ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ನಿರ್ಜರಾರಣ್ಯದ “ಕಟೀಲಪ್ಪೆ”

|ಶರನ್ನವರಾತ್ರಿ ಪುಣ್ಯಕಾಲ| ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ‌ಕಟೀಲು |
‘ಊಟ- ಆಟ- ಪಾಠ’ ಕ್ಷೇತ್ರಕ್ಕೆ ಭೂಷಣ- ಕೀರ್ತಿ

ಶ್ರೀ ದುರ್ಗಾ ಪರಮೇಶ್ವರಿಯು “ಭ್ರಾಮರಿ”ಯಾಗಿ ಆವಿರ್ಭವಿಸಿದ ‘ಪುಣ್ಯ ಭೂಮಿ’ ಕಟೀಲು. ವಿಸ್ತೃತ ನಿತ್ಯಪೂಜಾ ವಿಧಾನ, ವಿಶೇಷ ಪರ್ವಗಳ ವಿಶಿಷ್ಟ ಆಚರಣೆ, ಆಗಮ ಬದ್ಧತೆ, ಸಂಪ್ರದಾಯ- ಶಿಷ್ಟಾಚಾರ, ಶಿಕ್ಷಣ- ಕಲೆಗಳಿಗೆ ಆಶ್ರಯಸ್ಥಾನ, ನಿರಂತರ ಮೂರು ಹೊತ್ತು ಅನ್ನ ದಾಸೋಹ ನೆರವೇರುವ ದೇವಾಲಯ ಪರಿಕಲ್ಪನೆಯ ಪರಿಪೂರ್ಣ ಅನಾವರಣವಾಗಿ ಕಟೀಲು ಕ್ಷೇತ್ರ ಆದೃತವಾಗಿದೆ.

ನಿಗೂಢ ರಹಸ್ಯವನ್ನು, ಅಭೇದ ಸತ್ಯವನ್ನು, ಭವ್ಯದ ಅಂತರ್ಗತ ದಿವ್ಯ ಸಂಕಲ್ಪದ ವ್ಯಾಖ್ಯಾನವನ್ನು ನೀಡುವಂತೆ ಕಟೀಲು ಕ್ಷೇತ್ರ ನಿಸರ್ಗದ ಅಚ್ಚರಿಯಾಗಿದೆ; ಆದರೆ ಅಷ್ಟೆ ಸಹಜವಾಗಿ‌ ಭಾಸವಾಗುತ್ತದೆ.

ಗೊಂದಲಗಳಿಲ್ಲದ ಕಟೀಲಮ್ಮನ ಸನ್ನಿಧಾನ ನಂಬಿಕೆಯ ನೆಲೆಯಾಗಿ ರೋಚಕ ಅನುಭವಗಳನ್ನು‌ ನೀಡುತ್ತದೆ. ದರ್ಶನ ಸಾರ್ಥಕವಾಗುತ್ತದೆ. ‌ಬನ್ನಿ.. ಇಲ್ಲಿ ನಿಗೂಢ ರಹಸ್ಯಗಳಿದ್ದರೂ, ವಿಲಕ್ಷಣತೆಗಳಿದ್ದರೂ ಶ್ರೀ ಕ್ಷೇತ್ರ ಕಟೀಲು ‘ಕ್ಲಿಷ್ಟ’ ಅನ್ನಿಸುವುದಿಲ್ಲ. ಆದರೆ ಸರಳ ಸುಂದರ ಸಾಕ್ಷಾತ್ಕಾರದ ಅನುಭವವಾಗುತ್ತದೆ. ಈ ದರ್ಶನ; ಮುಗ್ಧ ಭಾವ ಮತ್ತು ಶ್ರದ್ಧೆಯೇ ಪ್ರಧಾನವಾಗಿ ನಿಚ್ಚಳ‌ ಹಾಗೂ ದಿವ್ಯ ಅನುಭವದಿಂದ ಭಕ್ತನ ಮನಸ್ಸು ಪ್ರಸನ್ನವಾಗುತ್ತದೆ. ಕಾರಣ ಇಲ್ಲಿ ನೆಲೆಯಾದವಳು “ಕಟ್ಲಪ್ಪೆ” ಅಥವಾ “ಕಟೀಲಪ್ಪೆ”, ಆಕೆಯೇ ‘ಜಗಜ್ಜನನಿ‌’, ದುರ್ಗಾಪರಮೆಶ್ವರೀ. ಸ್ಥೂಲವಾಗಿ ಹೇಳುವುದಾದರೆ ಒಬ್ಬಳು ‘ಅಮ್ಮ” … ಸ್ವತಃ ತಾನೇ ಆವಿರ್ಭವಿಸಿದ ಸತ್ಯದ ಸಂಕಲ್ಪ‌.

ಈ ಅಮ್ಮನ ಸನ್ನಿಧಾನ ಯಾಕಿಷ್ಟು‌ ಆತ್ಮೀಯವಾಗುತ್ತದೆ? ‘ಅಮ್ಮಾ’… ಎರಡಕ್ಷರದ ಅಕ್ಷರಕ್ಕಿರುವ ಅಮೇಯವಾದ ಅಮಿತ ಭಾವನೆಗಳನ್ನು ಉದ್ದೀಪಿಸಬಲ್ಲ ಅಮೂಲ್ಯ, ಅಮಲ ಸಂಬಂಧವನ್ನು‌ ನೆನಪಿಸಿ ಸ್ಥಾಯಿಗೊಳಿಸಬಲ್ಲ ಅನನ್ಯತೆ ಅನ್ಯ ಸಂಬಂಧ ವಾಚಕಗಳಿಲ್ಲ. ಅಂದರೆ ಒಬ್ಬಳು ‘ಅಮ್ಮ’ನೊಂದಿಗೆ ಹೇಗೆ ಬೆಸೆದುಕೊಳ್ಳಬಲ್ಲೆವೋ‌ ಅಷ್ಟೆ‌ ಸಲುಗೆಯಿಂದ ಗಾಢವಾಗಿ ಕಟೀಲಮ್ಮನೊಂದಿಗೆ‌ ‘ತಾದಾತ್ಮ್ಯ’ ಸಾಧಿಸಬಹುದು. ಆದರೆ ಶ್ರದ್ಧೆ, ನಂಬಿಕೆ ಪ್ರಧಾನವಾಗುತ್ತದೆ. ಇದು ಇಲ್ಲಿಯ ಸಾನ್ನಿಧ್ಯ ವಿಶೇಷ.

ಅಮ್ಮ- ಮಗು ಸಂಬಂಧ ಲೌಕಿಕದಲ್ಲಿ‌ ಸಂಭವಿಸಿದ ಬಾಂಧವ್ಯ. ಇದು ಅಪ್ಪಟ ಸತ್ಯ. ವಾತ್ಸಲ್ಯ, ಕರುಣೆಯನಿಧಿ, ಅಮೂರ್ತಭಾವ- ಬಂಧನ‌ ಆದುದರಿಂದ ಶ್ರೇಷ್ಠ, ಜ್ಯೇಷ್ಠ, ಸರ್ವಮಾನ್ಯ, ಪ್ರೀತಿಯ ಉಗಮಸ್ಥಾನ. ಈ ಪ್ರೀತಿ, ಬಾಂಧವ್ಯವೇ, ಕಾರಣವಾಗುವ ಕಟೀಲಮ್ಮನ ದರ್ಶನಕ್ಕೆ ಭಕ್ತಸಂದೋಹ ಆಗಮಿಸುತ್ತದೆ. ಅಮ್ಮನಲ್ಲಿ‌ ನಿವೇದಿಸಿಕೊಳ್ಳಲು ಅಂಜಿಕೆ ಇಲ್ಲ, ಕಷ್ಟ ವಿವರಿಸಲು ಸಂದೇಹಗಳಿಲ್ಲ, ಆದುದರಿಂದ ಕೃಪಾಕಟಾಕ್ಷ ಪ್ರಾಪ್ತಿ. ಇಷ್ಟಾರ್ಥ ಸಿದ್ಧಿ ಸುಲಭಸಾಧ್ಯ.

ಭ್ರಾಮರೀ ದುರ್ಗಾಪರಮೇಶ್ವರಿಯೊಂದಿಗೆ ಏರ್ಪಡುವ ಬಾಂಧವ್ಯ… ಆಮೂಲಕ‌ ದೊರೆಯುವ ಆನಂದ, ಧನ್ಯತೆ ಕಟೀಲಮ್ಮನನ್ನು ದರ್ಶಿಸಿದವರಿಗೆ ಮಾತ್ರ ಸ್ವಯಂವೇದ್ಯ. ಅಂತಹ ಆಕರ್ಷಣೆ ಈ ಉದ್ಭವ ಸನ್ನಿಧಿಯಲ್ಲಿದೆ.

ನಂದಿನಿ ನದಿಯಾದಳು:
ಭೂಮಿಗೆ ಮಳೆಬಾರದೆ, ಬೆಳೆ ಬೆಳೆಯದೆ ಘನಘೋರ ಕ್ಷಾಮ ಉಂಟಾಗುತ್ತದೆ. ಕ್ಷೋಭೆಯಿಂದ ಸಜ್ಜನರ ಬದುಕು ದಯನೀಯವಾಗುತ್ತದೆ. ಧರ್ಮ ಸಂಪೂರ್ಣ ನಾಶವಾಗುತ್ತದೆ, ದುಷ್ಟ ಶಕ್ತಿಗಳು ವಿಜೃಂಭಿಸಲಾರಂಭಿಸುತ್ತವೆ. ಆಗ ಮಹರ್ಷಿ ಜಾಬಾಲಿ ತಪಸ್ಸಿನಿಂದ ಎದ್ದು ವಸುಂಧರೆಯ ಕ್ಷಾಮ ಪರಿಹರಿಸಲು ಏನು ಮಾಡೋಣ? ಎಂದು ಯೋಚಿಸಿ ಸ್ವರ್ಗಕ್ಕೆ ಹೋಗುತ್ತಾನೆ; ಇಂದ್ರನ ಸೂಚನೆಯಂತೆ ಕಾಮಧೇನುವಿನ ‌ಮಗಳಾದ ನಂದಿನಿಯಲ್ಲಿ‌ ಧರೆಗಿಳಿದು ಬಂದು ಯಜ್ಞಕಾರ್ಯಕ್ಕೆ ಸುವಸ್ತುಗಳನ್ನು ಅನುಗ್ರಹಿಸು ಎಂದು ವಿಂತಿಸಿಕೊಳ್ಳುತ್ತಾನೆ. ಆದರೆ ನಂದಿನಿ ಬರಲೊಲ್ಲೆ ಎನ್ನಲು ಶಪಿಸುತ್ತಾಳೆ.

ಅನಿರೀಕ್ಷಿತ ಶಾಪದಿಂದ ತಲ್ಲಣಗೊಂಡ ನಂದಿನಿ ಜಗನ್ಮಾತೆಯನ್ನು ಪ್ರಾರ್ಥಿಸಿ ಆಕೆಯ ನಿರ್ದೇಶನದಂತೆ ಭೂಮಿಯಲ್ಲಿ ನದಿಯಾಗಿ ಹರಿಯುತ್ತಾಳೆ. ತುಂಬಿ ಹರಿಯುವ ನಂದಿನಿ ನದಿಯ ಕಟಿ ಭಾಗದಲ್ಲಿ ಭ್ರಾಮರಿ ದುರ್ಗಾಪರಮೇಶ್ವರಿಯಾಗಿ ಹುಟ್ಟಿಬರುವ ಕಾಲದ ನಿರೀಕ್ಷೆಯಲ್ಲಿರುತ್ತಾಳೆ ನಂದಿನಿ.

ಮಳೆಯಿಂದ ಬೆಳೆಯು ಭಾಗ್ಯವಾಗುತ್ತಾ ಸಮೃದ್ಧಿ ನೆಲೆಯಾಗುತ್ತದೆ. ಮಹರ್ಷಿ ಜಾಬಾಲಿ ಧನ್ಯನಾಗುತ್ತಾನೆ. ಆಗ ಕೇಳಿ ಬರುವುದು ಅರುಣ ದೈತ್ಯನ ಅಟ್ಟಹಾಸ. ಧರ್ಮ ಸಂಪೂರ್ಣ ವ್ಯತ್ಯಸ್ಥಗೊಳ್ಳುತ್ತದೆ. ಈ ದೈತ್ಯನ ವಧೆಗಾಗಿ ಜಗಜ್ಜನನಿ ನಂದಿನಿ ನದಿಯ ಕಟಿ ಭಾಗದಿಂದ ಭ್ರಾಮರಿಯಾಗಿ ಉದ್ಭವಿಸಿ ಅರುಣ ದೈತ್ಯನನ್ನು ವಧಿಸುತ್ತಾಳೆ. ಧರ್ಮದ ಮರು ಸ್ಥಾಪನೆಯಾಗುತ್ತದೆ.

ಇಂತಹ ಕಥೆಯೊಂದು ಇಲ್ಲಿ ನಡೆಯಿತು, ಲೋಕ ಕಲ್ಯಾಣವಾಯಿತು ನೋಡಿ.
‌ಗರ್ಭಗುಡಿಯ ಒಳಗೆ ಅಲಂಕೃತ ಕಟೀಲಮ್ಮನನ್ನು ಕಾಣುತ್ತಿದ್ದೇವೆ. ಈ ಸುಂದರ ಬಿಂಬದ ಮೂಲದಲ್ಲಿ ‘ಸ್ವಯಂಭೂ ಭ್ರಾಮರಿ’ ಸನ್ನಿಹಿತಳಾಗಿರುವಳು. ಆ ಅಮ್ಮನ ಮೂರ್ತ ಸ್ವರೂಪವೇ ನಾವು ಕಾಣುವ ‘ದಿವ್ಯ ರೂಪ’. ಆದರೆ ಇದು ಭವ್ಯದಲ್ಲಿ ಅಲಂಕೃತವಾಗಿದೆ, ಆಕರ್ಷಣೀಯವಾಗಿದೆ. ಸಕಲ ಇಚ್ಛಾಭೋಗಗಳನ್ನು ಅನುಗ್ರಹಿಸುವ, ಸರ್ವ ಲೌಕಿಕ ಸಂಪತ್ತನ್ನು, ಅಲೌಕಿಕ ಕಾಮನೆಗಳನ್ನು‌ ಈಡೇರಿಸುವ ಭ್ರಮರಾಂಬೆಯನ್ನು‌ “ಮಹಾಲಕ್ಷ್ಮೀ” ಎಂಬ ಅನುಸಂಧಾನದೊಂದಿಗೆ ಪೂಜಿಸುವ ವಿಧಾನವು ಇಲ್ಲಿ ರೂಢಿಯಲ್ಲಿದೆ.

ಪುರಾತನ ತಾಳೆಗರಿಯಲ್ಲಿ ದೊರೆತ ನಿರ್ಜರಾರಣ್ಯ ಮಹಾತ್ಮೆಯಲ್ಲಿ- ಹರಿಯುವ ನಂದಿನಿ ಇಬ್ಬಾಗವಾಗಿ ಹರಿಯುವ ಪ್ರದೇಶದಲ್ಲಿ ‘ಲಕ್ಷ್ಮೀನಾರಾಯಣರ ಸನ್ಮಿಧಾನವಿದೆ ಎಂಬ ಉಲ್ಲೇಖವಿದೆ ಎನ್ನುತ್ತಾರೆ ಆಸ್ರಣ್ಣರು.

ಸಂಪತ್ತಿನ ಅಧಿದೇವತೆ; ಶೋಭೆ, ಕಾಂತಿ, ಲಕ್ಷಣ ಮುಂತಾದುವುಗಳನ್ನು‌ ಅಪೇಕ್ಷಿಸಿ ಅಗಮಿಸುವ ಭಕ್ತರಿಗೆ ಕರುಣಿಸುವಂತೆ ಪ್ರಾರ್ಥಿಸಿ ಪೂಜಿಸುವ ಈ ಅನುಸಂಧಾನದ ಕಲ್ಪನೆ ವೈಚಾರಿಕ ವೈಶಾಲ್ಯತೆಯನ್ನು ಒಳಗೊಂಡಿದೆ. ದುರ್ಗೆಯನ್ನು ಮಹಾಕಾಳಿ, ಮಹಾಲಕ್ಷ್ಮೀ, ಮಹಾಸರಸ್ವತಿಯಾಗಿ ಪೂಜಿಸುವ ಅವಕಾಶವಿದೆ. ಈ ಕ್ಷೇತ್ರದಲ್ಲಿ ದುರ್ಗಾಪರಮೇಶ್ವರಿಯನ್ನು “ಮಹಾಲಕ್ಷ್ಮೀ” ಎಂದು ಪೂಜಿಸಲಾಗುತ್ತಿದೆ. ಈ ಮಹಾತಾಯಿ ಸಂಪತ್ತನ್ನು ಮಾತ್ರವಲ್ಲ ಭಕ್ತ ಸಂದೋಹಕ್ಕೆ ಲೌಕಿಕ ಸಂಪತ್ತನ್ನು ಅಲೌಕಿಕ ಆನಂದವನ್ನು ಒದಗಿಸುವವಳು ಎಂಬುದು ಸಂಕಲ್ಪ.

ನಂದಿನಿ ಧರೆಗಿಳಿದಳು, ಜಗಜ್ಜನನಿ ಆವಿರ್ಭವಿಸಲು ವೇದಿಕೆ ಸೃಷ್ಟಿಯಾಯಿತು. ಇದರೊಂದಿಗೆ ಕ್ಷಾಮ ಪರಿಹಾರವಾಯಿತು. ಮನುಜರ ಹಸಿವು ಶಾಂತವಾಯಿತು. ಭ್ರಾಮರಿಯು ಗೋಚರಳಾಗಿ ಅರುಣ ದೈತ್ಯನನ್ನು ವಧಿಸಿದ ಪುಣ್ಯ ಭೂಮಿ ಶ್ರೀಕ್ಷೇತ್ರವಾಯಿತು. ಮನುಕುಲದ ಹಸಿವು ನಿವಾರಣೆಯಾದ ನೆನಪಲ್ಲಿ ಕಟೀಲಮ್ಮನ ಸನ್ನಿಧಿ “ಅನ್ನದಾನ”ಕ್ಕೆ ಹೆಸರಾಯಿತು.

ಮೂರು ಹೊತ್ತು ಅನ್ನದಾನ ನಿತ್ಯನಿರಂತರವಾಯಿತು. ಕಟೀಲಮ್ಮ ಅನ್ನಪೂರ್ಣೆಯಾಗಿ ಅನುಗ್ರಹಿಸಿದಳು‌. ಅನ್ನದಾನ ‘ಅನ್ನಪ್ರಸಾದ”ವಾಗಿ ಅಲ್ಲ ಮೃಷ್ಟಾನ್ನ ಭೋಜನದ ವ್ಯವಸ್ಥೆ. ಕಟೀಲಿಗೆ ಬರುವವರು, ಹಸಿದುಬರುವವರು “ಉಂಡು ದಣಿ”ಯುವುದು ಖಂಡಿತ. ಏಕೆಂದರೆ ಇದು ಅಮ್ಮ, ಮಕ್ಕಳಿಗೆ‌ ಬಡಿಸುವ ಮಮತೆಯ ಪಕ್ವಾನ್ನ. ಕ್ಷಾಮದ ತೀವ್ರತೆಯಿಂದ ‘ಅಶನ’ದಂತೆ ‘ವಸನ’ವೂ ದುರ್ಲಭವಾಗಿತ್ತು. ಅದರ ನೆನಪಿಗೆ ಅಮ್ಮನಿಗೆ ಭಕ್ತರಿಂದ ಸೀರೆಯ ಸಮರ್ಪಣೆ. ಅಮ್ಮನಿಂದ ಭಕ್ತರಿಗೆ ಶೇಷವಸ್ತ್ರ ವಿತರಣೆ. ಇಂತಹ ‘ತವರು ಮನೆ’ಯನ್ನು ಬೇರೆಲ್ಲೂ ಕಾಣುವುದು ವಿರಳ.

ಜಗಜ್ಜನನಿಯ ಆರಾಧನೆಯಲ್ಲಿ ಅವರ್ಣನೀಯ ಆನಂದವಿದೆ. ಎಲ್ಲಿ ಆನಂದವಿರುತ್ತದೋ ಅಲ್ಲಿ ನೈಜವಾದ ಸಂಭ್ರಮ, ವೈಭವಗಳಿರುತ್ತವೆ. ಇದೇ ಮಂಗಲಕರವಾದುದು. ಇದು ಸೌಮಾಂಗಲ್ಯದ ಪರಿಣಾಮವಾದುದರಿಂದ ಮನಸ್ಸು, ಭಾವಗಳು ಅರಳುವ ಅನಿರ್ವಚನೀಯ ಅನುಭವದ ಕ್ಷಣಗಳು.

ಯಕ್ಷಗಾನ- ಆಟ:
ಈ ಸಂದರ್ಭದ ಸಂತೋಷದ ‌ಅಭಿವ್ಯಕ್ತಿಯಾಗಿ ಆರಾಧನಾ ಶ್ರದ್ಧೆಗೆ ಸಹಜವಾಗಿ ಜೋಡಿಸಲ್ಪಡುವುದು. ಗಾಯನ- ನರ್ತನಗಳು ಷೊಡಷೋಪಚಾರ ಪೂಜೆಯ ಅಂಗವಾಗಿದೆ ತಾನೆ…? ನಮ್ಮ ಮಣ್ಣಿನ ಕಲೆಯಾದ ಯಕ್ಷಗಾನವು ಸರ್ವಾಂಗ ಸುಂದರ ಕಲೆ. ಇದರಲ್ಲಿ ಸಂಗೀತವಿದೆ, ವಾದನವಿದೆ, ನರ್ತನವಿದೆ, ಬಣ್ಣದ ಲೋಕವೇ ತೆರೆದುಕೊಳ್ಳುತ್ತದೆ.
ತುಳು ಮಣ್ಣಿನಲ್ಲಿ ಈ ಮಣ್ಣಿನ ಸತ್ಯವಾಗಿ ಆವಿರ್ಭವಿಸಿದ ಕಟೀಲಮ್ಮನಿಗೆ ಯಕ್ಷಗಾನವೆಂದರೆ ಪ್ರೀತಿ. ಆದುದರಿಂದಲೇ ಯಕ್ಷಗಾನ ಸೇವೆಯಾಗಿ ನೆರವೇರುತ್ತವೆ.

ಒಮ್ಮೆ ಭಾರೀ ಮಳೆಯಿಂದ ನಂದಿನಿ ನದಿ ಉಕ್ಕೇರಿ ಹರಿಯುತ್ತಾಳೆ. ದೇವಸ್ಥಾನ ಜಲಾವೃತವಾಗುತ್ತದೆ. ಈಗ ಇರುವಂತಹ ಸಂಪರ್ಕ ವ್ಯವಸ್ಥೆ ಇರಲಿಲ್ಲ. ನೆರೆ ಏರುತ್ತಿರುವಂತೆ ದೇವಳದ ವಸ್ತುಗಳೆಲ್ಲ ನೆರೆ ನೀರಿನಲ್ಲಿ ತೇಲಿ ಹೋಯಿತು. ಆಸ್ರಣ್ಣರು ಅಮ್ಮನ ಲಿಂಗವನ್ನು ಅಪ್ಪಿಹಿಡಿದು ಕುಳಿತರು. “ತೇಲುವುದಿದ್ದರೆ ಅಮ್ಮನೊಂದಿಗೆ” ಎಂಬ ಸಂಕಲ್ಪವಿತ್ತು. ನೆರೆ ಇಳಿದಾಗ ದೇವಳದಲ್ಲಿ ಉಳಿದದ್ದು ಆಟದ ಗಣಪತಿ ಪೆಟ್ಟಿಗೆ ಮತ್ತು ಅಕ್ಕಿ ಹಾಕುವ ಕಲೆಂಬಿ ಮಾತ್ರ.

ಯಕ್ಷಗಾನದಂತೆಯೇ ಅನ್ನದಾನ ಪ್ರಿಯಳು ದುರ್ಗಾಪರಮೇಶ್ವರೀ. ಅದು ಇಂದಿಗೂ ಸತ್ಯವೇ ಅಲ್ಲವೆ.. ‘ಆಟ ಗೊಬ್ಬಾವೆ’- ಆಟ ಆಡಿಸುತ್ತೇನೆ ಎಂಬುದೇ ಅತಿ ಜನಪ್ರಿಯವಾದ ಸೇವೆ. ಆರು ಮೇಳಗಳು ಪ್ರತಿವರ್ಷ ತಿರುಗಾಟ ಮಾಡುತ್ತವೆ. ಆದರೂ ಮುಂದಿನ ಹಲವು ವರ್ಷಗಳ ತಿರುಗಾಟಕ್ಕೆ ನೋಂದಣಿಯಾದ ಆಟಗಳಿವೆ. ಇದೇ ಕಟೀಲಿನ ಬೀದಿಯಲ್ಲಿ‌ ನಡೆಯುವ ಯಕ್ಷಗಾನ ಬಯಲಾಟ ಸೇವೆಗಳನ್ನು ರಕ್ತೇಶ್ವರೀ ಕಲ್ಲಿನಲ್ಲಿ ಕುಳಿತು ‌ಕಟೀಲಮ್ನನೇ ವೀಕ್ಷಿಸುತ್ತಾಳೆ ಎಂಬುದು ನಂಬಿಕೆ.


ಕುದುರು ಪ್ರದೇಶ:
ಇದು ಅರುಣ ದೈತ್ಯನ ವಧಾ ಸ್ಥಳವೇ ಕುದುರು ಪ್ರದೇಶ. ದುರ್ಗಾಪರಮೇಶ್ವರೀ ಭ್ರಮರ ರೂಪ ತಾಳಿ ಅರುಣನನ್ನು ಸಂಹರಿಸಿದ ಪ್ರದೇಶ. ಸುತ್ತಲೂ ನಂದಿನಿ ನದಿ. ಆದುದರಿಂದ ಇದು ಕುದುರು. ಇದೇ ಮೂಲಸ್ಥಾನ. ಆದರೆ…. ರಕ್ತಪಾತವಾದ ಅಪವಿತ್ರ ಭೂಮಿ ಆರಾಧನೆಗೆ ಯೋಗ್ಯ ಅಲ್ಲವಾದುದರಿಂದ ಈಗ ದೇವಳ ಇರುವಲ್ಲಿ ಲಿಂಗ ರೂಪದಲ್ಲಿ ಭ್ರಮರಾಂಬೆ ಉದ್ಭವಿಸುತ್ತಾಳೆ.

ಊಟ ಆಯಿತು, ಆಟವನ್ನೂ ನೋಡಿ ಆಯಿತು.‌ ಕ್ಷಾಮದ ದಿನಗಳನ್ನೊಮ್ಮೆ ನೆನಪಿಸಿಕೊಳ್ಳೋಣ ಹೊಟ್ಟೆಗೆ ಅನ್ನವಿಲ್ಲದೆ ಇರುವಾಗ ವಿದ್ಯೆಯು ಕನಸಿನ ಮಾತು. ಆದರೆ ಎಲ್ಲವೂ ಸುವ್ಯವಸ್ಥೆಗೆ ಬಂದಾಗ ಸಹಜವಾಗಿ, ಅನಿವಾರ್ಯ ಅಗತ್ಯಗಳಲ್ಲಿ ಒಂದಾದ ವಿದ್ಯೆಗೆ ಪ್ರಾಶಸ್ತ್ಯ ದೊರೆಯಿತು.

ಅಂಗನವಾಡಿಯಿಂದ ಎಲ್ಲಾ ಹಂತದಲ್ಲಿ‌ ಪದವಿಯವರೆಗೆ ಶಿಕ್ಷಣ ಸಂಸ್ಥೆಗಳು ನಿರ್ಮಾಣವಾದುವು. ಅಮ್ಮನು ಜ್ಞಾನ ಪ್ರತಿಪಾದ್ಯಳು ಅಲ್ಲವೆ?

[ವಿವಾಹ, ಸಂತಾನಗಳ ಅನುಗ್ರಹ, ಬಡತನ, ಕಷ್ಟ ಪರಂಪರೆಗಳ ಪರಿಹಾರ. ಮಹಾವ್ಯಾಧಿಗಳ ನಿವಾರಣೆ ಇವು ಕಟೀಲಮ್ಮನ ವಿಶೇಷ ಅನುಗ್ರಹಗಳು. ಹೂವಿನಪೂಜೆ, ರಂಗ ಪೂಜೆ, ದುರ್ಗಾ ಪ್ರೀತ್ಯರ್ಥ ಯಾಗ-ಯಜ್ಞಗಳು ನಿತ್ಯ ನೆರವೇರುತ್ತವೆ. ಭಕ್ತರು ಧನ್ಯತೆಯಿಂದ ಯಥಾನುಶಕ್ತಿ ಸೇವೆ ಸಲ್ಲಿಸುತ್ತಾರೆ.]
~~~
ನವರಾತ್ರಿ ವಿಶೇಷ ಪೂಜೆ; ವೇಷಗಳು, ಹುಲಿವೇಷಗಳು
ಬೆಳಗ್ಗೆ ಅಭಿಷೇಕ, ಅಲಂಕಾರ. ಮಧ್ಯಾಹ್ನ ಮಹಾಪೂಜೆ. ಸಂಜೆ ಮತ್ತೆ ಅಭಿಷೇಕ, ಅಲಂಕಾರ. ರಾತ್ರಿ ಒಂದು‌ ದೇವರ (ಭಂಡಾರದ ವತಿಯಲ್ಲಿ) ರಂಗಪೂಜೆ. ಮೂರು ಭಕ್ತರ ಸೇವೆ ರಂಗಪೂಜೆ.
ಲಲಿತಾಪಂಚಮಿ: ದೇವರ (ಭಂಡಾರದ ವತಿಯಲ್ಲಿ) ಚಂಡಿಕಾ ಹೋಮ. ಸುವಾಸಿನಿಯರಿಗೆ ಶೇಷ ವಸ್ತ್ರ ಪ್ರಸಾದ ವಿತರಣೆ.
ಮೂಲಾನಕ್ಷತ್ರ: ಧ್ವಜಸ್ತಂಭದ ಬಳಿ ರಂಗೋಲಿ ಹಾಕಿ ದೀಪಹಚ್ಚಿಟ್ಟು ಸಂಕೀರ್ತನೆ.
ನವರಾತ್ರಿ ಸಂದರ್ಭದಲ್ಲಿ ದಿನವೂ ತಾಳದ ಮನೆಯವರಿಂದ ಮಾಮೂಲು ಸಂಕೀರ್ತನೆ.
ಮೂಲಾನಕ್ಷತ್ರದಂದು ಗೌಡ ಸಾರಸ್ವತ ಸಮಾಜದವರಿಂದ ಭಜನಾ ಸಂಕೀರ್ತನೆ.
ದುರ್ಗಾಷ್ಟಮಿ: ರಾತ್ರಿ ಮರುದಿನದ ಕಡುಬು ತಯಾರಿಗೆ ದೋಣಿಗೆ ಅಕ್ಕಿ ಅಳೆದು ಹಾಕುವುದು, ತಯಾರಿಸುವವರಿಗೆ ಪ್ರಸಾದ ಕೊಡುವುದು.

ಮಹಾನವಮಿ‌: ಶ್ರೀದೇವರ ಒಂದೇ ಮಹಾರಂಗಪೂಜೆ. ಮೂರು ಗಂಟೆ ಸತತ ಆರತಿ‌ ಬೆಳಗುವ ವಿಶೇಷ ಆರತಿ ಸೇವೆ. ರಾತ್ರಿ ಆಗಮಿಸುವ ಭಕ್ತರೆಲ್ಲರಿಗೆ ಕಡುಬು ಪ್ರಸಾದ, ಗೋಧಿ ಪಾಯಸ ಬಡಿಸಲಾಗುವುದು.

ವಿಜಯದಶಮಿ: ಬೆಳಗ್ಗೆ ನವರಾತ್ರಿ ವಿಸರ್ಜನೆ ಪೂಜೆ. ಅಭಿಷೇಕ- ಅಲಂಕಾರ. ಮಕ್ಕಳಿಗೆ ಅಕ್ಷರಾಭ್ಯಾಸ.
ಮೂರು ದಿನ ವೇಷಗಳ ವಿಜೃಂಭಣೆ: ಕಟೀಲಿಗೆ ವೇಷಗಳ ಮೆರವಣಿಗೆ. ಹುಲಿವೇಷಗಳ ತಂಡದಿಂದ ಕುಣಿತದ ಸೇವೆ.
ಲಲಿತಾಪಂಚಮಿ: ಕೊಡೆತ್ತೂರಿನ ಹುಲಿಗಳು. ಮೂಲಾನಕ್ಷತ್ರಕ್ಕೆ ಎಕ್ಕಾರಿನ ಹುಲಿಗಳು. ಸೇವೆ ಸಲ್ಲಿಸುತ್ತಾರೆ. ಕಟೀಲಿನ‌‌ ನವರಾತ್ರಿ ಆಚರಣೆಯಲ್ಲಿ ಹುಲಿವೇಷಗಳದ್ದು‌ ಒಂದು ಪ್ರತ್ಯೇಕ ವೈಭವ.

ಎಲ್ಲೊ ವೇಷಹಾಕಿ ಕಟೀಲಿಗೆ ಬಂದು ವೇಷ ಬಿಚ್ಚುವ ಹರಕೆಯ ವೇಷಗಳು ಇರುತ್ತವೆ. ನವರಾತ್ರಿ ಕಾಲದಲ್ಲಿ ಕನಿಷ್ಠ ಒಂದು ಸಾವಿರ ಹುಲಿ ವೇಷಗಳು‌ ಕಟೀಲಿಗೆ ಬಂದು ಸೇವೆ ಸಲ್ಲಿಸುತ್ತಾರೆ.

ನವರಾತ್ರಿ ಕಾಲದಲ್ಲಿ ಪ್ರತಿದಿನ ಯಕ್ಷಗಾನ ನಡೆಯುತ್ತದೆ. ಕಟೀಲಿನಲ್ಲಿ ವೇಷಹಾಕುತ್ತೇವೆ ಎಂದು ಹರಕೆ ಹೊತ್ತ ಯಕ್ಷಗಾನ ಕಲಾವಿದರಿಗೆ ಈ ಅವಕಾಶ. ಈ ವರ್ಷ ಪ್ರತಿದಿನದ ಯಕ್ಷಗಾನ ಕಾರ್ಯಕ್ರಮ ಕೊರೊನ ಕಾರಣಕ್ಕೆ ರದ್ದುಗೊಳಿಸಲಾಗಿದೆ.

-ಕೆ.ಎಲ್. ಕುಂಡಂತಾಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಶಿವರಾತ್ರಿ ಉತ್ಸವ: ಗೋಕರ್ಣದಲ್ಲಿ ವಿದುಷಿ ಅಯನಾ ಪೆರ್ಲ ಅವರಿಂದ ಭರತನಾಟ್ಯ

Upayuktha

ರಕ್ಷಾಬಂಧನ‌: ಭ್ರಾತೃ- ಭಗಿನಿ ಬಾಂಧವ್ಯ ಬಂಧನ; ಉಪಾಕರ್ಮ: ಜ್ಞಾನ ಪೂರಕ

Upayuktha

ಮುಂದಿನ ವರ್ಷದಿಂದ ಜಾಗತಿಕ ಮಟ್ಟದಲ್ಲಿ ಭಜನಾ ತರಬೇತಿ

Upayuktha