ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ ಕ್ಷಿಪ್ರ ಕ್ರಾಂತಿ: ರಾತೋರಾತ್ರಿ ಶಿವಸೇನೆಗೆ ಚಳ್ಳೆ ಹಣ್ಣು ತಿನ್ನಿಸಿದ ಬಿಜೆಪಿ

ಹೊಸದಿಲ್ಲಿ: ಮಹಾರಾಷ್ಟ್ರ ರಾಜಕೀಯದಲ್ಲಿ ನಡೆದ ಕ್ಷಿಪ್ರ ಕ್ರಾಂತಿಯ ಬೆಳವಣಿಗೆಗಳು ಹೇಗೆ ನಡೆದವು ಗೊತ್ತೇ…?

ಶುಕ್ರವಾರ ರಾತ್ರಿಯ ವೇಳೆಗೂ ಕಾಂಗ್ರೆಸ್‌-ಎನ್‌ಸಿಪಿ-ಶಿವಸೇನೆ ಮೈತ್ರಿಕೂಟವೇ ಸರಕಾರ ರಚಿಸುವ ಕನಸು ಕಾಣುತ್ತ ಒಮ್ಮತಕ್ಕೆ ಬಂದಿತ್ತು. ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ ಮುಖ್ಯಮಂತ್ರಿಯಾಗಿ ಹಾಗೂ ಎನ್‌ಸಿಪಿ ನಾಯಕರು ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲು ತಯಾರಿ ನಡೆಯುತ್ತಿತ್ತು.

ಆದರೆ ರಾತೋರಾತ್ರಿ ನಡೆದ ಕ್ಷಿಪ್ರ ಬೆಳವಣಿಗೆಗಳಲ್ಲಿ ಯಾರೂ ಊಹಿಸದ ರೀತಿಯಲ್ಲಿ ಶನಿವಾರ ಬೆಳಗ್ಗೆ ಬಿಜೆಪಿಯ ದೇವೇಂದ್ರ ಫಡ್ನವಿಸ್ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಹಾಗೂ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುವ ಮೂಲಕ ಶಿವಸೇನೆ-ಶರದ್‌ ಪವಾರ್‌-ಕಾಂಗ್ರೆಸ್ ಕೂಟಕ್ಕೆ ಆಘಾತ ನೀಡಿತು.

ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಮಾತನಾಡಿದ ದೇವೇಂದ್ರ ಫಡ್ನವಿಸ್, ರಾಜ್ಯದ ಜನಾದೇಶ ಬಿಜೆಪಿ ಪರವಾಗಿತ್ತು. ಚುನಾವಣೆ ಪೂರ್ವದಲ್ಲಿ ನಮ್ಮ ಜತೆ ಮೈತ್ರಿ ಮಾಡಿಕೊಂಡಿದ್ದರಿಂದಲೇ ಶಿವಸೇನೆಗೂ ಅಷ್ಟು ಸ್ಥಾನಗಳು ಬಂದಿದ್ದವು. ಆದರೆ ಫಲಿತಾಂಶ ಪ್ರಕಟವಾದ ಬಳಿಕ ಶಿವಸೇನೆ ಅತಿಯಾದ ಅಧಿಕಾರ ದಾಹದಿಂದ ಇತರ ಪಕ್ಷಗಳ ಜತೆ ಮೈತ್ರಿಗೆ ಮುಂದಾಯಿತು. ಹಾಗಾಗಿ ರಾಷ್ಟ್ರಪತಿ ಆಡಳಿತ ಹೇರಲಾಯಿತು. ಮಹಾರಾಷ್ಟ್ರಕ್ಕೆ ಸ್ಥಿರ ಸರಕಾರ ಬೇಕಾಗಿತ್ತೇ ಹೊರತು ಖಿಚಡಿ ಸರಕಾರವಲ್ಲ’ ಎಂದು ಹೇಳಿದರು.

ನಿನ್ನೆ ತಡರಾತ್ರಿ ನಡೆದ ಬೆಳವಣಿಗೆಗಳು ಏನೇನು? ಇಲ್ಲಿವೆ ನೋಡಿ ಡೀಟೇಲ್ಸ್:

ರಾತ್ರಿ 11:45ಕ್ಕೆ ಅಜಿತ್ ಪವಾರ್ ಮತ್ತು ಬಿಜೆಪಿ ಸರಕಾರ ರಚಿಸುವ ರೂಪುರೇಷೆಗಳನ್ನು ಅಂತಿಮಗೊಳಿಸಿದರು.

11:55ಕ್ಕೆ ಫಡ್ನವಿಸ್‌ ಪಕ್ಷದ ನಾಯಕರ ಜತೆ ಮಾತುಕತೆ ನಡೆಸಿದರು. ಶಿವಸೇನೆ-ಎನ್‌ಸಿಪಿ-ಕಾಂಗ್ರೆಸ್‌ ನಾಯಕರಿಗೆ ಯಾವುದೇ ಸುಳಿವು ಸಿಗದಂತೆ, ಅವರು ಸರಕಾರ ರಚನೆ ಹಕ್ಕು ಮಂಡಿಸುವ ಮೊದಲೇ ಪ್ರಮಾಣವಚನ ಸ್ವೀಕರಿಸುವ ತಂತ್ರ ರೂಪಿಸಿದರು.

ಶನಿವಾರ ಬೆಳಗಿನ ಜಾವ 2:10ಕ್ಕೆ ರಾಜ್ಯಪಾಲರ ಕಾರ್ಯದರ್ಶಿಗಳಿಗೆ ರಾಷ್ಟ್ರಪತಿ ಆಡಳಿತ ರದ್ದುಪಡಿಸುವ ಆದೇಶ ಹೊರಡಿಸುವಂತೆ ಮನವಿ ಮಾಡಲಾಯಿತು.

5:47ರ ವೇಳೆಗೆ ಆದೇಶ ಹೊರಬಿತ್ತು. ಬೆಳಗ್ಗೆ 6:30ಕ್ಕೆ ಅನ್ಯಪಕ್ಷಗಳ ರಾಜಕೀಯ ಮುಖಂಡರು ಏಳುವ ಹೊತ್ತಿಗೆ ಫಡ್ನವಿಸ್-ಅಜಿತ್ ಪವಾರ್ ಪ್ರಮಾಣ ವಚನ ಸ್ವೀಕಾರವೂ ಮುಗಿದಿತ್ತು.

ಮಧ್ಯಾಹ್ನ 12:30ಕ್ಕೆ ರಾಜ್ಯಪಾಲರು ತಮ್ಮ ಪೂರ್ವ ನಿಗದಿತ ದಿಲ್ಲಿ ಭೇಟಿಯನ್ನು ರದ್ದುಪಡಿಸಿದರು.

Related posts

ಮಾ.11: ಬಳಂಜ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನ ಲೋಕಾರ್ಪಣೆ

Sushmitha Jain

ಮಂಗಳೂರಿನಲ್ಲಿ ರಾಘವೇಶ್ವರ ಶ್ರೀಗಳಿಂದ ಫೆ.16ಕ್ಕೆ ವಿಶ್ವವಿದ್ಯಾ ಸಂವಾದ

Upayuktha

ರಾಜ್ಯ ಮಟ್ಟದ ಶಾಲಾ ಕಲೋತ್ಸವ: ಇನ್ನು ಉಳಿದಿರುವುದು 9 ದಿನಗಳು ಮಾತ್ರ

Upayuktha