ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ಶಂಭುಕಲ್ಲಿನ ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನ

|ಶರನ್ನವರಾತ್ರಿ ಪುಣ್ಯಕಾಲ| ಮೃಣ್ಮಯ ದುರ್ಗೆಯರು|

ದೇವರು- ದೇವತೆಯರು- ದೈವಗಳ ಸಂಕಲ್ಪದ ಸಮುಚ್ಚಯವಾಗಿ ಹಲವು ಪೌರಾಣಿಕ, ಐತಿಹಾಸಿಕ ಪೂರ್ವಪೀಠಿಕೆಗಳೊಂದಿಗೆ ನಿಗೂಢ ರಹಸ್ಯಗಳನ್ನು ಒಳಗೊಂಡ ಉದ್ಯಾವರದ ಶಂಭುಕಲ್ಲು ವೀರಭದ್ರ ದುರ್ಗಾಪರಮೇಶ್ವರೀ ದೇವಸ್ಥಾನವು ಮೇಲ್ನೋಟಕ್ಕೆ ಸಾಮಾನ್ಯ ದೇವಾಯತನದಂತೆ ಕಂಡರೂ ಅಧ್ಯಯನಾಕಾಂಕ್ಷೆಯಿಂದ ಮಾಹಿತಿಗಳನ್ನು ಸಂಗ್ರಹಿಸಿದಾಗ ಮಹತ್ವ ಪೂರ್ಣ ಅಂಶಗಳು, ಮೂಲತಃ ಶಕ್ತಿ ಆರಾಧನಾ ಕೇಂದ್ರವಾಗಿದ್ದುದಕ್ಕೆ ಪುರಾವೆಗಳು ಲಭಿಸುತ್ತವೆ.

ದೇವಳದ ಹೆಸರನ್ನು ಗಮನಿಸಿದರೆ ವೀರಭದ್ರ ಮೂಲಸ್ಥಾನ ದೇವರಾಗಿ, ಉಳಿದಂತೆ ದುರ್ಗಾ ಸಂಕಲ್ಪಗಳು ಉಪಸ್ಥಾನಗಳೆಂದು ಸಹಜವಾಗಿ ತಿಳಿಯಬೇಕಾಗುತ್ತದೆ. ಆದರೆ ಈ ದೇವಳದಲ್ಲಿರುವ ಆಳೆತ್ತರದ ಮೂರು ಮೃತ್ತಿಕಾ ಸ್ತ್ರೀ ಬಿಂಬಗಳೇ ಮೂಲಸ್ಥಾನ ಸಂಕಲ್ಪಗಳಾಗಿವೆ.

ಪೂರ್ವಾಭಿಮುಖವಾಗಿರುವ ದೀರ್ಘ ಚತುರಸ್ರ ಆಕಾರದ ಗರ್ಭಗುಡಿಯು ಸುಖನಾಸಿ ಸಹಿತವಾಗಿದ್ದು ನವರಂಗದ ಇಕ್ಕೆಲಗಳಲ್ಲಿ ದಕ್ಷಿಣಾಭಿಮುಖವಾಗಿ ವೀರಭದ್ರ ದೇವರ ರಕ್ತಚಂದನದ ಪ್ರತಿಮೆ ಹನ್ನೆರಡು ಕೈಗಳನ್ನು ಹೊಂದಿ ವೀರಮುದ್ರೆಯಲ್ಲಿ ನಿಂತಂತಿದೆ .ಇದು ವಿಜಯನಗರ ಕಾಲದ ರಚನೆ. ಉತ್ತರಾಭಿಮುಖವಾಗಿರುವ ಗಣಪತಿ ಕ್ರಿ.ಶ. 8-9ನೇ ಶತಮಾನದ ನಿರ್ಮಿತಿ. ಉತ್ತರಕ್ಕೆದೇವಳದ ಹೊರಸುತ್ತಿನಲ್ಲಿ ನಂದಿ ಸಾನ್ನಿಧ್ಯ, ಆಗ್ನೇಯದಲ್ಲಿ ಒಂದಷ್ಟು ಶಾಸನಗಳು, ವೀರಗಲ್ಲುಗಳು ಉದಿಯಾವರದ (ಉದ್ಯಾವರದ) ಐತಿಹಾಸಿಕ ಪರಂಪರೆಗೆ ಅಥವಾ ನಡೆದು ಹೋದ ಚಾರಿತ್ರಿಕ ಘಟನೆಗಳಿಗೆ ಸಾಕ್ಷಿಯಾಗಿವೆ. ನಾಗಸಾನ್ನಿಧ್ಯವು ಸ್ಥಾನಪಡೆದಿದೆ.

ಈಶಾನ್ಯದಲ್ಲಿ ಪಂಜುರ್ಲಿ ದೈವಸ್ಥಾನ ದಕ್ಷಿಣಾಭಿಮುಖವಾಗಿದೆ. ಪಶ್ಚಿಮಕ್ಕೆ ಮುಖವಾಗಿರುವ ಮಹಾಕಾಳಿಯ ಕುಳಿತ ಮೃಣ್ಮಯ ಮೂರ್ತಿ ಇರುವ ಗುಡಿಗಳಿವೆ. ಸಮಗ್ರವಾಗಿ ಈ ಕ್ಷೇತ್ರ ಶಿಷ್ಟ – ಜನಪದ ಆರಾಧನಾ ವಿಧಾನಗಳ ಸಂಗಮ ಸ್ಥಾನವಾಗಿದೆ.

ಮೃಣ್ಮಯ ಮೂರ್ತಿಗಳು:
ಗರ್ಭಗುಡಿಯಲ್ಲಿ ಏಕಾಸನದಲ್ಲಿ ಕುಳಿತಂತೆ ಇರುವ ಮೂರು ಆಳೆತ್ತರದ ವಿಶಿಷ್ಟ ಮಣ್ಣಿನಿಂದ ನಿರ್ಮಿಸಿದ ದ್ವಿಬಾಹು ಸ್ತ್ರೀ ಮೂರ್ತಿಗಳಲ್ಲಿ (ದಕ್ಷಿಣದಿಂದ ಉತ್ತರಕ್ಕೆ) ಮೊದಲನೇ ಮೂರ್ತಿಯ ಬಲಕೈಯಲ್ಲಿ ದರ್ಪಣವಿದೆ, ಎಡಕೈಯಲ್ಲಿ ಅಮೃತಕಲಶ ಇದೆ, ಹಂಸವಾಹನವಾಗಿದೆ.

ಮಧ್ಯದ ಮೂರ್ತಿ ತ್ರಿಶೂಲ ಹಾಗೂ ಡಮರನ್ನು ಎರಡು ಕೈಯಲ್ಲಿ ಧರಿಸಿದ್ದು ವೃಷಭವಾಹನವಾಗಿದೆ. ಉತ್ತರ ಬದಿಯ ಬಿಂಬ ಚಕ್ರ, ಶಂಖ ಕೈಗಳಲ್ಲಿ ಹಿಡಿದಿದ್ದು ಗರುಡವಾಹನವಾಗಿದೆ.

6-7 ಅಡಿ ಎತ್ತರದ ಈ ಪ್ರತಿಮೆಗಳನ್ನು ಬ್ರಾಹ್ಮಿ, ಪರಮೇಶ್ವರೀ, ವೈಷ್ಣವೀ ಎಂದು ಪ್ರಸ್ತುತ ಗುರುತಿಸಲಾಗಿದೆ. ಈ ಸಾನ್ನಿಧ್ಯಗಳಿಗೆ ವೈದಿಕ ವಿಧಾನದ ಸಾತ್ತ್ವಿಕ ಪೂಜಾ ವಿಧಿಗಳು ನೆರವೇರುತ್ತಿವೆ.

ಹೊರ ಸುತ್ತಿನಲ್ಲಿರುವ ಮಹಾಕಾಳಿ ಗುಡಿಯಲ್ಲಿರುವ ವಿಶಿಷ್ಟ ಮಣ್ಣಿನ ಮೃಣ್ಮಯ ಮೂರ್ತಿಯು 5-6 ಅಡಿ ಎತ್ತರವಿದ್ದು ಸಿಂಹವಾಹಿನಿಯಾಗಿದೆ. ಕೈಯಲ್ಲಿ ಪಾನಪಾತ್ರೆ, ಖಡ್ಗವನ್ನು ಧರಿಸಿದಂತಿದೆ. ತಲೆಯಮೇಲೆ ಏಳು ಹೆಡೆಯ ನಾಗಸ್ವರೂಪಗಳಿವೆ. ಕೈ, ಕಾಲು ನಾಗಾಭರಣದಿಂದ ಅಲಂಕೃತವಾಗಿದೆ. ಈ ಸಂಕಲ್ಪಕ್ಕೆ ಅವೈದಿಕ ವಿಧಾನದಿಂದ ಪೂಜೆ ನಡೆಯುತ್ತಿದೆ. ಇದನ್ನು ‘ಚಾಮುಂಡಾ’ ಎಂದೂ ಗುರುತಿಸಲಾಗಿದೆ.

ಬ್ರಾಹ್ಮಿ, ಮಹೇಶ್ವರೀ, ವೈಷ್ಣವೀ ಇವು ಸಪ್ತಮಾತೃಕೆಯರಲ್ಲಿ ಮೂವರಾದರೂ ಮೂಲರೂಪದಲ್ಲೆ ಪೂಜಿಸಿ ಕ್ರಮವಾಗಿ ಸರಸ್ವತಿ, ಗಾಯತ್ರಿ, ಸಾವಿತ್ರಿ ಎಂದು ಹೇಳಲಾಗಿದೆ. ಈ ದೇವಿಯರನ್ನು ಸಮಷ್ಟಿಯಾಗಿ ದುರ್ಗಾ ಎಂದು ಪೂಜಿಸಲಾಗುತ್ತಿದೆ ಎಂದು ಕ್ರಿ.ಶ. 8ನೇ ಶತಮಾನದ ಶಾಸನವೊಂದು ಪುರಾವೆ ಒದಗಿಸುತ್ತದೆ. ಇದು ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರ ಅಭಿಪ್ರಾಯ.

ಮಣ್ಣಿನಿಂದ ಮೂರ್ತಿ ನಿರ್ಮಿಸಿ ಪೂಜಿಸುವ ಪದ್ಧತಿ ಪುರಾತನವಾದುದು. ಬಾರಕೂರಿನ ಮಹಾಲಕ್ಷ್ಮಿ, ಪೊಳಲಿಯ ರಾಜರಾಜೇಶ್ವರಿ, ಹಾಗೂ ಮೂಡಬಿದರೆಯ ಹಿರೇ ಮತ್ತು ಲೆಪ್ಪದ ಬಸದಿಗಳಲ್ಲಿ ಮಾತ್ರ ಈ ತೆರನಾದ ಮೃಣ್ಮಯ ಮೂರ್ತಿಗಳಿವೆ ಎಂದು ಇತಿಹಾಸ ಸಂಶೋಧಕ ಡಾ.ಪಿ.ಎನ್. ನರಸಿಂಹಮೂರ್ತಿ ಹೇಳಿದ್ದರು.

ಡಾ.ಗುರುರಾಜ ಭಟ್ಟರು ದೇವಳದ ರಚನಾ ಶೈಲಿ ಹಾಗೂ ಮೃಣ್ಮಯ ಮೂರ್ತಿಗಳ ಪ್ರತಿಮಾ ಲಕ್ಷಣಗಳನ್ನು ಆಧರಿಸಿ ಏಳನೇ ಶತಮಾನದ ಪಾರಂಭದ ಕಾಲದ್ದೆಂದು ಅಭಿಪ್ರಾಯಪಟ್ಟಿದ್ದರೆ ಡಾ.ನರಸಿಂಹಮೂರ್ತಿಯವರು ಈ ಪ್ರತಿಮೆಗಳ ಕಾಲಮಾನವು ಇನ್ನೂ ಪುರಾತನವಿರಬೇಕೆಂದು ಹೇಳಿದ್ದರು.

ಇತಿಹಾಸ- ಶಕ್ತಿಕೇಂದ್ರ:

ಉಡುಪಿಯಿಂದ ಸುಮಾರು ಐದು ಕಿ.ಮೀ. ದಕ್ಷಿಣಕ್ಕೆ ದೀರ್ಘ ಅವಧಿಗೆ ತುಳನಾಡನ್ನಾಳಿದ ಪ್ರಥಮ ರಾಜವಂಶವಾದ ಆಳುಪರ ಪ್ರಾಚೀನ ರಾಜಧಾನಿಯಾಗಿ ಮೆರೆದಿದ್ದ ಸ್ಥಳವೇ ಉದಿಯಾವರ (ಉದ್ಯಾವರ).

ಈ ಪ್ರದೇಶದಲ್ಲಿ ಪಾಶುಪತರು, ಶೈವರು ನೆಲೆಯಾಗಿದ್ದರು. ಗೊರವ ಎಂಬ ಯತಿಗಳು (ಪಾಶುಪತ ಯತಿಗಳು) ಅರಸರಿಂದ ಪಡೆದ ದಾನಗಳನ್ನು ದೇವಳದಲ್ಲಿ ವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದರು ಎಂದು ಹೇಳಿರುವ ಡಾ.ನರಸಿಂಹ ಮೂರ್ತಿಯವರು ಇದೊಂದು ಪುರಾತನ ಶಕ್ತಿ ಉಪಾಸನಾ ಸ್ಥಾನವೆಂದು ಅಭಿಪ್ರಾಯಪಟ್ಟಿದ್ದರು. ದೇವಳದ ಪರಿಸರದಲ್ಲಿ ದೊರೆಯುವ ವೀರಗಲ್ಲುಗಳು ಆಳುಪರಲ್ಲಿ ಸಂಭವಿಸಿದ್ದ ದಾಯಾದ್ಯ ಕಲಹಕ್ಕೆ ಪುರಾವೆ ಒದಗಿಸುತ್ತದೆ ಎನ್ನುತ್ತಾರೆ.

ಮಾರ್ಕಾಂಡೇಯ ಋಷಿ ಶಂಭುಕಲ್ಲಿನಲ್ಲಿ ಶಿವಸಾನ್ನಿಧ್ಯವನ್ನು ಸಂಕಲ್ಪಸಿ ಬೆಟ್ಟದ ಬುಡದಲ್ಲಿ ವಿಶಿಷ್ಟ ಮಣ್ಣಿನಿಂದ ದುರ್ಗೆಯರ ಬಿಂಬವನ್ನು ಮಾಡಿ ಪ್ರತಿಷ್ಠಾಪಿಸಿದರಂತೆ. ಬಳಿಕ ಪೊಳಲಿಯಲ್ಲಿ ರಾಜರಾಜೇಶ್ವರಿಯನ್ನು ಸ್ಥಾಪಿಸಿದರೆಂದು ದೇವಳದ ಅರ್ಚಕರು ವಿವರ ನೀಡಿದ್ದರು (2004 ರಲ್ಲಿ).

ಆಚರಣೆಗಳು-ಅನುಗ್ರಹಗಳು:
ಎಲ್ಲಾ ಹಬ್ಬಗಳ ಆಚರಣೆ ಇಲ್ಲಿದೆ. ಅವಲಕ್ಕಿಪೂಜೆ ಎಂಬುದು ನರಕ ಚತುರ್ದಶಿಯ ಮುನ್ನಾದಿನ ನಡೆಯುತ್ತದೆ. ‘ಹರಕೆ ಪೂಜೆ’ ಎಂಬುದು ಇನ್ನೊಂದು ವಿಶೇಷ ಪೂಜೆ ನಡೆಯತ್ತದೆ. ಇದೊಂದು ಏಕಾಂತ ಸೇವೆಯ ರೂಪದ ಪೂಜೆ. ದೇವಸ್ಥಾನದ ಬಾಗಿಲು ಹಾಕಿ ಕಡುಬು, ಹಲಸಿನ‌ ಹಣ್ಣಿನ ಕಡುಬು, ಅರಸಿನ ಎಲೆಯಲ್ಲಿ ಮಾಡಿದ ಗಟ್ಟಿ ಎಂಬ ಭಕ್ಷ್ಯವನ್ನು ದೇವಿಯರಿಗೆ ಸಮರ್ಪಿಸಿ ಮಾಡುವ ಪೂಜೆ.

ನವರಾತ್ರಿ ವೇಳೆ ರಾತ್ರಿ ಕಲ್ಪೋಕ್ತ ಪೂಜೆ, ಅರ್ಚಕರ ಮನೆಯಲ್ಲಿರುವ ದೇವಳದ ಬಲಿಮೂರ್ತಿಗೂ ನಡೆಯಬೇಕು. ವೀರಭದ್ರನು ವಿಶೇಷ ಶಕ್ತಿವಂತನಾಗಿ “ವಡೆ” ಎಂಬ ಭಕ್ಷ್ಯ ಪ್ರಿಯನು.

ಮಹಾಕಾಳಿಗೆ ನವರಾತ್ರಿ ವಿಶೇಷ ಆರಾಧನೆ, ಮಾರಿಪೂಜೆ ನಡೆಯುತ್ತದೆ. ಕೋಳಿ ಬಲಿ ಕೊಡಲಾಗುತ್ತದೆ. ಕೋಳಿಯ ಪದಾರ್ಥ ಮಾಡಿ ಶೇಂದಿಯೊಂದಿಗೆ ಬಡಿಸಿಟ್ಟು ಮಹಾಕಾಳಿಗೆ ಪೂಜೆ. ಪಂಜುರ್ಲಿಯು ಉಗ್ರಾಣ ಪಂಜುರ್ಲಿ ಎಂದೇ ಪ್ರಸಿದ್ಧ. ಶಂಭುಕಲ್ಲಿನ (ಚಂಬುಕಲ್ಲು) ಉತ್ಸವ “ಕಲ್ಲಡೋತ್ಸವ” ಎಂದೇ ಜನಪ್ರಿಯ.

ಸರ್ವಜಾತಿಯ ಗ್ರಾಮಸ್ಥರ ಸಹಿತ ಗೌಡಸಾರಸ್ವತ ಬ್ರಾಹ್ಮಣರು ಈ ಕ್ಷೇತ್ರಕ್ಕೆ ಆಗಮಿಸಿ ಪೂಜೆಗಳಲ್ಲಿ ಪಾಲ್ಗೊಳ್ಳುತ್ತಾರೆ. ಶ್ರಾವಣದ ಚೂಡಿಯ ವೇಳೆ ದೇವರಿಗೂ ಚೂಡಿ ಸಮರ್ಪಿಸುವ ಸಂಪ್ರದಾಯ ಇಲ್ಲಿದೆ.

ಈ ಕ್ಷೇತ್ರ ಮಾಂಗಲ್ಯ ಭಾಗ್ಯ, ಸಂತಾನ ಪ್ರಾಪ್ತಿಗೆ ‘ಸಿದ್ಧಿ ಸನ್ನಿಧಾನ’ ಎಂಬುದು ನಂಬಿಕೆ. ದುಷ್ಟಾರಿಷ್ಟ ಪರಿಹಾರ ಹಾಗೂ ಇಷ್ಟಾರ್ಥ ಸಿದ್ಧಿಗೆ ಕ್ಷೇತ್ರ ಹೆಸರಾಗಿದೆ.

ಬಲಿಮೂರ್ತಿ:
ಪಂಚಲೋಹದ ದುರ್ಗಾ ಬಲಿಮೂರ್ತಿ ಚತುರ್ಬಾಹುವಾಗಿದೆ. ಪ್ರತಿಮೆಯ ಮೇಲಿನ ಕೈಗಳಲ್ಲಿ ಚಕ್ರ, ಶಂಖಗಳಿದ್ದರೆ ಕೆಳಗಿನ ಕೈಗಳು ಅಭಯ, ವರದ ಮುದ್ರೆಯನ್ನು ತೋರಿಸುತ್ತವೆ. ಪ್ರಧಾನ ಅರ್ಚಕರ ಮನೆಯಲ್ಲಿ ಬಲಿಮೂರ್ತಿ ಇರುತ್ತದೆ. ಉತ್ಸವದ ವೇಳೆ ಬಲಿಮೂರ್ತಿಯನ್ನು ದೇವಸ್ಥಾನಕ್ಕೆ ತರಲಾಗುತ್ತದೆ. ನವರಾತ್ರಿ ಕಾಲದಲ್ಲಿ ಅರ್ಚಕರ ಮನೆಯಲ್ಲಿ ಬಲಿಮೂರ್ತಿಗೆ ಅನ್ನಸಂತರ್ಪಣೆ ನಡೆಯುವುದು ಸಂಪ್ರದಾಯ.

-ಕೆ.ಎಲ್. ಕುಂಡಂತಾಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಧರ್ಮಸ್ಥಳದಲ್ಲಿ ಹೆಗ್ಗಡೆಯವರ ಪಟ್ಟಾಭಿಷೇಕದ 53ನೇ ವರ್ಷದ ವರ್ಧಂತಿ ಆಚರಣೆ ನಾಳೆ

Upayuktha

ಬಿಎಸ್‌ವೈ ಸೇರಿದಂತೆ ಗಣ್ಯರಿಂದ ಗೌರಿ ಗಣೇಶ ಹಬ್ಬದ ಶುಭಾಶಯ

Harshitha Harish

ಬೆಳಕನು ಚೆಲ್ಲುತ ಬಂತೇ ಬಂತು ದೀಪಾವಳಿ: ‘ಪೊಲಿ’ ಆಶಯದ ‘ಸೊಡರ’ ಹಬ್ಬ

Upayuktha

Leave a Comment