ಮೈಸೂರು : ಈಗಾಗಲೇ ದೇಶದೆಲ್ಲೆಡೆ ಆತ್ಮ ನಿರ್ಭರ ಭಾರತದ ಸದ್ದಿದೆ. ಈ ಬಾರಿಯ ದಸರಾ ಹಬ್ಬದಲ್ಲೂ ಆತ್ಮ ನಿರ್ಭರ ಭಾರತದ ಮಾತು ಬೆಳಕಿನ ರೂಪದಲ್ಲಿ ಪ್ರಜ್ವಲಿಸಲಿದೆ. ಅಂದರೆ ಈ ವರ್ಷದ ದಸರಾಗೆ ಚೈನಾ ಬಲ್ಬ್ಗಳನ್ನು ನಿಷೇಧ ಮಾಡಲಾಗಿದೆ.
ದಸರಾಗೆ ದಿನಗಣನೆ ಆರಂಭವಾಗಿದ್ದು ಹೀಗಾಗಿ ದಸರಾ ಸಿದ್ಧತೆಯೂ ಜೋರಾಗಿದೆ. ಹಾಗೆಯೇ ಅರಮನೆಯ ದೀಪಾಲಂಕಾರಕ್ಕಾಗಿ ಬಲ್ಬ್ಗಳ ಪರಿಶೀಲನೆ ಹಾಗೂ ಕೆಟ್ಟು ಹೋದ ಬಲ್ಬ್ಗಳನ್ನು ಬದಲಾಯಿಸುವ ಕೆಲಸ ನಡೆಯುತ್ತಿದ್ದು, ಈ ಬಾರಿ ಮೈಸೂರು ದಸರಾ ದೀಪಾಲಂಕಾರದ ವಿಶೇಷತೆಯೆಂದರೆ ಆತ್ಮ ನಿರ್ಭರ ಭಾರತಕ್ಕೆ ಒತ್ತು ನೀಡಲಾಗಿದೆ.
ಚೀನಾ ದ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಇರುವುದರಿಂದ ಈಗಾಗಲೇ ಚೈನಾ ಆ್ಯಪ್ಗಳನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿದೆ. ಇದೀಗ ಮೈಸೂರು ದಸರೆಯಲ್ಲಿ ಚೈನಾ ಬಲ್ಬ್ಗಳನ್ನು ಕೂಡ ನಿಷೇಧ ಮಾಡಲಾಗುತ್ತಿದೆ.
ಈ ಮೊದಲು ಮೈಸೂರು ದಸರಾ ವೇಳೆ 60 ರಿಂದ 75 ಕಿ.ಮೀ ಉದ್ದದ ರಸ್ತೆಗಳಿಗೆ ದೀಪಾಲಂಕಾರ ಮಾಡಿ, 150ಕ್ಕೂ ಹೆಚ್ಚು ವೃತ್ತಗಳು ಕಂಗೊಳಿಸುತ್ತದೆ.
ಇದಕ್ಕಾಗಿ ಮುಂಬೈ, ದೆಹಲಿ ಮತ್ತು ಕೊಲ್ಕತ್ತಾದಿಂದ ನಾನಾ ಬಗೆಯ ಬಲ್ಬುಗಳು ಹಾಗೂ ವಿವಿಧ ಬಿಡಿಭಾಗಗಳನ್ನು ತರಿಸಿಕೊಳ್ಳಲಾಗುತ್ತದೆ.
ಆದ್ದರಿಂದ ಈ ಬಾರಿ ಸ್ಥಳೀಯ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ. ಚೀನಾದ ಯಾವುದೇ ವಸ್ತುಗಳನ್ನು ದಸರಾ ದೀಪಾಲಂಕಾರದಲ್ಲಿ ಬಳಸದಿರಲು ನಿರ್ಧರಿಸಲಾಗಿದೆ ಎಂದು ಅರಮನೆ ಆಡಳಿತ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಮಣ್ಯ ತಿಳಿಸಿದ್ದಾರೆ.