ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ ಒಂಬತ್ತು ದುರ್ಗಾ ದರ್ಶನ: ಬಯಲೂರಮ್ಮನ ಸನ್ನಿಧಿಯಲ್ಲಿ

ಶರನ್ನವರಾತ್ರಿ ಪುಣ್ಯಕಾಲ: ಬೈಲೂರು ಮಹಿಷಮರ್ದಿನಿ ದೇವಾಲಯ, ಉಡುಪಿ

‘ಬೈಲ್’ ಎಂಬುದು ತುಳು ಶಬ್ದ. ಸಮೃದ್ಧವಾದ ಕೃಷಿ ಭೂಮಿ.‌‌ ವಿಫುಲ‌ ಜಲಾಶ್ರಯವಿರುವ ಪ್ರದೇಶ. ಮೂರುಬೆಳೆ ಬೆಳೆಯುವ ಫಲವತ್ತಾದ ಬೇಸಾಯದ ಭೂಮಿ‌ ಎಂದು ಅರ್ಥ. ‘ಬಯಲು- ಬಯಲ್’ ಅಂದರೆ ತೆರವಾದ ದೊಡ್ಡ ಸ್ಥಳ,ಮೈದಾನ ಎಂದೂ ನಿರೂಪಿಸಲಾಗುತ್ತದೆ. ಬೈಲೂರಿನ ಭೌಗೋಳಿಕ ಸ್ವರೂಪವನ್ನು ಗಮನಿಸಿದರೆ ಎತ್ತರದ ಪ್ರದೇಶದಲ್ಲಿ ದೇವಸ್ಥಾನ, ಕೆಳಗೆ ವಿಸ್ತಾರವಾದ ಬಯಲು‌, ಆದುದರಿಂದ ‘ಬಯಲೂರು’ ಎಂದು ಗುರುತಿಸಲ್ಪಟ್ಟು ಕ್ರಮೇಣ ‘ಬೈಲೂರು’ ಆಯಿತೆನ್ನಲಡ್ಡಿಯಿಲ್ಲ. ಸಾಮಾನ್ಯವಾಗಿ ಸ್ಥಳನಾಮಗಳು ಭೌಗೋಳಿಕ ಸ್ವರೂಪವನ್ನು ಆಧರಿಸಿ ಇರುತ್ತವೆ.

ನಾಗ ಸಾನ್ನಿಧ್ಯ, ಮಹಿಷಮರ್ದಿನಿಯಾದ ಮಾಹಾಮಾತೆಯ ಸನ್ನಿಧಿ, ಬ್ರಹ್ಮ ಪ್ರಧಾನವಾದ ಪಂಚದೈವಗಳ ನೆಲೆ; ಒಟ್ಟಿನಲ್ಲಿ ಸಪರಿವಾರ ‘ಬಯಲೂರಮ್ಮ’ ಭಕ್ತರ ಪಾಲಿಗೆ ‘ಭಾಗ್ಯದೇವತೆ’.

ಸುಮಾರು ಕ್ರಿ.ಶ. 13 ನೇ ಶತಮಾನದ ನಿರ್ಮಿತಿ ಎಂದು ಪ್ರತಿಮಾ‌ ಲಕ್ಷಣವನ್ನು ಆಧರಿಸಿ ಮಹಿಷಮರ್ದಿನಿ ಮೂರ್ತಿಯನ್ನು ಗುರುತಿಸಿರುವ ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ಈ ಮೂಲಸ್ಥಾನ ಮೂರ್ತಿಯು ವೈಶಿಷ್ಟ್ಯಪೂರ್ಣವಾಗಿ‌ ಗಮನ ಸೆಳೆಯುತ್ತಿದೆ ಎಂದು ಅಭಿಪ್ರಾಯಪಟ್ಟಿದ್ದರು.

ಮೂಲಸ್ಥಾನ ಬಿಂಬ:
ಕೋಣನ ತಲೆ ಮತ್ತು‌ ಮನುಷ್ಯನ‌ ‌ದೇಹವಿರುವ ಅಸುರನ ತಲೆಯನ್ನು ಶೂಲದಿಂದ ತಿವಿದು, ಕಾಲಿನಿಂದ ಒತ್ತಿನಿಂತ ದೇವಿಯ ಮುಖ ಮುದ್ರೆ ನೋಟಕ್ಕೆ ಸರಿಯಾಗಿ ಮನೋಜ್ಞವಾಗಿದೆ. ಗಂಭೀರಳಾದ ದೇವಿಯ ಎಡ ಕೈಯಲ್ಲಿ ಅಸುರನ‌ ಕಾಲಿದೆ. ಎಡಗಾಲಿನಿಂದ ಮಹಿಷದಾನವನ ಬಲಕಾಲನ್ನು ತಿವುಚಿ‌‌ ದುಷ್ಟಶಕ್ತಿಯನ್ನು ಸಂಹರಿಸುವ ಬಿಂಬ ರಚನೆಯ ಕಲ್ಪನೆ ಅದ್ಭುತವಾದ ಒಂದು ದೃಶ್ಯಕಾವ್ಯದಂತೆ ಕಾಣುತ್ತದೆ.
ಚತುರ್ಭುಜೆಯಾದ ದೇವಿಯ ಮೇಲಿನ ಎರಡು ಕೈಗಳಲ್ಲಿ ಚಕ್ರ ಮತ್ತು ಶಂಖ ಧರಿಸಿದ್ದು ಪ್ರತಿಮೆ ಸಮಭಂಗದಲ್ಲಿದೆ ಎಂದು ವಿವರಿಸುತ್ತಾರೆ ಡಾ.ಗುರುರಾಜ ಭಟ್ಟರು.

ಬಲಿ ಮೂರ್ತಿಯು‌ ಸುಮಾರು18ನೇ‌ ಶತಮಾನದ್ದೆಂದು ಗುರುತಿಸಲಾಗಿದೆ. ಮೂರ್ತಿಯ ಸೀರೆ- ಸೀರೆಯ ನೆರಿಗೆಯು ಶಿಲ್ಪ ಶೈಲಿಯಿಂದ ಆಕರ್ಷಕವಾಗಿದೆ.

ಪೂರ್ವಾಭಿಮುಖವಾಗಿರುವ ದೇವಾಲಯದ ಗರ್ಭಗುಡಿಯ ನೈಋತ್ಯದಲ್ಲಿ ಉಪಸ್ಥಾನ ಗಣಪತಿ ಸನ್ನಿಧಾನವಿದೆ. ಹೊರ ಸುತ್ತಿನ‌ಲ್ಲಿ ಈಶಾನ್ಯದಲ್ಲಿ ಭದ್ರಕಾಳಿಗೆ ಸ್ಥಾನ ಕಲ್ಪಿಸಲಾಗಿದೆ. ಆಗ್ನೇಯ ಪೂರ್ವವಾಗಿ ಬ್ರಹ್ಮಸಾನ್ನಿಧ್ಯವಿದೆ. ದಕ್ಷಿಣದಲ್ಲಿ ರಕ್ತೇಶ್ವರೀ, ನಂದಿಗೋಣ ಸಂಕಲ್ಪಗಳಿವೆ. ವಾಯುವ್ಯದಲ್ಲಿ ಉತ್ತರಕ್ಕೆ ಹೊಂದಿದಂತೆ ಪುರಾತನ ನಾಗ ಗುಡಿಯೊಂದಿದೆ.

ಬಯಲೂರಮ್ಮನ ದೇವಾಲಯ ಸಮುಚ್ಚಯವನ್ನು ಒಮ್ಮೆ ಸಮಗ್ರವಾಗಿ ಗಮನಿಸಿದರೆ ಒಂದು ಬ್ರಹ್ಮಸ್ಥಾನ ಅಂದರೆ ಪಂಚದೈವಗಳಸ್ಥಾನ ನಡುವೆ ಮಹಿಷಮರ್ದಿನಿ‌ ಸಾನ್ನಿಧ್ಯವಹಿಸಿ 900 ವರ್ಷಗಳೇ ಸಂದುಹೋಯಿತು. ಈ ಜನಪದ- ಶಿಷ್ಟ; ಶ್ರದ್ಧೆ- ನಂಬಿಕೆಗಳ ಸಮಾಗಮ ಎಲ್ಲೆಡೆ ಕಾಣಬಹುದು. ಇದು ಪುರಾತವಾಗಿ ಅಥವಾ ಮೂಲತಃ ಇದ್ದ ಆದಿಮ ಸಂಸ್ಕೃತಿಯ ಪೂಜಾ ನೆಲೆಗಳಲ್ಲೆ ವೈದಿಕದ ದೇವಸ್ಥಾನ ಕಲ್ಪನೆಗೆ ಅವಕಾಶವಾಗಿ ಸುಗಮ ಸಮಾಗಮ ನಡೆದಿರುವುದಕ್ಕೆ ಬೈಲೂರಿನಲ್ಲೂ ಆಧಾರ ದೊರೆಯುತ್ತದೆ.

2005ರಲ್ಲಿ ಹಾಗೂ ಮತ್ತೊಮ್ಮೆ ದೇವಾಲಯದ ಜೀರ್ಣೋದ್ಧಾರವಾಗಿದೆ. ಈ  ಸಮಗ್ರ ಪುನರುತ್ಥಾನ ಉಪಕ್ರಮದಿಂದ ದೇವಾಲಯವು ಶಿಲೆ- ದಾರು ಶಿಲ್ಪಗಳ ಸರಳ ಸುಂದರ ದೇವಾಯತನವಾಗಿದೆ. ಒಂದು ಕಾಲಕ್ಕೆ ಒಂಬತ್ತು ಮಾಗಣೆಗಳ ಕೂಡುಕಟ್ಟಿನ ದೇವಾಲಯವಾಗಿತ್ತು. ಶಾ.ಶ. 1257ರ ದಾನ ಶಾಸನವೊಂದು ದೇವಾಲಯದಲ್ಲಿದೆ.

ಅನುಗ್ರಹ- ನವರಾತ್ರಿ

ಕ್ಷೇತ್ರದಲ್ಲಿ ನೆರವೇರುವ ಸ್ವಯಂವರ ಪಾರ್ವತಿ ಪೂಜೆಯಿಂದ ಕಂಕಣಬಲ ಕೂಡಿ ಬರುವುದು ಮಹಿಷಮರ್ದಿನಿ‌ಯ ವಿಶೇಷ ಅನುಗ್ರಹ. ನಾಗಸನ್ನಿಧಿಗೆ ಮೂಲಸ್ಥಾನವೆಂದು ಭಕ್ತರು ಆಗಮಿಸುತ್ತಾರೆ. ಹಲವರ ಹಲವು ಕಷ್ಟಗಳು, ಬಾಧೆಗಳು ಪರಿಹಾರವಾಗುತ್ತವೆ ಎಂಬುದು ನಂಬಿಕೆ, ಹಾಗೆಯೇ ಭಕ್ತರು ನಡೆದುಕೊಳ್ಳುತ್ತಾರೆ. ಸರ್ವಾಭೀಷ್ಟಗಳ ಸಿದ್ಧಿ ಕ್ಷೇತ್ರವಾಗಿದೆ ಬೈಲೂರು ಅಮ್ಮನ ಸನ್ನಿಧಿ.

ನವರಾತ್ರಿ ಕಾಲದಲ್ಲಿ ಅಮ್ಮನಿಗೆ ಉಷಃಕಾಲಪೂಜೆ ನೆರವೇರುತ್ತದೆ. ಬಳಿಕ ಅಭಿಷೇಕ, ಅಲಂಕಾರ. ಪ್ರತಿನಿತ್ಯ ಚಂಡಿಕಾಯಾಗ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ. ರಾತ್ರಿ ದುರ್ಗಾನಮಸ್ಕಾರ. ಈ ವೇಳೆ ಸ್ವಯಂವರ ಪಾರ್ವತಿ ಮಂತ್ರದಿಂದ ಅರ್ಚನೆ ವಿಶೇಷವಾಗಿದೆ. ಕಲ್ಪೋಕ್ತಪೂಜೆ ಬಳಿಕ ಕನ್ನಿಕಾಪೂಜೆಯೂ ನೆರವೇರುತ್ತದೆ. ದೇವಳದ ವಾರ್ಷಿಕ ಉತ್ಸವಾದಿಗಳಲ್ಲಿ ಶರನ್ನವರಾತ್ರಿ ಕಾಲವು ವಿಜೃಂಭಣೆಯ ಪರ್ವ.

ಆದರೆ ಈ ವರ್ಷ ಕೊರೊನಾ ಕಾರಣವಾಗಿ ಅನ್ನಸಂತರ್ಪಣೆಗಳಿಲ್ಲ, ಎಲ್ಲವೂ ಸರಕಾರದ ಸೂಚನೆಯಂತೆ ನಡೆಯುತ್ತಿದೆ.

ಮಹಿಷನ ಮುಖ ಹಾಗೂ ಮಾನವ ದೇಹವುಳ್ಳ ಮಹಿಷಾಸುರನ ವಧೆಯಿಂದ ದಾಷ್ಟ್ಯ ಮತ್ತು ಜಡತ್ವನಾಶವಾಗಲಿ.

ಮನುಕುಲವನ್ನು‌ ಬಾಧಿಸುತ್ತಿರುವ ಮಹಾಮಾರಿಯಿಂದ ರಕ್ಷಣೆ ನೀಡು ಎಂದು ಮಹಿಷಮರ್ದಿನಿಯಾಗಿ ಬಯಲೂರಿನಲ್ಲಿ‌ ನೆಲೆನಿಂತ ಜಗಜ್ಜನನಿಯಲ್ಲಿ ನಮ್ಮ ವಿನೀತ ವಿನಂತಿಯಾಗಲಿ.

-ಕೆ.ಎಲ್.ಕುಂಡಂತಾಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ನವರಾತ್ರಿ ವಿಶೇಷ: ಕುಮಾರಿ ಪೂಜೆ- ವೈಶಿಷ್ಟ್ಯ ಮತ್ತು ವಿಧಾನ

Upayuktha

ಕುಕ್ಕೆ ಸುಬ್ರಹ್ಮಣ್ಯ: 24ರಿಂದ ಚಂಪಾಷಷ್ಠಿ ಮಹೋತ್ಸವ

Upayuktha

ಚಾಂದ್ರ ಕೃಷ್ಣಾಷ್ಟಮಿ: ‘ಜಾನಪದ’ ಮನಸ್ಸಿನ ‘ಜಗನ್ನಾಥ’

Upayuktha

Leave a Comment