ಇತರ ಕ್ರೀಡೆಗಳು ಜಿಲ್ಲಾ ಸುದ್ದಿಗಳು

ಗುರಿ ಸಾಧಿಸಿದ ಅನಿಲ್ ಶೇಟ್; 7 ವರ್ಷದಲ್ಲಿ 1 ಲಕ್ಷ ಕಿ.ಮೀ ಸೈಕ್ಲಿಂಗ್ ನಡೆಸಿದ ಮಂಗಳೂರಿನ ಸೈಕ್ಲಿಸ್ಟ್‌

ಮಂಗಳೂರು: ಕಳೆದ 7 ವರ್ಷಗಳಿಂದ ಸತತವಾಗಿ ಸೈಕ್ಲಿಂಗ್ ನಡೆಸುತ್ತಿರುವ ಮಂಗಳೂರಿನ ಸೈಕ್ಲಿಸ್ಟ್‌ ಅನಿಲ್ ಶೇಟ್‌ ಅವರು ತಮ್ಮ 1 ಲಕ್ಷ ಕಿ.ಮೀ ಪಯಣದ ಗುರಿಯನ್ನು ಸಾಧಿಸಿ ದಾಖಲೆ ಮಾಡಿದ್ದಾರೆ.

ಈ ಸಂತಸವನ್ನು ಮಾಧ್ಯಮದ ಜತೆ ಹಂಚಿಕೊಂಡಿರುವ ಅವರು, 2014ರ ಜನವರಿ 15ರಂದು ತಾವು ಮೊದಲ ಸೈಕಲ್‌ ಖರೀದಿಸಿದ್ದಾಗಿ ನೆನಪಿಸಿಕೊಂಡರು.

ಮುಂದೇನಾಯ್ತು ಅಂತ ಅವರೇ ಹೇಳುತ್ತಾರೆ. ಓವರ್ ಟು ಅನಿಲ್ ಶೇಟ್‌-

ಮರುದಿನದಿಂದಲೇ ಮೊದಲ ಸೈಕಲ್ ಸವಾರಿಗೆ ಸಿದ್ಧನಾಗಿದ್ದೆ. ಬೆಳಗ್ಗೆ 5:30ಕ್ಕೆ ತನ್ನ ಜತೆ ಸೇರಿಕೊಳ್ಳುವಂತೆ ಸೈಕ್ಲಿಸ್ಟ್ ಮಿತ್ರ ಶಬರಿ ಹೇಳಿದ್ದ. ನಾನು ಅತ್ಯುತ್ಸಾಹದಿಂದ 5:15ಕ್ಕೇ ನಿಗದಿತ ಜಾಗ ತಲುಪಿದ್ದೆ. ಅಂದು 6 ಕಿ.ಮೀ ಹಾಗೂ ಪ್ರತಿ ವಾರ 20 ಕಿ.ಮೀ ಸೈಕ್ಲಿಂಗ್ ನಡೆಸಲು ಉದ್ದೇಶಿಸಿದ್ದೆ. ಆದರೆ ನನ್ನ ಮೊದಲ ಸವಾರಿಯಲ್ಲೇ 20 ಕಿ.ಮೀ ಪೂರೈಸುವಂತೆ ನನ್ನ ಸ್ನೇಹಿತ ಮಾಡಿಬಿಟ್ಟಿದ್ದ. ಆದರೆ ಅಷ್ಟು ಹೊತ್ತಿಗೆ ನಾನು ಸಂಪೂರ್ಣ ಸುಸ್ತಾಗಿ ಹೋಗಿದ್ದೆ. ರಾತ್ರಿ ಜ್ವರ ಕೂಡ ಬಂದಿತ್ತು. ಹಾಗಿದ್ದರೂ ಮರುದಿನ ಬೆಳಗ್ಗೆ ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಿದ್ದೆ.

ಕೆಲವೇ ದಿನಗಳಲ್ಲಿ ಮೈಕೈ ನೋವು ಕಡಿಮೆಯಾಯಿತು. ಸೈಕ್ಲಿಂಗ್ ದಿನ ನಿತ್ಯದ ಅಭ್ಯಾಸವಾಯಿತು. 10 ದಿನಗಳಲ್ಲಿ ನಾನು 50 ಕಿ.ಮೀ ಪಯಣ ಪೂರೈಸಿದ್ದೆ. ಅನಂತರ ಸೈಕ್ಲಿಂಗ್ ನಿರಂತರವಾಗಿ ಮುಂದುವರಿಯಿತು.

ನನ್ನ ರಕ್ತದೊತ್ತಡ ಮತ್ತು ಗಡಿರೇಖೆಯ ಮಧುಮೇಹವನ್ನು ಮಣಿಸಲು ನಾನು ಈ ಬೈಸಿಕಲ್ ಖರೀದಿಸಿದ್ದೆ. ಆ ಸಂದರ್ಭದಲ್ಲಿಸೈಕ್ಲಿಂಗ್ ನನಗೆ ಅತ್ಯಂತ ಪ್ರಿಯವೇನೂ ಆಗಿರಲಿಲ್ಲ. ಆದರೆ ಅಭ್ಯಾಸ ಮುಂದುವರಿಯುತ್ತಾ ನನಗೆ ಪ್ರಿಯವಾದ ಹವ್ಯಾಸವಾಯಿತು.

ಔಷಧಿಗೆ ಹಣ ಸುರಿಯುವ ಬದಲು ಸೈಕಲ್ ಖರೀದಿಸಿ ಸೈಕ್ಲಿಂಗ್ ಮಾಡಿ ಎಂದು ವೃತ್ತಿಯಲ್ಲಿ ದಂತವೈದ್ಯರಾದ ನನ್ನ ಪತ್ನಿ ಡಾ. ರಮ್ಯಾ ಹೇಳಿದ ಮಾತನ್ನು ಪಾಲಿಸಿದೆ. ಪ್ರತಿಯೊಬ್ಬ ಯಶಸ್ವಿ ಪುರುಷನ ಹಿಂದೆ ಒಬ್ಬ ಮಹಿಳೆ ಇದ್ದಾಳೆ ಎಂಬ ಮಾತಿನಂತೆ ನನ್ನ ಸೈಕ್ಲಿಂಗ್ ಯಶಸ್ಸಿನ ಹಿಂದೆ ನನ್ನ ಪತ್ನಿಯ ಪಾತ್ರವಿದೆ. ಸೈಕ್ಲಿಂಗ್ ನನಗೆ ಪ್ರಿಯವಾಯಿತು. ಸೈಕ್ಲಿಂಗ್ ಮಾಡಿದ 6 ತಿಂಗಳೊಳಗೆ ನನ್ನ ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬಂದಿತು.

ತಿನ್ನುವುದು ನನಗೆ ಬಲು ಪ್ರಿಯವಾದ ಸಂಗತಿ. ಹಾಗಾಗಿ ತೂಕವೂ ಜಾಸ್ತಿಯಾಗಿತ್ತು. ಆದರೆ ಈಗ ಸೈಕ್ಲಿಂಗ್ ಹವ್ಯಾಸ ಶುರುವಾದಂದಿನಿಂದ 22 ಕೆ.ಜಿ ತೂಕ ಇಳಿಸಿಕೊಂಡೆ. ಇದರಿಂದಾಗಿ ನನ್ನ ಇಷ್ಟದಂತೆ ತಿನ್ನುವ ಸ್ವಾತಂತ್ರ್ಯವೂ ಬಂತು.

ನಿಯಮಿತವಾದ ಬೆಳಗಿನ ಸವಾರಿಗಳು ಮತ್ತು ವಾರಾಂತ್ಯದ ದೀರ್ಘ ಸವಾರಿಗಳನ್ನು ಅಭ್ಯಾಸ ಮಾಡಿಸಿ ಮಂಗಳೂರು ಸೈಕ್ಲಿಂಗ್ ಕ್ಲಬ್‌ಗೆ (ಎಂಎಸಿಸಿ) ಸೇರುವಂತೆ ಮಾಡಿದ ಸ್ನೇಹಿತ ಗಾಡ್‌ಫ್ರೇ ಪಿಂಟೋ ಅವರಿಗೆ ಧನ್ಯವಾದ ಹೇಳಲೇಬೇಕು. 40,000 ಕಿ.ಮೀಗೂ ಹೆಚ್ಚು ದೂರ ನನ್ನೊಂದಿಗೆ ಸೈಕ್ಲಿಂಗ್ ನಡೆಸಿ ಸಾಥ್ ನೀಡಿದ ಭವೀಶ್ ಮತ್ತು ಸೈಕಲ್ ಕ್ಲಬ್‌ನ ಎಲ್ಲ ಚಟುವಟಿಕೆಗಳಲ್ಲಿ ನನ್ನನ್ನು ಬೆಂಬಲಿಸಿದ ಧೀರಜ್ ಹೆಜಮಾಡಿ ಅವರಿಗೂ ನಾನು ಆಭಾರಿ.

2019ರ ಫೆಬ್ರವರಿಯಲ್ಲಿ ಶಾಮ್‌ಲಾಲ್ ಅವರ ಜತೆಗೆ 750 ಕಿ.ಮೀ ದೂರದ ಕನ್ಯಾಕುಮಾರಿ ಯಾತ್ರೆ ಮತ್ತು ಅಲ್ಲಿಂದ ಹಿಂದಿರುಗಿದ ಅನುಭವ ಅದ್ಭುತವಾಗಿತ್ತು.

ಶಿವಾನಂದ ರಾವ್ ಅವರ ಜತೆಗೆ ನಾನ್‌ ಸ್ಟಾಪ್‌ 600 ಕಿ.ಮೀ ದೂರದ ಸೈಕಲ್ ಸವಾರಿಯನ್ನು 33 ಗಂಟೆಗಳಲ್ಲಿ ಪೂರ್ಣಗೊಳಿಸಿದ್ದು ಇನ್ನೊಂದು ಸುಂದರ ಅನುಭವ. ಅದನ್ನು ಪೂರ್ಣಗೊಳಿಸಿದಾಗ ನಾನು (ಫೆ.2018) ಸೂಪರ್ ರಾಂಡೆನ್ಯೂರ್ ಆಗಿದ್ದೆ.

ನಾನು ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್‌ ಪದವಿ ಪಡೆದಿದ್ದೇನೆ. ನಂತರ ಡೆವಲಪರ್ ಆಗಿ ನನ್ನ ಸ್ವಂತ ವ್ಯವಹಾರವನ್ನು ಆರಂಭಿಸಿದೆ. ಬೀಟಲ್ ಡೆವಲಪರ್ಸ್‌ ಬ್ಯಾನರ್ ಅಡಿಯಲ್ಲಿ ನಾನು ಹಲವಾರು ಯೋಜನೆಗಳನ್ನು ಪೂರ್ಣಗೊಳಿಸಿದ್ದೇನೆ. ಪ್ರಸ್ತುತ ನಾನು ಬಿಟಲ್ ಸಾನ್ವಿ ಹೆಸರಿನ ಮತ್ತೊಂದು ಯೋಜನೆಯಲ್ಲಿ ತೊಡಗಿಕೊಂಡಿದ್ದೇನೆ.

ಆರಂಭದಲ್ಲಿ, ಅಂದರೆ 2014ರಲ್ಲಿ MACC ಬೆಳಗಿನ ಸವಾರಿಯ ಪ್ರತಿದಿನದ ಯಾತ್ರೆಯ ಗುರಿ 20 ಕಿ.ಮೀ ಆಗಿತ್ತು. ಮತ್ತು ವಾರಾಂತ್ಯದಲ್ಲಿ 50 ಕಿ.ಮೀ ಸೈಕ್ಲಿಂಗ್ ನಡೆಸುವ ಗುರಿ ಇಟ್ಟುಕೊಳ್ಳಲಾಗಿತ್ತು.

2015ರಲ್ಲಿ ದೈನಂದಿನ ಯಾತ್ರೆಯ ಗುರಿಯನ್ನು 25 ಕಿ.ಮೀಗೆ ಹಾಗೂ 2017ರಲ್ಲಿ 30 ಕಿ.ಮೀಗೆ ಹೆಚ್ಚಿಸಲಾಯಿತು. 2018ರಲ್ಲಿ 40 ಕಿ.ಮೀ ಹಾಗೂ 2020ರಲ್ಲಿ ದೈನಂದಿನ ಸೈಕ್ಲಿಂಗ್ ಗುರಿಯನ್ನು 50 ಕಿ.ಮೀಗೆ ಹೆಚ್ಚಿಸಲಾಯಿತು. ಕಳೆದ ಕೆಲವು ವಾರಗಳಿಂದ ಪ್ರತಿದಿನ 100 ಕಿ.ಮೀ ಅಥವಾ 4 ಗಂಟೆಗಳ ಸೈಕ್ಲಿಂಗ್ ಗುರಿ ನಿಗದಿಯಾಗಿತ್ತು.

ನಾನು ಸೈಕಲ್ ಖರೀದಿಸಿದಾಗ 1 ಲಕ್ಷ ಕಿ.ಮೀ ಗುರಿಯನ್ನು ಸಾಧಿಸಬಹುದು ಎಂದು ಭಾವಿಸಿರಲಿಲ್ಲ. 2016ರಲ್ಲಿ 20,000 ಕಿ.ಮೀ ಗುರಿಯನ್ನು ಸಾಧಿಸಿದಾಗಲೂ ಇದು ಕನಸಿನ ಮಾತಾಗಿತ್ತು. 2018ರಲ್ಲಿ 50,000 ಕಿ.ಮೀ, 2019ರಲ್ಲಿ 75,000 ಕಿ.ಮೀ ಸೈಕಲ್ ಯಾತ್ರೆ ಪೂರ್ಣಗೊಳಿಸಿದೆ. ನಂತರದ 25,000 ಕಿ.ಮೀ ಸೈಕ್ಲಿಂಗ್ ಗುರಿಯನ್ನು ಇಷ್ಟು ಬೇಗ ಸಾಧಿಸುತ್ತೇನೆ ಎಂದು ನಾನು ಅಂದುಕೊಂಡಿರಲಿಲ್ಲ

ಇನ್ನು ಮುಂದಕ್ಕೆ, ಪ್ರತಿದಿನ 20ರಿಂದ 30 ಕಿ.ಮೀ ದೂರದ ಆರಾಮದಾಯಕ ಯಾತ್ರೆಯನ್ನು ಮಾಡಿಕೊಂಡು ಇನ್ನಷ್ಟು ಯುವಕರಿಗೆ ಸೈಕ್ಲಿಂಗ್ ಬಗ್ಗೆ ಮಾರ್ಗದರ್ಶನ ಮಾಡುವ ಯೋಚನೆ ಹೊಂದಿದ್ದೇನೆ.

ನನ್ನ ಮೊದಲ ಸೈಕಲ್‌ ಮೆರಿಡಾ ಮಟ್ಟಾ 20 ಅನ್ನು ಸುಮಾರು 30,000 ರೂ.ಗೆ ಖರೀದಿಸಿದೆ. ಕೇವಲ ಒಂದು ಸೈಕಲ್‌ಗಾಗಿ ಇಷ್ಟು ಹಣ ಖರ್ಚು ಮಾಡುವ ಬಗ್ಗೆ ನನ್ನ ತಾಯಿ ಏನು ಹೇಳುತ್ತಾರೋ ಅಂತ ಚಿಂತಿಸಿದ್ದೆ. ಆದರೆ ನಂತರ ಇದರ ಮಹತ್ವ ಅವರಿಗೆ ಅರಿವಾಯಿತು. ಒಂದೂವರೆ ವರ್ಷದ ಬಳಿಕ 75,000 ರೂ ಖರ್ಚು ಮಾಡಿ ಮೆರಿಡಾ ಮಟ್ಟಾ 300 ಅನ್ನು ನಾನು ಖರೀದಿಸಿದಾಗ ತಾಯಿ ಆಕ್ಷೇಪಿಸದೆ ಸಂತೋಷಪಟ್ಟರು. ಅದನ್ನು ನಾನು 3 ವರ್ಷಗಳ ಕಾಲ ಬಳಸಿದೆ.

ಕೆಲವು ಬಾರಿ ನಾನು ಸೈಕ್ಲಿಂಗ್ ಮಗಿಸಿ ಮನೆಗೆ ಬಂದಾಗ ತಾಯಿ, ‘ಇದು ಹಳೆಯದಾಯಿತು. ನೀನು ಹೊಸ ಬೈಸಿಕಲ್ ತಗೋ’ ಎಂದು ಹೇಳುತ್ತಿದ್ದರು. ಅನಂತರ 1.5 ಲಕ್ಷ ರೂ ಎಂಆರ್‌ಪಿ ಬೆಲೆಗೆ ಒಂದು ಫುಲ್ ಕಾರ್ಬನ್‌ ಮೆರಿಡಾ ರೈಡ್‌- 5000 ಅನ್ನು ಖರೀದಿಸಿದೆ. ತಾಜ್‌ ಸೈಕಲ್ಸ್‌ನ ಮುಬೀನ್ ಅವರು ನನ್ನ ಎಲ್ಲಾ ಖರೀದಿಗಳಿಗೆ ಉತ್ತಮ ರಿಯಾಯಿತಿ ನೀಡುತ್ತಿದ್ದರು. ಅಲ್ಲದೆ ಸೈಕಲ್‌ ರಿಪೇರಿಗೆ ಬಂದಾಗ ಆದ್ಯತೆಯ ಮೇರೆಗೆ ದುರಸ್ತಿ ಮಾಡಿ ಕೊಡುತ್ತಿದ್ದರು. ಅವರಿಗೂ ನಾನು ಆಭಾರಿ.

ನಾನು ಅನೇಕ ಹೊಸ ಸೈಕ್ಲಿಸ್ಟ್‌ಗಳ ಜತೆ ಸವಾರಿ ಮಾಡಿದ್ದೇನೆ. ಅವರಿಗೆ ಮಾರ್ಗದರ್ಶನವನ್ನೂ ನೀಡಿದ್ದೇನೆ. 100 ಕಿ.ಮೀ ದೂರದ ಸವಾರಿಗೆ ಅವರು ಅರ್ಹರು ಎಂದು ಅನಿಸಿದರೆ ಅವರ ಜತೆಗೆ ಅವರದೇ ವೇಗದಲ್ಲಿ 100 ಕಿ.ಮೀ ಸೈಕ್ಲಿಂಗ್ ಮಾಡುತ್ತಿದ್ದೆ. ಡಾ. ಜಿ.ಕೆ ಹೆಬ್ಬಾರ್ ಅವರು ತಮ್ಮ 60ನೇ ವಯಸ್ಸಿನಲ್ಲಿ 100 ಕಿ.ಮೀ ದೂರದ ಮೊದಲ ಸವಾರಿ ನಡೆಸಿದರು. ಅವರಿಗೆ ನಾನು ಸಾಥ್ ನೀಡಿದ್ದೆ. 60ಕ್ಕೆ 100 ಎಂಬುದು ಆ ಸವಾರಿಯ ಥೀಮ್ ಆಗಿತ್ತು.

******
ಅನಿಲ್ ಶೇಟ್ ಸೈಕಲ್‌ ಯಾತ್ರೆ ವಿವರ:

2014ರಲ್ಲಿ 7353 ಕಿ.ಮೀ,,
2015ರಲ್ಲಿ 10707 km,
2016ರಲ್ಲಿ 12129 km,
2017ರಲ್ಲಿ 13897 km,
2018ರಲ್ಲಿ 14731 km,
2019ರಲ್ಲಿ 16732 km,
2020ರಲ್ಲಿ 18487 km,
2021ರಲ್ಲಿ 5960 km.

********
ಅನಿಲ್ ಶೇಟ್ ಅವರು 1 ಲಕ್ಷ ಕಿ.ಮೀ ಸೈಕ್ಲಿಂಗ್ ಸವಾರಿ ಪೂರ್ಣಗೊಳಿಸಿದ ಸಂಭ್ರಮ ಆಚರಿಸಿಕೊಳ್ಳಲು ಮಂಗಳೂರಿನ ಸೈಕಲ್ ಸವಾರರ ಕ್ಲಬ್‌ ಲಾಲ್‌ಬಾಗ್‌ನಿಂದ ತಣ್ಣೀರುಬಾವಿ ವರೆಗೆ ಹಾಗೂ ಹಿಂದಿರುಗಿ ಜಿಂಜರ್‌ ಹೋಟೆಲ್‌ಗೆ ಸವಾರಿ ನಡೆಸಿದರು. ಜಿಂಜರ್ ಹೋಟೆಲ್‌ನಲ್ಲಿ ಕೇಕ್ ಕತ್ತರಿಸಿ, ಬೆಳಗಿನ ಉಪಾಹಾರ ಪೂರೈಸಿ ಸಂಭ್ರಮ ಆಚರಿಸಲಾಯಿತು. ಈ ಸಂಭ್ರಮದಲ್ಲಿ ಅನಿಲ್ ಶೇಟ್ ಅವರ ಸುಮಾರು 45 ಮಂದಿ ಸ್ನೇಹಿತರು ಭಾಗವಹಿಸಿದ್ದರು. ಅನಿಲ್ ಶೇಟ್ ಅವರು ಇನ್ನಷ್ಟು ದೀರ್ಘ ಕಾಲ ಸೈಕಲ್ ಸವಾರಿಯ ಮೋಜನ್ನು ಅನುಭವಿಸುತ್ತ ಆರೋಗ್ಯವಾಗಿರಲಿ ಎಂದು ಮಿತ್ರರೆಲ್ಲ ಹಾರೈಸಿದರು.

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

Related posts

ಕೊರೊನಾ ಅಪ್ ಡೇಟ್: ದ.ಕ.- 79, ಉಡುಪಿ- 7, ಕರ್ನಾಟಕ- 317

Upayuktha

ರಾಜ್ಯ ಸರಕಾರಿ ನೌಕರರ ಜಿಲ್ಲಾ ಮಟ್ಟದ ಬ್ಯಾಡ್ಮಿಂಟನ್ ಸ್ಪರ್ಧೆ

Upayuktha

ಕಲಬುರಗಿ: ಮಾಧವ ಗೋಶಾಲೆಗೆ ಎಂಬಿಎ, ಎಂಟೆಕ್ ವಿದ್ಯಾರ್ಥಿಗಳು, ಪ್ರಾಧ್ಯಾಪಕರ ಅಧ್ಯಯನ ಭೇಟಿ

Upayuktha