ಓದುಗರ ವೇದಿಕೆ

ಯಕ್ಷಗಾನದ ವಾಲ್ಮೀಕಿ ಬೊಟ್ಟಿಕೆರೆ ಪುರುಷೋತ್ತಮ ಪೂಂಜರಿಗೆ ನೆರವಾಗಿ…

ಯಕ್ಷಗಾನದ ವಾಲ್ಮೀಕಿ ಬಿರುದಾಂಕಿತ ಬೊಟ್ಟಿಕೆರೆ ಪುರುಷೋತ್ತಮ ಪೂಂಜಾ ಅವರು ಯಕ್ಷಗಾನದ ಸರ್ವಾಂಗ ಪರಿಣಿತರು. ಪರಂಪರೆಯ ಭಾಗವತರು, ವೇಷಧಾರಿ, ಮದ್ದಲೆ ವಾದಕರು ಮತ್ತು ಕೀರ್ತಿ ಪಡೆದ ಪ್ರಸಂಗಕರ್ತರು. ಅಕಾಡೆಮಿಕ್ಸಲ್ಲಿ ಬಿ.ಎಸ್‌ಸಿ ಪದವಿ ಪಡೆದವರು.

ಪ್ರಧಾನ ಭಾಗವತರಾಗಿ 45 ವರ್ಷ ಅವರು ಪೂರ್ತಿ ಮಾಡಿದ್ದಾರೆ. ಉಪ್ಪಳ ಮೇಳ, ಮುಂಬೈಯ ಪ್ರಸಿದ್ಧ ಗೀತಾಂಬಿಕ ಮೇಳ, ಪುತ್ತೂರು ಮೇಳ, ಕರ್ನಾಟಕ ಮೇಳ, ಪ್ರಸಕ್ತ 30 ವರ್ಷಗಳಿಂದ ಕಟೀಲು ದೇವಿಯ ಮೇಳಗಳಲ್ಲಿ ಅವರು ದಣಿವು ಅರಿಯದೆ ಹಾಡಿದ್ದಾರೆ. ಹಿರಿಯ, ಕಿರಿಯ ಎಲ್ಲಾ ಕಲಾವಿದರನ್ನು ಸಮವಾಗಿ ಗೌರವಿಸುವ ನಿಗರ್ವಿ. ಶ್ರೇಷ್ಟ ಮತ್ತು ಬಹುಶ್ರುತ ಪಂಡಿತರು.

ಭಾಗವತ ನಿಜವಾದ ಅರ್ಥದಲ್ಲಿ ರಂಗದ ನಿರ್ದೇಶಕ ಆಗಿರಬೇಕು ಎಂದು ಪ್ರತಿಪಾದನೆ ಮಾಡಿದವರು ಮತ್ತು ಅದನ್ನು ಅಕ್ಷರಶಃ ಪಾಲನೆ ಮಾಡಿಕೊಂಡು ಬಂದವರು. ಮೂರು ಶ್ರುತಿಯಲ್ಲಿ ಕೂಡ ಸುಲಲಿತವಾಗಿ ಮತ್ತು ಏಕ ಪ್ರಕಾರವಾಗಿ ಸಂಚರಿಸುವ, ಎಲ್ಲಾ ಭಾವ ಮತ್ತು ರಸಗಳನ್ನು ಪೋಷಣೆ ಮಾಡುವ, ಸಾಹಿತ್ಯಕ್ಕೆ ಒಂದಿಷ್ಟು ಕೂಡ ಅಪಚಾರ ಮಾಡದೆ ಹಾಡುವ ಮಾಧುರ್ಯದ ಕಂಠ ಅವರದ್ದು. ರಾಗ, ತಾಳ, ಭಾವ ಎಲ್ಲವೂ ಎರಕ ಹೊಯ್ದು ಸಿರಿ ಕಂಠ ಅವರದ್ದು.

ಯಕ್ಷ ಮಾತೆ ಒಲಿದು ಅವರು ಬರೆದದ್ದು ಒಂದಕ್ಕಿಂತ ಒಂದು ಶ್ರೇಷ್ಟವಾದ 32 ಯಕ್ಷಗಾನದ ಪ್ರಸಂಗಳನ್ನು! ಅದರಲ್ಲಿ ಅತೀ ಹೆಚ್ಚು ಪೌರಾಣಿಕ ಪ್ರಸಂಗಗಳು. ಕನ್ನಡ, ತುಳು ಎರಡೂ ಭಾಷೆಯಲ್ಲಿ ಅವರು ಅದ್ಭುತ ಆಗಿಯೇ ಬರೆದವರು. ಎವರ್ ಗ್ರೀನ್ ಪ್ರಸಂಗ “ಮಾ ನಿಷಾದ” ಬರೆದವರು ಅವರೇ! ವಧು ವೈಶಾಲಿನಿ, ನಳಿನಾಕ್ಷ ನಂದಿನಿ, ಉಭಯಕುಲ ಬಿಲ್ಲೋಜ, ಕ್ಷಾತ್ರ ಮೇಧ, ಮಾತಂಗ ಕನ್ಯೆ, ಗಾಂಗೇಯ, ಕಲಿ ಕೀಚಕ, ರಾಜಾ ದ್ರುಪದ, ಮೇಘ ಮಯೂರಿ, ಸ್ವರ್ಣ ನೂಪುರ, ಅಮೃತ ವರ್ಷಿಣಿ, ಮೇಘ ಮಾಣಿಕ್ಯ.. ಎಲ್ಲವೂ ಸೂಪರ್ ಹಿಟ್ ಪ್ರಸಂಗಗಳೇ ಆಗಿವೆ. ತುಳು ಭಾಷೆಯಲ್ಲಿ ಕೂಡ ಅವರು ಆರು ಪ್ರಸಂಗಗಳನ್ನು ಬರೆದಿದ್ದಾರೆ.

ಅವರು ಬರೆದ ಯಕ್ಷಗಾನ ಪ್ರಸಂಗಗಳದ್ದೇ ಒಂದು ತೂಕ! ಎಲ್ಲವೂ ಗೇಯತೆ ಪ್ರಧಾನ ಆದವು. ಪುರಾಣದ ಆಳವಾದ ಅಧ್ಯಯನ, ಪಾತ್ರಗಳ ಅದ್ಭುತ ಕಲ್ಪನೆ, ಛಂದಸ್ಸು, ಅಲಂಕಾರ ಮತ್ತು ಸಾಹಿತ್ಯ ಪ್ರಜ್ಞೆಗಳು ಮೇಳೈಸಿದ ರಸಪಾಕ ಅವರ ಪ್ರಸಂಗಗಳು. ಅವರು ಸ್ವತಃ ಭಾಗವತರೇ ಆಗಿ ರಂಗದ ನಡೆ ತಿಳಿದಿರುವ ಕಾರಣ ಅವರ ಎಲ್ಲಾ ಪ್ರಸಂಗಗಳು ಕೂಡ ರಂಗದಲ್ಲಿ ವಿಜೃಂಭಿಸಿದವು.”ಮಾ ನಿಷಾದ” ಪ್ರಸಂಗದ ಅದ್ಭುತ ಪದ್ಯಗಳನ್ನು ಒಮ್ಮೆ ನೀವು ಆಲಿಸಿದರೆ ನಿಮಗೆ ಅವರ ಮೌಲ್ಯ ತಿಳಿಯುತ್ತದೆ. ಅನ್ವರ್ಥವಾಗಿ ಅವರಿಗೆ ‘ಯಕ್ಷಗಾನದ ವಾಲ್ಮೀಕಿ’ ಎಂಬ ಬಿರುದು ಬಂದಿತು. ಮುದ್ದಣ ಪ್ರಶಸ್ತಿ, ಮುಂಬೈಯ ಯಕ್ಷ ಮಾನಸ ಪ್ರಶಸ್ತಿ, ಅಕಾಡೆಮಿ ಪುಸ್ತಕ ಸಾಹಿತ್ಯ ಪ್ರಶಸ್ತಿ, ಆಸ್ರಣ್ಣ ಪ್ರಶಸ್ತಿ, ಕರ್ನೂರು ಪ್ರಶಸ್ತಿ…. ಹೀಗೆ ಸಾಲು ಸಾಲು ಪ್ರಶಸ್ತಿಗಳು ಅವರಿಗೆ ದೊರೆತಿವೆ. ಇಷ್ಟೊಂದು ಕೀರ್ತಿ, ಸಿದ್ಧಿ, ಪ್ರಸಿದ್ದಿ ಅವರಿಗೆ ಒಲಿದು ಬಂದಿದ್ದರೂ ಕೀರ್ತಿ ಶನಿಯ ವಿಕಾರಕ್ಕೆ ಒಳಗಾಗದೆ ಕೇವಲ ತಾನಾಯಿತು, ತನ್ನ ಕೆಲಸವಾಯಿತು ಎಂದು ತಿಳಿದು ಅದರ ಹಾಗೆ ಬದುಕಿದವರು ಅವರು. ತನ್ನ ಮನೆಯನ್ನೇ ಗುರುಕುಲ ಮಾಡಿ ನೂರಾರು ಶಿಷ್ಯರಿಗೆ ಭಾಗವತಿಕೆ ಮತ್ತು ಯಕ್ಷಗಾನ ಸಾಹಿತ್ಯದ ತರಗತಿ ನಡೆಸಿಕೊಂಡು ಬಂದಿದ್ದರು.

ಅಂತಹ ಯಕ್ಷಗಾನದ ಶಕ ಪುರುಷನಿಗೆ ಕಳೆದ ಅರ್ಧ ವರ್ಷದಿಂದ ಸಿಡಿಲು ಬಡಿದಂತೆ ತೀವ್ರ ರಕ್ತ ಸಂಬಂಧಿ ಕಾಯಿಲೆ ಬಂದಿದ್ದು ಮಂಗಳೂರಿನ ವಿನಯಾ ನರ್ಸಿಂಗ್ ಹೋಂನ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತ ಮಲಗಿದ್ದಾರೆ. ವೈದ್ಯಕೀಯದ ಭಾಷೆಯಲ್ಲಿ MYELODYSPLASIA ಎಂದು ಹೆಸರು ಹೊತ್ತ ಕಾಯಿಲೆ ಅದು. ಅದಕ್ಕೆ ಇಂಜೆಕ್ಷನ್ ಮತ್ತು ಔಷಧಿಗೆ ತಿಂಗಳಿಗೆ ಐದು ಲಕ್ಷ ಖರ್ಚು ಆಗ್ತಾ ಇದೆ. ಕಂಪೆನಿಯ ಉದ್ಯೋಗದಲ್ಲಿ ಇರುವ ಅವರ ಇಬ್ಬರು ಗಂಡು ಮಕ್ಕಳು ಅಪ್ಪನ ಚಿಕಿತ್ಸೆಗೆ ಪ್ರತೀ ತಿಂಗಳು ದುಡ್ಡು ಹೊಂದಿಸಲು ದುಡಿದು ಹೈರಾಣ ಆಗಿದ್ದಾರೆ. ಇನ್ನೂ ಆರು ತಿಂಗಳು ಚಿಕಿತ್ಸೆ ಮುಂದುವರೆದರೆ ಅವರು ಪೂರ್ತಿ ಗುಣಮುಖರಾಗುವ ಭರವಸೆ ವೈದ್ಯರಿಗೆ ಇದೆ. ಈಗಿನ್ನೂ 67 ವರ್ಷ ಪ್ರಾಯದ ಬೊಟ್ಟಿಕೆರೆ ಗುರುಗಳು ಮತ್ತೆ ಯಕ್ಷರಂಗಕ್ಕೆ ಮರಳಲು ಕಾತರ ಪಡುತ್ತಿದ್ದಾರೆ.

“ನೀವೆಲ್ಲ ವರ್ಕ್ ಫ್ರಮ್ ಹೋಮ್, ನಾನು ವರ್ಕ್ ಫ್ರಮ್ ಹಾಸ್ಪಿಟಲ್!” ಎಂದು ನೋವಿನಲ್ಲಿ ಕೂಡ ನಗಲು ಪ್ರಯತ್ನ ಪಡುತ್ತಿದ್ದಾರೆ. ಅವರನ್ನು ನೋಡಿದಾಗ ಸರಳ ಮಂಚದ ಮೇಲೆ ಮಲಗಿದ ಭೀಷ್ಮ ನೆನಪಿಗೆ ಬರುತ್ತಾನೆ. ಅವರ ಚಿಕಿತ್ಸೆಗೆ ಈಗಾಗಲೇ ಅವರ ಬಹು ಸಂಖ್ಯೆಯ ಶಿಷ್ಯ ವೃಂದ ಒಂದಿಷ್ಟು ನಿಧಿಯನ್ನು ಪ್ರೀತಿ ಇಟ್ಟು ಸಂಗ್ರಹಿಸಿದೆ. ಆದರೂ ಮುಂದಿನ ಆರು ತಿಂಗಳಿಗೆ ಕನಿಷ್ಟ 30-35 ಲಕ್ಷ ರೂಪಾಯಿ ಹಣ ಬೇಕಾಗಬಹುದು ಎಂದು ಅಂದಾಜು!
ಯಕ್ಷಗಾನವನ್ನು ಮತ್ತು ಬೊಟ್ಟಿಕೆರೆ ಗುರುಗಳನ್ನು ಪ್ರೀತಿಸುವವರು ಅವರ ನೆರವಿಗೆ ನಿಲ್ಲಲೇ ಬೇಕಾದ ಅನಿವಾರ್ಯತೆ ಈಗ ಒದಗಿದೆ.

ಅವರ ಮಗನ ಹೆಸರಲ್ಲಿ ಇರುವ ಈ ಕೆಳಗಿನ ಬ್ಯಾಂಕ್ ಖಾತೆಗೆ ನಿಮ್ಮ ಸಹಾಯ ಧನವನ್ನು ಕಳುಹಿಸಿ ಕೊಡಲು ವಿನಂತಿ. ಹಾಗೆಯೇ ಅವರು ಬೇಗ ಗುಣಮುಖರಾಗಿ ರಂಗಕ್ಕೆ ಮರಳಲಿ ಎನ್ನುವ ಪ್ರಾರ್ಥನೆ ಕೂಡ ನಮ್ಮದು.
ಖಾತೆ ಸಂಖ್ಯೆ – 343901507425.
ಹೆಸರು – ಪರೀಕ್ಷಿತ ಪೂಂಜಾ
IFSC code – ICIC 0003439
ಗೂಗಲ್ ಪೇ ಸಂಖ್ಯೆ – 8197256366.

-ರಾಜೇಂದ್ರ ಭಟ್ ಕೆ,
ಶಿಕ್ಷಕರು ಮತ್ತು ವಿಕಸನ ರಾಷ್ಟ್ರ ಮಟ್ಟದ ತರಬೇತುದಾರರು.

Related posts

ನಿಸರ್ಗದ ನಿಯಮದಂತೆ ಬದುಕಲು ಕಲಿಯೋಣ… ಪ್ರಕೃತಿ ಮಾತೆ ಕಲಿಸಿದ್ದನ್ನು ಮರೆಯದಿರೋಣ..

Upayuktha

ಪಂಚ್‌- ಕಜ್ಜಾಯ: ಅಮೆಜಾನ್‌ನಲ್ಲಿ ಸಿಕ್ತು ಅಂತ ಸೆಗಣಿ ಕೇಕನ್ನೂ ತಿಂದನಂತೆ ಈ ಭೂಪ…! 🤣

Upayuktha

ಈ ರಸ್ತೆ ಕಂದಕಗಳನ್ನು ಮುಚ್ಚಿಸುವವರು ಯಾರು?

Upayuktha