ಜೀವನ-ದರ್ಶನ

ಬದುಕು-ಬವಣೆ: ತೊಂಭತ್ತೆರಡರ ಆ ಒಂದು ದಿನ…

ನಾನಾವಾಗ ಉಡುಪಿಯ ಪುತ್ತಿಗೆ ಮಠದಲ್ಲಿ ಸ್ವಾಮೀಜಿಗಳ ವಾಹನ ಚಾಲಕನಾಗಿದ್ದೆ. ಪೂರ್ಣ ಭಾರತವನ್ನು ಅವರೊಡನೆ ತಿರುಗಿದ್ದೊಂದೇ ಆವತ್ತಿನ ಸಂಪಾದನೆ. ಭೂತದ ಬೆಂಬಲವಿರದ, ಭವಿಷ್ಯ ತಿಳಿದಿರದ, ವರ್ತಮಾನದಲ್ಲಿ ಮಾತ್ರ ನಂಬಿಕೆ ಇದ್ದಂಥ ಆ ದಿನಗಳು. ಗಳಿಕೆ ಇದ್ದರೂ ಅದರಲ್ಲಿ ಉಳಿಕೆ ಇಲ್ಲ. ಒಬ್ಬಂಟಿ ಜೀವನಕ್ಕೆ ಕೊರತೆಯಾಗದ ಸುಂದರವೆನ್ನಬಹುದಾದ ದಿನಗಳು. ಯೌವನವಿತ್ತು, ಏನನ್ನೂ ಮಾಡಬಲ್ಲೆ ಎಂಬ ಕಸುವಿತ್ತು. ಯಾವುದೋ ಒಂದು ಲಯದಲ್ಲಿ ಜೀವನ ಸಾಗುತ್ತಿರಬೇಕಾದರೆ, ಶ್ರೀಕೃಷ್ಣ ಮಠದ ಪರ್ಯಾಯ… ಅಂದರೆ ನಮ್ಮ ಪುತ್ತಿಗೆ ಮಠದ ಸ್ವಾಮೀಜಿಗಳಿಗೆ ಎರಡು ವರ್ಷ ಕೃಷ್ಣನ ಪೂಜೆ ಮಾಡುವ ಜವಾಬ್ದಾರಿ ಬಂದಿತ್ತು. ಅಂತೆಯೇ ನಮ್ಮ ಸ್ವಾಮೀಜಿಗಳ ಪರ್ಯಾಯ ಪೀಠದಲ್ಲಿ ಆಸೀನರಾಗುವರೆಂಬ ಖುಷಿಯಲ್ಲಿ, ಗೌಜಿಯಲ್ಲಿ ದಿನಗಳು ಉರುಳುತ್ತಿದ್ದವು.

ನಾಳೆಯ ಚಿಂತೆ ಇಲ್ಲದ ಬದುಕಿಗೆ ನಾಳೆಗಳು ಇಂದು ಆದಾಗ, ಚಂದದ ಜೀವನ ಸಂದು ಹೋಯಿತೆಂದು ತಿಳಿದಾಗ, ಉಳಿಕೆ ಇಲ್ಲದ ಗಳಿಕೆ ಬಾಳುವೆಯನು ಕೊಡದೆಂದು ಅರಿವಾಗಿತ್ತು. ಪರ್ಯಾಯದ ಅವಧಿಯಲ್ಲಿ ವಾಹನದ ಚಾಲಕನಿಗೆ ಮಹತ್ವವಿಲ್ಲವೆಂಬ ಸತ್ಯ ಅರಿವಾದಾಗ ಭವಿಷ್ಯದ ಬಗ್ಗೆ ಒಂದು ಸಣ್ಣ ಯೋಚನೆಯು ಉಂಟಾಗಿತ್ತು. ಚಾಲನೆಯ ಹೊರತಾಗಿ ಬೇರೆ ವೃತ್ತಿಯಲ್ಲಿ ಪರಿಣತಿ ಇಲ್ಲದ್ದರಿಂದ, ಆದಾಯಕ್ಕೆ ಅನ್ಯ ಮಾರ್ಗ ಇಲ್ಲದ್ದರಿಂದ ವಾಹನ ಚಾಲನೆಯ ವೃತ್ತಿಯನ್ನೇ ಅರಸುತ್ತಿದ್ದೆ. ಊಟ ತಿಂಡಿ ವಸತಿ ಮಠದಲ್ಲಿದ್ದರೂ ಕೆಲಸವಿಲ್ಲದೆ ಸಂಬಳವನ್ನು ಪಡಕೊಳ್ಳಬಾರದೆಂಬ ಅಭಿಮಾನದಿಂದ, ಕೆಲಸವನ್ನು ಹುಡುಕುತ್ತಿರಬೇಕಾದರೆ… ಕಾಪು ಎಂಬಲ್ಲಿ ಒಂದು ಲಾರಿ ಚಾಲಕನ ಹುದ್ದೆ ಇದೆ ಎಂದು ತಿಳಿಯಿತು. ವಿಚಾರಿಸಲು ಹೋದರೆ, ಹೊಯಿಗೆ ಸಾಗಿಸುವ ಲಾರಿಯಲ್ಲಿ ದಿನಕ್ಕೆ ಅರುವತ್ತು ರೂಪಾಯಿ ಸಂಬಳದಂತೆ ಕೆಲಸ ದೊರಕಿತು.

ಬಹಳ ವರ್ಷ ಮಠದಲ್ಲಿದ್ದುದರಿಂದ ಸ್ವಾಮೀಜಿಗಳು ‘ಕೆಲಸ ಎಲ್ಲಿ ಬೇಕಾದರೂ ಮಾಡು ವಸತಿ ಊಟಕ್ಕೆ ಮಠದಲ್ಲಿರಬಹುದು’ ಎಂಬ ಒಪ್ಪಿಗೆ ಕೊಟ್ಟದ್ದರಿಂದ ಲಾರಿ ಕೆಲಸಕ್ಕೆ ಒಪ್ಪಿಕೊಂಡು ಹೊಯಿಗೆ ಸಾಗಿಸುವ ಕಾಯಕಕ್ಕೆ ಹೊರಟೆ. ಒಂದು ದಿನಕ್ಕೆ ನಾಲ್ಕು ಲೋಡು ಹೊಯಿಗೆ ಗ್ರಾಹಕರಿಗೆ ಕೊಡಬೇಕು. ಬುಟ್ಟಿಯಲ್ಲೇ ಹೊತ್ತು ಲೋಡು ಮಾಡಿ ಹಾರೆಯಿಂದ ಎಳೆದು ಖಾಲಿ ಮಾಡುವಾಗ ಬಹಳ ಹೊತ್ತು ತಗಲುವುದು. ಅಂದರೆ ನಾಲ್ಕು ಸಲಕ್ಕೆ ಸಾಧಾರಣ ಸಾಯಂಕಾಲದ ಏಳು ಗಂಟೆಯೇ ಆಗುತ್ತಿತ್ತು. ತರಾತುರಿಯಲ್ಲಿ ಮಾಡುವ ಈ ಕೆಲಸ ಹೊಟ್ಟೆಗೆ ತಿನ್ನುವುದಕ್ಕೂ ಪುರುಸೊತ್ತು ಕೊಡುತ್ತಿರಲಿಲ್ಲ. ಹೇಗೋ ಏನೊ ಈ ಕೆಲಸದಲ್ಲಿ ಮುಂದುವರೆಯುವುದೆಂದು ತೀರ್ಮಾನಿಸಿಯೂ ಆಗಿತ್ತು. ಅದೇರೀತಿ ಆ ದಿನದ ಮೂರು ಲೋಡು ಹೊಯಿಗೆಯನ್ನು ಗ್ರಾಹಕರಿಗೆ ತಲುಪಿಸಿಯೂ ಆಗಿತ್ತು. ಮಧ್ಯಾಹ್ನ ನಂತರ ನಾಲ್ಕು ಗಂಟೆಯ ವೇಳೆ. ಇನ್ನೇನು ಒಂದು ಲೋಡು ಹೊಯಿಗೆ ಹಾಕಿದರೆ ಇಂದಿನ ದಿನ ಮುಗಿದಂತೆಯೇ. ಅರುವತ್ತು ರೂಪಾಯಿ ಪಡಕೊಂಡು ಮಠಕ್ಕೆ ಮರಳಬಹುದು. ಇದು ಲೆಕ್ಕಾಚಾರ.

ಗಡಿಬಿಡಿಯಲ್ಲಿ ಚಾ ಕುಡಿದು ನದಿಗೆ ಹೋದರೆ ಅಲ್ಲಿ ನಾಲ್ಕೈದು ಲಾರಿಗಳು ಇದ್ದುದರಿಂದ ಸರತಿಯಂತೆ ನಾನು ಕಾಯಲೇಬೇಕಾಯಿತು. ಅಂತು ಆರು ಗಂಟೆಗೆ ನನ್ನ ಸರದಿ ಬಂತು ಒಂದು ಕಡೆ ಕೆಲಸದ ಒತ್ತಡ ಇನ್ನೊಂದು ಕಡೆ ಹಸಿವಿನ ಬಾಧೆ. ಹೇಗಾದರೂ ಎಂಟು ಗಂಟೆಗೆ ಲೋಡು ಆದಾಗ ನಿಟ್ಟುಸಿರು. ಸರಿ… ಗಾಡಿ ಸ್ಟಾರ್ಟ್ ಮಾಡಿ ಹೊರಡಬೇಕು, ಎರಡು ಸುತ್ತು ಗಾಲಿಗಳು ತಿರುಗಿ ನದಿಯ ಹೊಯಿಗೆಯಲ್ಲಿ ಕರ್ಣನ ರಥದಂತೆ ಹೂತು ಹೋಗಬೇಕೇ…? ಸಾಧ್ಯವೇ ಇಲ್ಲ.. ಏನೇನು ಮಾಡಿದರೂ ಗಾಡಿ ಮೇಲೇಳಲೇ ಇಲ್ಲ… ಹಾಗಾದರೆ ಮುಂದೇನು? ನಾನೂ ಈ ವ್ಯವಹಾರಕ್ಕೆ ಹೊಸಬನಾದ್ದರಿಂದ ಗಾಡಿಯ ಕ್ಲೀನರ್ ಹೇಳಿದಂತೆ ಕೇಳಬೇಕಾಯಿತು. ಹಾಗಾದರೆ ಇದಕ್ಕೆ ಪರಿಹಾರವೆಂದರೆ ತುಂಬಿಸಿದ ಅಷ್ಟೂ ಹೊಯಿಗೆಯನ್ನು ಖಾಲಿ ಮಾಡುವುದು. ಶುರು ಮಾಡಿದೆವು ಆ ಕಾರ್ಯವನ್ನೂ. ಆ ಎಲ್ಲ ಪ್ರಕ್ರಿಯೆಗಳು ನಡೆದು ಖಾಲಿ ಗಾಡಿಯನ್ನು ಎಲ್ಲರೂ ಸೇರಿ ಮೇಲೆತ್ತುವಲ್ಲಿ ಹನ್ನೊಂದು ಗಂಟೆ ರಾತ್ರಿಯೇ ಆಯಿತು.

ನನಗೆ ಅಳುವುದೊಂದೇ ಬಾಕಿ. ಪ್ರಥಮ ಚುಂಬನಂ ದಂತ ಭಗ್ನಂ ಎನ್ನುವಂತೆ, ಈ ಕೆಲಸ ನನ್ನಂಥವರಿಗೆ ಹೇಳಿಸಿದ್ದಲ್ಲ ಎಂಬ ಹತಾಶೆಯೊಡನೆ ಲಾರಿಯನ್ನು ಅದರ ಮಾಲಿಕನ ಮನೆಯಲ್ಲಿಟ್ಟು ಮಠಕ್ಕೆ ಹೊರಟೆ. ಆ ದಿನದ ಸಂಬಳವೂ ನಾಳೆ ಸಿಗಬೇಕು. ವಾಪಸು ಉಡುಪಿಗೆ ಹೋಗಲು ಯಾವುದೇ ವಾಹನಗಳಿಲ್ಲ. ಆಟೋಗಾಗುವಷ್ಟು ಕೈಯಲ್ಲಿ ದುಡ್ಡಿಲ್ಲ. ಕಾಯಬಲವನ್ನೇ ನಂಬಿ ನಡೆಯ ತೊಡಗಿದೆ ಆ ರಾತ್ರಿಯಲ್ಲಿ. ಸಾಧಾರಣ ಒಂಭತ್ತು ಕಿ.ಮೀ. ದೂರವನ್ನು ಹಸಿವನ್ನು ಜತೆಯಾಗಿಸಿಕೊಂಡು. ಮಠಕ್ಕೆ ಹೋಗುವಾಗ ನಡುರಾತ್ರಿ ಕಳೆದು ಒಂದುವರೆ ಗಂಟೆಯೇ ಆಗಿತ್ತು. ಸ್ನಾನ ಮಾಡಿ ಹಸಿವನ್ನು ಜತೆಯಾಗಿಸಿಕೊಂಡೇ ಮಲಗಿದೆ. ಮತ್ತೆ ಬೆಳಗ್ಗೆ ಬೇಗನೆ ಎದ್ದು ಕೆಲಸಕ್ಕೆ ಹೋಗಬೇಕು. ಅದೇರೀತಿ ಬೇಗನೆದ್ದು ಕೆಲಸಕ್ಕೆ ಹೋದರೆ, ದುರ್ವಿಧಿ ಎನ್ನಲೇ, ಭಾಗ್ಯವೆನ್ನಲೇ ಅಥವಾ ಪ್ರಾಪ್ತಿ ಎನ್ನಲೇ ನನಗೆ ಹಿಂದಿನ ದಿನದ ಸಂಬಳ ಕೊಟ್ಟು, ಲಾರಿಯ ಮಾಲಕ ನಮಗೆ ಹಿಂದೆ ಬಿಟ್ಟುಹೋದ ಚಾಲಕ ಬಂದಿದ್ದಾನೆ, ನೀವು ಬೇರೆಲ್ಲಾದರು ನೋಡಿಕೊಳ್ಳಿ ಎಂದು ಹಿಂದೆ ಕಳುಹಿಸಿದ.

ಜೀವನದಲ್ಲಿ ಇಂತಹ ಹಲವಾರು ಘಟನೆಗಳು ಹಲವರಿಗೆ ಹಲವಾರು ಬಾರಿ ಆಗಿರುತ್ತವೆ. ಅಂತಹ ಪಾಠಗಳೇ ಮನುಷ್ಯನನ್ನು ಮನುಷ್ಯನನ್ನಾಗಿ ಮಾಡುವುದು. ಪೆಟ್ಟು ತಿಂದಷ್ಟೂ ಮೂರ್ತಿ ಸುಂದರವಾಗುವುದು ಸತ್ಯ. ಆದರೆ ಒಂದು ಹಂತದ ಮೇಲಿನ ಪೆಟ್ಟುಗಳು ಮೂರ್ತಿಯನ್ನೇ ವಿರೂಪಗೊಳಿಸಬಹುದು. ಆದ್ದರಿಂದ ಪೂರ್ಣತ್ವದೆಡೆಗೆ ಕರೆದೊಯ್ಯುವ ಪೆಟ್ಟುಗಳಿಗೆ ಶರಣಾಗೋಣ. ಪೆಟ್ಟುಗಳೇ ಸಹಜವಾಗದಿರುವಂತೆ ಬಾಳು ಕೊಡು ಎಂದು ದೇವನಲ್ಲಿ ಪ್ರಾರ್ಥಿಸೋಣ…

-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಊಟದಲ್ಲೊಂದು ಧರ್ಮ: ಇದು ಸ್ವಸ್ಥ ಸಮಾಜದ ಮರ್ಮ

Upayuktha

ಗೆಳೆತನಕ್ಕೊಂದು ಭಾಷ್ಯ: ರಾಮ-ಹನುಮ; ಕೃಷ್ಣ-ಸುದಾಮ

Upayuktha

ಬಾಳಿಗೆ ಬೆಳಕು: ತಾಳುವಿಕೆಗಿಂತನ್ಯ ತಪವು ಇಲ್ಲ

Upayuktha