ಪ್ರಮುಖ ರಾಜ್ಯ

ಕಾಶ್ಮೀರಿ ಪಂಡಿತರು ತಮ್ಮ ಮೂಲ ನೆಲೆಗೆ ಮರಳುವುದನ್ನು ವಿಶ್ವದ ಯಾವುದೇ ಶಕ್ತಿ ತಡೆಯಲಾಗದು: ರಾಜನಾಥ್ ಸಿಂಗ್‌

ಮಂಗಳೂರಿನಲ್ಲಿ ಸಿಎಎ ಪರ ಬೃಹತ್ ಸಮಾವೇಶ


ಕರ್ನಾಟಕ ಬಿಜೆಪಿ ವತಿಯಿಂದ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಜನಜಾಗೃತಿ ಸಮಾವೇಶ
ಕರಾವಳಿ ನಗರಿಯಲ್ಲಿ ಹರಿದು ಬಂದ ಜನಸಾಗರ, ಎಲ್ಲೆಲ್ಲೂ ರಾರಾಜಿಸಿದ ಕೇಸರಿ ಬಾವುಟ

ಮಂಗಳೂರು: ಕಾಶ್ಮೀರಿ ಪಂಡಿತರು ತಮ್ಮ ತಾಯ್ನಾಡಿಗೆ ಮರಳಿಗೆ ಅಲ್ಲಿ ನೆಲೆಸುವುದನ್ನು ತಡೆಯಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾರಿದರು.

370ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರವನ್ನು ಪುನಾರಚನೆ ಮಾಡಿದ ಬಿಜೆಪಿ ಸರಕಾರದ ಕ್ರಮವನ್ನು ಅವರು ಬಲವಾಗಿ ಸಮರ್ಥಿಸಿಕೊಂಡರು.

ಪೌರತ್ವ ತಿದ್ದುಪಡಿ ಕಾಯ್ದೆ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕುರಿತು ಕರ್ನಾಟಕ ರಾಜ್ಯ ಬಿಜೆಪಿ ಘಟಕ ಮಂಗಳೂರಿನಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಜನಜಾಗೃತಿ ಸಮಾವೇಶದಲ್ಲಿ ರಕ್ಷಣಾ ಸಚಿವರು ಮಾತನಾಡಿದರು.

ಪಾಕಿಸ್ತಾನಕ್ಕೂ ಕಟುವಾದ ಎಚ್ಚರಿಕೆ ನೀಡಿದ ಅವರು, ಭಾರತವನ್ನು ಮತ್ತು ಭಾರತೀಯರನ್ನು ಘಾಸಿಗೊಳಿಸಲು ಯತ್ನಿಸಿದರೆ ಅಂಥವರನ್ನು ಶಾಂತಿಯಿಂದ ಬದುಕಲು ಬಿಡುವುದಿಲ್ಲ ಎಂದು ರಾಜನಾಥ್ ಸಿಂಗ್ ಗುಡುಗಿದರು.

‘ನಾವಾಗಿಯೇ ಯಾರ ತಂಟೆಗೂ ಹೋಗುವುದಿಲ್ಲ. ಆದರೆ ನಮ್ಮ ತಂಟೆಗೆ ಬಂದರೆ ಅಂಥವರನ್ನು ಸುಮ್ಮನೆ ಬಿಡುವುದೂ ಇಲ್ಲ’ ಎಂದು ಸಚಿವರು ಹೇಳಿದರು.

1990ರ ದಶಕದಲ್ಲಿ ಭಯೋತ್ಪಾದಕರ ಅಟ್ಟಹಾಸ ತುತ್ತತುದಿಯಲ್ಲಿದ್ದಾಗ ಕಣಿವೆಯಿಂದ ಕಾಶ್ಮೀರಿ ಪಂಡಿತರು ಸಾಮೂಹಿಕ ವಲಸೆ ಹೋದುದನ್ನು ಉಲ್ಲೇಖಿಸಿದ ಅವರು, ಪಂಡಿತರು ತಮ್ಮ ಮೂಲ ನೆಲೆಗೆ ಮರಳುವುದನ್ನು ತಡೆಯಲು ಜಗತ್ತಿನ ಯಾವ ಶಕ್ತಿಗೂ ಸಾಧ್ಯವಿಲ್ಲ ಎಂದು ಘೋಷಿಸಿದರು.

ಪೌರತ್ವ ತಿದ್ದುಪಡಿ ಕಾಯ್ದೆ ಯಾರನ್ನೂ ನೋಯಿಸುವುದಕ್ಕೆ ಅಥವಾ ಭಾರತೀಯರ ಪ್ರಜೆಗಳ ಪೌರತ್ವವನ್ನು ಕಿತ್ತುಕೊಳ್ಳುವುದಕ್ಕೆ ರೂಪಿಸಿದ್ದಲ್ಲ. ಬದಲಾಗಿ ನಮ್ಮ ನೆರೆಯ ಮೂರು ಮುಸ್ಲಿಂ ದೇಶಗಳಲ್ಲಿ ಧಾರ್ಮಿಕ ಕಿರುಕುಳ, ಹಿಂಸೆಗೆ ಗುರಿಯಾಗಿ ಪ್ರಾಣ ಉಳಿಸಿಕೊಳ್ಳಲು ಉಟ್ಟ ಬಟ್ಟೆಯಲ್ಲೇ ಭಾರತಕ್ಕೆ ಓಡಿ ಬಂದು ಆಶ್ರಯ ಕೋರಿದ ಹಿಂದೂ, ಜೈನ, ಬೌದ್ಧ, ಪಾರ್ಸಿ, ಕ್ರೈಸ್ತ ಬಂಧುಗಳಿಗೆ ಪೌರತ್ವ ನೀಡಲು ರೂಪಿಸಿದ ಕಾಯ್ದೆ ಇದು ಎಂದು ರಾಜನಾಥ್ ಸಿಂಗ್ ಸ್ಪಷ್ಟಪಡಿಸಿದರು.

ನಮ್ಮ ನೆರೆಯ ದೇಶಗಳಿಂದ ಆಶ್ರಯ ಕೋರಿ ಬರುವ ಹಿಂದೂಗಳು ಮತ್ತು ಸಿಖ್ಖರಂತಹ ಅಲ್ಪಸಂಖ್ಯಾತರಿಗೆ ಭಾರತದ ಪೌರತ್ವ ನೀಡಬೇಕೆಂದು ಮಹಾತ್ಮಾ ಗಾಂಧಿ ಅವರೇ ಅಂದಿನ ಪ್ರಧಾನಿ ನೆಹರೂಗೆ ಹೇಳಿದ್ದರು. ಆದರೆ ಗಾಂಧೀಜಿ ಅವರ ಮಾತನ್ನು ಈಡೇರಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರು. ಅದಕ್ಕಾಗಿಗೇ ಸಿಎಎ ಜಾರಿಗೊಳಿಸಲಾಗುತ್ತಿದೆ ಎಂದು ಸಿಂಗ್ ತಿಳಿಸಿದರು.

ಬಿಜೆಪಿಯೇತರ ಸರಕಾರಗಳ ರಾಜ್ಯಗಳು ಸಿಎಎ ಜಾರಿಗೆ ಹಿಂದೇಟು ಹಾಕುತ್ತಿರುವ ಬಗ್ಗೆ ಪ್ರಸ್ತಾಪಿಸಿದ ಅವರು, ಇದು ಕೇಂದ್ರದ ಕಾನೂನು ಆಗಿರುವುದರಿಂದ ಎಲ್ಲ ರಾಜ್ಯಗಳಿಗೂ ಕಡ್ಡಾಯವಾಗಿರುತ್ತದೆ ಎಂದು ನುಡಿದರು.

ಕಾಂಗ್ರೆಸ್ ದೇಶದ ಜನತೆಗೆ ಸುಳ್ಳು ಹೇಳುತ್ತಲೇ ಬಂದಿದೆ. ಈಗಲೂ ಅದೇ ಚಾಳಿಯನ್ನು ಮುಂದುವರಿಸಿದ್ದು, ಪಾಕಿಸ್ತಾನದ ಭಾಷೆಯಲ್ಲಿ ಮಾತನಾಡುತ್ತ ಇಲ್ಲಿನ ಅಲ್ಪಸಂಖ್ಯಾತ ಮುಸ್ಲಿಮರನ್ನು ದಾರಿ ತಪ್ಪಿಸುತ್ತಿದೆ ಎಂದು ಸಿಂಗ್ ಆರೋಪಿಸಿದರು.

ಸುಮಾರು ಮುಕ್ಕಾಲು ಗಂಟೆ ಕಾಲ ನಿರರ್ಗಳವಾಗಿ ತಮ್ಮ ವಾಗ್ಝರಿ ಹರಿಸಿದ ರಕ್ಷಣಾ ಸಚಿವರು, ಮಂಗಳೂರಿನ ನಾಗರಿಕರ ದೇಶಪ್ರೇಮ ಮತ್ತು ದೇಶದ ಅಭಿವೃದ್ಧಿಗೆ ಇಲ್ಲಿನ ನಾಗರಿಕರ ಕೊಡುಗೆಗಳನ್ನು ಶ್ಲಾಘಿಸಿದರು.

ಮಂಗಳೂರಿನ ರಥೋತ್ಸವ ಮಂಗಳೂರಿಗಷ್ಟೇ ಸೀಮಿತವಲ್ಲ, ಅದು ದೇಶದ ಇತರ ಕಡೆಗಳಲ್ಲೂ ಸಾಕಷ್ಟು ಖ್ಯಾತಿ ಗಳಿಸಿದೆ ಎಂದು ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.

ಸಮಾವೇಶದಲ್ಲಿ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಸೇರಿದಂತೆ ಕರಾವಳಿ ಜಿಲ್ಲೆಗಳ ಮೂಲೆ ಮೂಲೆಗಳಿಂದ ಸುಮಾರು 2 ಲಕ್ಷ ಜನ ಭಾಗವಹಿಸಿದ್ದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಸ್ಪೆಷಾಲಿಟಿ ಆಸ್ಪತ್ರೆ ಬಳ್ಳಾರಿ ಯಲ್ಲಿ ಉದ್ಘಾಟನೆ

Harshitha Harish

ಲಂಕಾ ಅಧ್ಯಕ್ಷರ ಚುನಾವಣೆ: ಮತದಾರರ ಬಸ್ಸುಗಳ ಮೇಲೆ ಗುಂಡಿನ ದಾಳಿ

Upayuktha

ವಿವಿವಿ ಮೂಲಕ ಭಾರತೀಯ ಶಿಕ್ಷಣಕ್ಕೆ ಹೊಸದಿಕ್ಕು: ರಾಘವೇಶ್ವರ ಶ್ರೀ

Upayuktha