ಓದುಗರ ವೇದಿಕೆ ಭಾವನಾ

ಪ್ರೀತಿಯೆಂಬುದು ಕನಸಿನ ಕೋಟೆಯೊಳಗಲ್ಲ, ವಾಸ್ತವದ ಬಯಲಿನಲ್ಲಿ ಅರಳಲಿ

ಸಾಂದರ್ಭಿಕ ಚಿತ್ರ (ಕೃಪೆ: ವೀ ನೋ ಯುವರ್ ಡ್ರೀಮ್ಸ್.ಕಾಂ)

ಒಂದು ಜೀವ ಮಗದೊಂದು ಜೀವವನ್ನು ನಂಬಿಕೆಯೆನ್ನುವ ಒಂದು ಎಳೆಯಿಂದ ತನ್ನ ಬದುಕಿನ ಪ್ರತಿ ಕ್ಷಣವನ್ನು ಕಳೆಯಲಿಚ್ಛಿಸುವುದೇ ಪ್ರೀತಿ. ಒಬ್ಬ ತಾಯಿ ತನ್ನ ಮಗುವಿಗೆ ನೀಡುವ ಆರೈಕೆ ಒಂದು ತೆರನಾದ ಪ್ರೀತಿಯಾದರೆ, ಒಂದು ಹೆಣ್ಣು ವಯಸ್ಸಿಗೆ ಬಂದಿರುವ ಗಂಡಿಗೆ ಮಾಡುವ ಆರೈಕೆ, ಅವನ ಸೋಲು ಗೆಲುವಿನಲ್ಲಿ ಭಾಗಿಯಾಗುವ ರೀತಿ ಮತ್ತೊಂದು ತೆರನಾದ ಪ್ರೀತಿ. ತಾಯಿ ತನ್ನ ಮಗುವಿನಿಂದ ಏನನ್ನೂ ಅಪೇಕ್ಷೆ ಮಾಡದೇ ಇರಬಹುದು; ಆದರೆ ಪ್ರೀತಿಸುವ ಹುಡುಗಿ ತನ್ನ ಹುಡುಗನಿಂದ ಅಪೇಕ್ಷೆ ಮಾಡಿಯೇ ಮಾಡುತ್ತಾಳೆ. ಒಂದು ಹುಡುಗಿಯ ಅಪೇಕ್ಷೆ ಹುಡುಗನಿಂದ ಪೂರೈಸಲು ಅಸಾಧ್ಯವಾಗಬಹುದು; ಮತ್ತೊಬ್ಬಳ ಅಪೇಕ್ಷೆ ತುಂಬ ಚಿಕ್ಕದಿರಬಹುದು; ಆದರೆ ಅಪೇಕ್ಷೆ ಇರುವುದು ಸಹಜ ಹಾಗೂ ಇರಲೇಬೇಕು.

ಒಮ್ಮೆ ಹುಡುಗಿ ತನ್ನ ಪ್ರೀತಿಯ ಬಲೆಯಲ್ಲಿ ಬಿದ್ದ ಮೇಲೆ ತಾನು ಹೇಳಿದ ಹಾಗೆ ಕೇಳಬೇಕು ಅಥವಾ ತನ್ನ ಬದುಕಿನ ಶೈಲಿಗೆ ಅವಳು ಹೊಂದಿಕೊಳ್ಳಬೇಕು ಎನ್ನುವ ಧೋರಣೆ ಹುಡುಗರಾದ ನಮ್ಮಲ್ಲಿ ಬಂದರೆ ನಾವು ಪ್ರೀತಿ ಪಡೆಯುವುದಕ್ಕೆ ಮುನ್ನ ಅವಳೆದುರು ಆಡಿದ ಮಾತು, ಕೊಟ್ಟ ಆಶ್ವಾಸನೆ ಎಲ್ಲವೂ ಅವಳಿಗೆ ನಾಟಕೀಯ ಅನ್ನಿಸುವುದು ತಪ್ಪೇನಲ್ಲ. ಏಕೆಂದರೆ ನಮ್ಮ ಮಾತಿನ ಆಧಾರದ ಮೇಲೆ ಅವಳು ತನ್ನದೇ ಆದ ಕನಸಿನ ಕೋಟೆಯನ್ನು ಚಿತ್ರಿಸಿ ಅದಕ್ಕೆ ವಿಧವಿಧವಾದ ಒಲವಿನ ಬಣ್ಣವನ್ನು ಹಚ್ಚಿ ಮುಂದೊಂದು ದಿನ ಆ ಕೋಟೆಯೊಳಗೆ ತನ್ನ ಹುಡುಗನ ಜೊತೆ ಬದುಕಬೇಕೆಂದು ಹಂಬಲಿಸುತ್ತಿರುತ್ತಾಳೆ.

ನಾವು ಇಷ್ಟಪಡುವ ಹುಡುಗಿಯನ್ನು ಮೆಚ್ತಿಸುವುದಕ್ಕೋಸ್ಕರ ನಮ್ಮ ಶಕ್ತಿಗೆ ನಿಲುಕದ ನಕ್ಷತ್ರವನ್ನು ತಂದಿಡುವ ಭರವಸೆ ಕೊಟ್ಟು ಮುಂದೆ ಆ ಮಾತೆಲ್ಲವೂ ಸುಳ್ಳಿನ ಕಂತೆಯೆಂಬುದು ಅವಳಿಗನಿಸಿ ಹೃದಯ ಚೂರಾಗಿ ಸಂಬಂಧಗಳು ಒಡೆದ ಕನ್ನಡಿಯ ಹಾಗೆ ಆಗುವ ಬದಲು ಇರುವ ವಾಸ್ತವ ಸ್ಥಿತಿಯನ್ನು ತಿಳಿಸುವುದೇ ಉತ್ತಮ. ಅತಿ ಚಿಕ್ಕ ಉಡುಗೊರೆ , ಒಂದೊಳ್ಳೆ ಮಾತು , ಅವಳಿಗೆ ನೀಡಬೇಕಾದ ಸಮಯ, ಅವಳ ಮನಸ್ಸಿನ ಮಾತು ಅರಿಯುವ ಪ್ರಯತ್ನ, ಕೋಪದಿಂದ ಮಾತಾಡಿದ ಮರುಕ್ಷಣವೇ ಮಗುವಿನಂತೆ ಕಾಣುವ ಗುಣವಿದ್ದಲ್ಲಿ ಯಾವ ಪ್ರೀತಿಯೂ ನೀರು ಹರಿಯದ ಹೊಳೆ, ಮಳೆ ಕಾಣದ ಭೂಮಿಯಾಗುವುದಿಲ್ಲ.

ಭವಿಷ್ಯದ ದೃಷ್ಟಿಯಲ್ಲಿ ಸಮಯ ವ್ಯಯಮಾಡದೆ ಹಣ ಸಂಪಾದನೆ ಮಾಡಿ ತನ್ನ ಹುಡುಗಿ ಮತ್ತು ಕುಡಿಯ ಸಂತೋಷಕ್ಕೆ ಶ್ರಮ ಪಡುವುದು ಅಗತ್ಯ. ಆದರೆ ಇಂದಿನ ಚಿಕ್ಕ ಪುಟ್ಟ ಸಂತಸಗಳಲ್ಲಿ ಅವಳ ಜೊತೆಯಿರದೆ ಹತ್ತು ವರ್ಷ ನಂತರ ಖುಷಿ ಕಾಣಬೇಕೆಂಬ ಭ್ರಮೆಯಲ್ಲಿದ್ದರೆ ಅದು ಇಂದಿನ ಪ್ರಸ್ತುತ ಖುಷಿಯನ್ನು ಕೊಲ್ಲುತ್ತದೆಯೆ ಹೊರತು ವೃದ್ಧಿಸುವುದಿಲ್ಲ. ಇಂದಿನ ಬಿಡುವಿಲ್ಲದ ಬಾಳ ಯಾನದಲ್ಲಿ ನಾವು ನಮ್ಮವರಿಗೆ ನೀಡುವ ಸ್ವಲ್ಪ ಸಮಯ‌, ತೋರುವ ಕಾಳಜಿ, ತನ್ನವಳ ಮಾತಿಗೆ ನೀಡುವ ಬೆಲೆ ಹಾಗೂ ತಾಳ್ಮೆ ಒಂದು ಹೆಣ್ಣಿಗೆ ತನ್ನ ಹುಡುಗನ ಬಗೆಗೆ ಗೌರವ, ಕಾಳಜಿ, ಪ್ರೀತಿ, ನಂಬಿಕೆ ಎಲ್ಲವನ್ನೂ ಗಟ್ಟಿಗೊಳಿಸುತ್ತದೆ. ಅಂತಹ ಸಂಬಂಧಗಳು ಎಂತಹ ಸಂದರ್ಭದಲ್ಲೂ ಮುರಿದು ಬೀಳದೆ ಬಂಡೆಗಲ್ಲಿನಂತೆ ಎದುರಾಗುವ ಸವಾಲುಗಳನ್ನು ಎದುರಿಸಿ ಬದುಕನ್ನು ಸಾರ್ಥಕಗೊಳಿಸುತ್ತದೆ.

✍ ಪ್ರದೀಪ ಶೆಟ್ಟಿ ಬೇಳೂರು

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಕೊರೊನಾಘಾತಕ್ಕೆ ಕಾಸರಗೋಡು- ದ.ಕ ನಡುವೆ ಸಂಬಂಧಗಳು ಕಡಿದೇ ಹೋಯ್ತೆ…?

Upayuktha

ನೇಮಕಾತಿ ಇಲ್ಲದಿದ್ದರೆ ಶಿಕ್ಷಕರ ಅರ್ಹತಾ ಪರೀಕ್ಷೆ ಈ ವರ್ಷ ಅಗತ್ಯವಿದೆಯೇ… ?

Upayuktha

ಅಳಿದ ಮೇಲೆ: ಕೊರೊನಾದಿಂದ ಮೃತಪಟ್ಟವರ ಶವಸಂಸ್ಕಾರದ ಸುತ್ತ…

Upayuktha