ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ ವಿಧಾನಸಭೆ ಚುನಾವಣೆ: 370ನೇ ವಿಧಿ ರದ್ದತಿಯಿಂದ 130 ಸ್ಥಾನಗಳ ಚಿತ್ರಣವೇ ಬದಲು

ಬಿಜೆಪಿಯ ‘ದೇಶ ಮೊದಲು’ ನೀತಿಯಿಂದ ವಿಪಕ್ಷಗಳಲ್ಲಿ ಆತಂಕ

 

ಭಾನುವಾರ ಮುಂಬಯಿಗೆ ಆಗಮಿಸಿದ್ದ ಕೇಂದ್ರ ಗೃಹಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಅfಯಕ್ಷ ಅಮಿತ್ ಅವರನ್ನು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಸ್ವಾಗತಿಸಿದರು. (ಚಿತ್ರ ಕೃಪೆ: ಟ್ವಿಟರ್)

ಮುಂಬಯಿ: ವಿಧಾನಸಭೆ ಚುನಾವಣೆಗಳಲ್ಲೂ ‘ನೇಷನ್ ಫಸ್ಟ್’ (ದೇಶ ಮೊದಲು) ಎಂಬ ಘೋಷಣೆಯನ್ನು ಪುನರಾವರ್ತಿಸುವ ಬಿಜೆಪಿ ಪಾಲಿಗೆ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ 370ನೇ ವಿಧಿ ರದ್ದತಿಯ ಪರಿಣಾಮ ಭಾರೀ ಮುನ್ನಡ ದೊರೆಯಲಿದೆ ಎಂದು ರಾಜಕೀಯ ಪಂಡಿತರು ವಿಶ್ಲೇಷಿಸುತ್ತಿದ್ದಾರೆ.

ಮತದಾರರನ್ನು ಓಲೈಸಲು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ 5 ವರ್ಷದ ಆಡಳಿತದ ಅಭಿವೃದ್ಧಿ ಕಾರ್ಯಗಳ ಜತೆಗೆ 370ನೇ ವಿಧಿ ರದ್ದು ಮತ್ತು ತ್ರಿವಳಿ ತಲಾಖ್ ನಿಷೇಧ ವಿಷಯಗಳನ್ನು ಬಿಜೆಪಿ ಪ್ರಸ್ತಾಪಿಸುತ್ತಿದೆ. ಪಕ್ಷದ ಪ್ರಮುಖ ಕಾರ್ಯತಂತ್ರ ನಿಪುಣರು ಎರಡು ಮುಖ್ಯ ಜಾಹೀರಾತು ಸಂಸ್ಥೆಗಳ ಜತೆ ಪ್ರಚಾರ ತಂತ್ರದ ಕುರಿತು ಚರ್ಚೆ ನಡೆಸಿದ್ದಾರೆ.

ನಗರ ಪ್ರದೇಶಗಳ ಮತದಾರರಲ್ಲಿ 370ನೆ ವಿಧಿ ರದ್ದತಿಯ ಪರಿಣಾಮ ಬಹಳ ಗಾಢವಾಗಿದ್ದು, ಪಕ್ಷದ ಪರವಾಗಿ ಫಲಿತಾಂಶಕ್ಕೆ ಪೂರಕವಾಗಿದೆ ಎಂದು ಬಿಜೆಪಿ ನಾಯಕರು ಭಾವಿಸಿದ್ದಾರೆ. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು 288 ಸ್ಥಾನಗಳ ಪೈಕಿ ನಗರ ಪ್ರದೇಶಗಳ ಕನಿಷ್ಠ 132 ಸ್ಥಾನಗಳಲ್ಲಿ ಈ ವಿಚಾರವೇ ಹೆಚ್ಚಿನ ಜನಬೆಂಬಲ ದೊರಕಿಸಿಕೊಡಲಿದೆ. ಆದರೆ ಗ್ರಾಮೀಣ ಪ್ರದೇಶದ ಕ್ಷೇತ್ರಗಳಲ್ಲಿ ನೀರಾವರಿ, ಜಲಕ್ಷಾಮ ಮತ್ತು ಆಹಾರ ಧಾನ್ಯಗಳ ಮೇಲಿನ ಬೆಂಬಲ ಬೆಲೆ ವಿಷಯಗಳು ಪ್ರಮುಖವಾಗುತ್ತವೆ ಎಂದು ಪಕ್ಷದ ಕಾರ್ಯಸೂಚಿ ತಜ್ಞರೊಬ್ಬರು ಹೇಳುತ್ತಾರೆ.

ನೆಹರೂ ವಿರುದ್ಧ ವಾಗ್ದಾಳಿ:

ಮುಂಬಯಿಯಲ್ಲಿ ನಡೆದ ಬಿಜೆಪಿ ಮಹಾಸಭೆಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರು, ಜಮ್ಮು ಮತ್ತು ಕಾಶ್ಮೀರವನ್ನು ವಿವಾದಾತ್ಮಕ ಪ್ರದೇಶವಾಗಿ ಪರಿವರ್ತಿಸಿದ್ದಕ್ಕಾಗಿ ಜವಾಹರಲಾಲ್ ನೆಹರೂ ವಿರುದ್ಧ ಇದೇ ಕಾರಣಕ್ಕೆ ತೀಕ್ಷ್ಣ ವಾಗ್ದಾಳಿ ನಡೆಸಿದ್ದರು.

ಕಾಶ್ಮೀರದ ಪ್ರತ್ಯೇಕತಾವಾದದ ವಿರುದ್ಧ ಹೋರಾಡಿದ ಜನಸಂಘದ ಸಂಸ್ಥಾಪಕ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿ ಅವರನ್ನು ಅಂದಿನ ಶೇಖ್ ಅಬ್ದುಲ್ಲಾ ಸರಕಾರ ಜೈಲಿಗೆ ತಳ್ಳಿರುವುದನ್ನು ಅಮಿತ್ ಶಾ ನೆನಪಿಸಿದ್ದರು. ಮುಖರ್ಜಿ ಅವರು ಜೈಲಿನಲ್ಲೇ ಕೊನೆಯುಸಿರೆಳೆದಿದ್ದರು.

ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದ 370ನೇ ವಿಧಿಯನ್ನು ರದ್ದುಪಡಿಸಿ ಭಾರತದ ಜತೆ ಸಂಪೂರ್ಣ ವಿಲೀನಗೊಳಿಸುವ ಮೂಲಕ ಬಿಜೆಪಿ ಸರಕಾರ ಶ್ಯಾಮ್ ಪ್ರಸಾದ್ ಮುಖರ್ಜಿ ಅವರ ಹೋರಾಟಕ್ಕೆ ನ್ಯಾಯ ಸಲ್ಲಿಸಿದೆ. ‘ಇದು ದೇಶಭಕ್ತಿಯ ವಿಚಾರ’ ಎಂದು ಅಮಿತ್ ಶಾ ಹೇಳಿದ್ದರು.

ಪ್ರತಿಪಕ್ಷಗಳ ಕಿಡಿ:

ಆದರೆ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಕಿಡಿ ಕಾರಿವೆ. ‘ದೇಶಭಕ್ತಿ’ಯ ಸೋಗಿನಲ್ಲಿ ಬೆಲೆಯೇರಿಕೆ ಮತ್ತು ಬರಗಾಲದ ಸಮಸ್ಯೆಗಳು ಬಿಜೆಪಿ ಮರೆಮಾಚುತ್ತಿದೆ ಎಂದು ಎನ್‌ಸಿಪಿ ಸಂಸದೆ ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.

‘ರಾಜ್ಯದ ವಿಧಾನಸಭೆ ಚುನಾವಣೆಗೆ ಬಿಜೆಪಿ 370ನೇ ವಿಧಿಯನ್ನು ಎಳೆದು ತರುತ್ತಿರುವುದೇಕೆ? ಮುಖ್ಯಮಂತ್ರಿ ಫಡ್ನವಿಸ್ ಅವರು ಮೋದಿ ಮತ್ತು ಶಾ ಅವರ ತಂತ್ರಗಳನ್ನೇ ಚಾಚೂ ತಪ್ಪದೆ ನಕಲು ಮಾಡುತ್ತಿರುವುದಕ್ಕೆ ಸಾಕ್ಷಿ. ಫಡ್ನವಿಸ್ ಸರಕಾರ ತಳಮಟ್ಟದಲ್ಲಿ ಹೇಳಿಕೊಳ್ಳುವ ಸಾಧನೆಯನ್ನೇನೂ ಮಾಡಿಲ್ಲ ಎಂಬುದು ಮನವರಿಕೆಯಾಗಿಯೇ ಬಿಜೆಪಿ ನಾಯಕತ್ವ ರಾಷ್ಟ್ರೀಯ ವಿಚಾರಗಳನ್ನು ಮುಂದೊಡ್ಡುತ್ತಿದೆ’ ಎಂದು ಸುಪ್ರಿಯಾ ಸುಳೆ ಆರೋಪಿಸಿದ್ದಾರೆ.

ರಾಜ್ಯದ ಕೃಷಿಕರು ಎದುರಿಸುತ್ತಿರುವ ಸಮಸ್ಯೆಗಳು, ಭೀಕರ ಬರಗಾಲ, ಜಲಕ್ಷಾಮ, ಅಗತ್ಯ ವಸ್ತುಗಳ ಬೆಲೆಯೇರಿಕೆ, ಮುಂಬಯಿ ನಗರವಾಸಿಗಳಿಗೆ ಹೊಂಡಮುಕ್ತ ರಸ್ತೆಗಳನ್ನು ಒದಗಿಸುವಲ್ಲಿ ಸರಕಾರದ ವೈಫಲ್ಯ- ಇವೆಲ್ಲವೂ ಬಿಜೆಪಿಗೆ ಹಿನ್ನಡೆ ಉಂಟುಮಾಡಲಿವೆ ಎಂದು ಎನ್‌ಸಿಪಿ ನಾಯಕಿ ಹೇಳುತ್ತಾರೆ.

‘ಅಭೂತಪೂರ್ವ ಬಹುಮತದಿಂದ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ 370ನೆ ವಿಧಿ ರದ್ದತಿ ಸೇರಿದಂತೆ ತನ್ನ ಕಾರ್ಯಸೂಚಿಗಳನ್ನು ಜಾರಿಗೊಳಿಸಲು ಎಲ್ಲ ಅಧಿಕಾರಗಳಿವೆ. ಆದರೆ ಕೇಂದ್ರ ಸರಕಾರ ದೊಡ್ಡಣ್ಣನಂತೆ ವರ್ತಿಸುವುದು ಮಾತ್ರ ಆತಂಕಕಾರಿ. ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಕಳವಳಕಾರಿ. ಅಲ್ಲಿರುವ ನಮ್ಮ ಸ್ನೇಹಿತರ ಜತೆ ನಾವು ಸಂಪರ್ಕ ಕಳೆದುಕೊಂಡಿದ್ದೇವೆ. ಜನರನ್ನು ಭಯಪಡಿಸಲಾಗುತ್ತಿದೆ. ಅಲ್ಲಿನ ಪ್ರವಾಸೋದ್ಯಮ ಕುಸಿದು ಬಿದ್ದಿದೆ. ಅಮಿತ್ ಶಾ ಈ ಬಗ್ಗೆಯೂ ಮಾತನಾಡಲಿ’ ಎಂದು ಪವಾರ್ ಪುತ್ರಿ ಆಗ್ರಹಿಸುತ್ತಾರೆ.

Related posts

ಅಯೋಧ್ಯೆಯ ಭೂಮಿ ಪೂಜೆಗೆ ತಯಾರಾಗ್ತಿದೆ 1.25 ಲಕ್ಷ ಮಣ್ಣಿನ ಹಣತೆಗಳು

Harshitha Harish

ಪಶ್ಚಿಮ ಕರಾವಳಿಯಲ್ಲಿ ಉಗ್ರರ ದಾಳಿ ಸಾಧ್ಯತೆ: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ

Upayuktha

ಎಸ್ಎಸ್ಎಲ್‌ಸಿ ಪರೀಕ್ಷಾಭಿಮುಖವಾದ ಪಠ್ಯ ಬೋಧನೆಗೆ ಒತ್ತು: ಸುರೇಶ್ ಕುಮಾರ್

Upayuktha