ಬೆಂಗಳೂರು : ಮೈಸೂರಿನ ಎಮ್. ಅಪ್ಪಣ್ಣ ಅವರನ್ನು ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜಸ್ ಅಂಡ್ ರೆಸಾರ್ಟ್) ನ ಅಧ್ಯಕ್ಷರನ್ನಾಗಿ ತಕ್ಷಣದಿಂದ ಜಾರಿಗೆ ಬರುವಂತೆ ನೇಮಕಗೊಳಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆದೇಶ ನೀಡಿದ್ದಾರೆ.
ಎಮ್. ಅಪ್ಪಣ್ಣ ಮೈಸೂರು ಅವರು ಸದ್ಯ ಮಹರ್ಷಿ ಶ್ರೀ ವಾಲ್ಮೀಕಿ ಗುರುಪೀಠದ ಧರ್ಮದರ್ಶಿಗಳಾಗಿದ್ದು, ಮೈಸೂರು ಭಾಗದ ನಾಯಕ ಸಮಾಜದ ಪ್ರಭಾವಿ ನಾಯಕರಾಗಿದ್ದು, ಸಂಘ ಪರಿವಾರದ ಮೂಲಕ ರಾಜಕೀಯ ಪ್ರವೇಶಿಸಿ ಮೂರು ಬಾರಿ ಮೈಸೂರು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ವಿಧಾನಸಭೆಗೆ ಸ್ಪರ್ಧಿಸಿ ಈ ಭಾಗದಲ್ಲಿ ಬಿಜೆಪಿ ನೆಲೆಯೂರಲು ಕಾರಣೀಕರ್ತರಾಗಿದ್ದಾರೆ.
ಸುಮಾರು ಐದು ಜಿಲ್ಲೆಗಳಲ್ಲಿ ನಾಯಕ ಸಮಾಜದ ಮುಂಚೂಣಿ ನಾಯಕರಾಗಿ ಪಕ್ಷ ಸಂಘಟನೆಯಲ್ಲಿ ತೊಡಗಿರುವುದನ್ನು ಗುರುತಿಸಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಜಂಗಲ್ ಲಾಡ್ಜ್ಸ್ ಮತ್ತು ರೆಸಾರ್ಟ್ ಅಧ್ಯಕ್ಷರಾಗಿ ನೇಮಕ ಮಾಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಅಪ್ಪಣ್ಣ ಅವರು ”ನನ್ನನ್ನು ಗುರುತಿಸಿ ಈ ಹುದ್ದೆ ನೀಡಿರುವ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ, ಪಕ್ಷದ ಅಧ್ಯಕ್ಷರಿಗೆ ಹಾಗೂ ಎಲ್ಲಾ ಹಿರಿಯ ನಾಯಕರುಗಳಿಗೆ ನನ್ನ ವಂದನೆಗಳನ್ನು ಅರ್ಪಿಸುತ್ತೇನೆ” ಎಂದಿದ್ದಾರೆ.