ದೇಶ-ವಿದೇಶ ಪ್ರಮುಖ

ಮಹಾರಾಷ್ಟ್ರ: 154 ಶಾಸಕರ ಬೆಂಬಲದ ಪಟ್ಟಿ ಸಹಿತ ಅಫಿದವಿತ್ ಸಲ್ಲಿಸಲು ‘ಅಘಾಡಿ’ ನಿರ್ಧಾರ

ಮುಂಬಯಿ: ಮಹಾರಾಷ್ಟ್ರದಲ್ಲಿ ನೂತನವಾಗಿ ಹೊಸೆದುಕೊಂಡ ಶಿವಸೇನೆ-ಎನ್‌ಸಿಪಿ- ಕಾಂಗ್ರೆಸ್ ಮೈತ್ರಿಕೂಟ ತನಗೆ 154 ಶಾಸಕರ ಬೆಂಬಲವಿದೆ ಎಂದು ತೋರಿಸುವ ಅಫಿದವಿತ್ ಅನ್ನು ಸುಪ್ರೀಂ ಕೋರ್ಟಿಗೆ ಸಲ್ಲಿಸಲು ಮುಂದಾಗಿದೆ. ಮಹಾರಾಷ್ಟ್ರ ವಿಧಾನಸಭೆಯಲ್ಲಿ ಬಹುಮತವಿಲ್ಲದ ಬಿಜೆಪಿ ಮತ್ತು ಅಜಿತ್ ಪವಾರ್ ಕೂಟಕ್ಕೆ ಅಧಿಕಾರದಲ್ಲಿರಲು ಯಾವುದೇ ಹಕ್ಕಿಲ್ಲ ಎಂದು ಈ ಕೂಟ ವಾದಿಸಲಿದೆ.

ಶಿವಸೇನೆಯ 56 ಶಾಸಕರು, 44 ಮಂದಿ ಕಾಂಗ್ರೆಸ್‌ ಶಾಸಕರು ಮತ್ತು ಎನ್‌ಸಿಪಿಯ 46 ಶಾಸಕರು ಹಾಗೂ 8 ಮಂದಿ ಪಕ್ಷೇತರರು ದೇವೇಂದ್ರ ಫಡ್ನವಿಸ್ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ನೇಮಿಸಿರುವುದನ್ನು ಪ್ರಶ್ನಿಸಿ ಏಕರೂಪದ ಅಫಿದವಿತ್ ಸಲ್ಲಿಸಲಿದ್ದಾರೆ. ‘ಫಡ್ನವಿಸ್ ಅವರಿಗೆ ಬಹುಮತವಿಲ್ಲ ಎಂಬುದು ಖಚಿತವಾಗಿ ತಿಳಿದಿದ್ದರೂ ಅವರನ್ನು ಮುಖ್ಯಮಂತ್ರಿ ಹುದ್ದೆಗೆ ನೇಮಿಸಲಾಗಿದೆ’ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿಯೊಬ್ಬರು ಹೇಳಿದರು.

ಅಫಿದವಿತ್ ಸಲ್ಲಿಕೆಯಿಂದ ತಮ್ಮ ವಾದಕ್ಕೆ ಪುಷ್ಟಿ ದೊರೆತು ಫಡ್ನವಿಸ್‌ ಸರಕಾರ ಕೂಡಲೇ ಬಹುಮತ ಸಾಬೀತುಪಡಿಸಬೇಕೆಂದು ಕೋರ್ಟ್ ಆದೇಶಿಸಬಹುದು ಎಂದು ಮೈತ್ರಿಕೂಟದ ತಂತ್ರಗಾರರು ನಂಬಿದ್ದಾರೆ.

‘ಕೋರ್ಟಿಗೆ ಅಗತ್ಯವಿರುವ ಎಲ್ಲ ದಾಖಲೆಗಳನ್ನೂ ನಾವು ಸಲ್ಲಿಸುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಪೃಥ್ವಿರಾಜ್ ಚೌಹಾಣ್ ತಿಳಿಸಿದರು.

ಎನ್‌ಸಿಪಿಯ ನಿಜವಾದ ನಾಯಕ ತಾವೇ ಎಂದು ಅಜಿತ್ ಪವಾರ್ ಘೋಷಿಸಿದ್ದು, ಬಲಪ್ರದರ್ಶನಕ್ಕೆ ಸಿದ್ಧ ಎಂದು ಭಾನುವಾರ ಘೋಷಿಸಿದ್ದಾರೆ. ಅಲ್ಲದೆ ಸ್ಥಿರ ಸರಕಾರ ನೀಡಲು ಬಿಜೆಪಿ ಮತ್ತು ತಾವು ಬದ್ಧರಿದ್ದೇವೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಮಹಾರಾಷ್ಟ್ರದ ರಾಜಕೀಯ ಕದನ ಮಹತ್ವದ ಘಟ್ಟ ಪ್ರವೇಶಿಸಿದೆ.

ಎನ್‌ಸಿಪಿ ಶಾಸಕರು ಶರದ್ ಪವಾರ್ ಜತೆಗಿಲ್ಲ ಎಂಬುದನ್ನು ಬಿಜೆಪಿ ಮೂಲಗಳು ಬಲವಾದ ವಿಶ್ವಾಸದೊಂದಿಗೆ ಹೇಳುತ್ತಿವೆ.

ಸುಪ್ರೀಂ ಕೋರ್ಟ್‌ ನಿಗಾದಲ್ಲಿ ಬಲಪರೀಕ್ಷೆ ಅಗತ್ಯ:
ಕರ್ನಾಟಕ ಮತ್ತು ಉತ್ತರಾಖಂಡ ವಿಧಾನಸಭೆಗಳಲ್ಲಿ ಬಹುಮತ ಸಾಬೀತಿಗೆ ನಿಗದಿಪಡಿಸಿದಂತೆಯೇ ಮಹಾರಾಷ್ಟ್ರದಲ್ಲೂ ಸದನದಲ್ಲಿ ಬಲಪರೀಕ್ಷೆಗೆ ಸುಪ್ರೀಂ ಕೋರ್ಟ್ ಸೂಕ್ತ ಮಾರ್ಗಸೂಚಿಗಳನ್ನು ಪ್ರಕಟಿಸಬೇಕು ಎಂದು ಮಹಾರಾಷ್ಟ್ರ ವಿಕಾಸ್ ಅಘಾಡಿ ಆಗ್ರಹಿಸಿದೆ.

ಕರ್ನಾಟಕದಲ್ಲಿ ನಿರ್ದಿಷ್ಟ ಕಾಲಮಿತಿಯೊಳಗೆ ಬಹುಮತ ಸಾಬೀತುಪಡಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಉತ್ತರಾಖಂಡದಲ್ಲಿ ಮುಖ್ಯ ಕಾರ್ಯದರ್ಶಿ ಮತ್ತು ಡಿಜಿಪಿ ಉಸ್ತುವಾರಿಯಲ್ಲಿ ಸದನದ ಬಲಪರೀಕ್ಷೆ ನಡೆಯಬೇಕೆಂದು ಸೂಚಿಸಿತ್ತು. ಆದೇ ರೀತಿ ಮಹಾರಾಷ್ಟ್ರದಲ್ಲಿ ನೇರವಾಗಿ ಸುಪ್ರೀಂ ಕೋರ್ಟ್ ವಿಚಕ್ಷಣೆಯಲ್ಲೇ ಬಲಪರೀಕ್ಷೆ ನಡೆಯಬೇಕು ಎಂದು ಅಘಾಡಿ ಆಗ್ರಹಿಸುತ್ತದೆ ಎಂದು ಚೌಹಾಣ್ ತಿಳಿಸಿದರು.

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ವಿಜಯ ದಶಮಿಯ ಶುಭದಿನದಂದು ಭಾರತೀಯ ವಾಯುಪಡೆ ಬತ್ತಳಿಕೆ ಸೇರಿದ ರಫೇಲ್‌ ಯುದ್ಧ ವಿಮಾನ

Upayuktha

ಕೋಸ್ಟಲ್‌ವುಡ್‌: ತುಳುನಾಡಿನ ಸಂಸ್ಕೃತಿ ಬಿಂಬಿಸುವ ‘ಪಿಂಗಾರ’ ಶೀಘ್ರ ತೆರೆಗೆ

Upayuktha

ಅಯ್ಯಪ್ಪ ಧರ್ಮ ಪ್ರಚಾರ ರಥ ಯಾತ್ರೆಗೆ ಚಾಲನೆ

Upayuktha