ಕತೆ-ಕವನಗಳು

*ನೀಲಮಣಿ* ಭಾಗ-1

ಅದೊಂದು ನಿತ್ಯಹರಿದ್ವರ್ಣದ ಕಾನನ. ಎತ್ತ ನೋಡಿದರತ್ತ ಹಸಿರೇ ಹಸಿರು…

ಹಸಿರು ಸಿರಿಗಳ ನಡುವೆ ತಲೆಯೆತ್ತಿ ನಿಂತಿದೆ ಆದಿತ್ಯಪುರ ಎಂಬ ರಾಜ್ಯ. ಪ್ರೀತಿ-ಪ್ರೇಮ, ಆದರ-ಗೌರವಗಳೇ ಆ ರಾಜ್ಯದುಸಿರು. ಆದಿತ್ಯ ಪುರದ ರಾಜ ಕೇಶವತೇಜ, ತನ್ನ ಶೌರ್ಯ ಮತ್ತು ಪರಾಕ್ರಮತೆಗೆ ಹೆಸರಾದವನು. ಜನ ಪಾಲಕನೆಂದು ಕೂಡ ಪ್ರಸಿದ್ಧನು.

ರಂಭೆ ಊರ್ವಶಿಯರ ಸೌಂದರ್ಯವನ್ನೂ ನಾಚಿಸುವ ಅಂದಾಗತಿ ಅವನಿ ರಾಜನ ಮುದ್ದಿನ ಮಗಳು. ಇನ್ನೂ ಹದಿನಾರರ ಷೋಡಶಿ. ನಭಮಣಿಯನ್ನೇ ಬೆರಗುಗೊಳಿಸುವ ದಿವ್ಯ ಕಾಂತಿ ಅವಳ ಕಂಗಳಲ್ಲಿ…!

ಸುಖ ಶಾಂತಿ ತುಂಬಿರುವ ರಾಜ್ಯ ಸಂಪದ್ಭರಿತವಾಗಿದೆ. ತನ್ನ ಪ್ರಜೆಗಳಿಗಾಗಿ, ಯಾವುದಕ್ಕೂ ಹಿಂದೆ ಮುಂದೆ ನೋಡುತ್ತಿರಲಿಲ್ಲ ರಾಜ. ತಂದೆಯ ಗುಣವೇ ಮಗಳದ್ದು.!!

ಹೀಗಿರಲೊಂದು ದಿನ ಇದ್ದಕ್ಕಿದ್ದಂತೆ ನಡೆದಿತ್ತು ರಾಜ್ಯದ ಮೇಲೆ ಆಕ್ರಮಣ. ಏನು ಎತ್ತ ಎಂಬುದರಿಯುವಷ್ಟರಲ್ಲಿ ರಾಜ್ಯವನ್ನು ಆಕ್ರಮಿಸಿದವರು ತಮ್ಮ ಕೆಲಸ ಮುಗಿಸಿಕೊಂಡಿದ್ದರು. ಹೋರಾಟದಲ್ಲಿ, ಮಗಳನ್ನು ರಕ್ಷಿಸಿ ಅವಳಿಂದ ತನ್ನ ಪ್ರಜೆಗಳನ್ನು ಮತ್ತು ರಾಜ್ಯವನ್ನು ರಕ್ಷಿಸುವ ಮಾತು ಪಡೆದು ಅಸುನೀಗಿದ್ದ ರಾಜ ಕೇಶವತೇಜ.?!

ಸಂಪತ್ತಿನಿಂದ ಕೂಡಿದ್ದ ರಾಜ್ಯವನ್ನು ಕ್ಷಣಮಾತ್ರದಲ್ಲಿ  ಲೂಟಿ ಹೊಡೆದು ಅಲ್ಲಿ ತಮ್ಮ ಅಧಿಪತ್ಯವನ್ನು ಸ್ಥಾಪಿಸಿದರು ಮಾಯಾಲೋಕದಿಂದ ಬಂದಿದ್ದ ಆ ಮಾಯಾವಿಗಳು.

ನೆತ್ತರಿನೋಕುಳಿಯಲ್ಲಿ ಮುಳುಗೆದ್ದಿತು ಆದಿತ್ಯಪುರ.! ಮರಿಗಳ ಮುರಿಯುವ ಗಿಡುಗನ ಚಿತ್ರವು ಕಂಗಳಲ್ಲಿ  ಸುಳಿಯಲು ಪಕ್ಷಿಗಳೆಲ್ಲವೂ ಹಾರಿಹೋದವು ಕ್ಷಣದಲಿ. ಮೂಡಣದಿ ಮೂಡುವ ಶಶಿಯು ಕೋಪಿಸಿಕೊಂಡು ಮರೆಯಾದನು ಮೇಘಗಳ ನಡುವಲಿ..!!

ನಗುವ ನಯನದಲ್ಲಿ ಮೂಡಿರುವ ನೋವಿನ ಛಾಯೆಯನ್ನೂ, ಮುಸುಕಿರುವ ಕಾರಿರುಳನ್ನೂ ಸರಿಸಿ ರಾಜ್ಯದಲ್ಲಿ ಮತ್ತೊಮ್ಮೆ ಬೆಳಕ ಮೂಡಿಸುವ ಜವಾಬ್ದಾರಿ ಈಗ ರಾಜಕುಮಾರಿಯ ಮೇಲಿದ್ದವು.?!
ಆದರೆ ಅವಳಿನ್ನೂ ಹದಿನಾರರ ಬಾಲಕಿ. ತಂದೆ ಮತ್ತು ರಾಜ್ಯವನ್ನು ಕಳೆದುಕೊಂಡು ಅನಾಥಳಾದ ಯುವರಾಣಿಗೆ ದಿಕ್ಕು ತೋರುವವರಾರಿಲ್ಲ.!!
ಆದರೂ ಜವಾಬ್ದಾರಿಯನ್ನು ನಿಭಾಯಿಸಲೇಬೇಕಿತ್ತು, ಆದರೆ ರಾಜ್ಯದಲ್ಲೇ ನಿಂತು ಅವಳೇನನ್ನೂ ಸಾಧಿಸಲು ಸಾಧ್ಯವಿಲ್ಲ. ಮಾಯಾವಿಗಳ ಶಕ್ತಿಯ ಮುಂದೆ ಸಾಮಾನ್ಯ ಹುಡುಗಿ ಏನು ತಾನೆ ಮಾಡಬಲ್ಲಳು.?!

ಅವರ ಸೆರೆಯಿಂದ ತಪ್ಪಿಸಿಕೊಂಡು ಯಾರ ಕಣ್ಣಿಗೂ ಕಾಣಿಸದಂತೆ ರಾಜ್ಯದಿಂದ ಹೊರ ನಡೆದ ರಾಜಕುಮಾರಿ ದಟ್ಟ ಕಾಡನ್ನು ತಲುಪಿದ್ದಳು.

ನಡೆದು, ಸುಸ್ತಾಗಿ ವಿಶಾಲವಾದ ಒಂದು ಮರದಡಿಯಲ್ಲಿ ವಿಶ್ರಾಂತಿಗೆಂದು ಕುಳಿತವಳ ಗಮನ ಕಾಣಿಸುತ್ತಿರುವ ತನ್ನ ರಾಜ್ಯದತ್ತ ಹೊರಳಿದ್ದವು….!!? ದೂರದಿಂದ ಕಾಣುತ್ತಿರುವ ತನ್ನ ರಾಜ್ಯದಲ್ಲಿ ಯಾವುದೋ ಬದಲಾವಣೆಯನ್ನು ಗುರುತಿಸಿದ್ದವು ಅವಳ ಕಂಗಳು.  ಮಂಜು ಮುಸುಕಿದಂತೆ ಪೂರಾ ರಾಜ್ಯವನ್ನು ಆವರಿಸಿಕೊಂಡಿರುವ ಹಿಮವನ್ನು ಕಂಡು ಗಾಬರಿಗೊಂಡಿತ್ತು ಮನಸ್ಸು.

‘ಹೀಗೆ ಕುಳಿತರೆ ಯಾವುದೇ ಪ್ರಯೋಜನವಿಲ್ಲ! ಏನಾದರೂ ಮಾಡಲೇಬೇಕು. ಪ್ರಜೆಗಳ ರಕ್ಷಣೆ ಈಗ ನಮ್ಮ ಮೇಲಿದೆ, ತಂದೆಯವರ ಕೊನೆಯಾಸೆಯನ್ನು ಈಡೇರಿಸಿ.. ನಮ್ಮ ರಾಜ್ಯವನ್ನು ಮತ್ತೆ ಮೊದಲಿನಂತೆ ಮಾಡಬೇಕು. ಆದರೆ ಏನು ಮಾಡಲಿ?
ಇವರ ಮುಂದೆ ನಿಂತು ನಾನೊಬ್ಬಳೇ ಹೋರಾಡಲು ಸಾಧ್ಯವಿಲ್ಲ..!!’ ಯೋಚನೆಗೆ ಬಿದ್ದಳು ರಾಜಕುಮಾರಿ.

Related posts

*ಪಿಸು ಮಾತಿನ ಬೇಡಿಕೆ*

Harshitha Harish

ನಮ್ ರೈತನಿಗೆ ಜೈ ಜೈ

Harshitha Harish

ನೀ ಯಾರು

Harshitha Harish