
ಮುಂಬಯಿ: ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಅವರು ಠಾಕ್ರೆ ಕುಟುಂಬದ ಮೊದಲ ಮುಖ್ಯಮಂತ್ರಿಯಾಗಿ ಡಿಸೆಂಬರ್ 1ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಶಿವಸೇನೆ-ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷ-ಕಾಂಗ್ರೆಸ್ ಮೈತ್ರಿಕೂಟ (ಮಹಾರಾಷ್ಟ್ರ ವಿಕಾಸ್ ಅಘಾಡಿ) ಸರಕಾರದ ನಾಯಕತ್ವ ವಹಿಸಿಕೊಳ್ಳಲಿದ್ದಾರೆ.
1966ರಲ್ಲಿ ಬಾಳಾ ಸಾಹೇಬ್ ಠಾಕ್ರೆ ಅವರಿಂದ ಸ್ಥಾಪನೆಯಾದ ಪ್ರಾದೇಶಿಕ ಪಕ್ಷವಾದ ಶಿವಸೇನೆ ಇದೇ ಮೊದಲ ಬಾರಿಗೆ ಕಾಂಗ್ರೆಸ್ ಮತ್ತು ಎನ್ಸಿಪಿ ಜತೆ ಕೈಜೋಡಿಸುತ್ತಿದೆ.
ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ 6 ತಿಂಗಳೊಳಗೆ ಉದ್ಧವ್ ಠಾಕ್ರೆ ವಿಧಾನಸಭೆ ಅಥವಾ ವಿಧಾನ ಪರಿಷತ್ತಿನ ಸದಸ್ಯರಾಗಿ ಆಯ್ಕೆಯಾಗಬೇಕಾಗುತ್ತದೆ.
ಉದ್ಧವ್ ಠಾಕ್ರೆ ಇದುವರೆಗೆ ಯಾವತ್ತೂ ಚುನಾವಣೆ ಎದುರಿಸಿದವರೇ ಅಲ್ಲ. ರಾಜ್ಯ ವಿಧಾನ ಮಂಡಲದ ಯಾವ ಸದನದ ಸದಸ್ಯರೂ ಆಗಿರಲಿಲ್ಲ.
ಅವರ ಪುತ್ರ ಆದಿತ್ ಠಾಕ್ರೆ ಇದೇ ಮೊದಲ ಬಾರಿ ಚುನಾವಣೆ ಎದುರಿಸಿ ವರ್ಲಿ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.
ಉದ್ಧವ್ ಠಾಕ್ರೆ ವಿಧಾನಸಭೆಗೆ ಸ್ಪರ್ಧಿಸಲು ಬಯಸಿದರೆ ಶಿವಸೇನೆಯ ಯಾರಾದರೊಬ್ಬರು ಶಾಸಕರು ರಾಜೀನಾಮೆ ನೀಡಬೇಕಾಗುತ್ತದೆ. ಬಹುಶಃ ಅವರ ಪುತ್ರ ಆದಿತ್ಯ ಠಾಕ್ರೆ ಅವರೇ ವರ್ಲಿ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ತಂದೆಯ ಚುನಾವಣೆಗೆ ಹಾದಿ ಸುಗಮಗೊಳಿಸುವ ಸಾಧ್ಯತೆಯಿದೆ.
ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನಗಳನ್ನು ಗೆದ್ದ ಬಿಜೆಪಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಚುನಾವಣಾ ಪೂರ್ವದ ಮಿತ್ರಪಕ್ಷ ಶಿವಸೇನೆ 56 ಸ್ಥಾನಗಳನ್ನು ಎನ್ಸಿಪಿ 54 ಹಾಗೂ ಕಾಂಗ್ರೆಸ್ 44 ಸ್ಥಾನಗಳನ್ನು ಗೆದ್ದಿದ್ದವು. ಮಹಾರಾಷ್ಟ್ರ ವಿಧಾನಸಭೆಯ ಒಟ್ಟು ಸದಸ್ಯರ ಸಂಖ್ಯೆ 288. ಬಹುಮತಕ್ಕೆ 144 ಸ್ಥಾನಗಳು ಬೇಕಾಗುತ್ತವೆ.
ಉದ್ಧವ್ ಠಾಕ್ರೆ 1960ರ ಜುಲೈ 27ರಂದು ಜನಿಸಿದ್ದರು. 2012ರಲ್ಲಿ ಅವರ ತಂದೆ ಬಾಳಾ ಸಾಹೇಬ್ ಠಾಕ್ರೆ ನಿಧನರಾದ ಬಳಿಕ ಪಕ್ಷದ ಚುಕ್ಕಾಣಿಯನ್ನು ಉದ್ಧವ್ ಠಾಕ್ರೆ ವಹಿಸಿಕೊಂಡರು.
ಶಿವಸೇನೆಯ ಮುಖವಾಣಿ ಸಾಮ್ನಾದ ಆಡಳಿತ ನಿರ್ವಹಣೆ ನೋಡಿಕೊಳ್ಳುತ್ತ ತಮ್ಮ ರಾಜಕೀಯ ಜೀವನ ಆರಂಭಿಸಿದ ಉದ್ಧವ್ ಠಾಕ್ರೆ ಇದೀಗ ಮೊದಲ ಬಾರಿಗೆ ಮುಖ್ಯಮಂತ್ರಿ ಗಾದಿಗೆ ಏರುತ್ತಿದ್ದಾರೆ.
1999ರಲ್ಲಿ ಶಿವಸೇನೆಯ ಮುಖ್ಯಮಂತ್ರಿಯಾಗಿದ್ದ ನಾರಾಯಣ ರಾಣೆ ಅವರ ಕಾರ್ಯಶೈಲಿಯನ್ನು ಉದ್ಧವ್ ಠಾಕ್ರೆ ಬಹಿರಂಗವಾಗಿಯೇ ಟೀಕಿಸುತ್ತಿದ್ದರು. ಪರಿಣಾಮವಾಗಿ ರಾಣೆ ರಾಜೀನಾಮೆ ನೀಡಿದರು. ಬಳಿಕ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು.
2002ರಲ್ಲಿ ಬೃಹನ್ಮುಂಬಯಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಶಿವಸೇನೆಗೆ ಭರ್ಜರಿ ಜಯ ತಂದುಕೊಟ್ಟಿದ್ದರು.
2003ರಲ್ಲಿ ಪಕ್ಷದ ಕಾರ್ಯಾಧ್ಯಕ್ಷರಾಗಿ ನೇಮಕಗೊಂಡರು. 2006ರಲ್ಲಿ ಉದ್ಧವ್ ಠಾಕ್ರೆ ಮತ್ತು ಭಾವ ರಾಜ್ ಠಾಕ್ರೆ ನಡುವೆ ಭಿನ್ನಮತ ಉಲ್ಬಣಿಸಿತು. ಬಳಿಕ ರಾಜ್ ಠಾಕ್ರೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಎಂಬ ಹೊಸ ಪಕ್ಷ ಸ್ಥಾಪಿಸಿದರು.
ಉದ್ಧವ್ ಠಾಕ್ರೆಯ ಪುತ್ರ ಆದಿತ್ಯ ಠಾಕ್ರೆ ಈಗ ಯುವ ಸೇನೆಯ ಅಧ್ಯಕ್ಷರಾಗಿದ್ದಾರೆ.
(ಉಪಯುಕ್ತ ನ್ಯೂಸ್ ಸುದ್ದಿಜಾಲ)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ