ದೇಶ-ವಿದೇಶ ಪ್ರಮುಖ

ಪ್ರಧಾನಿ ಮೋದಿ ಕುರಿತ ಶ್ಲಾಘನೆ: ಜೈರಾಮ್ ರಮೇಶ್, ಶಶಿ ತರೂರ್ ವಿರುದ್ಧ ಮೊಯ್ಲಿ ಕಿಡಿ

ಬೆಂಗಳೂರು: ಹಿರಿಯ ಕಾಂಗ್ರೆಸ್ ಮುಖಂಡ, ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಅವರ ವಿರುದ್ಧ ಮತ್ತೊಬ್ಬ ಹಿರಿಯ ಕಾಂಗ್ರೆಸಿಗ, ಗಾಂಧಿ ಕುಟುಂಬದ ನಿಷ್ಠರಾದ ಎಂ. ವೀರಪ್ಪ ಮೊಯ್ಲಿ ತೀಕ್ಷ್ಣ ವಾಗ್ದಾಳಿ ನಡೆಸಿದ್ದಾರೆ.

ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರ ಕುರಿತು ಹೇಳಿಕೆ ನೀಡಿದ್ದ ಜೈರಾಮ್ ರಮೇಶ್‌ ಅವರನ್ನು ಮೊಯ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ಯುಪಿಎ-2ರ ಅವಧಿಯಲ್ಲಿ ‘ನೀತಿ ನಿರೂಪಣಾ ದೋಷಕ್ಕೆ’ ಜೈರಾಮ್‌ ರಮೇಶ್ ಅವರೇ ಹೊಣೆ ಎಂದು ಮೊಯ್ಲಿ ದೂಷಿಸಿದ್ದಾರೆ.

ಪ್ರಧಾನಿ ಮೋದಿ ಅವರನ್ನು ಸದಾ ಕಾಲ ನಕಾರಾತ್ಮಕವಾಗಿ, ರಾಕ್ಷಸನಂತೆ ಬಿಂಬಿಸುವುದು ತಪ್ಪು; ಅವರು ಮಾಡಿದ ಒಳ್ಳೆಯ ಕೆಲಸಗಳಿಗೆ ಅವರನ್ನು ಶ್ಲಾಘಿಸಬೇಕು ಎಮದು ಇತ್ತೀಚೆಗೆ ಜೈರಾಮ್ ರಮೇಶ್ ಹೇಳಿಕೆ ನೀಡಿ ಕೆಲವು ಕಾಂಗ್ರೆಸಿಗರ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ಸಂಸದರಾದ ಶಶಿ ತರೂರ್‌, ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಘ್ವಿ ಅವರಂತಹ ಕೆಲವು ಹಿರಿಯ ಮುಖಂಡರು ಜೈರಾಮ್ ರಮೇಶ್ ಮಾತನ್ನು ಸಮರ್ಥಿಸಿಕೊಂಡಿದ್ದರು.

ಜೈರಾಮ್ ರಮೇಶ್ ಮಾತನ್ನು ಸಮರ್ಥಿಸುವಂತೆ ಮಾತನಾಡಿದ್ದ ತಿರುವನಂತಪುರಂ ಸಂಸದ ಶಶಿ ತರೂರ್‌, ಪ್ರಧಾನಿ ಮೋದಿ ಅವರ ಒಳ್ಳೆಯ ಕೆಲಸಗಳನ್ನು ಶ್ಲಾಘಿಸಿದಾಗಲೇ ಅವರು ತಪ್ಪು ಮಾಡಿದಾಗ ಟೀಕಿಸುವ ಪ್ರತಿಪಕ್ಷದ ಹೇಳಿಕೆಗಳಿಗೆ ಬೆಲೆ ಬರಲು ಸಾಧ್ಯ ಎಂದು ಹೇಳಿಕೆ ನೀಡಿದ್ದರು.

ಈ ಹಿನ್ನೆಲೆಯಲ್ಲಿ ತರೂರ್ ವಿರುದ್ಧವೂ ಮೊಯ್ಲಿ ಕಿಡಿ ಕಾರಿದ್ದಾರೆ. ಈ ಇಬ್ಬರೂ ನಾಯಕರ ಹೇಳಿಕೆಗಳು ‘ದುರದೃಷ್ಟಕರ’ ಎಂದು ಮೊಯ್ಲಿ ಬಣ್ಣಿಸಿದ್ದಾರೆ. ಇಂತಹ ನಾಯಕರ ವಿರುದ್ಧ ಹೈಕಮಾಂಡ್ ಶಿಸ್ತುಕ್ರಮ ಕೈಗೊಳ್ಳಬೇಕು ಎಂದೂ ಅವರು ಆಗ್ರಹಿಸಿದ್ದಾರೆ.

2019ರ ಲೋಕಸಭಾ ಚುನಾವಣೆಯಲ್ಲಿ ಮೊಯ್ಲಿ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು. ಶಶಿ ತರೂರ್ ತಿರುವನಂತಪುರಂನಿಂದ ಸ್ಪರ್ಧಿಸಿ ಗೆದ್ದಿರುವುದನ್ನು ಇಲ್ಲಿ ಸ್ಮರಿಸಬಹುದು.

‘ನಮ್ಮ ಸರಕಾರದ ಅವಧಿಯಲ್ಲಿ (ಯುಪಿಎ-2) ನೀತಿ ನಿರೂಪಣೆಗೆ ಲಕ್ವ ಹೊಡೆಯಲು ಜೈರಾಮ್ ರಮೇಶ್ ಅವರೇ ಕಾರಣ. ಸರಕಾರ ತನ್ನ ಆಡಳಿತ ನೀತಿಗಳಲ್ಲಿ ಹಲವು ಬಾರಿ ರಾಜಿ ಮಾಡಿಕೊಳ್ಳುವಂತಾಗಲು ಈ ಜೈರಾಮ್ ರಮೇಶ್ ಅವರೇ ಕಾರಣ’ ಎಂದು ಮೊಯ್ಲಿ ಪಿಟಿಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ದೂಷಿಸಿದರು.

‘ಅವರು ಪರಿಸರ ಸಚಿವರಾಗಿದ್ದರು. ಗ್ರಾಮೀಣ ಅಭಿವೃದ್ಧಿ ಖಾತೆಯ ಸಚಿವರೂ ಆಗಿದ್ದರು. ಆ ಸಂದರ್ಭದಲ್ಲಿ ಉದ್ಯಮಗಳು ಮತ್ತು ಕೈಗಾರಿಕೆಗಳಿಗೆ ಭೂಸ್ವಾಧೀನ ವಿಚಾರದಲ್ಲಿ ಬಹಳಷ್ಟು ಅಡೆತಡೆಗಳನ್ನು ಒಡ್ಡಲಾಗಿತ್ತು. ಅವರು ಪರಿಸರ ಸಚಿವರಾಗಿದ್ದಾಗ ಪ್ರತಿಯೊಂದೂ ನಕಾರಾತ್ಮಕವಾಗಿತ್ತು. ಉದ್ಯಮಗಳಿಗೆ ಪರಿಸರ ಸಚಿವಾಲಯದ ಅನುಮತಿ ದೊರಕಿಸಿಕೊಡುವ ನಿಟ್ಟಿನಲ್ಲಿ ಸ್ಪಷ್ಟ ನೀತಿಗಳೇ ಇರಲಿಲ್’ ಎಂದು ಮೊಯ್ಲಿ ಆರೋಪಿಸಿದರು.

‘ಕಾಂಗ್ರೆಸ್ ಮೋದಿ ಅವರನ್ನು ರಾಕ್ಷಸನಂತೆ ಬಿಂಬಿಸುತ್ತಿದೆ’ ಎಂಬ ರಮೇಶ್ ಹೇಳಿಕೆಯನ್ನು ಅಲ್ಲಗಳೆದ ಮೊಯ್ಲಿ, ಅವರ ಹೇಳಿಕೆ ಅತ್ಯಂತ ಕೀಳು ಅಭಿರುಚಿಯದ್ದು’ ಎಂದು ಟೀಕಿಸಿದರು. ಅಲ್ಲದೆ, ಬಿಜೆಪಿ ಜತೆ ಅವರು ಕೈಜೋಡಿಸುತ್ತಿದ್ದಾರೆ ಎಂದೂ ಮೊಯ್ಲಿ ಆರೋಪಿಸಿದರು.

‘ಯಾವನೇ ನಾಯಕ ಇಂತಹ ಹೇಳಿಕೆ ನೀಡುತ್ತಿದ್ದಾನೆ ಎಂದಾದರೆ ಆತ ಕಾಂಗ್ರೆಸ್ ಪಕ್ಷಕ್ಕೆ ಅಥವಾ ಪಕ್ಷದ ನಾಯಕತ್ವಕ್ಕೆ ಸೇವೆ ಸಲ್ಲಿಸುತ್ತಿಲ್ಲ ಎಂದೇ ಅರ್ಥ. ಅವರು ಸಚಿವರಾಗಿ ಅಧಿಕಾರ ಅನುಭವಿಸಿದ ಬಳಿಕ, ವಿರೋಧ ಪಕ್ಷದಲ್ಲಿ ಕೂರುವ ಸಂದರ್ಭ ಬಂದಾಗ, ಆಡಳಿತ ಪಕ್ಷದ ಜತೆಗೆ ಹೊಂದಾಣಿಕೆ ಮಾಡಿಕೊಳ್ಳುವ ತಂತ್ರ ನಡೆಸುತ್ತಿದ್ದಾರೆ’ ಎಂದು ಮೊಯ್ಲಿ ದೂರಿದರು.

‘ತರೂರ್‌ ಕೂಡ ಅಷ್ಟೆ. ಆತ ಒಬ್ಬ ಗಂಭೀರ ಮತ್ತು ಪ್ರಬುದ್ಧ ರಾಜಕಾರಣಿಯೇ ಅಲ್ಲ. ಆಗಾಗ್ಗೆ ಮಾಧ್ಯಮಗಳಲ್ಲಿ ಕಾಣಿಸಿಕೊಳ್ಳುವುದಕ್ಕಾಗಿ ಇಂತಹ ಹೇಳಿಕೆಗಳನ್ನು ನೀಡುತ್ತಲೇ ಇರುತ್ತಾರೆ. ಅವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕಿಲ್ಲ. ಇನ್ನಾದರೂ ಒಬ್ಬ ಗಂಭೀರ ರಾಜಕಾರಣಿಯಂತೆ ವರ್ತಿಸಿ ಎಂದಷ್ಟೇ ಅವರಿಗೆ ನಮ್ಮ ಮನವಿ’ ಎಂದು ವೀರಪ್ಪ ಮೊಯ್ಲಿ ಹೇಳಿದರು.

‘ಇಂತಹ ವ್ಯಕ್ತಿಗಳ ವಿರುದ್ಧ ಪಕ್ಷದ ಹೈಕಮಾಂಡ್ ಶಿಸ್ತುಕ್ರಮ ತೆಗೆದುಕೊಳ್ಳಬೇಕು. ಇಂಥವರು ಪಕ್ಷದಿಂದ ಹೊರ ಹೋಗುವುದಾದರೆ ಹೋಗಲಿ. ಪಕ್ಷದ ಒಳಗಿದ್ದುಕೊಂಡೇ ಅದರ ಸಿದ್ಧಾಂತ ಮತ್ತು ಕಾರ್ಯತಂತ್ರಗಳನ್ನು ನಾಶಪಡಿಸುವ ಬದಲು ಅಂಥವರು ಹೊರ ನಡೆಯುವುದೇ ಸೂಕ್ತ’ ಎಂದು ಮೊಯ್ಲಿ ಆಗ್ರಹಿಸಿದರು.

‘ಪಕ್ಷದ ಹೈಕಮಾಂಡ್‌ ಮೊದಲು ಪಕ್ಷವನ್ನು ಸ್ವಚ್ಛಗೊಳಿಸಿ, ರಾಜ್ಯ ಘಟಕಗಳನ್ನು ಪುನಾರಚಿಸಬೇಕು. ಈಗಾಗಲೇ ಬಿಜೆಪಿ ನಮ್ಮ ಕಾರ್ಯಕರ್ತರ ಸ್ಥೈರ್ಯಗುಂದಿಸಲು ಎಲ್ಲ ತಂತ್ರಗಳನ್ನೂ ಪ್ರಯೋಗಿಸುತ್ತಿದೆ. ಇಂತಹ ಸಂದರ್ಭದಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಈಗಲೇ ಕ್ರಮ ಕೈಗೊಳ್ಳಬೇಕಿದೆ’ ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿಯೂ ಆಗಿರುವ ಮೊಯ್ಲಿ ಒತ್ತಾಯಿಸಿದರು.

Related posts

ಐತಿಹಾಸಿಕ ಅಯೋಧ್ಯೆ ತೀರ್ಪು ಇಂದು ಪ್ರಕಟ: ದೇಶಾದ್ಯಂತ ಬಿಗಿ ಭದ್ರತೆ

Upayuktha

ರಿಯಾ ಚಕ್ರವರ್ತಿಗೆ ಭದ್ರತೆ ಒದಗಿಸುವಂತೆ ಮುಂಬೈ ಪೊಲೀಸರಿಗೆ ಸಿಬಿಐ ಪತ್ರ 

Harshitha Harish

ಬಾಲಿವುಡ್ ನಟಿ ಪ್ರಿಯಾಂಕ ರವರ ಆಮೆರಿಕದಲ್ಲಿ ಹಿಂದೂ ಸಂಪ್ರದಾಯ ದಂತೆ ಗೃಹಪ್ರವೇಶ ಕಾರ್ಯಕ್ರಮ

Harshitha Harish