ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದ ಕಳ್ಳಿಗೆ ತಾರಾನಾಥ ಶೆಟ್ಟಿ ಮತ್ತು ವಿಜಯ ಕುಮಾರ್ ಶೆಟ್ಟಿ
ಮಂಗಳೂರು: ಮಂಗಳೂರು ಮಹಾನಗರಪಾಲಿಕೆ ಚುನಾವಣೆ ಸಂಬಂಧಿಸಿದಂತೆ ಟಿಕೆಟ್ ಹಂಚಿಕೆಯಲ್ಲಿ ಕಾಂಗ್ರೆಸ್ನ ಹಿರಿಯ ನಾಯಕ ಬಿ. ಜನಾರ್ದನ ಪೂಜಾರಿ ಅವರ ಕಟ್ಟಾ ಬೆಂಬಲಿಗರನ್ನು ಪಕ್ಷದೊಳಗಿನ ಸ್ಥಾಪಿತ ಹಿತಾಸಕ್ತಿಗಳು ಮೂಲೆ ಗುಂಪು ಮಾಡಿವೆ ಎಂದು ಆರೋಪಿಸಲಾಗಿದೆ.
ನಗರದಲ್ಲಿ ಶುಕ್ರವಾರ ಕೆಪಿಸಿಸಿ ಕಾರ್ಯದರ್ಶಿ ಕಳ್ಳಿಗೆ ತಾರಾನಾಥ ಶೆಟ್ಟಿ ಹಾಗೂ ಮಾಜಿ ಶಾಸಕ ಕೆ. ವಿಜಯ ಕುಮಾರ್ ಶೆಟ್ಟಿ ಅವರು ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪಾಲಿಕೆಗೆ ಈ ಹಿಂದೆ 6 ಬಾರಿ ನಡೆದ ಚುನಾವಣೆಯಲ್ಲಿ 5 ಬಾರಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಹಿಂದೆಲ್ಲ ಪೂಜಾರಿ ನೇತೃತ್ವದಲ್ಲಿ ಬಿ ಫಾರಂ ಹಂಚಿಕೆ ವ್ಯವಸ್ಥಿತವಾಗಿ ನಡೆಯುತ್ತಿತ್ತು. ಎಲ್ಲ ಜಾತಿ, ಧರ್ಮ, ವರ್ಗಕ್ಕೆ ಅವರು ಪ್ರಾತಿನಿಧ್ಯ ನೀಡುತ್ತಿದ್ದರು. ಆದರೆ ಈ ಬಾರಿ ಇಬ್ಬರು ಮಾಜಿ ಶಾಸಕರು ಪೂಜಾರಿ ಬೆಂಬಲಿಗರನ್ನು ಕಡೆಗಣಿಸಿದ್ದಾರೆ ಎಂದು ಆರೋಪಿಸಿದರು.
ಹಿರಿಯ ನಾಯಕ ಜನಾರ್ದನ ಪೂಜಾರಿ ಅವರು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಟಿ.ಕೆ. ವೇಣುಗೋಪಾಲ್ ಅವರ ಜತೆ ಫೋನ್ನಲ್ಲಿ ಮಾತನಾಡಿ ಸರ್ವ ಸಮ್ಮತ ಅಭ್ಯರ್ಥಿಗಳನ್ನು ಆಯ್ಕೆ ಮಾಡುವಂತೆ ಮನವಿ ಮಾಡಿದ್ದರು. ಆದರೆ ಇಬ್ಬರು ಮಾಜಿ ಶಾಸಕರ ಆಣತಿಯಂತೆ ಜಿಲ್ಲಾ ಕಾಂಗ್ರೆಸ್ ಬಿ ಫಾರಂ ಹಂಚಿಕೆ ಮಾಡಿದೆ. ವಾರ್ಡ್ ಸಮಿತಿಗಳು ಕೂಡ ಮಾಜಿ ಶಾಸಕರ ಸೂಚನೆಯಂತೆ ಕಾರ್ಯನಿರ್ವಹಿಸಿವೆ ಎಂದರು.
ಪೂಜಾರಿ ಅವರು ಕಟ್ಟಾ ಬೆಂಬಲಿಗರಾದ ಮಾಜಿ ಮೇಯರ್ ಪುರಂದರದಾಸ್, ಮಹಾಬಲ ಮಾರ್ಲ, ಗುಲ್ಜಾರ್ ಭಾನು ಹಾಗೂ ಇಂಟಕ್ನ ಶಶಿಧರ ಅಂಬಾಟ್ ಅವರಿಗೆ ಟಿಕೆಟ್ ನಿರಾಕರಿಸಲಾಗಿದೆ. ಪುರಂದರ ಅವರಿಗೆ 10 ವರ್ಷದ ಬಳಿಕ ತನ್ನ ಸ್ವಂತ ವಾರ್ಡ್ನಲ್ಲಿ ಸ್ಪರ್ಧಿಸುವ ಅವಕಾಶ ದೊರಕಿದರೂ ಅವರಿಗೆ ಟಿಕೆಟ್ ನೀಡಿಲ್ಲ. ಮಧ್ಯಾಹ್ನ 12.30ಕ್ಕೆ ಬಿ ಫಾರಂ ಕೊಡುವುದಾಗಿ ಡಿಸಿಸಿ ಕಚೇರಿಗೆ ಕರೆಸಿ ಅವರಿಗೆ ಅವಮಾನ ಮಾಡಲಾಗಿದೆ. ಗುಲ್ಜಾರ್ ಭಾನು ಅವರ ಪುತ್ರನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ ಜೈಲಿಗಟ್ಟಲಾಗಿದೆ. ಪುತ್ರನ ಕಾಣಲು ಹೋದ ಭಾನು ಅವರನ್ನು ಪೊಲೀಸ್ ಠಾಣೆಯಲ್ಲಿ ಅನಾವಶ್ಯಕ ಕೂರಿಸಿ ಅವರು ನಾಮಪತ್ರ ಹಾಕದಂತೆ ತಡೆಯುವ ಯತ್ನ ಕೂಡ ನಡೆಸಲಾಯಿತು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ರೈಗೆ ಕಾಂಗ್ರೆಸ್ ತತ್ವ- ಸಿದ್ಧಾಂತ ಗೊತ್ತಿಲ್ಲ: ವಿಜಯ ಕುಮಾರ್ ಶೆಟ್ಟಿ
ಮಾಜಿ ಸಚಿವ ಬಿ. ರಮಾನಾಥ ರೈ ಅವರಿಗೆ ಕಾಂಗ್ರೆಸ್ ಪಕ್ಷದ ತತ್ವ- ಸಿದ್ಧಾಂತ ಗೊತ್ತಿಲ್ಲ. ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಗೃಹ ಸಚಿವ ಸ್ಥಾನ ಸಿಗುವುದನ್ನು ನಾನು ತಪ್ಪಿಸಿದೆ ಎಂದು ಆಪಾದಿಸಿದರು. ಸಭೆಯೊಂದರಲ್ಲಿ ನನ್ನ ಮೇಲೆ ಹಲ್ಲೆಗೂ ಯತ್ನ ನಡೆದಿತ್ತು ಎಂದು ಮಾಜಿ ಶಾಸಕ ಕೆ. ವಿಜಯ ಕುಮಾರ್ ಶೆಟ್ಟಿ ಹೇಳಿದರು.
ಕಾಂಗ್ರೆಸ್ ಪಕ್ಷಕ್ಕಿಂತ ಒಳ್ಳೆಯ ಪಕ್ಷ ಬೇರೊಂದಿಲ್ಲ ಎಂದು ಹೇಳಿದ ಅವರು, ಪಾಲಿಕೆ ಚುನಾವಣೆಯಲ್ಲಿ ಪೂಜಾರಿಯವರ ಭಾಗಿತ್ವದ ಅಗತ್ಯವಿತ್ತು ಎಂದರು.
2 ದಿನಗಳಲ್ಲಿ ನಿರ್ಧಾರ ಪ್ರಕಟ: ಪುರಂದರದಾಸ್
ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಲು ಪಕ್ಷದ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಇನ್ನೆರಡು ದಿನಗಳಲ್ಲಿ ತನ್ನ ನಿರ್ಧಾರ ಪ್ರಕಟಿಸುವುದಾಗಿ ಮಾಜಿ ಮೇಯರ್ ಪುರಂದರದಾಸ್ ಹೇಳಿದರು. ಯಾವ ಪಕ್ಷವನ್ನು ಬೆಂಬಲಿಸಬೇಕೆಂಬ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ. ಇನ್ನೆರಡು ದಿನಗಳಲ್ಲಿ ನನ್ನ ನಿರ್ಧಾರ ಪ್ರಕಟಸುತ್ತೇನೆ ಎಂದರು.
ಪಕ್ಷ ಬಿಡಲಾರೆ: ಅಂಬಾಟ್
ಇಂಟಕ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ನಾನು ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಸೇವಕ. ಯಾವುದೇ ಕಾರಣಕ್ಕೂ ಪಕ್ಷ ಬಿಡಲಾರೆ. ಆದರೆ ನಾಯಕರನ್ನು ಪ್ರಶ್ನಿಸುವ ಅಧಿಕಾರ ತನಗಿದೆ ಎಂದು ಇಂಟಕ್ನ ಶಶಿಧರ ಅಂಬಾಟ್ ಹೇಳಿದರು.
ಪಂಚಾಯಿತಿ ಚುನಾವಣೆಯಿಂದ ಹಿಡಿದು ಪಾರ್ಲಿಮೆಂಟ್ ಚುನಾವಣೆ ವರೆಗೂ ಇಂಟಕ್ಗೆ ಪ್ರಾತಿನಿಧ್ಯ ನೀಡಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಪಾಲಿಕೆ ಚುನಾವಣೆಯಲ್ಲಿ ಇಂಟಕ್ಗೆ ಎರಡು ಸ್ಥಾನಗಳನ್ನು ಕೇಳಲಾಗಿತ್ತು. ಆದರೆ ಒಂದೂ ಸ್ಥಾನವನ್ನು ನೀಡಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.