ಧರ್ಮ-ಅಧ್ಯಾತ್ಮ ಪ್ರಮುಖ ಹಬ್ಬಗಳು-ಉತ್ಸವಗಳು

ಶ್ರೀದುರ್ಗಾಸಪ್ತಶತೀ- ದೇವೀಮಹಾತ್ಮೆ

(ಚಿತ್ರ ಕೃಪೆ: ಫುಡ್ ಫಾರ್ ಥಾಟ್ಸ್)

ನವದುರ್ಗೆಯರ ಆರಾಧನೆಯ ಹಬ್ಬವಾದ ನವರಾತ್ರಿ  ಉತ್ಸವದ ಪ್ರಯಕ್ತ ಹಿರಿಯ ವೇದ ವಿದ್ವಾಂಸ ಪಂಡಿತ ವಿಜಯೇಂದ್ರ ರಾಮನಾಥ ಭಟ್ ಶಿವಮೊಗ್ಗ ಇವರು ಸಂಗ್ರಹಿಸಿದ ಶ್ರೀ ದುರ್ಗಾ ಸಪ್ತಶತಿ- ದೇವೀಮಹಾತ್ಮೆಯ ವಿವರಣೆ, ವ್ಯಾಖ್ಯಾನದ ಆಯ್ದ ಭಾಗಗಳನ್ನು ಉಪಯುಕ್ತ ನ್ಯೂಸ್ ಓದುಗರಿಗಾಗಿ ನೀಡಲಾಗಿದೆ.

ಶ್ರೀದುರ್ಗಾಸಪ್ತಶತೀ- ದೇವೀಮಹಾತ್ಮೆ

“ಸಪ್ತಶತ” ಎಂದರೆ ಏಳ್ನೂರು.
“ಶ್ರೀದುರ್ಗಾಸಪ್ತಶತೀ” ಎಂದರೆ ಏಳ್ನೂರು ಶ್ಲೋಕಗಳನ್ನೊಳಗೊಂಡ ಶ್ರೀದುರ್ಗಾದೇವಿಯ ಸ್ತುತಿ.
(ಶ್ರೀಮದ್ಭಗವದ್ಗೀತೆಯಲ್ಲಿಯೂ ಇರುವುದು ಏಳ್ನೂರು ಶ್ಲೋಕಗಳು.)

ಸಮಸ್ತ ದೇವತೆಗಳ ಅಂಶಗಳಿಂದ ಅವತಾರಮಾಡಿ ಎಲ್ಲ ದೇವತೆಗಳನ್ನೂ ಮತ್ತು ಸರ್ವಭಕ್ತರನ್ನೂ ಕಾಪಾಡುತ್ತಿರುವ ದುರ್ಗಾಪರಮೇಶ್ವರಿಯ ಉಪಾಖ್ಯಾನವು ಭಕ್ತಿ-ಜ್ಞಾನ ರಸಾಯನವಾಗಿದೆ.
“ಶ್ರೀದುರ್ಗಾಸಪ್ತಶತೀ”ಯು ದೇವೀಭಕ್ತರ ಪಾರಾಯಣದ ದಿವ್ಯಸೂಕ್ತಿಯಾಗಿದೆ.

ಸಪ್ತಶತಿಯ ಏಳ್ನೂರು ಶ್ಲೋಕಗಳ ಸಂಗ್ರಹವು ಮೂರು ಭಾಗಗಳಲ್ಲಿ ಅಥವಾ ಚರಿತ್ರೆಗಳಲ್ಲಿ ವಿಭಕ್ತವಾಗಿದೆ.

ಪ್ರಥಮ ಚರಿತ್ರೆಯಲ್ಲಿ ಬ್ರಹ್ಮನು ಯೋಗನಿದ್ರಾ ಭಗವತಿಯನ್ನು ಸ್ತುತಿಸಿ ವಿಷ್ಣುವನ್ನು ಎಚ್ಚರಗೊಳಿಸಲು ಪ್ರಾರ್ಥಿಸುತ್ತಾನೆ. ಮತ್ತು ಎಚ್ಚರಗೊಂಡ ವಿಷ್ಣುವಿನಿಂದ ಮಧು-ಕೈಟಭರೆಂಬ ರಾಕ್ಷಸರ ನಾಶವಾಗುತ್ತದೆ. ಇದರಲ್ಲಿ 104 ಶ್ಲೋಕಗಳಿವೆ.

ಮಧ್ಯಮ ಚರಿತ್ರೆಯಲ್ಲಿ ಮಹಿಷಾಸುರನ ವಧೆಗಾಗಿ ಎಲ್ಲ ದೇವತೆಗಳ ಶಕ್ತಿಯು ಒಂದುಗೂಡಿ ಉದ್ಭವಿಸಿದ ಮಹಾನ್ ಶಕ್ತಿಯ ಮೂಲಕ ಮಹಿಷಾಸುರನ ವಧೆಯಾಗುತ್ತದೆ. ಇದರಲ್ಲಿ 155 ಶ್ಲೋಕಗಳಿವೆ.

ಉತ್ತಮಚರಿತ್ರೆಯಲ್ಲಿ ಶುಂಭ-ನಿಶುಂಭರ ವಧೆಗಾಗಿ ದೇವತೆಗಳು ಪ್ರಾರ್ಥಿಸಿದಾಗ ಪಾರ್ವತಿಯ ಶರೀರದಿಂದ ಶಕ್ತಿಯ ಪ್ರಾದುರ್ಭಾವವಾಗುತ್ತದೆ ಮತ್ತು ಕ್ರಮವಾಗಿ ಧೂಮ್ರಲೋಚನ, ಚಂಡ-ಮುಂಡ, ರಕ್ಕಬೀಜರ ವಧೆಯಾಗಿ ಶುಂಭ-ನಿಶುಂಭರ ಸಂಹಾರವಾಗುತ್ತದೆ. ಇದರಲ್ಲಿ 441 ಶ್ಲೋಕಗಳಿವೆ.

ನವರಾತ್ರಿ ವಿಶೇ‍ಷ: ದುರ್ಗಾ ಸಪ್ತಶತಿ ಪಾರಾಯಣದ ವಿಶೇಷ ಫಲಗಳು

ತಮ್ಮ ತಮ್ಮ ಕಾರ್ಯಾರಂಭ ಮಾಡುವ ಮುನ್ನ ಮಹಾಪುರುಷರು ಕೂಡ ದುರ್ಗಾರಾಧನೆ ಮಾಡಿದ ಸಂದರ್ಭಗಳಿವೆ:-

ರಾವಣವಧೆಗೆ ಮುನ್ನ ಶ್ರೀರಾಮ;
ತ್ರಿಪುರ ಸಂಹಾರಕ್ಕೆ ಮುನ್ನ ಶಿವ;
ದುರ್ವಾಸಶಾಪದಿಂದ ಪಾರಾಗಲು ಇಂದ್ರ;
ಮಹಾಭಾರತ ಯುದ್ಧಕ್ಕೆ ಮೊದಲು ಯುಧಿಷ್ಠಿರ ಹಾಗೂ ಅರ್ಜುನ;
ಹೀಗೆ ದುರ್ಗೆಯನ್ನು ಆರಾಧಿಸಿ ಸಫಲರಾಗಿದ್ದಾರೆ.

“ಪುರಾಣ ಮುನಿ” ಎಂದು ಖ್ಯಾತನಾಮರಾದ ವೇದವ್ಯಾಸ ಮಹರ್ಷಿ ವಿರಚಿತ ಅಷ್ಟಾದಶ ಮಹಾಪುರಾಣಗಳಲ್ಲಿ ಒಂದಾದ ಮಾರ್ಕಾಂಡೇಯ ಪುರಾಣದ ಅಂಗವಾಗಿದೆ ಈ ದೇವೀಮಾಹಾತ್ಮ್ಯದ ಭಾಗ. ಇದು ದುರ್ಗಾಸಪ್ತಶತೀ ಎಂದು ಪ್ರಸಿದ್ಧನಾಗಿದೆ.

ಈ ದುರ್ಗಾಸಪ್ತಶತೀಯು ಶ್ರೀಮಾರ್ಕಾಂಡೇಯ ಮೂಲಪುರಾಣದ 78 ನೆಯ ಅಧ್ಯಾಯದಿಂದ 90 ನೆಯ ಅಧ್ಯಾಯದ ವರೆಗೆ, ಒಟ್ಟು 13 ಅಧ್ಯಾಯಗಳು ಸೇರಿ ಚಂಡೀಪಾಠವಾಗಿದೆ. ಇಲ್ಲಿರುವ ಶ್ಲೋಕಗಳನ್ನೇ ಮಂತ್ರವೆಂದು ಪಾರಾಯಣ ಮಾಡುವುದು ಆಗಿರುತ್ತದೆ. ಕಾರಣ, ಮಂತ್ರವೇ ದೇವಿ.

ಇಂದು ನವರಾತ್ರ್ಯಾರಂಭ. ಈ ಶುಭದಿನದಿಂದ ಪ್ರಾರಂಭಿಸಿ ಇಂತಹ ದಿವ್ಯಸ್ತುತಿಯನ್ನು ನಾವೂ ಸವಿದು ಕೃತಾರ್ಥರಾಗೋಣ.
******

ಸಪ್ತಶತೀ ಅಧ್ಯಾಯ-1

ಈ ಅಧ್ಯಾಯದಲ್ಲಿ ಇರುವ ಶ್ಲೋಕಗಳು:-

ಉವಾಚ – 14;
ಅರ್ಧಶ್ಲೋಕ – 24;
ಶ್ಲೋಕ – 66;
ಒಟ್ಟು – 104.

ಈ ಅಧ್ಯಾಯದಲ್ಲಿ ಇರುವ ವಿಷಯ:-

ಮೇಧಾ ಋಷಿಗಳು ಮಹಾರಾಜ ಸುರಥ ಮತ್ತು ವೈಶ್ಯನಾದ ಸಮಾಧಿ ಇವರಿಗೆ ಭಗವತೀ ದೇವಿಯ ಮಹಿಮೆಯನ್ನು ಹೇಳುತ್ತಾ ಮಧು-ಕೈಟಭರ ಸಂಹಾರಪ್ರಸಂಗವನ್ನು ವಿವರಿಸಿದುದು.
******
ವಿನಿಯೋಗ:

“ಪ್ರಥಮ ಚರಿತಸ್ಯ ಬ್ರಹ್ಮಾ ಋಷಿ: | ಮಹಾಕಾಲೀ ದೇವತಾ| ಗಾಯತ್ರೀ ಛಂದ:| ನಂದಾ ಶಕ್ತಿ:| ರಕ್ತದನ್ತಿಕಾ ಬೀಜಮ್| ಅಗ್ನಿಸ್ತತ್ತ್ವಮ್| ಋಗ್ವೇದ ಸ್ವರೂಪಮ್| ಶ್ರೀಮಹಾಕಾಲೀ ಪ್ರೀತ್ಯರ್ಥೇ ಪ್ರಥಮಚರಿತ್ರ ಜಪೇ ವಿನಿಯೋಗ:||”
(ಪ್ರಥಮ ಚರಿತ್ರೆಯ ಋಷಿ ಬ್ರಹ್ಮಾ;
ಮಹಾಕಾಳಿಯೇ ದೇವತೆ;
ಗಾಯತ್ರೀ ಛಂದಸ್ಸು;
ನಂದಾ ಶಕ್ತಿ;
ರಕ್ತದಂತಿಕೆಯೇ ಬೀಜ;
ಅಗ್ನಿಯೇ ತತ್ತ್ವ;
ಋಗ್ವೇದವೇ ಸ್ವರೂಪಗಳಾಗಿವೆ.
ಶ್ರೀಮಹಾಕಾಳೀದೇವಿಯನ್ನು ಪ್ರಸನ್ನಗೊಳಿಸಲು ಪ್ರಥಮ ಚರಿತ್ರೆಯ ಜಪದಲ್ಲಿ ವಿನಿಯೋಗವು.)

ಧ್ಯಾನಮ್:

“ಖಡ್ಗಂ ಚಕ್ರಗದೇಷುಚಾಪಪರಿಘಾಚ್ಛೂಲಂ ಭುಶುಣ್ಡೀ ಶಿರ:|
ಶಂಖಂ ಸಂದಧತೀಂ ಕರೈಸ್ತ್ರಿನಯನಾಂ ಸರ್ವಾಙ್ಗಭೂಷಾವೃತಾಮ್|
ನೀಲಾಶ್ಮದ್ಯುತಿಮಾಸ್ಯಪಾದದಶಕಾಂ ಸೇವೇ ಮಹಾಕಾಲಿಕಾಂ|
ಯಾಮಸ್ತೌಸ್ತ್ವಪಿತೇ ಹರೌ ಕಮಲಜೋ ಹನ್ತುಂ ಮಧುಂ ಕೈಟಭಮ್||”
(ಭಗವಾನ್ ಶ್ರೀವಿಷ್ಣುದೇವನ ಶಯನಾನಂತರ ಮಧು-ಕೈಟಭರನ್ನು ವಧಿಸಲು ಕಮಲೋದ್ಭವನಾದ ಬ್ರಹ್ಮನು ಯಾವ ಜಗನ್ಮಾತೆಯನ್ನು ಸ್ತುತಿಸಿದನೋ ಆ ಮಹಾಕಾಳೀ ದೇವಿಯನ್ನು ನಾನು ಸ್ಮರಿಸುತ್ತೇನೆ.
ಆ ಜಗನ್ಮಾತೆಯು ತನ್ನ ಹತ್ತು ಹಸ್ತಗಳಲ್ಲಿ ಖಡ್ಗ, ಚಕ್ರ, ಗದೆ, ಬಾಣ, ಧನುಸ್ಸು, ಪರಿಘ, ಶೂಲ, ಭುಷುಂಡಿ, ಮಸ್ತಕ, ಮತ್ತು ಶಂಖ – ಇವುಗಳನ್ನು ಧರಿಸಿದ್ದಾಳೆ.
ಆಕೆ ತ್ರಿನೇತ್ರಳೂ ಹೌದು.
ಆಕೆಯ ಸಮಸ್ತ ಅಂಗಗಳು ದಿವ್ಯಭೂಷಣಗಳಿಂದ ಶೋಭಾಯಮಾನವಾಗಿವೆ.
ಆಕೆಯ ಶರೀರವು ನೀಲಮಣಿಯಂತೆ ಶೋಭಿಸುತ್ತಿದೆ ಹಾಗೂ ಆಕೆಯು ಹತ್ತು ಮುಖಗಳು, ಹತ್ತು ಪಾದಗಳನ್ನು ಹೊಂದಿದವಳಾಗಿದ್ದಾಳೆ.)

“ಓಂ ನಮಶ್ಚಂಡಿಕಾಯೈ ನಮ:||”
(ಓಂ ಚಂಡೀದೇವಿಗೆ ನಮಸ್ಕಾರ.)

“ಓಂ ಐಂ ಮಾರ್ಕಾಂಡೇಯ ಉವಾಚ||1||

ಸಾವರ್ಣಿ: ಸೂರ್ಯತನಯೋ ಯೋ ಮನು: ಕಥ್ಯತೇಷ್ಟಮ:|
ನಿಶಾಮಯ ತದುತ್ಪತ್ತಿಂ ವಿಸ್ತರಾದ್ ಗದತೋ ಮಮ||2||”

(ಮಾರ್ಕಾಂಡೇಯರು ಹೇಳುತ್ತಾರೆ:-
ಸೂಯಪುತ್ರನಾದ (ಸೂರ್ಯನಿಂದ ಛಾಯಾಸಂಜ್ಞೆಯಲ್ಲಿ ಜನಿಸಿದ) ಸಾವರ್ಣಿಯು ಎಂಟನೆಯ ಮನುವೆಂದು ಕರೆಯಲ್ಪಟ್ಟನು.
ಆತನ ಉತ್ಪತ್ತಿಯ ಕಥೆಯನ್ನು ವಿಸ್ತಾರಪೂರ್ವಕವಾಗಿ ಹೇಳುತ್ತೇನೆ, ಕೇಳುವವನಾಗು.)

******
||ಶ್ರೀಕೃಷ್ಣಾರ್ಪಣಮಸ್ತು||
||ನಾಹಂ ಕರ್ತಾ ಹರಿ: ಕರ್ತಾ:||
******
ಸಂಗ್ರಹ:-

-ಪಂ. ವಿಜಯೇಂದ್ರ ರಾಮನಾಥ ಭಟ್, ಶಿವಮೊಗ್ಗ

Related posts

‘ಹೆಲಿಕಾಪ್ಟರ್ ಪೋಷಕತ್ವ’ ಎಂಬ ಪೆಡಂಬೂತವನ್ನು ಓಡಿಸಿ, ಮಕ್ಕಳು ಅನುಭವಿಸಲಿ ಬಾಲ್ಯದ ಖುಷಿ

Upayuktha

80ನೇ ಅಂತರ್‌ ವಿವಿ ಅಥ್ಲೆಟಿಕ್ಸ್‌: ಎರಡನೇ ದಿನಕ್ಕೆ ಎರಡು ಕೂಟ ದಾಖಲೆ

Upayuktha

ಗೋ ಹತ್ಯೆ ನಿಷೇಧ, ತಳಿ ಸಂವರ್ಧನೆಗೆ ಕಾಯ್ದೆ ಜಾರಿಗೆ ರಾಘವೇಶ್ವರ ಶ್ರೀ ಒತ್ತಾಯ

Upayuktha News Network