋಧನೆ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ಮಾಹಿತಿ ದೊರೆತು ಈ ಅಲ್ಸರೇಟಿವ್ ಕೊಲೈಟಿಸ್ ರೋಗಕ್ಕೆ ಮಲಮಾತ್ರೆ ಚಿಕಿತ್ಸೆ ಪರಿಣಾಮಕಾರಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.

ಮಲದಾನಿಗಳಿಗೆ ಇರಬೇಕಾದ ಅರ್ಹತೆಗಳು ಏನು?
1. ಮಲದಾನಿಗಳು ಆರೋಗ್ಯವಂತರಾಗಿದ್ದು ಯಾವುದೇ ರೋಗದಿಂದ ಬಳಲುತ್ತಿರಬಾರದು.
2. ಮಲದಾನಿಗಳು ದಾನ ಮಾಡುವ ಸಮಯದಲ್ಲಿ ಕನಿಷ್ಠ 90 ದಿನಗಳವರೆಗೆ ಯಾವುದೇ ನೋವು ನಿವಾರಕ ಮತ್ತು ಆಂಟಿಬಯೋಟಿಕ್ ಔಷಧಿ ಸೇವಿಸಿರಬಾರದು.
3. ಅತಿಸಾರ, ಮಲಬದ್ಧತೆ, ಅತಿಬೇಧಿ ಮತ್ತು ಇನ್ನಿತರ ಯಾವುದೇ ಕರುಳು ಸಂಬಂಧಿ ಖಾಯಿಲೆಯಿಂದ ಬಳಲುತ್ತಿರಬಾರದು.
4. ಮಲದಾನಿಗಳು ಯಾವುದೇ ರೀತಿಯ ಅಲರ್ಜಿ ಮತ್ತು ದೇಹದ ರಕ್ಷಣಾ ಸಾಮಥ್ರ್ಯ ಕುಸಿದಿರುವ ರೋಗಗಳಿಂದ ಬಳಲುತ್ತಿರಬಾರದು.
5. ಗರ್ಭಿಣಿ ಹೆಂಗಸರು ಮಲದಾನ ಮಾಡಲು ಸಾಧ್ಯವಿಲ್ಲ. ಯಾಕೆಂದರೆ ಗರ್ಭಾವಸ್ಥೆಯ ಸಮಯದಲ್ಲಿ ಕರುಳಿನ ಒಳಭಾಗದ ಗಟ್ ಪ್ಲೋರಾ ಬದಲಾಗಿರುತ್ತದೆ.
6. ಸಾಮಾನ್ಯವಾಗಿ ಮಲದಾನಿಗಳು ರೋಗಿಗಳ ಕುಟುಂಬಸ್ಥರೇ ಆಗಿರುತ್ತಾರೆ. ಯಾಕೆಂದರೆ ಒಂದೇ ರೀತಿಯ ಆಹಾರ ಪದ್ಧತಿ ಜೀವನ ಶೈಲಿ ಮತ್ತು ಬೌಗೋಳಿಕ ಹಿನ್ನಲೆಯಿರುವ ಮಲದಾನಿಗಳ ಮಲ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ ಮತ್ತು ಬಹಳ ಬೇಗ ಕರುಳಿನ ಒಳಭಾಗದ ಆಂತರಿಕ ಸಮತೋಲನ ಉಂಟು ಮಾಡಿ ಒಳಪದರದ ಪುನರ್‌ ನಿರ್ಮಾಣವಾಗುವಲ್ಲಿ ಹೆಚ್ಚು ಸಹಕಾರಿಯಾಗುವುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ.
7. ಏಡ್ಸ್, ಹೆಪಟೈಟೀಸ್, ಸಿಫಿಲಿಸ್ ಮತ್ತಿತರ ಸಾಂಕ್ರಾಮಿಕ ರೋಗಗಳಿಂದ ಬಳಲುತ್ತಿರುವವರು ಮಲದಾನ ಮಾಡುವಂತಿಲ್ಲ.

ಕೊನೆಮಾತು:
ಸುಮಾರು 1700 ವರ್ಷಗಳ ಹಿಂದೆಯೇ ಚೈನಾ ದೇಶದಲ್ಲಿ ವಿಷಪೂರಿತ ಆಹಾರ ಸೇವನೆ ಮತ್ತು ಅತಿಬೇದಿಗೆ ಚಿಕಿತ್ಸೆ ನೀಡಲು ಮಲದ ಮಿಶ್ರಣ ಬಳಸುತ್ತಿದ್ದರು. ಸಾಮಾನ್ಯವಾಗಿ ರಕ್ತ ಸಂಬಂಧಿಗಳನ್ನೇ ಈ ರೀತಿಯ ಚಿಕಿತ್ಸಗೆ ಬಳಸಲಾಗುತ್ತಿತ್ತು. ಅದೇನೆ ಇರಲಿ ಚಿಕಿತ್ಸೆ ಇಲ್ಲದ ರೋಗವೆಂದು ಹಣೆ ಪಟ್ಟಿ ಕಟ್ಟಿಕೊಂಡಿರುವ ಅಲ್ಸರೇಟಿವ್ ಕೊಲೈಟಿಸ್ ರೋಗಕ್ಕೆ ಮಲಮಾತ್ರೆ ರಾಮಬಾಣವಾಗಿರುವುದಂತೂ ನಿಜವಾಗುವ ದಿನಗಳು ದೂರವಿಲ್ಲ. ಮನುಷ್ಯ ನಾಲಗೆಯ ದಾಸನಾಗಿ ಬಾಯಿಚಪಲಕ್ಕೆ ಪೂರಕವಾದ ಆಹಾರ ಕ್ರಮದಲ್ಲಿ ದೇಹ ರೋಗದ ಹಂದರವಾಗುತ್ತದೆ ಎಂಬುವುದು ಈಗಿನ ಯುವಜನರ ಆರೋಗ್ಯ ಸ್ಥಿತಿ ಹೇಳುತ್ತಿದೆ.

ತಿನ್ನಲಿಕ್ಕಾಗಿ ಬದುಕದೆ, ಬದುಕಲಿಕ್ಕಾಗಿ ತಿಂದಲ್ಲಿ ಬಹುಶಃ ಬಹುತೇಕ ರೋಗಗಳನ್ನು ತಡೆಯಬಹುದು. ಇಲ್ಲವಾದಲ್ಲಿ ಪ್ರಕೃತಿಗೆ ವಿರುದ್ಧವಾಗಿ ಸೆಣಸಿ, ದೇಹಕ್ಕೆ ಪೂರಕವಾದ ಆಹಾರವನ್ನೇ ಸೇವಿಸಿದ್ದಲ್ಲಿ ಮುಂದೊಂದು ದಿನ ಮಲವನ್ನೇ ಮಾತ್ರೆಯಾಗಿ ತಿನ್ನಬೇಕಾದ ದಿನಗಳು ಬರುವ ಸಾಧ್ಯತೆ ಇಲ್ಲದಿಲ್ಲ. ಯುವ ಜನರು ಇನ್ನಾದರೂ ಎಚ್ಚೆತ್ತುಕೊಂಡು ಆರೋಗ್ಯಕರವಾದ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಬಳಸಿ ರೂಢಿಸಿಕೊಳ್ಳದಿದ್ದಲ್ಲಿ ಮುಂದೊಂದು ದಿನ ಮಲದಾನಿಗಳಿಗಳಾಗಿ ಓಡಾಡುವ ಪರಿಸ್ಥಿತಿ ಬರಲೂಬಹುದು ಹಾಗಾಗದಿರಲಿ ಎಂದು ಹಾರೈಸುತ್ತಾ, ಆರೋಗ್ಯಕರ ಆಹಾರ ಪದ್ಧತಿ ಮತ್ತು ಜೀವನ ಶೈಲಿ ರೂಢಿಸಿಕೊಳ್ಳೋಣ ಎಂದು ಇಂದೇ ಶಪಥ ಮಾಡೋಣ.

-ಡಾ. ಮುರಲೀ ಮೋಹನ ಚೂಂತಾರು

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ನಂದೋಡಿಯ ಸಂಕಷ್ಟ! ಶಾಸಕರೇ ವೈಜ್ಞಾನಿಕ ಅಧ್ಯಯನ ನಡೆಸಿ ಶಾಶ್ವತ ಪರಿಹಾರ ಕೊಡಿಸಿ

Upayuktha News Network

ಕಾಯಿಲೆ ಬಾರದಂತೆ ತಡೆಗಟ್ಟುವುದೇ ಜಾಣತನ

Upayuktha

ಅಭಿಮತ: ಮಕ್ಕಳು, ಯುವಕರಿಗೆ ಪ್ರಬುದ್ಧತೆಯ ಮಾರ್ಗದರ್ಶಕರು ಬೇಕು…

Upayuktha