ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಗಳಿಗೆ ಒಂಬತ್ತು ದುರ್ಗಾ ದರ್ಶನ: ಭಗವತಿ ಶ್ರೀದುರ್ಗಾಪರಮೇಶ್ವರೀ ದೇವಸ್ಥಾನ ಪುತ್ತೂರು, ಉಡುಪಿ

ಶರನ್ನವರಾತ್ರಿ ಪುಣ್ಯಕಾಲ | ‘ಮರಿಗೆ’ಯಲ್ಲಿ ಮರೆಯಾದರೂ ‘ಮನೋರಥ’ ಸಿದ್ಧಿಯ ಕ್ಷೇತ್ರ

ಜಗಜ್ಜನನಿಯಲ್ಲಿ ಹೆತ್ತ ತಾಯಿಯನ್ನು, ಭೂಮಿತಾಯಿಯನ್ನು‌ ಸಾಕ್ಷಾತ್ಕರಿಸಿಕೊಂಡ ಮುಗ್ಧ ಮನಸ್ಸುಗಳು ಪರಿಭಾವಿಸಿ‌, ಕಲ್ಪಿಸಿ ಮೂರ್ತಸ್ವರೂಪ ನೀಡಿದ ದುರ್ಗೆ, ಪಾರ್ವತಿ, ದೇವಿ ಹಾಗೂ ಐಶ್ವರ್ಯವಂತಳಾದ ಮಹಾಲಕ್ಷ್ಮೀಯ ‘ಭಗವತಿ’ಯ ಚಿಂತನೆ ಭವ್ಯವಾದುದು. ಅಂತರ್ಯಾಮಿಯಾಗಿರುವ ಅಮ್ಮನ ಸಾನ್ನಿಧ್ಯ ದಿವ್ಯವಾದುದು. ಇಂತಹ ಅಲೌಕಿಕವಾದುದನ್ನು ಲೌಕಿಕದಲ್ಲಿ‌ ಗುರುತಿಸಿದ ನೆಲೆಗಳಲ್ಲಿ‌ “ಪುತ್ತೂರಮ್ಮ”ನ ಸನ್ನಿಧಿ ಒಂದು. ಈಕೆ “ಪುತ್ತೂರಪ್ಪೆ”ಯಾಗಿ‌ ಪ್ರಸಿದ್ಧಳು- ಬಹುಮಾನ್ಯಳು‌. ದುಃಖ ದುಮ್ಮಾನಗಳಲ್ಲಿ ‘ಅಪ್ಪೆ ತೂಪೆರ್’ ಎಂಬಲ್ಲಿಯವರೆಗೆ ಗಟ್ಟಿಯಾದ ಅಥವಾ ಗಾಢವಾದ ಅವಿಚ್ಛಿನ್ನ ಸಂಬಂಧ. ನಂಬಿಕೆ- ಭರವಸೆಯೇ ಪ್ರಧಾನವಾಗಿರುವ ವಿಶ್ವಾಸದ ಸೆಲೆ.

ಉಡುಪಿ ಸಮೀಪದ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನವು ಪುರಾಣ, ಇತಿಹಾಸ, ದಂತಕತೆ ಸಹಿತ ಸಾಂದ್ರವಾದ ಜನಪದ ಹಿನ್ನೆಲೆಯನ್ನು‌ ಹೊಂದಿದೆ.

ಮೂಲಸ್ಥಾನ ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರಿಯು ಉಪಸ್ಥಾನ ಗಣಪತಿ‌, ವೀರಭದ್ರರೊಂದಿಗೆ ಪರಿವಾರ ಶಕ್ತಿಗಳಾದ ರಕ್ತೇಶ್ವರೀ, ನಂದಿಗೋಣ, ಧೂಮಾವತಿ, ವಾರಾಹಿ, ವ್ಯಾಘ್ರಚಾಮುಂಡಿ, ಕ್ಷೇತ್ರಪಾಲ, ಬೊಬ್ಬರ್ಯ ಹಾಗೂ ನಾಗ ದೇವರಿಂದ ಪರಿವೇಷ್ಟಿತಳಾಗಿ ಭಕ್ತಾಭೀಷ್ಟ ಫಲಪ್ರದಾಯಕಿಯಾಗಿ‌ದ್ದಾಳೆ. ಆದರೆ ಈ ಅಮ್ಮ ಮರೆಯಾಗಿದ್ದು ಮನೋರಥ ಈಡೇರಿಸುತ್ತಾಳೆ. ಜಾಗೃತ‌ ಸನ್ನಿಧಾನವಾಗಿದೆ.

ಮರಿಗೆಯಲ್ಲಿ ಮರೆಯಾದಳು:
ಅಮೂರ್ತವಾಗಿರುವುದೇ ಅಲಂಕರಿಸಲ್ಪಟ್ಟು ಮೂರ್ತಸ್ವರೂಪದಿಂದ ಜನಪ್ರಿಯ ಮೂರ್ತಿಯಾಗಿ ಭಕ್ತರ ಮನಸ್ಸಿನಲ್ಲಿ ಸ್ಥಾಯೀಯಾಗಿ ಉಳಿಯುವಂತಹ ಸಂದರ್ಭಗಳು ಸಾಮಾನ್ಯ. ಆದರೆ ಪುತ್ತೂರಿನ ಭಗವತಿ ಶ್ರೀ ದುರ್ಗಾಪರಮೇಶ್ವರೀ‌ಯು ಸುಂದರ ಬಿಂಬವನ್ನು ಹೊಂದಿ ಆಕರ್ಷಕಳಾಗಿದ್ದಳು. ಅಘಟಿತ ಘಟನೆಯೊಂದು ನಡೆದು ಆಕೆ ತನ್ನ ಸರ್ವಾಭರಣ ಅಲಂಕೃತ ಸ್ವರೂಪವನ್ನು ಮರೆಮಾಚಿಕೊಂಡು “ಸ್ವಯಂಭೂ” ಸ್ವರೂಪದಂತೆ ವ್ಯಕ್ತಗೊಂಡಳು ಎಂಬುದು ಜನಜನಿತ ದಂತಕತೆ.

ಒಂದು ಕಾಲಕ್ಕೆ ಬಡ ಭಕ್ತರ ನೆರವಿಗೆ ಶುಭಕಾರ್ಯಗಳು ಮನೆಯಲ್ಲಿ ನಡೆಯುವ ವೇಳೆ ಬೇಕಾಗುವ ಚಿನ್ನದ ಆಭರಣಗಳನ್ನು ಅನುಗ್ರಹಿಸುವ ವಿಶೇಷ ಕಾರಣಿಕದ ಕ್ಷೇತ್ರ ಇದಾಗಿತ್ತು. ನಾಳೆಯ ಶುಭಕಾರ್ಯಕ್ಕೆ, ಇಂದಿನ‌ರಾತ್ರಿ ಪ್ರಾರ್ಥಿಸಿ ದೇವಿಯ ಮುಂದೆ ಹರಿವಾಣ ಇಡುವುದು. ಮರುದಿನ ಈ ಹರಿವಾಣದಲ್ಲಿ ಅಗತ್ಯ ಆಭರಣಗಳು ಇರುತ್ತಿದ್ದುವು. ಶುಭ ಸಮಾರಂಭದಲ್ಲಿ ಆಭರಣಗಳನ್ನು ಉಪಯೋಗಿಸಿಕೊಂಡು ಬಳಿಕ ಅವುಗಳನ್ನು ತೊಳೆದು ಶುದ್ಧೀಕರಿಸಿ ರಾತ್ರಿ‌ ವೇಳೆ ಶ್ರೀ ದೇವಿ ಸನ್ನಿಧಾನಕ್ಕೆ ಮರಳಿಸುವ ಸಂಪ್ರದಾಯವಿತ್ತು.

ಇಂತಹ ವಿಶೇಷ ಅನುಗ್ರಹ ನಿರಂತರ ನಡೆಯುತ್ತಿತ್ತು ಎಂದು ದಂತಕತೆ ಹೇಳುತ್ತದೆ. ಒಂದು ಬಾರಿ ಒಬ್ಬಾಕೆ ಭಕ್ತೆ ಮೂಗುತಿಯೊಂದನ್ನು ಬದಲಾಯಿಸಿ ಇಡುತ್ತಾಳೆ. ಆ ದಿನ ರಾತ್ರಿ ಆಭರಣಗಳನ್ನು ದೇವಿಗೆ ಹಿಂದಿರುಗಿಸಿ, ಅರ್ಚಕರು ಗರ್ಭಗುಡಿಯ ಬಾಗಿಲುಹಾಕಿ‌ ಬೀಗಹಾಕುತ್ತಾರೆ, ಮರುದಿನ ಪ್ರಾತಃಕಾಲಕ್ಕೆ ಆಗಮಿಸಿದ ಅರ್ಚಕರು ಸ್ನಾನ ಪೂರೈಸಿ ದೇಗುಲದ ಗರ್ಭಗುಡಿಯ ಬಾಗಿಲು ತೆರೆದಾಗ ಅಚ್ಚರಿಯೊಂದು ಕಾದಿತ್ತು. ಅಭಿಷೇಕಕ್ಕಾಗಿ ನೀರು ತುಂಬಿಸಿ ಇಟ್ಟುಕೊಳ್ಳುವ (ಗರ್ಭಗುಡಿಯಲ್ಲಿ) ಕಲ್ಲಿನ ಮರಿಗೆ ಕವುಚಿ ಬಿದ್ದಿತ್ತು, ಅದು ದೇವಿಯ ಮೂರ್ತಿಯನ್ನು ಸಂಪೂರ್ಣ ಆವರಿಸಿತ್ತು. ವಿಸ್ಮಯದಿಂದ ಅರ್ಚಕರು ಕಲ್ಲುಮರಿಗೆಯನ್ನು ಎತ್ತಿಡಲು ಪ್ರಯತ್ನಿಸುತ್ತಾರೆ, ಅದು ಸಫಲವಾಗೇ ಹೋಯಿತು, ಮರಿಗೆಗೆ ಪೂಜೆಮಾಡಿದರು, ಮನೆಗೆ ಬಂದರು.

ರಾತ್ರಿ‌ ನಿದ್ದೆಯಲ್ಲಿ ದೇವಿ ದರ್ಶನವಿತ್ತು ದುರಾಸೆಯಿಂದ ವಂಚನೆಯಾಗಿದೆ ಆದುದರಿಂದ ನನ್ನ ಮೂಗುತಿ ಇಲ್ಲದ ಮುಖವನ್ನು ತೋರಿಸಲಾರೆನೆಂದು ನಿರ್ಧರಿಸಿದ್ದೇನೆ. ಕಲ್ಲುಮರಿಗೆಯೊಳಗೆ ಮರೆಯಾಗಿದ್ದೇನೆ. ಮುಂದೆ ಮರಿಗೆಗೆ ಪೂಜೆಸಲ್ಲಲಿ‌ ಎಂದು ಸೂಚಿಸುತ್ತಾಳೆ.

ಒಂದು ಕತೆಯು, ಮುಲತಃ ಲಿಂಗರೂಪದಲ್ಲೆ ಸಾನ್ನಿಧ್ಯವಿತ್ತು, ಅದಕ್ಕೆ ಸ್ತ್ರೀ ಅಲಂಕಾರ ಮಾಡಲಾಗುತ್ತಿತ್ತು, ಪೂಜೆ ನಡೆಯುತ್ತಿತ್ತು ಎಂಬ ಮಾಹಿತಿ ನೀಡಿದರೆ ಮತ್ತೊಂದು ಕತೆಯು ಸುಂದರ ಬಿಂಬರೂಪದಲ್ಲಿದ್ದ ಮಾತೆಯು ಈ ದುರಾಸೆಯ ಪ್ರಕರಣದ ಬಳಿಕ ತನ್ನ ಮೂಗುತಿ ರಹಿತ ಮುಖವನ್ನು ತೋರಿಸಲಾರೆನೆಂದು ಮರಿಗೆಯಲ್ಲಿ‌ ಮರೆಯಾದದ್ದು ಎನ್ನುತ್ತದೆ.

ಈ ಎರಡು ಕತೆಗಳನ್ನು ಸಮನ್ವಯಗೊಳಿಸಿದಾಗ ಮೂಲತಃ ಈ ಸನ್ನಿದಾನವು “ಸ್ವಯಂಭೂ” ಆಗಿದ್ದು ಪ್ರಾಚೀನ ಶಕ್ತಿ ಆರಾಧನಾ ಕೇಂದ್ರವಾಗಿತ್ತು ಎಂದು ಹೇಳಬಹುದಾಗುತ್ತದೆ. ಈಗ ಪೂಜೆಗೊಳ್ಳುವ ಮರಿಗೆಯಂತಿರುವ ಅನಿಯಮಿತಾಕಾರದ ಶಿಲೆಯು ‘ಸ್ವಯಂಭೂ’ ಸ್ವರೂಪದಲ್ಲೆ ಕಾಣುತ್ತದೆ.

ಪರಶುರಾಮರಿಂದ ಪೂಜೆಗೊಂಡ ಅಥವಾ ಪರಶುರಾಮ ಕರಾರ್ಚಿತ ಭಗವತಿ ಶ್ರೀ ದುರ್ಗಾಪರಮೇಶ್ವರಿ ಎನ್ನುವುದು ನಂಬಿಕೆ. ಪರಶುರಾಮ ಸೃಷ್ಟಿಗೆ ಪರಶುರಾಮರೋ ಅಥವಾ ಆ ಗೋತ್ರಜರಾದ ಭಾರ್ಗವರೆಂಬ ಮಹನೀಯರು ನಿರಂತರ ಬರುತ್ತಿದ್ದರು ಎಂಬುದಕ್ಕೆ ಜಿಲ್ಲೆಯಲ್ಲಿ ವಿಫುಲ ಆಧಾರಗಳು ದೊರೆಯುತ್ತವೆ.

ಇತಿಹಾಸ:
ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ಲಿಂಗರೂಪದಲ್ಲಿ ಸ್ವಯಂಭೂ ಸನ್ನಿಧಾನಗಳಿವೆಯಾದರೂ ಪುತ್ತೂರಿನಲ್ಲಿ ಮರಿಗೆಯಾಕಾರದಲ್ಲಿರುವುದು ಒಂದು ವಿಶೇಷ ಎಂದು ವಿವರಿಸಿದ್ದಾರೆ. ಬಲಿಮೂರ್ತಿಯ ಪ್ರತಿಮಾ ಲಕ್ಷಣವನ್ನು ಗಮನಿಸಿ, ಈ ಮೂರ್ತಿಯು ಅರ್ವಾಚೀನವಾದುದು .ಆದರೆ ಪ್ರಾಚೀನ ಮೂರ್ತಿಯು ಪ್ರತಿಮಾ ಲಕ್ಷಣದಲ್ಲೆ ಈಗ ಇರುವ ಮೂರ್ತಿಯನ್ನು ನಿರ್ಮಿಸಿದುದ್ದಾಗಿದ್ದರೆ ದೇವಳಕ್ಕೆ ಕ್ರಿ.ಶ. 12-13 ಶತಮಾನದಷ್ಟು ಪ್ರಾಚೀನತೆಯನ್ನು ಹೇಳಬಹುದು. ಕ್ರಿ.ಶ. 7-8ನೇ ಶತಮಾನದ ಬಳಿಕ ಶಕ್ತಿ ಆರಾಧನೆ ನಮ್ಮ ಉಭಯ ಜಿಲ್ಲೆಗಳಲ್ಲಿತ್ತು‌ ಎಂದು ಭಟ್ಟರು ಅಭಿಪ್ರಾಯಪಟ್ಟಿದ್ದರು.

ಉಪಸ್ಥಾನ- ಪರಿವಾರ
ಪುತ್ತೂರಮ್ಮನ ಉಪಸ್ಥಾನ ಸನ್ನಿಧಾನಗಳಲ್ಲೊಂದಾದ ವೀರಭದ್ರ ಸಂಕಲ್ಪವು ಪುರಾತನವಾದುದು. ಅದರೆ ಗಣಪತಿ ಕಳೆದ ಶತಮಾನದಲ್ಲಿ ಪ್ರತಿಷ್ಠಾಪಿಸಿದ್ದು ಎನ್ನುತ್ತಾರೆ ಹಿರಿಯ ಅರ್ಚಕರು. ಪರಿವಾರವಾಗಿ ಆದಿಮ ಸಂಸ್ಕೃತಿಯ ಅಥವಾ ಜಾನಪದ ಹಿನ್ನೆಲೆ ಇರುವ ಶಕ್ತಿಗಳನ್ನು ಸ್ವೀಕರಿಸಲಾಗಿದೆ.

ದೇವಳವು ಪೂರ್ವಾಭಿಮುಖವಾಗಿದ್ದು ಹೊರಾಂಗಣದ ದಕ್ಷಿಣ‌ ಬದಿಯಲ್ಲಿ ಪರಿವಾರ ದೈವಗಳಿಗೆ ಸ್ಥಾನ ಕಲ್ಪಿಸಲಾಗಿದೆ. ನಾಗ ಸಾನ್ನಿಧ್ಯ ಪ್ರತ್ಯೇಕ ಸಂಕಲ್ಪವಿದೆ.

ಮೂಲತಃ ಇದ್ದ ನಂಬಿಕೆ- ಆರಾಧನಾ ಸ್ಥಾನಗಳಲ್ಲೆ ಮತ್ತೆ ಬಂದ ವೈದಿಕದ ದೇವಸ್ಥಾನಗಳು ಸ್ಥಾಪನೆಯಾದುವು ಎಂಬ ಒಂದು ಒಪ್ಪಿಗೆಗೆ ಪುತ್ತೂರು ಸಹಾ ಒಂದು ಆಧಾರವಾಗುತ್ತದೆ.

ಅನುಗ್ರಹ:
ದೇವಸ್ಥಾನಗಳಲ್ಲಿ ಮದುವೆಗಳು ನೆರವೇರುವ ಕ್ರಮವೊಂದು ಪುತ್ತೂರು ಭಗವತಿ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಿಂದಲೇ ಆರಂಭವಾಯಿತು ಎಂಬ ಒಡಂಬಡಿಕೆಯೊಂದಿದೆ. ಇದರೊಂದಿಗೆ ವಡಭಾಂಡೇಶ್ವರ ದೇವಸ್ಥಾನದ ಹೆಸರೂ ಸೇರಿಕೊಳ್ಳುತ್ತದೆ. ಇದಕ್ಕೆ ಪೂರ್ವಭಾವಿಯಾಗಿ ಯೋಚಿಸಿದರೆ ಇದೊಂದು ಮಂಗಲ ಕಾರ್ಯಗಳಿಗೆ ಅನುಗ್ರಹಿಸುತ್ತಿದ್ದ ಮಂಗಲ ಸಾನ್ನಿಧ್ಯ ಇದ್ದಿರಬೇಕು ಎಂದು ಗ್ರಹಿಸಬಹುದು.

ಸಂತಾನ ಫಲಪ್ರಾಪ್ತಿಯ ಸಿದ್ಧಿಕ್ಷೇತ್ರ ಎಂಬುದು ಇನ್ನೊಂದು ಹೆಗ್ಗಳಿಕೆ ಇದೆ . ವಾರ್ಷಿಕ ಮಹೋತ್ಸವ ಕಾಲದಲ್ಲಿ ಶಯನೋತ್ಸವದ ವೇಳೆ ಬಲಿಮೂರ್ತಿಯ ಬಲಕೈಗೆ ಕಟ್ಟುವ ‘ಅಡಿಕೆ ಮತ್ತು ಅರಸಿನದ ಕೋಡ’ನ್ನು ಅವಭೃತದ ವೇಳೆ ಬಿಚ್ಚಿ ತೆಗೆಯುವಾಗ ಅಥವಾ ಬಳಿಕ ಮಂತ್ರಾಕ್ಷತೆಯ ಸಂದರ್ಭದಲ್ಲಿ ಸಂತಾನ ಅಪೇಕ್ಷೆಯ ಸತಿ – ಪತಿಯರು ತಂತ್ರಿಯವರಿಂದ ಪಡೆಯಬೇಕು. ಸತಿಯು ಪುಷ್ಪವತಿಯಾಗಿ ನಾಲ್ಕನೇ ದಿನದಿಂದ ಹದಿನಾರನೇ ದಿನದವರೆಗಿನ ಅವಧಿಯಲ್ಲಿ‌ ಪ್ರತಿದಿನ ರಾತ್ರಿ ಅಡಿಕೆಯನ್ನು ತುಂಡರಿಸಿ ತಿನ್ನುವುದು, ಇದರೊಂದಿಗೆ ಅರಸಿನ ಕೋಡನ್ನು ತೇದು ತೆಗೆದು ಕೊಳ್ಳವುದು. ಇದರಿಂದ ಶರೀರ ಶುದ್ಧಿಯಾಗಿ ಸತ್ ಸಂತಾನ ಪ್ರಾಪ್ತಿಯಾಗುತ್ತದೆ ಎಂಬುದು ಭಗವತಿ ಶ್ರೀ ದುರ್ಗಾಪರಮೇಶ್ವರಿಯ ಅನುಗ್ರಹ ಎನ್ನುತ್ತಾರೆ ದೇವಳದ ತಂತ್ರಿಗಳು.

ದುರ್ಗಮ ದುರಿತಗಳು ನಿವಾರಣೆಯಾಗುತ್ತವೆ, ಆಪತ್ತುಗಳು ಪರಿಹಾರವಾಗುತ್ತದೆ ಎಂಬುದು ನಂಬಿ ಬರುವ ಭಕ್ತರ ಅಭಿಪ್ರಾಯ.

ನವರಾತ್ರಿ: ಬೆಳಗ್ಗೆ ಪ್ರತಿದಿನ ನಿರ್ಮಾಲ್ಯ ವಿಸರ್ಜನೆ, ಪೂಜೆ.ಪಂಚಾಮೃತ ಅಭಿಷೇಕ.
ಮಧ್ಯಾಹ್ನ ಮಹಾಪೂಜೆ. ಭಕ್ತರ ವತಿಯಿಂದ ಚಂಡಿಕಾಯಾಗ, ಮುತ್ತೈದೆಯರಿಗೆ ಬಾಗಿನ, ಕನ್ನಿಕಾಪೂಜೆ. ಅನ್ನಸಂತರ್ಪಣೆ (ಈ ವರ್ಷ ಕೊರೊನ ಕಾರಣವಾಗಿ ಅನ್ನಸಂತರ್ಪಣೆ ನಡೆಸಲಾಗುವುದಿಲ್ಲ).ರಾತ್ರಿ ಕಲ್ಪೋಕ್ತಪೂಜೆ, ಹೂವಿನ ಪೂಜೆ.
ನವರಾತ್ರಿಯ ಏಳನೇ ದಿನ ಊರಿನ ಭಕ್ತಾದಿಗಳಿಂದ ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ. ಕೊರೊನ ಕಾರಣವಾಗಿ ಸರಕಾರದ ಸೂಚನೆಯಂತೆ ನವರಾತ್ರಿ ಆಚರಣೆ ನಡೆಯುತ್ತಿದೆ.

-ಕೆ.ಎಲ್.ಕುಂಡಂತಾಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

‘ಭೂಲೋಕಾಮೃತ ತುಳಸಿ’ : ನವೆಂಬರ್ 26 ಉತ್ಥಾನ ದ್ವಾದಶೀ–ತುಳಸಿ ಹಬ್ಬ

Upayuktha

ಆತ್ಮಕಲ್ಯಾಣದಿಂದ ಲೋಕ ಕಲ್ಯಾಣ: ಆಚಾರ್ಯ ಶ್ರೀ 108 ಮಹಾಸಾಗರ ಮುನಿ ಮಹಾರಾಜರು

Upayuktha

ಗೋಕರ್ಣ: ಕೊರೋನಾ ಮುಕ್ತಿಗೆ ಪ್ರಾರ್ಥಿಸಿ ಗಂಗಾಧಾರಾ ಅಭಿಷೇಕ

Upayuktha