ಜೀವನ-ದರ್ಶನ

ವರ್ತಮಾನದ ಬದುಕು ಭವಿಷ್ಯದ ಬೆಳಕು

ಹುಟ್ಟಿನಿಂದ ಸಾವಿನವರೆಗೆ ಇರುವ ಅಂತರವೇ ಬದುಕು. ಪ್ರತಿಯೊಂದು ಜೀವಿಯೂ ಈ ಬದುಕನ್ನು ಸಹಜವಾಗಿಯೇ ಬದುಕಿ ಬಾಳುತ್ತವೆ ಮಾನವನ ಹೊರತಾಗಿ. ಆದರೆ ಮಾನವನಿಗೆ ಮಾತ್ರ ಇದು ಸಾಧ್ಯವಾಗಿಲ್ಲ ಯಾಕೆ? ಬಹುಶಃ ಇತರ ಜೀವಿಗಳಿಗಿರದಿದ್ದ ಅತಿಯಾದ ಬುದ್ಧಿವಂತಿಕೆಯೇ ಕಾರಣವೆನ್ನಬಹುದು. ಶಿಲಾಯುಗದ ಮಾನವನ ಹೊರತಾಗಿ ನಂತರದ ಎಲ್ಲ ಪೀಳಿಗೆಯ ಜನರೂ ದಿನದಿಂದ ದಿನಕ್ಕೆ ತನ್ನಲ್ಲಿರುವ ಬುದ್ಧಿಯನ್ನು ಹೆಚ್ಚೆಚ್ಚು ಉಪಯೋಗಿಸಿದ್ದರಿಂದ ವರ್ತಮಾನದ ಬದುಕು ಮಾನವನಿಗೆ ದುಸ್ತರವಾಗುತ್ತಲೇ ಬಂತು. ಇಂದು ಸಾಮಾನ್ಯವಾಗಿ ಎಲ್ಲರೂ ಭವಿಷ್ಯದ ಯೋಚನೆಯನ್ನೋ, ಯೋಜನೆಯನ್ನೋ ಮಾಡುತ್ತಲೇ ಇರುತ್ತಾರೆ. ಜತೆ ಜತೆಗೇ ವರ್ತಮಾನದ ಅರಿವಿರದೆಯೇ.

ಮಾನವೇತರ ಪ್ರಾಣಿಗಳಲ್ಲಿ ಅಂಥ ಯಾವ ಬದಲಾವಣೆಗಳು ಸಹಸ್ರಾರು, ಲಕ್ಷಾಂತರ ವರ್ಷಗಳಿಂದಲೂ ಆಗಲಿಲ್ಲ. ಅವು ಮೂಲದಲ್ಲಿ ಯಾವ ಬುದ್ಧಿಮಟ್ಟದಲ್ಲಿದ್ದಲೋ ಅದೇ ಇಂದಿಗೂ ಇದೆ. ಇವಕ್ಕೆ ಭೂತದ ಬಾಧೆ ಇಲ್ಲ, ಭವಿಷ್ಯದ ಚಿಂತೆ ಇಲ್ಲ, ವರ್ತಮಾನವೇ ಎಲ್ಲ. ಒಂದು ವೇಳೆ ಆ ಪ್ರಾಣಿಗಳೂ ಕಾಲಕಾಲಕ್ಕೆ ಬುದ್ಧಿವಂತರಾಗುತ್ತಿದ್ದರೆ ಮಾನವನೆಂಬ ಪ್ರಾಣಿ ಸೃಷ್ಟಿಯಾಗಿ ಕೆಲವೇ ಕಾಲದಲ್ಲಿ ನಾಶವೂ ಆಗುತ್ತಿತ್ತು. ಆದರೆ ಬುದ್ಧಿಯೋ ದುರ್ಬುದ್ಧಿಯೋ ಮಾನವನಿಗೆ ಮಾತ್ರ ಇರುವುದರಿಂದ ಇತರ ಪ್ರಾಣಿಗಳಿಂದ ಸುರಕ್ಷಿತವಾಗಿರುವುದು ನಮ್ಮ ಭಾಗ್ಯ.

ಹಾಗಾದರೆ ನಾವು ಬುದ್ಧಿವಂತರಾಗಿದ್ದುಕೊಂಡು ಸುಖದ ಬದುಕು ಬದುಕಬೇಕಿತ್ತಲ್ಲವೇ.? ಬೆರಳೆಣಿಕೆಯ ಕೆಲವೇ ಮಂದಿ ಮಾತ್ರ ಸುಖಿಗಳಾಗಿರಬಹುದು. ಹೆಚ್ಚಿನವರು ಸುಖದ ಕಲ್ಪನೆಯಲ್ಲಿ ಸುಖವನ್ನು ಕಂಡು ನಿತ್ಯ ಕಷ್ಟವನ್ನು ಅನುಭವಿಸವವರು. ಇದು ಯಾಕೆ ಹೀಗೆಂದರೆ ಇವರು ಯಾರೂ ವರ್ತಮಾನದಲ್ಲಿ ಬದುಕಲಾರದವರು. ಏನು ವರ್ತಮಾನದ ಬದುಕು.? ಏನಿಲ್ಲ.. ಭೂತದಿಂದ ಪಾಠ ಕಲಿತು ಭವಿಷ್ಯತ್ತಿನ ಚಿಂತೆ ಬಿಟ್ಟು ವರ್ತಮಾನವನ್ನು ಅರಿತು ಅನುಭವಿಸುವುದು. ಇದಕ್ಕೆ ಸ್ವಲ್ಪ ಸಾಧನೆ ಬೇಕು. ಕ್ರೋಢೀಕರಣವೋ, ಭವಿಷ್ಯದ ಭಯವೋ ಅಥವಾ ತಾನಿಲ್ಲದಿದ್ದರೆ ಎನೂ ನಡೆಯದೆಂಬ ಮಿಥ್ಯೆಯೋ ಇದೆಲ್ಲವೂ ವರ್ತಮಾನಕ್ಕೆ ಕಲ್ಲು ಹಾಕಿದಂತೆಯೇ.

ಹಾಗಾದರೆ ಭವಿಷ್ಯದ ಚಿಂತೆಯೇ ಬೇಡವೇ ಎನ್ನಬಹುದಾದರೆ, ಖಂಡಿತ ಭವಿಷ್ಯದ ಯೋಚನೆ, ಯೋಜನೆಗಳು ಬೇಕು. ಅದಕ್ಕೆ ವರ್ತಮಾನದಲ್ಲೇ ಪ್ರಾಮಾಣಿಕವಾಗಿ ಕಾರ್ಯೋನ್ಮುಖರಾಗಿರಬೇಕು. ಆಯಾ ಕಾಲಕ್ಕೆ ಮಾಡುವ ಕರ್ಮಗಳನ್ನು ಆಯಾ ಕಾಲದಲ್ಲೇ ಸಾಧ್ಯವಾದಷ್ಟು ಮುಗಿಸಬೇಕು. ಅದರಿಂದ ಉಂಟಾಗುವ ಫಲಕ್ಕೆ ಅಣಿಯಾಗಿಯಬೇಕು. ಧನಾತ್ಮಕವೋ ಋಣಾತ್ಮಕವೋ ಎರಡನ್ನೂ ನಿರೀಕ್ಷಿಸುವಂಥ ಮನೋಭಾವ ಬೇಕು. ಕೃಷ್ಣ ಹೇಳಿದಂತೆ… ಸುಖೇ ದುಃಖೆ ಸಮೇಕೃತ್ವಾ… ಎಂದಂತೆ ಇರಲು ಪ್ರಯತ್ನಿಸಿದರೆ ವರ್ತಮಾನದ ಸುಖದಿಂದ ನಾವು ವಂಚಿತರಾಗಲಾರೆವು. ಅದರ ಹೊರತು ಪ್ರತಿ ಕ್ಷಣವೂ ಭವಿಷ್ಯದ್ದೇ ಚಿಂತೆ ಆದರೆ ವರ್ತಮಾನವೇ ಇರದ ಭೂತ ಮತ್ತು ಭವಿಷ್ಯದ ಜೀವನ ನಮ್ಮದಾಗುವ ಅಪಾಯವೇ ಜಾಸ್ತಿ. ಇದೊಂದು ವಿಚಿತ್ರವಲ್ಲವೇ. ನಾಳೆಗಳಿಗಾಗಿ ನಾವು ಪ್ರತಿ ಇಂದುಗಳನ್ನು ತ್ಯಾಗ ಮಾಡಿಕೊಂಡು ಜೀವನ ಪೂರ್ತಿ ಬಾಳುವುದೆಂದರೆ ಅದೇತರದ ಬುದ್ಧಿವಂತಿಕೆ?

ವರ್ತಮಾನವನ್ನು ನಾವೆಷ್ಟು ಕಳಕೊಳ್ಳುತಿದ್ದೇವೆಂಬ ಕಲ್ಪನೆ ನಮಗಿಲ್ಲವೆಂದೇ ಹೇಳಬಹುದು. ಉದಾಹರಣೆಗೆ ನಾವೊಂದು ಗ್ಲಾಸ್ ಕಬ್ಬಿನ ಹಾಲು ಕುಡಿಯುತ್ತೇವೆ ಎಂದಿಟ್ಟುಕೊಳ್ಳೋಣ. ಸಾಧಾರಣವಾಗಿ ಹೆಚ್ಚಿನ ಜನರಿಗೆ ಅದರ ಪ್ರತಿಯೊಂದು ಗುಟುಕನ್ನೂ ಆಸ್ವಾದಿಸಲು ಸಾಧ್ಯವಾಗದು. ಯಾವುದೋ ತರಾತುರಿಯಲ್ಲಿ 5 ಸೆಕೆಂಡಿನಲ್ಲೇ ಗಟಗಟ ಕುಡಿದು ಮುಗಿಸಿ ಒಂದೇ ಗುಟುಕಿನ ಅನುಭವವನ್ನು ಪಡೆದದ್ದೆ ಬಂತು. ಇನ್ನು ಕೆಲವರು ಅದೇ ಗ್ಲಾಸಿನ ಪ್ರತಿಯೊಂದು ಗುಟುಕನ್ನೂ ಆಸ್ವಾದಿಸಿ ತಾನು ಕಬ್ಬಿನ ಹಾಲು ಕುಡಿಯುತ್ತೇನೆಂದು ಮನದೊಳಗೆ ತುಂಬಿಕೊಂಡು ಐದು ಸೆಕೆಂಡಿನ ಸುಖವನ್ನು ನೂರಿಪ್ಪತ್ತು ಸೆಕೆಂಡಿನವರೆಗೂ ವಿಸ್ತರಿಸಿದಾಗ ಅದು ವರ್ತಮಾನದ ಬದುಕು.

ನಾವು ಏನನ್ನು ಮಾಡುತ್ತದ್ದೇವೋ ಅದರಲ್ಲೇ ತಾದಾತ್ಮ್ಯತೆ ಇದ್ದಾಗ ಅದರ ಪರಿಣಾಮವೇ ಬೇರೆ. ಅದಕ್ಕೆ ಹಿಂದಿನವರು ಹೇಳುತ್ತಿದ್ದರು.. ಊಟ ಮಾಡುವಾಗ, ತಿಂಡಿ ತಿನ್ನುವಾಗ ಮೌನದಲ್ಲಿ ಸೇವಿಸಬೇಕೆಂದು. ಎಷ್ಟೊಂದು ಸತ್ಯವಲ್ಲವೇ. ಆದರೆ ಇಂದು ಮಾತು, ಮೊಬೈಲ್‌ಗಳ ಮಧ್ಯೆ ತಿನ್ನುವ ಅನ್ನದ ರುಚಿಯೂ ಗೊತ್ತಾಗದು, ತಿಂದ ವ್ಯಂಜನವೂ ಗೊತ್ತಾಗದು, ಕೊನೆಗೆ ಹೊಟ್ಟೆ ತುಂಬಿದುದೂ ಗೊತ್ತಾಗದು. ಇದೆಲ್ಲ ಅಪಸವ್ಯಗಳು ನಮ್ಮ ಭವಿಷ್ಯವನ್ನು ಹಾಳು ಮಾಡುವಂಥವೇ ಆಗಿವೆ.

ನಮ್ಮಜ್ಜ ನಾವು ಸಣ್ಣವರಿದ್ದಾಗ ಹೇಳುತ್ತಿದ್ದ ಕಥೆಯೊಂದು ನೆನಪಾಗುತ್ತದೆ. ಒಂದೂರಲ್ಲಿ ಒಬ್ಬ ಅತಿ ಬುದ್ಧಿವಂತನೊಬ್ಬನಿದ್ದ. ಆತನಲ್ಲಿ 11 ಮುಡಿ ಅಕ್ಕಿ ಇತ್ತು. ಅವನಿಗೆ ತಿಂಗಳಿಗೆ ಒಂದು ಮುಡಿ ಅಕ್ಕಿ ಬೇಕಾಗುತ್ತದೆ. ಆದರೆ 12 ತಿಂಗಳಿಗೆ 1 ಮುಡಿ ಅಕ್ಕಿ ಕಡಿಮೆ ಇರುವುದರಿಂದ ಆತ ಬದ್ಧಿವಂತನಂತೆ ಯೋಚಿಸಿ ಮೊದಲ 1 ತಿಂಗಳು ಉಪವಾಸವಿದ್ದು ನಂತರದ 11 ತಿಂಗಳು ಯಥೇಚ್ಛವಾಗಿ ಉಣ್ಣಬಹುದೆಂದು ಲೆಕ್ಕ ಹಾಕಿದಾಗ ಆತ ಕೆಲವೇ ದಿನಗಳಲ್ಲಿ ಊಟವಿಲ್ಲದೆ ಸತ್ತು ಹೋದ… ಎನ್ನುವಲ್ಲಿಗೆ ಕಥೆ ಮುಗಿಯತ್ತದೆ.

ಆದರೆ ನಮ್ಮಜ್ಜ ಕಥೆ ಹೇಳುವುದರಲ್ಲಿ ಬಹಳ ನಿಪುಣರಾದ್ದರಿಂದ ಇಷ್ಟು ಸಣ್ಣ ಕಥೆಯನ್ನು ಕುತೂಹಲಕರವಾಗಿ ಅರ್ಧ ಗಂಟೆವರೆಗೂ ವಿಸ್ತರಿಸಿ ಹೇಳುವಾಗ ಆ ಕಾಲದಲ್ಲಿ ನಮಗದು ಅತಿ ರಂಜನೀಯವೇ ಆಗಿರುತ್ತಿತ್ತು. ಕಥೆ ಕಾಲ್ಪನಿಕವಾದರೂ ನಾವು ಕೂಡ ಭವಿಷ್ಯತ್ತಿಗಾಗಿ ಇನ್ನಿಲ್ಲದಂತೆ ಕಷ್ಟಪಟ್ಟು ‘ಇಂದು’ ಎಂಬ ವರ್ತಮಾನದಲ್ಲಿ ಸುಖ ಪಡಬಹುದಾದದ್ದನ್ನೂ ಪಡೆಯದೆ, ಅಂದರೆ ಉಪವಾಸವಿದ್ದು ಮಾನಸಿಕವಾಗಿ ಮುಂದಿನ ಸುಖಗಳ ಮೂಟೆಗಳನ್ನು ಅನುಭವಿಸುವ ಮುಂಚೆಯೇ ಸತ್ತಿರುತ್ತೇವೆ. ಭಗವದ್ಗೀತೆ ಎಂಬ ಮನಶ್ಶಾಸ್ತ್ರದಲ್ಲಿ ಕೃಷ್ಣನೆಂಬ ಮನೋವೈದ್ಯನು ಹೇಳಿದ್ದೂ ಇದನ್ನೇ ತಾನೆ.. ಕರ್ಮಣ್ಯೇವಾಧಿಕಾರಸ್ತೇ… ಎಂದು. ಆದ್ದರಿಂದ ಕರ್ಮದಲಿ ಮಾತ್ರವೇ ನಮಗೆ ಅಧಿಕಾರ. ಫಲ…. ಅದು ದೈವೇಚ್ಛೆ. ಇವತ್ತು ನಮ್ಮದೇನಿದೆ ಅದು ಬದುಕು. ನಾಳೆಯೂ ಬದುಕು ಇದ್ದರೆ, ಬದುಕಿದ್ದರೆ…. ಉಣಬಹುದು ಉಳಿದ ಬದುಕು… ಆದ್ದರಿಂದ ವರ್ತಮಾನದಲ್ಲಿ ಬದುಕೋಣ. ಅಂತೆಯೇ ಭವಿಷ್ಯತ್ತನ್ನೂ ವರ್ತಮಾನವನ್ನಾಗಿ ಪರಿವರ್ತಿಸೋಣ…
************
-ಬಾಲಕೃಷ್ಣ ಸಹಸ್ರಬುಧ್ಯೆ, ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಕೃಷ್ಣ: ಈ ನೆಲದ ನಂಬಿಕೆಯ ಕುಡಿ, ನಮ್ಮೆದೆಯ ಕಣಕಣದ ಹುಡಿ

Upayuktha

ಬಾಳಿಗೆ ಬೆಳಕು: ಯಥೇಚ್ಛಸಿ ತಥಾ ಕುರು… ಅಂದರೆ ಏನು ಬೇಕಾದರೂ ಮಾಡು ಎಂದಲ್ಲ…

Upayuktha

ಅಧ್ಯಾತ್ಮ: ಷಟ್ಕ ಸಂಪತ್ತಿ

Upayuktha