ಬೆಂಗಳೂರು: ದಕ್ಷಿಣ ಬೆಂಗಳೂರಿನ ಸಂಸದರಾದ ತೇಜಸ್ವಿ ಸೂರ್ಯ ಇವರು ಇಂದು ಶ್ರೀ ರಾಮಚಂದ್ರಾಪುರ ಮಠಾಧೀಶರಾದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದರ್ಶನ ಪಡೆದು ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಕುರಿತು ಸಮಗ್ರ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ಶ್ರೀಸಂಸ್ಥಾನದವರು ಸಂಸದ ತೇಜಸ್ವಿಯವರಿಗೆ ಆದಿಶಂಕರಾಚಾರ್ಯರ ವಿಗ್ರಹವನ್ನಿತ್ತು ಹರಸಿದರು.
ಈ ಬಗ್ಗೆ ತೇಜಸ್ವಿ ಸೂರ್ಯ ಅವರು ತಮ್ಮ ಫೇಸ್ಬುಕ್ ಪುಟದಲ್ಲಿ ಬರೆದುಕೊಂಡಿದ್ದು, ಧನ್ಯತೆಯ ಕ್ಷಣಗಳನ್ನು ಹಂಚಿಕೊಂಡಿದ್ದಾರೆ. ಅವರ ಫೇಸ್ಬುಕ್ ಪೋಸ್ಟ್ ಈ ಕೆಳಗಿನಂತಿದೆ:
ಇಂದು ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳ ದರ್ಶನ ಪಡೆದು, ಅವರ ಸಂಕಲ್ಪದಲ್ಲಿ ಮೂಡಿ ಬರಲಿರುವ ಮಹಾ ಯೋಜನೆಯಾಗಿರುವ ‘ವಿಷ್ಣುಗುಪ್ತ ವಿಶ್ವ ವಿದ್ಯಾಪೀಠ’ದ ಕುರಿತು ಚರ್ಚಿಸಿದೆವು.
ವಿಷ್ಣುಗುಪ್ತ ವಿಶ್ವವಿದ್ಯಾಪೀಠವು, ಪ್ರಾಚೀನ ಭಾರತೀಯ ಜ್ಞಾನ ಪರಂಪರೆಯ ಪುನರುತ್ಥಾನದೊಂದಿಗೆ, ತಕ್ಷಶಿಲಾ ಮಾದರಿಯಲ್ಲಿಯೇ 21ನೇ ಶತಮಾನದ ಆಧುನಿಕ ವಿದ್ಯಾಭ್ಯಾಸದೊಂದಿಗೆ, ಸನಾತನ ಭಾರತೀಯ ಮೌಲ್ಯಗಳನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿದೆ.
ವಿಶ್ವದ ಎಲ್ಲೂ ಸಿಗದ ಪರಿಪೂರ್ಣ, ಅಪೂರ್ವ ಶಿಕ್ಷಣ ನಮ್ಮ ಯುವ ಜನಾಂಗಕ್ಕೆ ಸಿಗಬೇಕು ಎನ್ನುವುದೇ ವಿವಿ ಸ್ಥಾಪನೆಯ ಉದ್ದೇಶವಾಗಿದೆ.ಭಾರತದ ಶಿಕ್ಷಣದಲ್ಲಿ ಭಾರತೀಯತೆಯನ್ನು ತುಂಬುವ ಮಹತ್ಕಾರ್ಯಕ್ಕೆ ಶ್ರೀರಾಮಚಂದ್ರಾಪುರ ಮಠದ ಶ್ರೀವಿಷ್ಣುಗುಪ್ತ ವಿಶ್ವವಿದ್ಯಾಪೀಠ ಮುನ್ನುಡಿ ಬರೆದಿದೆ.
ಭರತಖಂಡದ ಸುವರ್ಣಯುಗದ ಕುರುಹಾಗಿ ಉಳಿದಿರುವ ತಕ್ಷಶಿಲೆ ವಿಶ್ವವಿದ್ಯಾನಿಲಯದ ಪುನರವತರಣ ಈ ಯೋಜಿತ ವಿಶ್ವವಿದ್ಯಾಪೀಠದ ಮೂಲಧ್ಯೇಯವಾಗಿದೆ. ನಮ್ಮ ಪೂರ್ವಜರು ಕಂಡುಕೊಂಡ ಒಂದೊಂದು ವಿದ್ಯೆಯೂ ಪಾಶ್ಚಿಮಾತ್ಯ ದಾಳಿಯ ಪ್ರಭಾವಕ್ಕೆ ಸಿಲುಕಿ ರೂಪುಗೆಟ್ಟಿದೆ ಅಥವಾ ಅರ್ಥ ಕಳೆದುಕೊಂಡಿದೆ. ಉಳಿದವು ಅಳಿವಿನ ಅಂಚಿನಲ್ಲಿವೆ. ಅಳಿದುಳಿದ ವಿದ್ಯೆಗಳ ಪುನರುಜ್ಜೀವನ ಉದ್ದೇಶಿತ ವಿಶ್ವವಿದ್ಯಾಪೀಠದ ಉದ್ದೇಶ.
ನೂತನ ವಿವಿ ಗೆ ಸೇವೆ ಸಲ್ಲಿಸುವ ಅವಕಾಶ ಸಿಕ್ಕಿದ್ದು ಸೌಭಾಗ್ಯ. ನಮ್ಮೆಲ್ಲರ ಸಹಕಾರ ಇದಕ್ಕೆ ಇರಲಿದೆ.
ಇದೇ ಸಂದರ್ಭದಲ್ಲಿ ಶಂಕರಾಚಾರ್ಯರ ಮೂರ್ತಿಯನ್ನು ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ನನಗೆ ದಯಪಾಲಿಸಿದ್ದು ನನ್ನಲ್ಲಿ ಸಂತಸ ಮೂಡಿಸಿದೆ.
-ತೇಜಸ್ವಿ ಸೂರ್ಯ
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ