ಸ್ಥಳೀಯ ಹಬ್ಬಗಳು-ಉತ್ಸವಗಳು

ಬದಿಯಡ್ಕದಲ್ಲಿ ಸಂಭ್ರಮದ ಸಾರ್ವಜನಿಕ ಬಲೀಂದ್ರ ಪರ್ಬ

ಬದಿಯಡ್ಕ: ನಮ್ಮ ತುಳುನಾಡಿನ ಪಾಡ್ದನಗಳಲ್ಲಿ ಕೂಡ ವರ್ಣಿಸಲ್ಪಟ್ಟ ದೊರೆ ಬಲೀಂದ್ರ ನಿಜವಾಗಿ ಈ ಮಣ್ಣಿಗೆ ಆಗಮಿಸುವುದು ದೀಪಾವಳಿ ಪರ್ಬದಂದು. ಆದರೆ ಮಲಯಾಳಿ ಏಕ ಸಂಸ್ಕೃತಿ ಹೇರಿಕೆಗೆ ಮರುಳಾಗುತ್ತಿರುವ ನಾವು ವಾಮನ ಜಯಂತಿಯಂದು (ಓಣಂ) ಬಲಿಯೇಂದ್ರ ಬರುವುದೆಂಬ ತಪ್ಪುಕಲ್ಪನೆ ಮೂಡಿಸಿಕೊಂಡಿರುವುದು ದುರದೃಷ್ಟಕರ ಎಂಬುದಾಗಿ ಕಾರ್ತಿಕ್ ಪಡ್ರೆ ಹೇಳಿದರು.

ಅಲ್ಲದೆ ಓಣಂ ಸಂದರ್ಭದಲ್ಲಿ ಬಲಿ ಚಕ್ರವರ್ತಿಯನ್ನು ಡೊಳ್ಳುಹೊಟ್ಟೆಯ ಠೊಣಪ ವ್ಯಕ್ತಿಯಂತೆ ಹಾಸ್ಯ ಪಾತ್ರದಂತೆ ಚಿತ್ರಿಸಿರುವುದು ಖಂಡನೀಯ. ಆತ ನಮ್ಮ ತುಳುನಾಡಿನ ಕೃಷಿಸ್ನೇಹೀ, ಜನಾನುರಾಗಿ ದೊರೆಯಾಗಿದ್ದ. ಪರ್ಬ ಆಚರಣೆಯು ಕನ್ನಡ, ತುಳುವ ಸಂಸ್ಕೃತಿಯ ಅಸ್ತಿತ್ವದ ಪ್ರಶ್ನೆ ಎಂದು ಅವರು ಹೇಳಿದರು.

ಅವರು ಬದಿಯಡ್ಕ ಗ್ರಾಮ ಪಂಚಾಯತ್ ಎದುರು ನಡೆದ ಸಾರ್ವಜನಿಕ ಬಲಿಯೇಂದ್ರ ಪರ್ಬ ಆಚರಣೆಯಲ್ಲಿ ಪಾಲ್ಗೊಂಡು ಮಾತಾಡಿದರು. ಪಂಚಾಯತು ಅಧ್ಯಕ್ಷ ಕೆ.ಎನ್ ಕೃಷ್ಣ ಭಟ್ ಅಧ್ಯಕ್ಷತೆ ವಹಿಸಿ ಮಾತಾಡಿದರು. ಪ್ರಭಾವತಿ ಕೆದಿಲಾಯ ಪುಂಡೂರು ಹಣತೆ ಬೆಳಗಿಸಿ ಶುಭನುಡಿದರು. ಗೋಪಾಲಕೃಷ್ಣ ವಾಂತಿಚ್ಚಾಲು ಪರಂಪರೆಯಂತೆ ‘ಬಲೀಂದ್ರ ಲೆಪ್ಪುನಿ’ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಅಭಿಜ್ಞಾ ಬೊಳುಂಬು ಪ್ರಾರ್ಥಿಸಿದರು. ಶ್ರೀಶ ಪಂಜಿತ್ತಡ್ಕ ಸ್ವಾಗತಿಸಿ, ನಿರೂಪಿಸಿದರು. ರಾಜೇಶ್ ಉಬ್ರಂಗಳ ಧನ್ಯವಾದ ಸಲ್ಲಿಸಿದರು.

ಮನವಿ ಸಲ್ಲಿಕೆ: ರಂಗಸಿರಿಯ ವಿದ್ಯಾರ್ಥಿಗಳು ಬದಿಯಡ್ಕ ಪಂಚಾಯತಿನ ನಾಡೋಜ ಕಯ್ಯಾರ ಕಿಞ್ಞಣ್ನ ರೈ ಸ್ಮಾರಕ ಗ್ರಂಥಾಲಯವನ್ನು ಸುಸಜ್ಜಿತಗೊಳಿಸಿ ಮತ್ತೆ ಓದುಗರಿಗೆ ತೆರೆದುಕೊಡಬೇಕೆಂಬ ಮನವಿಯನ್ನು ಪಂಚಾಯತು ಅಧ್ಯಕ್ಷರಿಗೆ ಸಲ್ಲಿಸಿದರು. ಕೂಡಲೇ ಸ್ಪಂದಿಸಿದ ಅಧ್ಯಕ್ಷರು, ಈಗಾಗಲೇ ಪ್ರತ್ಯೇಕ ಹಣವನ್ನು ಮೀಸಲಾಗಿರಿಸಿದ್ದು ಆದಷ್ಟು ಬೇಗನೆ ಕ್ರಮಕೈಗೊಳ್ಳುವುದಾಗಿ ನುಡಿದರು.

ಸಹಾಯ ವಿತರಣೆ: ಇದೇ ಸಂದರ್ಭದಲ್ಲಿ ಸರಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತು ಕಳೆದವರ್ಷ ಹತ್ತನೇ ತರಗತಿಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿ ಕೃಷ್ಣ ಕುಮಾರ್‍ಗೆ ತನ್ನ ಮನೆಯಲ್ಲಿ ದೀಪಾವಳಿ ಪರ್ಬ ಆಚರಣೆ ನಡೆಸುವುದಕ್ಕಾಗಿ ಸಹಾಯಧನವನ್ನು ವಿತರಿಸಲಾಯಿತು. ಹೆಸರು ಹೇಳಲಿಚ್ಛಿಸದ ಉದಾರಿಗಳೊಬ್ಬರು ತಾವಾಗಿಯೇ ಮುಂದೆ ಬಂದು ನೀಡಿದ ಈ ಧನ ಸಹಾಯವು ಹಬ್ಬವನ್ನು ಆಚರಿಸುವವರಿಗೊಂದು ಮಾದರಿಯಾಗಿ ಗಮನಸೆಳೆಯಿತು.

ಸಂಗೀತ ಕುರ್ಚಿ ಸ್ಪರ್ಧೆಯು ಪ್ರಾಥಮಿಕ, ಪ್ರೌಢ ಹಾಗೂ ಹಿರಿಯ ಎಂಬ ಮೂರು ವಿಭಾಗಗಳಲ್ಲಿ ನಡೆಯಿತು. ಪ್ರಾಥಮಿಕ ವಿಭಾಗದಲ್ಲಿ ಚಿನ್ಮಯಕೃಷ್ಣ ಪ್ರಥಮ, ಶ್ರೀಪೂಜಾ ಉದನೇಶ್ ದ್ವಿತೀಯ; ಪ್ರೌಢವಿಭಾಗದಲ್ಲಿ ಮನೀಶ್ ವಳಮಲೆ ಪ್ರಥಮ, ನಂದಕಿಶೋರ್ ಮವ್ವಾರು ದ್ವಿತೀಯ; ಹಿರಿಯರ ವಿಭಾಗದಲ್ಲಿ ಗಾನಲತಾ ಬೊಳುಂಬು ಪ್ರಥಮ, ಗೀತಾ ವಳಮಲೆ ದ್ವಿತೀಯ; ಹೂಕಟ್ಟುವ ಸ್ಪರ್ಧೆಯಲ್ಲಿ ಶ್ಯಾಮಲಾ ಮವ್ವಾರು ಪ್ರಥಮ, ಭವ್ಯ ವಳಮಲೆ ದ್ವಿತೀಯ; ರಸಪ್ರಶ್ನೆಯಲ್ಲಿ ಅಭಿಜ್ಞಾ ಭಟ್ ಪ್ರಥಮ, ಗಾನಲತಾ ಬೊಳುಂಬು ದ್ವಿತೀಯ ಬಹುಮಾನಗಳನ್ನು ತಮ್ಮದಾಗಿಸಿಕೊಂಡರು. ಹೂಕಟ್ಟುವ ಸ್ಪರ್ಧೆಗೆ ವಿದುಷಿ ಗೀತಾ ಸಾರಡ್ಕ, ಡಾ.ಸ್ನೇಹಾ ಪ್ರಕಾಶ್ ಮತ್ತು ಗಾನಲತಾ ನಿರ್ಣಾಯಕರಾಗಿ ಸಹಕರಿಸಿದರು. ರಸೆಪ್ರಶ್ನೆ ಕಾರ್ಯಕ್ರಮವನ್ನು ದಿವ್ಯಗಂಗಾ ಪಿ ನಡೆಸಿಕೊಟ್ಟರು.

ಪರಿಸರವನ್ನು ಹಣತೆಯ ಬೆಳಕುಗಳಿಂದ ಅಲಂಕರಿಸಲಾಯಿತು. ಹಣತೆಯ ಹಿತವಾದ ಮಂದ ಪ್ರಕಾಶವು ಮನವರಳಿಸುವಂತೆ ಕಂಗೊಳಿಸಿತು. ಕಾರ್ಯಕ್ರದ ಕೊನೆಯಲ್ಲಿ ಸಿಹಿಯವಲಕ್ಕಿ, ಪಾನಕ ವಿತರಣೆ ನಡೆಯಿತು. ಬಳಿಕ ಹಾನಿಯಿಲ್ಲದ ಸುಡುಮದ್ದುಗಳನ್ನು ಸಾಮೂಹಿಕವಾಗಿ ಉರಿಸಲಾಯಿತು. ಪುಟಾಣಿಗಳಿಂದ ತೊಡಗಿ ಹಿರಿಯರ ವರೆಗಿನ ಸಾರ್ವಜನಿಕರು ಒಂದೇ ಕುಟುಂಬದವರಂತೆ ಉತ್ಸಾಹದಿಂದ ಪಾಲ್ಗೊಂಡದ್ದು ಕಾರ್ಯಕ್ರಮವು ವೈವಿಧ್ಯಪೂರ್ಣವಾಗಿ, ಸುಂದರವಾಗಿ ಮೂಡಿಬರಲು ಪ್ರಮುಖ ಕಾರಣಗಳಲ್ಲೊಂದಾಯಿತು. ನಮ್ಮ ಸಂಸ್ಕೃತಿಯ ಹಬ್ಬಗಳನ್ನು ಮರೆತು ಪರಕೀಯ ಸಂಸ್ಕೃತಿಯ ಆಚರಣೆಗಳಿಗೆ ಮರುಳಾಗುವ ಈ ದಿನಗಳಲ್ಲಿ ಒಂದು ಮಾದರಿ ಕಾರ್ಯಕ್ರಮವಾಗಿ ಮೂಡಿಬಂತು.

Related posts

ನಿವೃತ್ತರಿಗೆ ಬೀಳ್ಕೊಡುಗೆ 4ನೇ ಕಾರ್ಯಕ್ರಮ

Upayuktha

ಪರಿಸರ ಸ್ವಚ್ಛತೆಗೆ ನಮ್ಮ ಮೊದಲ ಆದ್ಯತೆ: ಡಾ|| ಚೂಂತಾರು

Upayuktha

ದ.ಕ., ಉಡುಪಿ ಕೊರೊನಾ ಪಾಸಿಟಿವ್ ಇಲ್ಲ, ಕಾಸರಗೋಡಿನಲ್ಲಿ ಎರಡು ಕೇಸ್

Upayuktha