
ಮಂಗಳೂರು:
ಎರಡು ದಿನಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಮೊಬೈಲ್ ಇಂಟರ್ನೆಟ್ ಸಂಪರ್ಕವನ್ನು ಕಡಿತಗೊಳಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೂಲಕ ಅನಗತ್ಯ ವದಂತಿಗಳ ಹರಡುವಿಕೆಗೆ ತಡೆ ಬಿದ್ದಿದೆ.
ಎರಡು ದಿನಗಳಿಂದ ನಗರದ ಜನಜೀವನ ಸ್ತಬ್ಧವಾಗಿದ್ದು, ಅಲ್ಲೊಂದು ಇಲ್ಲೊಂದು ಖಾಸಗಿ ವಾಹನಗಳ ಸಂಚಾರ ಬಿಟ್ಟರೆ ಸಾರ್ವಜನಿಕ ಸಾರಿಗೆ ವ್ಯವಸ್ಥೆ ಸಂಪೂರ್ಣ ಸ್ಥಗಿತಗೊಂಡಿದೆ. ನಗರದೊಳಗೆ ಯಾವುದೇ ಬಸ್ ಸಂಚರಿಸುತ್ತಿಲ್ಲ. ದೂರದ ಊರುಗಳಿಗೆ ತೆರಳುವ ಮತ್ತು ಆಗಮಿಸುವ ಬಸ್ಗಳೂ ಸಂಚಾರ ಸ್ಥಗಿತಗೊಳಿಸಿವೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾತ್ರ ಯಾವುದೇ ತೊಡಕಿಲ್ಲದೆ ವಾಹನಗಳು ಸಂಚರಿಸುತ್ತಿವೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಹಾಗೂ ಹಂಪನಕಟ್ಟೆ ನಡುವೆ ನಡೆದ ಪ್ರತಿಭಟನೆಗಳಲ್ಲಿ ದುಷ್ಕರ್ಮಿಗಳ ಪೊಲೀಸರತ್ತ ಕಲ್ಲು ಹಾಗೂ ಬಾಟಲಿಗಳನ್ನು ತೂರಿದಾಗ ಹಿಂಸಾಚಾರ ಆರಂಭವಾಗಿತ್ತು. ಕೆಲವು ನಾಯಕರ ಪ್ರಚೋದನಕಾರಿ ಹೆಳಿಕೆಗಳಿಂದಾಗಿ ಹಿಂಸಾತ್ಮಕ ಪ್ರತಿಭಟನೆಗಳ ಸುಳಿವು ಮೊದಲೇ ದೊರೆತ ಹಿನ್ನೆಲೆಯಲ್ಲಿ ಮೊನ್ನೆಯಿಂದಲೇ ನಿಷೇಧಾಜ್ಞೆ ಜಾರಿಯಲ್ಲಿತ್ತು.
ಹಾಗಿದ್ದರೂ ಪ್ರತಿಭಟನಾಕಾರರು ಜಮಾಯಿಸಿ ಎಚ್ಚರಿಕೆ ನೀಡಿದ ಪೊಲೀಸರ ಮೇಲೆಯೇ ಕಲ್ಲು-ಬಾಟಲಿಗಳನ್ನು ತೂರಿದಾಗ ಆತ್ಮರಕ್ಷಣೆಗಾಗಿ ಗುಂಡು ಹಾರಿಸಬೇಕಾಯಿತು. ಈ ಸಂದರ್ಭ ಇಬ್ಬರು ಪ್ರತಿಭಟನೆಕಾರರು ಗಂಭೀರ ಗಾಯಗೊಂಡು ಮೃತಪಟ್ಟಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಸ್ತುತ ಪರಿಸ್ಥಿತಿ ಶಾಂತವಾಗಿದ್ದು, ಕರ್ಫ್ಯೂ ಸಡಿಲಿಕೆಯ ಬಗ್ಗೆ ಪೊಲೀಸ್ ಮತ್ತು ಜಿಲ್ಲಾಡಳಿತ ನಿರ್ಧಾರ ಕೈಗೊಳ್ಳಲಿದೆ. ಇಂದು ಅಪರಾಹ್ನ ನಗರ ಪೊಲೀಸ್ ಆಯಕ್ತರು ನಡೆಸುವ ಸುದ್ದಿಗೋಷ್ಠಿಯಲ್ಲಿ ಇನ್ನೊಂದು ಸುತ್ತಿನ ಕರ್ಫ್ಯೂ ಸಡಿಲಿಕೆ ಸೇರಿದಂತೆ ಮಹತ್ವದ ಮಾಹಿತಿಗಳನ್ನು ನಿರೀಕ್ಷಿಸಲಾಗಿದೆ.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ