ಪ್ರಮುಖ ವಾಣಿಜ್ಯ

ರೈಲ್ವೇ ಪ್ರಯಾಣ ದರ ಇಂದಿನಿಂದ ಕಿ.ಮೀಗೆ 1ರಿಂದ 4 ಪೈಸೆ ಏರಿಕೆ

ಹೊಸದಿಲ್ಲಿ: ಕಳೆದ ಐದು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ರೈಲ್ವೇ ಇಲಾಖೆ ಎಲ್ಲ ದರ್ಜೆಯ ಪ್ರಯಾಣಿಕರ ದರಗಳನ್ನು ಕಿ.ಮೀಗೆ 1.4 ಪೈಸೆಯಂತೆ ಏರಿಕೆ ಮಾಡಿದೆ. ಈ ಮೂಲಕ ವಾರ್ಷಿಕ 2,300 ಕೋಟಿ ರೂ.ಗಳ ಹೆಚ್ಚುವರಿ ಆದಾಯವನ್ನು ಇಲಾಖೆ ನಿರೀಕ್ಷಿಸಿದೆ.

ಚಾಲ್ತಿ ಹಣಕಾಸು ವರ್ಷದ ನವೆಂಬರ್ ಅಂತ್ಯದ ವರೆಗಿನ ಅವಧಿಯಲ್ಲಿ ಇಲಾಖೆಗೆ ಸುಮಾರು 20,000 ಕೋಟಿ ರೂ.ಗಳ ಆದಾಯ ಕೊರತೆ ಉಂಟಾಗಿದೆ. ಕಾರ್ಯಾಚರಣೆ ವೆಚ್ಚ ಶೇ 121ಕ್ಕೆ ಏರಿದೆ. ಹಿಂದಿನ ವರ್ಷ ಇದೇ ಅವಧಿಯಲ್ಲಿ ಕಾರ್ಯಾಚರಣೆ ವೆಚ್ಚ ಶೇ 113ರಷ್ಟಿತ್ತು. 100 ರೂ ಆದಾಯ ಗಳಿಸಲು ಮಾಡುವ ವೆಚ್ಚದ ಆಧಾರದಲ್ಲಿ ಈ ಅನುಪಾತವನ್ನು ಲೆಕ್ಕ ಹಾಕಲಾಗುತ್ತದೆ. ರೈಲ್ವೆ ಇಲಾಖೆಯ ಹಣಕಾಸು ಸ್ಥಿತಿ ದುರ್ಬಲವಾಗಿದೆ ಎಂಬುದರ ಸಂಕೇತವೇ ಈ ಅನುಪಾತವಾಗಿದೆ.

ಈ ದರ ಏರಿಕೆಯೊಂದಿಗೆ ದಿಲ್ಲಿ ಮುಂಬಯಿ ನಡುವಣ ರಾಜಧಾನಿ ಎಕ್ಸ್‌ಪ್ರೆಸ್ ಪ್ರಯಾಣಿಕರು 55ರಿಂದ 60 ರೂ. ವರೆಗೆ ಹೆಚ್ಚಿನ ದರ ತೆರಬೇಕಾಗುತ್ತದೆ. ಆದರೆ ಉಪನಗರ ರೈಲು ದರಗಳನ್ನು ಇಲಾಖೆ ಬದಲಿಸಿಲ್ಲ.

ಅತಿ ದೂರ ಪ್ರಯಾಣದ ದರಗಳನ್ನು ಮಾತ್ರ ಹೆಚ್ಚಿಸುವ ಮೂಲಕ ರೈಲ್ವೆ ಇಲಾಖೆ ಉಪನಗರ ರೈಲುಗಳ ಪ್ರಯಾಣಿಕರಿಗೆ ಏರಿಕೆಯ ಬಿಸಿ ತಾಕದಂತೆ ನೋಡಿಕೊಂಡಿದೆ. ನಿತ್ಯ ಪ್ರಯಾಣಿಕರ ಸೀಸನ್‌ ಟಿಕೆಟ್‌ ದರಗಳಲ್ಲೂ ಯಾವುದೇ ಬದಲಾವಣೆ ಮಾಡಿಲ್ಲ. ಅದೇ ರೀತಿ ಈಗಾಗಲೇ ಮುಂಗಡ ಟಿಕೆಟ್ ಕಾಯ್ದಿರಿಸಿದವರಿಗೂ ಈ ಏರಿಕೆ ಬಾಧಕವಾಗುವುದಿಲ್ಲ.

ಹೊಸ ವರ್ಷದ ಮೊದಲ ದಿನ (ಜ.1) ದಿಂದಲೇ ದರ ಏರಿಕೆ ಜಾರಿಗೆ ಬಂದಿದೆ.

ಉಪನಗರ ರೈಲುಗಳ ಪ್ರಯಾಣಿಕರು ಪ್ರತಿದಿನ ಹಲವು ಬಾರಿ ರೈಲು ಪ್ರಯಾಣ ಮಾಡಬೇಕಿರುವುದರಿಂದ ದರ ಹೆಚ್ಚಳ ಮಾಡಿದರೆ ಅವರಿಗೆ ಹೊರೆಯಾಗಬಹುದು ಎಂಬ ಕಾರಣಕ್ಕೆ ಈ ವಿಭಾಗದಲ್ಲಿ ದರ ಪರಿಷ್ಕರಣೆ ಮಾಡಿಲ್ಲ ಎಂದು ಅಧಿಕಾರಿಗಳು ತಿಳಿಸಿದರು.

ಉಪನಗರ ರೈಲುಗಳನ್ನು ಹೊರತುಪಡಿಸಿ ಉಳಿದ ಸಾಮಾನ್ಯ ದರ್ಜೆಯ (ಸೆಕೆಂಡ್ ಕ್ಲಾಸ್‌ ಆರ್ಡಿನರಿ, ಸ್ಲೀಪರ್ ಕ್ಲಾಸ್ ಆರ್ಡಿನರಿ, ಫಸ್ಟ್ ಕ್ಲಾಸ್ ಆರ್ಡಿನರಿ) ಪ್ರಯಾಣಕ್ಕೆ ಪ್ರತಿ ಕಿ.ಮೀಗೆ 1 ಪೈಸೆ, ಮೇಲ್‌/ ಎಕ್ಸ್‌ಪ್ರೆಸ್‌ ಗಳ ನಾನ್‌-ಎಸಿ ದರ್ಜೆ (ಸೆಕೆಂಡ್ ಕ್ಲಾಸ್‌ ಮೇಲ್‌/ಎಕ್ಸ್‌ಪ್ರೆಸ್, ಸ್ಲೀಪರ್ ಕ್ಲಾಸ್‌ ಮೇಲ್‌/ ಎಕ್ಸ್‌ಪ್ರೆಸ್‌, ಫಸ್ಟ್ ಕ್ಲಾಸ್‌ ಮೇಲ್/ ಎಕ್ಸ್‌ಪ್ರೆಸ್‌) ಪ್ರಯಾಣಕ್ಕೆ 2 ಪೈಸೆ ಹೆಚ್ಚಿಸಲಾಗಿದೆ. ಎಸಿ ಟಿಕೆಟ್‌ಗಳಿಗೆ ಪ್ರತಿ ಕಿ.ಮೀಗೆ 4 ಪೈಸೆ ಹೆಚ್ಚಳ ಮಾಡಲಾಗಿದೆ. ಇದು ರಾಜಧಾನಿ, ಶತಾಬ್ದಿ, ದುರೊಂತೊ, ವಂದೇ ಭಾರತ್‌, ತೇಜಸ್‌, ಗರೀಬ್ ರಥ್‌, ಅಂತ್ಯೋದಯ ಮತ್ತು ಜನ ಶತಾಬ್ದಿ ರೈಲುಗಳಿಗೆ ಅನ್ವಯಿಸುತ್ತದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಸೂಪರ್ ಫಾಸ್ಟ್ ಶುಲ್ಕ, ಮುಂಗಡ ಕಾದಿರಿಸುವ ಶುಲ್ಕವನ್ನು ಹೆಚ್ಚಿಸಿಲ್ಲ.

ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ ಯಾದವ್‌ ಕಳೆದ ವಾರವೇ ರೈಲ್ವೇ ಪ್ರಯಾಣ ದರಗಳನ್ನು ಏರಿಸುವ ಸಂಕೇತಗಳನ್ನು ನೀಡಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಚೀನೀ ದೂರಸಂಪರ್ಕ ಉತ್ಪನ್ನಗಳ ಸಂಪೂರ್ಣ ನಿಷೇಧಕ್ಕೆ ಸ್ವದೇಶಿ ಜಾಗರಣ ಮಂಚ್ ಆಗ್ರಹ

Upayuktha

ಕೊರೊನಾಗೆ ಆಯುರ್ವೇದ ಔಷಧ: ಡಾ. ಗಿರಿಧರ ಕಜೆ ಪ್ರಸ್ತಾವ ಐಸಿಎಂಆರ್‌ಗೆ ರವಾನೆ

Upayuktha

ಐಪಿಎಲ್ 2020: ವಿಲಿಯರ್ಸ್ ನೆರವಿಂದ ಬೆಂಗಳೂರಿಗೆ ಮುಂಬೈ ವಿರುದ್ಧ ಸೂಪರ್ ಗೆಲುವು

Upayuktha News Network