ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ‘ಕಾಪುದಪ್ಪೆ’ ಮಾರಿಯಮ್ಮ

ಶರನ್ನವರಾತ್ರಿ ಪುಣ್ಯಕಾಲ | ಉಡುಪಿ ಜಿಲ್ಲೆಯ ಕಾಪು ಮಾರಿಗುಡಿ

ಆದಿಮ- ಶಿಷ್ಟ ಸಂಸ್ಕೃತಿಗಳ ಸಮನ್ವಯವಾದ ಭಾರತೀಯ ಸಂಸ್ಕೃತಿಯ ಉಸಿರು “ಜಾನಪದ ಮನೋಧರ್ಮ”. ಸಾನ್ನಿಧ್ಯವಿದೆ ಎಂದು ಪೂಜೆಯಲ್ಲ, ಪೂಜೆ ನಡೆಯುತ್ತಿರುವಂತೆಯೇ ಸಾನ್ನಿಧ್ಯ ಸನ್ನಿಹಿತವಾಗುವ ನಂಬಿಕೆ ಹಾಗೂ ಸಾನ್ನಿಧ್ಯವನ್ನು ಪ್ರತಿಷ್ಠಾಪಿಸಿ ಸಾನ್ನಿಧ್ಯ ಇದೆ ಎಂಬ ನಂಬಿಕೆಯೊಂದಿಗೆ ಪೂಜೆ ಮಾಡುವುದು. ಕಟ್ಟಳೆಗಳೇ ಪ್ರಧಾನವಾಗುವ ಕಟ್ಟಡಗಳಿಗೆ ಮಹತ್ವ ಇಲ್ಲದ ಚಿಂತನೆಯಿಂದ ಕಟ್ಟಳೆ ಹಾಗೂ ಕಟ್ಟಡಗಳೆರಡೂ ಮುಖ್ಯ ಎಂಬ ಶ್ರದ್ಧೆಯಿಂದ ಆರಾಧನೆ ನೆರವೇರಿಸುವ ಹಂತ ತಲುಪಿದರೂ ಮೂಲವನ್ನು ಸುಪ್ತವಾಗಿ ಹೊಂದಿರುವುದು ನಮ್ಮ ಉಪಾಸನಾ ವಿಧಾನದಲ್ಲಿ ನಿಚ್ಚಳ.

ಕರಾವಳಿ ಕರ್ನಾಟಕದ ಉಡುಪಿ ಜಿಲ್ಲೆಯ‌ ಕಾಪುವಿನ ಮಾರಿ, ಮಾರಿಯಮ್ಮಳಾಗಿ, ಮಾರಿಯಮ್ಮ ದೇವರಾಗಿ ವಿವಿಧ ಸ್ವರೂಪದ ನಿಷ್ಠಾಂತರಗೊಂಡು ಗದ್ದುಗೆ- ಗುಡಿ- ದೇವಸ್ಥಾನ ಸಂಕಲ್ಪಗಳಲ್ಲಿ ವ್ಯಕ್ತಗೊಂಡುದುದನ್ನು ಗಮನಿಸಬಹುದು.

ಸಮೂಹ ಪೂಜೆ ಹಾಗೂ ಬಹುದೇವತಾ ಆರಾಧನೆಗಳನ್ನು ಸ್ವೀಕರಿಸಿರುವ ನಮ್ಮ ತುಳುನಾಡಿನ ಉಪಾಸನಾ ಪ್ರಕಾರಗಳಲ್ಲಿ‌ ‘ಮಾರಿ’ಯಕಲ್ಪನೆ ಮತ್ತು ಅನುಸಂಧಾನ ಸಾಮೂಹಿಕವಾಗಿ ಮಾತ್ರ ರೂಢಿಯಲ್ಲಿವೆ. ಮಾರಿಗೆ ನೆರವೇರುವ ಪೂಜೆಯಲ್ಲಿ ಪಾಲ್ಗೊಂಡು ಮುಂದುವರಿದ ಆಚರಣೆಗಳು ಮನೆಗಳಲ್ಲಿ ನಡೆಯುವುದಿದೆ.

ದಂಡಿನಮಾರಿ:
ರಾಜಕೀಯ ಸ್ಥಿತ್ಯಂತರಗಳಾಗಿ ವಿಜಯನಗರದ ಆಳ್ವಿಕೆಯ ಬಳಿಕ‌ ಕೆಳದಿಯ ನಾಯಕರು ತುಳುನಾಡಿನ ಅಧಿಕಾರ ಸೂತ್ರವನ್ನು ಹಿಡಿದ ಕಾಲಘಟ್ಟವನ್ನು ಮಾರಿಯ ಪ್ರವೇಶ ಕಾಲವೆಂದು ಅಂದಾಜಿಸ ಬಹುದು. ಲಿಂಗಣ್ಣ ಕವಿಯ “ಕೆಳದಿನೃಪ ವಿಜಯ” ಗ್ರಂಥದ ಆಧಾರದಲ್ಲಿ‌ ಕ್ರಿ.ಶ. 1743ರಲ್ಲಿ ಬಸಪ್ಪನಾಯಕನು ಕಾಪುವಿನ ಸಮುದ್ರತೀರದಲ್ಲಿ “ಮನೋಹರಗಡ” ಎಂಬ ಸಣ್ಣಕೋಟೆಯನ್ನೂ (ಲೈಟ್ ಹೌಸ್ ಪಕ್ಕದ ಹೆಬ್ಬಂಡೆ ಮೇಲೆ ಕಟ್ಟಡದ ಕೆಂಪುಕಲ್ಲಿನ ಅವಶೇಷವಿದೆ) ಮಲ್ಲಾರಿನಲ್ಲಿ ಸೈನ್ಯನಿಲ್ಲುವುದಕ್ಕೆ ದೊಡ್ಡ ಕೋಟೆಯೊಂದನ್ನು ನಿರ್ಮಿಸಿದನೆಂಬ ಐತಿಹಾಸಿಕ ವಿವರಗಳ ಆಧಾರದಲ್ಲಿ ಕಾಪುವಿಗೆ ಸೇನೆಯೊಂದಿಗೆ ಬಂದ “ದಂಡಿನಮಾರಿ” ಎಂದು “ಮಾರಿ”ಯ ಆಗಮನವನ್ನು ಉಲ್ಲೇಖಿಸಬಹುದು. ವಿಜಯನಗರದ ಕಾಲದಲ್ಲೆ ಕೋಟೆ ಇತ್ತು, ಅದು ಸಂಪೂರ್ಣ ಜೀರ್ಣಗೊಂಡಿತ್ತು, ಆ ಕೋಟೆಯನ್ನು ಸಂಪೂರ್ಣವಾಗಿ ಬಸಪ್ಪನಾಯಕ ಪುನಾರಚಿಸಿದ ಎಂಬ ಮಾಹಿತಿಯೂ ಇದೆ.

ಮಾರಿ ಗುಡಿಗಳಲ್ಲಿ ‘ದಂಡಿನಮಾರಿ’ ಎಂಬ ಸಂಬೋಧನೆ ಚಾಲ್ತಿಯಲ್ಲಿದೆ. ಕೋಟೆಮನೆ, ರಾಣ್ಯದವರು (ರಣವೀರರು ಎಂದು ಹೇಳಿಕೊಳ್ಳುತ್ತಾರೆ) ಮುಂತಾದ ಪಂಗಡದವರು ಇಂದಿಗೂ ಮಲ್ಲಾರು ಕೋಟೆಯ (ಕೋಟೆ ಸಂಪೂರ್ಣ ನಾಶವಾಗಿದೆ) ಪಕ್ಕದಲ್ಲಿ ನೆಲೆಯಾಗಿರುವುದನ್ನು ಮತ್ತು ಇವರ ಭಾಗವಹಿಸುವಿಕೆಯಲ್ಲೆ “ಮಾರಿಪೂಜೆ” ನೆರವೇರುತ್ತಿರುವುದನ್ನು ಆಧರಿಸಿ ಮಾರಿ ಆರಾಧನೆಯ ಮೂಲದ ಕಡೆಗೆ ಗಮನಹರಿಸಿದಂತಾಗುತ್ತದೆ. ಇವರೆಲ್ಲ ಕನ್ನಡ ಭಾಷಿಕರೆನ್ನುವುದು ಮುಖ್ಯ ಅಂಶವಾಗಿದೆ. ಇದರಿಂದ ‘ಕಾಪುವಿನ ಮಾರಿ’ಸೇನೆಯೊಂದಿಗೆ ಬಂದ ಶಕ್ತಿ ಎಂದು ಪುಷ್ಟೀಕರಿಸಬಹುದು.

ಕೋಟೆ ಮನೆಯಲ್ಲಿ ‘ಮಾರಿ’ಯು ಮನೆ ದೇವರಾಗಿ ಪೂಜೆಗೊಳ್ಳುತ್ತದೆ. ಮಾರಿಗುಡಿಗಳಲ್ಲಿ ದರ್ಶನ ಆರಂಭಕ್ಕೆ ಮುನ್ನ ಹವಾಲ್ದಾರ್ ಪ್ರಾರ್ಥನೆ ನಡೆಸುತ್ತಾರೆ. ಮಂಗಳವಾರದ ಆಚರಣೆ ಮತ್ತು ಮಾರಿಪೂಜಾ ವಿಧಿಗಳನ್ನು ಸಂಪೂರ್ಣ ನಿರ್ವಹಿಸುವುದು ಸೇರ್ವೇಗಾರರು ಮತ್ತು ರಾಣ್ಯದವರು ( ಕ್ರಮ ಹೀಗಿತ್ತು). ಈ ವಿವರಗಳು ಮಾರಿ- ಈ ಪಂಗಡಗಳವರ ಸಂಬಂಧವನ್ನು ದೃಢೀಕರಿಸುತ್ತಾ ಕಾಪುವಿನಲ್ಲಿ ಮಾರಿ ಆರಾಧನೆ ಮೊದಲಿಟ್ಟಿರಬಹುದಾದ ಸಂದರ್ಭವನ್ನು ನೆನಪಿಸಿಕೊಳ್ಳಬಹುದು.

ಕೋಟೆಗೆ ಮಾತ್ರ ಸಂಬಂಧಪಟ್ಟ ‘ಮಾರಿ’ ಸರ್ವರ ದೇವರಾಗಿ ಸಾರ್ವಜನಿಕ ಉಪಾಸನಾ ಶಕ್ತಿಯಾಗಿ ಪರಿವರ್ತನೆಗೊಂಡು ಪ್ರಸ್ತುತ ನಾವು ಕಾಣುವ “ಕಾಪುದ ಅಪ್ಪೆ” ಮಾರಿಯಮ್ಮದೇವರಾಗಿ ಅನಾವರಣಗೊಂಡ ಕುರಿತ ಪ್ರಚಲಿತವಿರುವ ದಂತಕತೆಗಳಲ್ಲಿ‌ ಇತಿಹಾಸದ ಅಂಶವನ್ನು ಮತ್ತು ಹೆಚ್ಚು ಸರಿಯಾಗಿದೆ ಎಂದು ಪರಿಗ್ರಹಿಸಬಹುದಾದ ಒಂದನ್ನು‌‌ ಇಲ್ಲಿ ನಿರೂಪಿಸುತ್ತೇನೆ.

ನಂದಿಕೆರೆ:
1799 ರಲ್ಲಿ ಟಿಪ್ಪು ಸುಲ್ತಾನನ ಮರಣಾನಂತರ ಬ್ರಿಟಿಷರ ವಶಕ್ಕೆ ಕೋಟೆ ಸೇರಿಹೋಯಿತು, ಅರಾಜಕವಾಯಿತು. ಆದರೆ ಟಿಪ್ಪುಸುಲ್ತಾನನ ಉಗ್ರಾಣಿಯೊಬ್ಬರು ತಮ್ಮ ಹುದ್ದೆಯಲ್ಲಿ ಮುಂದುವರಿದು ಬ್ರಿಟಿಷರ ಕೈಕೆಳಗೆ ಕಾರ್ಯನಿರ್ವಹಿಸುತ್ತಿದ್ದರು. ಮಂಗಳವಾರ, ಶುಕ್ರವಾರ ಕೋಟೆ‌ ಪರಿಸರದಲ್ಲಿ ಬರುತ್ತಿದ್ದ ಮಲ್ಲಿಗೆ ಹೂವಿನ ಪರಿಮಳ ಬರುವುದು, ಕೋಟೆಯೊಳಗಿನ ನಂದಿಕೆರೆಯಲ್ಲಿ ಸ್ನಾನ ಮಾಡುವ ಸದ್ದು ಕೇಳಿ ಬರುವುದನ್ನು ಪರೀಕ್ಷಿಸಲು ಉಗ್ರಾಣಿ ಒಂದು ದಿನ ರಾತ್ರಿವೇಳೆ ಕೋಟೆಯ ನಂದಿಕೆರೆಯ ಬಳಿ ಬರುತ್ತಾರೆ. ಆಗ ಕೆರೆಯಲ್ಲಿ ಸ್ತ್ರೀಯ ತಲೆ ಕೂದಲು ಮಾತ್ರ ಕಾಣಿಸುತ್ತದೆ. “ಯಾರಮ್ಮ ನೀವು” ಎಂದು ಕೇಳುತ್ತಾರೆ. “ನಾನು ಕೋಟೆಮಾರಿ” ಎಂಬ ಉತ್ತರ ಬರುತ್ತದೆ. ಕೋಟೆ ಈಗ ನಮ್ಮದಾಗಿದೆ ಎಂದು ಉಗ್ರಾಣಿ ಹೇಳುತ್ತಾರೆ. ಆಗ ಕೆರೆಯಿಂದ “ನನಗೆ ಬೇರೆ ನೆಲೆಯನ್ನು ತೋರಿಸಿಕೊಡು ಹೋಗುತ್ತೇನೆ” ಎಂಬ ಧ್ವನಿ ಕೇಳಿಸುತ್ತದೆ.

‘ನಾನು ಮುಸ್ಲಿಮನಿದ್ದೇನೆ ಅಮ್ಮಾ..ಹೇಗೆ ನಿಮಗೆ ನೆಲೆ ತೋರಿಸಲಿ’ ಎಂದು‌ ಉಗ್ರಾಣಿ ವಿನಂತಿಸಿಕೊಂಡಾಗ, ‘ನಾಲ್ಕು ಜಾತಿಯ ಜನರನ್ನು ಸೇರಿಸು, ಇಲ್ಲಿಂದ ತೆಂಗಿನಕಾಯಿಯನ್ನು ಬಿಸಾಡು‌ ಅದು ಎಲ್ಲಿ ಬೀಳುತ್ತದೊ ಅಲ್ಲಿ ನನಗೆ ನೆಲೆಯನ್ನು ಸಾರ್ವಜನಿಕರು ರೂಪಿಸುತ್ತಾರೆ’ ಎಂದು ಸೂಚನೆ ಕೊಡುತ್ತಾಳೆ ‘ಕೋಟೆ ಮಾರಿ’. ಈಗ ಐತಿಹಾಸಿಕ ಮಹತ್ವದ ಕೋಟೆಯೂ ಇಲ್ಲ, ನಂದಿಕೆರೆಯೂ ಕಾಣಸಿಗುವುದಿಲ್ಲ- ಕಾಲ ಗರ್ಭ ಸೇರಿಹೋಗಿವೆ.

ಮಾರಿಯ ಆದೇಶದಂತೆ ನಾಲ್ಕು ಜಾತಿಯ ಹತ್ತು ಸಮಸ್ತರ ಸಮಕ್ಷಮ ತೆಂಗಿಕಾಯಿಯನ್ನು ಹಾರಿಸಿದಾಗ ಅದು “ಪಲ್ಲ ಪಡ್ಪು” ಎಂಬಲ್ಲಿ ಬಿತ್ತು. ಅಲ್ಲಿ ಮಾರಿ ನೆಲೆಗೊಂಡು ಸೀಮಿತ ಜನರಿಂದ ಆರಾಧನೆಗೊಳ್ಳುತ್ತಿದ್ದಳು. ಮುಂದೆ ಸಮಷ್ಟಿಯ ಆರಾಧನಾ ಶಕ್ತಿಯಾಗಿ ತನ್ನ ಭಕ್ತರ ವಾಸ್ತವ್ಯದ ವ್ಯಾಪ್ತಿಯನ್ನು ವಿಸ್ತರಿಸಿಕೊಂಡಳು.

ಪಲ್ಲಪಡ್ಪು> ಪಳ್ಳಪಡ್ಪು> ಪಳ್ಳಿಪಡ್ಪು ಎಂದಾಯಿತು‌. ನೀರು ನಿಲ್ಲವ ತಗ್ಗುಪ್ರದೇಶವೇ ಪಲ್ಲ. ಪಡ್ಪು ಎಂದರೆ ಗಿಡ, ಪೊದೆಗಳಿಂದ ಆವೃತವಾದ ಸ್ಥಳ. ಹೀಗೆ ‘ಪಲ್ಲ ಪಡ್ಪು’.

“ಗದ್ದುಗೆ”ಯೇ ಮೂಲ ಸನ್ನಿಧಾನ
ಪ್ರತಿ ಮಂಗಳವಾರ ಮಾತ್ರ ಪೂಜೆ. ಕೋಟೆಯವಳಾದ್ದರಿಂದ ಕೋಟೆಗೆ ಸಂಬಂಧ ಪಟ್ಟವರಿಂದ ಗದ್ದುಗೆ ತಂದು ಪೂಜೆ. ಕೇವಲ ಗದ್ದುಗೆ ಪೂಜೆ ನಡೆಯುತ್ತಿತ್ತು. ವರ್ಷಕ್ಕೊಮ್ಮೆ ತಾತ್ಕಾಲಿಕ ಚಪ್ಪರಹಾಕಿ ಮಾರಿಪೂಜೆ ನಡೆಯುತ್ತಿತ್ತು. ಮಾರಿಪೂಜೆ ಬಳಿಕ ಚಪ್ಪರಕ್ಜೆ ಬೆಂಕಿ ಕೊಡಲಾಗುತ್ತಿತ್ತು. ಗದ್ದುಗೆಯೇ ಮಾರಿಯ ಆರಾಧನೆಯ ಮೂಲ ಸನ್ನಿಧಾನ ಎನ್ನಬಹುದು.

ಕಾಲಕ್ರಮೇಣ ಭಕ್ತರ ಸಂಖ್ಯೆ ಹೆಚ್ಚಳವಾಯಿತು. ಮಾರಿಗುಡಿಯಾಯಿತು‌. ಮಾರಿ> ಮಾರಿಯಮ್ಮನಾದಳು. ಗುಡಿ ದೇವಸ್ಥಾನ ಸದೃಶವಾದಾಗ ಮಾರಿಯಮ್ಮ ದೇವರಾದಳು. ಕಾಲ ಕಾರಣವಾಗಿ ಒಂದು ಗುಡಿ ಮೂರು ಗುಡಿಯಾಯಿತು. ಅವು ದೇವಸ್ಥಾನಗಳೆಂದೇ ಒಪ್ಪಲಾಯಿತು.

ಎಷ್ಟೇ ವೈದಿಕೀಕರಣಗೊಂಡರೂ “ಗದ್ದುಗೆ ಪೂಜೆ”, “ಮಾರಿಪೂಜೆ”ಗಳು ನಿರಾತಂಕವಾಗಿ ನಡೆಯುತ್ತಲೇ ಇವೆ. ಇದು ಆದಿಮ ಅಥವಾ ಜನಪದರ‌ ಆಚರಣೆಯ ಸಾಮರ್ಥ್ಯ ಹಾಗೂ ವೈದಿಕದ ವೈಚಾರಿಕ ವೈಶಾಲ್ಯತೆ.

ಜನಪದರ ಭಾಗವಹಿಸುವಿಕೆಯಲ್ಲಿ ಜಾನಪದ ವಿಧಾನದಲ್ಲಿ ನೆರವೇರುತ್ತಿದ್ದ ಆಚರಣೆಗಳೆಲ್ಲ ವೈದಿಕದ ಪ್ರಭಾವ ಮತ್ತು ಸ್ವೀಕಾರದಿಂದ ಮಾರಿ ‘ಶಕ್ತಿದೇವತೆ’ಯಾಗಿ‌ ರೂಪಾಂತರಗೊಂಡು ದುರ್ಗಾ ಸಂಬಂಧಿಯಾದ ಆರಾಧನಾ ವಿಧಿಗಳು ಸ್ವೀಕಾರವಾದುವು .ಮಾರ್ಕಾಂಡೇಯ ಪುರಾಣದ ಶ್ರೀದೇವೀಮಹಾತ್ಮ್ಯೆ-

‘ಸಪ್ತಶತೀ’ಯ ಹಲವು ಶ್ಲೋಕಗಳು ಆಧಾರವಾದಾಗ ದುರ್ಗಾ ಸಂಬಂಧಿ ಪೂಜೆಗಳು, ದುರ್ಗಾನಮಸ್ಕಾರ, ಚಂಡಿಕಾಯಾಗ, ಶಕ್ತಿ ಯಾಗಾದಿಗಳು, ಕಲ್ಪೋಕ್ತ ಪೂಜೆಗಳು ಸೇರಿಕೊಂಡುವು. ಶರನ್ನವರಾತ್ರಿ ಆರಾಧನಾ ಪರ್ವವಾಗಿ ವೈಭವದ ಆಚರಣೆಗಳು ನಡೆಯಲಾರಂಭವಾಯಿತು.

(ಪ್ರಸಿದ್ಧ ಪತ್ರಿಕೆಯಲ್ಲಿ ಬರೆದ ಮತ್ತು 2005ರಲ್ಲಿ ಅಭಯ ಪ್ರಸಾದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ)

ಮೂರು ಗುಡಿಗಳಲ್ಲಿ ನವರಾತ್ರಿ
ಶ್ರೀ ಹಳೇ ಮಾರಿಯಮ್ಮ ದೇವಸ್ಥಾನ:
ಪ್ರತಿ ದಿನ ಬೆಳಗ್ಗೆ: ಶ್ರೀ ದೇವಿ ಮಹಾತ್ಮೆ ಪಾರಾಯಣ, ನವದುರ್ಗಾ ಪೂಜೆ , ಪ್ರಸನ್ನ ಪೂಜೆ, ಗದ್ದಿಗೆ ಪೂಜೆ, ಹೂವಿನ ಪೂಜೆ.
ಶಾರದಾ ಪೂಜೆ. ಶುಕ್ರವಾರ: ದುರ್ಗಾಷ್ಟಮಿ, ದುರ್ಗಾ ನಮಸ್ಕಾರ ಪೂಜೆ.
ಸೋಮವಾರ: ವಿಜಯ ದಶಮಿ, ಕಲಶ ವಿಸರ್ಜನೆ. ಅ.27 ಮಂಗಳವಾರ:
ಚಂಡಿಕಾಯಾಗ.

(ಕೊರೊನಾ ಕಾರಣವಾಗಿ ಧಾರ್ಮಿಕ ವಿಧಿ ವಿಧಾನಗಳು ಸರಳವಾಗಿ ಜರಗುವುದು)

ಹೊಸ ಮಾರಿಗುಡಿ ದೇವಸ್ಥಾನ ಮತ್ತು ಮೂರನೇ ಮಾರಿಗುಡಿ ದೇವಸ್ಥಾನಗಳಲ್ಲಿ ಬಹುತೇಕ ಒಂದೆ ಕ್ರಮದಲ್ಲಿ ನವರಾತ್ರಿ ಆಚರಣೆ ನೆರವೇರುತ್ತವೆ: ಇಲ್ಲಿ ನೆರವೇರುವ ನವರಾತ್ರಿ ಆಚರಣೆ ಕಲಶ ಪ್ರತಿಷ್ಠಾ ಕ್ರಮದಲ್ಲಿ. ಪ್ರತಿದಿನ ಬೆಳಗ್ಗೆ ಮಂಗಳ ಧ್ವನಿ, ಹಿಂದಿನ ದಿನದ ಕಲಶ, ಅಲಂಕಾರ ವಿಸರ್ಜನೆ. ಉಷಃಕಾಲ ಪೂಜೆ, ಹೊಸ ಕಲಶ ಪ್ರತಿಷ್ಠೆ. ಗಣಯಾಗ, ಶಕ್ತಿಯಾಗ. ಮಧ್ಯಾಹ್ನ ಕಲ್ಪೋಕ್ತ ಪೂಜೆ, ದೇವಿಮಹಾತ್ಮ್ಯೆ ಪಾರಾಯಣ, ಪೂಜೆ, ಸುವಾಸಿನಿ ಆರಾಧನೆ. ರಾತ್ರಿ- ದುರ್ಗಾನಮಸ್ಕಾರ, ಕಲ್ಪೋಕ್ತ ಪೂಜೆ, ಏಕಾಂತ ಸೇವೆ. ನವರಾತ್ರಿ ಕಾಲದಲ್ಲಿ ಎರಡು ಮಂಗಳವಾರಗಳು ಬಂದರೆ ಒಂದನೇ ಮಂಗಳವಾರ ಕದಿರುಕಟ್ಟುವುದು. ಎರಡನೇ ಮಂಗಳವಾರ ಚಂಡಿಕಾಯಾಗ ಮತ್ತು ಅನ್ನಸಂತರ್ಪಣೆ‌. ಒಂದೇ ಮಂಗಳವಾರವಾದರೆ ಬೆಳಗ್ಗೆ ಕದಿರು ಕಟ್ಟುವುದು, ಮಧ್ಯಾಹ್ನ ಚಂಡಿಕಾಯಾಗ- ಅನ್ನಸಂತರ್ಪಣೆ.

ನವರಾತ್ರಿ ಕಾಲದಲ್ಲಿ ದುರ್ಗಾದೇವಿ, ಆರ್ಯಾದೇವಿ, ಭಗವತೀದೇವಿ, ಕುಮಾರೀದೇವಿ, ಅಂಬಿಕಾದೇವಿ, ಮಹಿಷಮರ್ದಿನಿ‌, ಚಂಡಿಕಾದೇವಿ, ಸರಸ್ವತೀದೇವಿ, ವಾಗೀಶ್ವರೀದೇವಿ, ಮೂಲದೇವಿಯಾಗಿ ಕಲ್ಪಿಸಿ ಪೂಜಿಸುವ ಅನುಸಂಧಾನ ಎರಡೂ ಸನ್ನಿಧಾನಗಳಲ್ಲಿವೆ. (ಈ ವರ್ಷಕೊರೊನಾ ಕಾರಣವಾಗಿ ಅನ್ನಸಂತರ್ಪಣೆ ನಡೆಸಲಾಗಿಲ್ಲ. ಉಳಿದಂತೆ ನವರಾತ್ರಿಕಾಲದ ಸರ್ವಸೇವೆ, ಪೂಜೆಗಳು ಯಥಾಸಾಂಗವಾಗಿ ನೆರವೇರುತ್ತಿವೆ)

ಮನುಕುಲವನ್ನು ಬಾಧಿಸುತ್ತಿರುವ ಮಹಾವ್ಯಾಧಿಯನ್ನು ಪರಿಹರಿಸಿ ಪ್ರಜಾವರ್ಗಕ್ಕೆ ಆಯುರಾರೋಗ್ಯವನ್ನು, ರಕ್ಷಣೆಯನ್ನು ಅನುಗ್ರಹಿಸುವಂತೆ ಮಾರಿಯಮ್ಮನಲ್ಲಿ ಪ್ರಾರ್ಥಿಸೋಣ.

-ಕೆ.ಎಲ್. ಕುಂಡಂತಾಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಫೆ .6ರಿಂದ 12ರ ತನಕ ಗೋಸಾಡ ಶ್ರೀ ಮಹಿಷರ್ಮನಿ ದೇವಸ್ಥಾನದ ಬ್ರಹ್ಮಕಲಶೋತ್ಸವ

Upayuktha

ಇಂದು ಜಾತ್ರಾ ಗದ್ದುಗೆಗೆ ಶ್ರೀಮಾರಿಕಾಂಬೆ, ದೇವಿಯ ಭವ್ಯ ಶೋಭಾಯಾತ್ರೆ

Upayuktha

ತುಳುನಾಡ ಜಾತ್ರೆ ಒಡಿಯೂರು ರಥೋತ್ಸವ: ಸಂಪನ್ನಗೊಂಡ ತುಳು ಸಾಹಿತ್ಯ ಸಮ್ಮೇಳನ

Upayuktha

Leave a Comment