ಪ್ರಮುಖ ವಾಣಿಜ್ಯ

ಮೋದಿ ಪ್ಯಾಕೇಜ್‌ ಹಂತ ಹಂತದಲ್ಲಿ ಜಾರಿ: ಎಂಎಸ್‌ಎಂಇಗಳಿಗೆ, ಆದಾಯ ತೆರಿಗೆದಾರರಿಗೆ ಭರ್ಜರಿ ಕೊಡುಗೆ

ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಕಟಣೆ

ಸುದ್ದಿಗೋಷ್ಠಿಯಲ್ಲಿ ವಿತ್ತಸಚಿವೆ ನಿರ್ಮಲಾ ಸೀತಾರಾಮನ್ (ಚಿತ್ರ ಕೃಪೆ: ಟಿಒಐ)

 

ಹೊಸದಿಲ್ಲಿ: ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ವಲಯದ ಉದ್ಯಮಗಳಿಗೆ (ಎಂಎಸ್‌ಎಂಇ) 3 ಲಕ್ಷ ಕೋಟಿ ರೂ.ಗಳ ಅಡಮಾನ ರಹಿತ ಸ್ವಯಂಚಾಲಿತ ಸಾಲ ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ. ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ಸಂಜೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಿಶೇಷ ಆರ್ಥಿಕ ಪ್ಯಾಕೇಜ್‌ಗಳ ವಿವರ ನೀಡಿದರು.

ಕೊರೊನಾ ವಿರುದ್ಧ ಸಮರದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ನಿನ್ನೆಯಷ್ಟೇ 20 ಲಕ್ಷ ಕೋಟಿ ರೂ.ಗಳ ಬೃಹತ್ ಪ್ಯಾಕೇಜ್‌ ಅನ್ನು ಘೋಷಿಸಿದ್ದರು. ಅದರ ವಿವರಗಳನ್ನು ಹಂತ ಹಂತವಾಗಿ ವಿತ್ತಸಚಿವರು ನೀಡುತ್ತಾರೆ ಎಂದು ತಿಳಿಸಿದ್ದರು.

ಈ ಪ್ರಕ್ರಿಯೆಯ ಭಾಗವಾಗಿ ನಿರ್ಮಲಾ ಸೀತಾರಾಮನ್ ಅವರು ಇಂದು ಸುದ್ದಿಗೋಷ್ಠಿ ನಡೆಸಿದರು.

ಈ ವರೆಗೆ ಜನಧನ್ ಖಾತೆಗಳಿಗೆ 52 ಸಾವಿರ ಕೋಟಿ ರೂ.ಗಳನ್ನು ನೇರ ವರ್ಗಾವಣೆ ಮಾಡಲಾಗಿದೆ. 42 ಕೋಟಿ ಜನರು ಇದರ ಫಲಾನುಭವಿಗಳಾಗಿದ್ದಾರೆ. ಮುಂದೆ ಹಂತ ಹಂತವಾಗಿ ಒಂದೊಂದು ವಲಯಕ್ಕೂ ಯೋಜನೆಗಳನ್ನು ಘೋಷಿಸಲಾಗುವುದು ಎಂದು ಸಚಿವೆ ತಿಳಿಸಿದರು.

ಎಂಎಸ್‌ಎಂಇಗಳಿಗೆ ಅಡವು ರಹಿತ ಸಾಲ:

ಎಂಎಸ್‌ಎಂಇ ಘಟಕಗಳಿಗೆ 3 ಲಕ್ಷ ಕೋಟಿ ರೂ.ಗಳ ಅಡಮಾನ ರಹಿತ ಸಾಲ ನೀಡಲಾಗುತ್ತದೆ. 45 ಲಕ್ಷ ಕೈಗಾರಿಕೆಗಳು ಇದರ ಲಾಭ ಪಡೆಯಲಿವೆ. 25ರಿಂದ 100 ಕೋಟಿ ವಹಿವಾಟು ಹೊಂದಿರುವ ಉದ್ಯಮಗಳಿಗೆ ಈ ಸಾಲ ಸೌಲಭ್ಯ ದೊರಕಲಿದೆ.

ಸಾಲದ ಮರುಪಾವತಿಗೆ ನಾಲ್ಕು ವರ್ಸಗಳ ಕಾಲಾವಕಾಶ ನೀಡಲಾಗಿದೆ. ಸಾಲ ಪಡೆದ ಮೊದಲ 12 ತಿಂಗಳ ವರೆಗೆ ಸಾಲವನ್ನು ಮರುಪಾವತಿಸುವ ಅಗತ್ಯವಿಲ್ಲ. ಬ್ಯಾಂಕ್‌ಗಳು ನೀಡುವ ಸಾಲಕ್ಕೆ ಕೇಂದ್ರ ಸರಕಾರವೇ ಖಾತರಿ ನೀಡಲಿದೆ ಎಂಧು ಅವರು ವಿವರಿಸಿದರು.

ಎಂಎಸ್‌ಎಂಇಗಳಿಗಾಗಿ ಫಂಡ್‌ ಆಫ್ ಫಂಡ್ಸ್‌ (ಮಹಾನಿಧಿ) ಸ್ಥಾಪಿಸಲಾಗುತ್ತಿದ್ದು ಅದಕ್ಕೆ 50,000 ಕೋಟಿ ರೂ.ಗಳನ್ನು ತುಂಬಲಾಗುತ್ತದೆ. ಬೆಳವಣಿಗೆ ಸಾಧ್ಯತೆಯಿರುವ ಎಂಎಸ್‌ಎಂಇಗಳಿಗೆ ಇದರಿಂದ ಅಗತ್ಯ ಬಂಡವಾಳ ದೊರೆಯಲಿದೆ.

ಅಲ್ಲದೆ ಎಂಎಸ್‌ಎಂಇಗಳ ವ್ಯಾಖ್ಯಾನವನ್ನೂ ಬದಲಿಸಲಾಗುತ್ತಿದೆ. ಇದುವರೆಗೆ 25 ಲಕ್ಷ ರೂ.ಗಳ ವಹಿವಾಟು ಹೊಂದಿದವರನ್ನು ಮಾತ್ರ ಮೈಕ್ರೋ ಯುನಿಟ್‌ (ಸೂಕ್ಷ್ಮ ಘಟಕಗಳು) ಎಂದು ಕರೆಯಲಾಗುತ್ತಿತ್ತು. ಇನ್ನು ಮುಂದೆ 1 ಕೋಟಿ ರೂಗಳ ವರೆಗೆ ಹೂಡಿಕೆ ಹೊಂದಿರುವ ಘಟಕಗಳನ್ನೂ ಸೂಕ್ಷ್ಮ ಘಟಕಗಳೆಂದು ಪರಿಗಣಿಸಲಾಗುತ್ತದೆ ಎಂದು ಸಚಿವೆ ತಿಳಿಸಿದರು.

ಅಲ್ಲದೆ 5 ಕೋಟಿ ರೂ.ಗಳ ವರೆಗೆ ವಹಿವಾಟು ನಡೆಸುವ ಘಟಕಗಳೂ ಸೂಕ್ಷ್ಮ ಘಟಕಗಳ ವ್ಯಾಪ್ತಿಗೆ ಬರುತ್ತವೆ. ಸಣ್ಣ ಉದ್ಯಮವನ್ನು ನಿರ್ಧರಿಸಲು ವಹಿವಾಟು ಆಧರಿತ ಮಾನದಂಡವನ್ನು ಅಳವಡಿಸಲಾಗುತ್ತಿದೆ ಎಂದು ಅವರು ವಿವರಿಸಿದರು.

ವಿತ್ತೀಯ ಮತ್ತು ಇತರ ಲಾಭಗಳನ್ನು ಉಳಿಸಿಕೊಳ್ಳಲು ಅನುಕೂಲವಾಗುವಂತೆ ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಹೂಡಿಕೆ ಮತ್ತು ವಹಿವಾಟು ಮಿತಿಗಳನ್ನು ಬದಲಿಸಲಾಗುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.

200 ಕೋಟಿ ರೂ.ಗಳ ವರೆಗಿನ ಸರಕಾರಿ ಖರೀದಿಗಾಗಿ ಜಾಗತಿಕ ಟೆಂಡರ್‌ಗಳನ್ನು ನಿಷೇಧಿಸಲಾಗುತ್ತದೆ. ಇದರಿಂದ ಎಂಎಸ್‌ಎಂಇಗಳಿಗೆ ಸ್ಪರ್ಧಿಸಲು ಸಹಾಯವಾಗುತ್ತದೆ ಮತ್ತು ಸರಕಾರಿ ಟೆಂಡರ್‌ಗಳನ್ನು ಪಡೆದು ಪೂರೈಕೆ ಜಾಲದಲ್ಲಿ ಸೇರಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಅವರು ನುಡಿದರು.

ಆದಾಯ ತೆರಿಗೆದಾರರಿಗೆ ಬಂಪರ್ ಕೊಡುಗೆ:
ಆದಾಯ ತೆರಿಗೆದಾರರಿಗೆ ಕೇಂದ್ರ ಸರಕಾರ 18,000 ಕೋಟಿ ರೂ.ಗಳನ್ನು ಹಿಂದಿರುಗಿಸಿದೆ. ಇದರಿಂದ 14 ಕೋಟಿ ತೆರಿಗೆದಾರರಿಗೆ ಲಾಭವಾಗಲಿದೆ.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಐಪಿಎಲ್ 2020: ಗೆದ್ದು ದ್ವಿತೀಯ ಸ್ಥಾನಿಯಾದ ಡೆಲ್ಲಿ, ಸೋತರೂ ಪ್ಲೇ ಆಫ್ ಪ್ರವೇಶಿಸಿದ ಬೆಂಗಳೂರು!

Upayuktha News Network

ಶುಕ್ರವಾರವೂ ಬಿಗಿ ನಿರ್ಬಂಧ: ದ.ಕ ಜಿಲ್ಲೆಯಲ್ಲಿ ಖಾಸಗಿ ವಾಹನಗಳ ಓಡಾಟಕ್ಕೆ ಅವಕಾಶವಿಲ್ಲ

Upayuktha

ಇಂದಿನ ಕ್ಯಾಂಪ್ಕೋ ಮಾರುಕಟ್ಟೆ ಧಾರಣೆ (21-08-2019)

Upayuktha