ಬೆಂಗಳೂರು: ಇಡೀ ಜಗತ್ತು ಕೊರೊನಾ ವೈರಸ್ ಸಾಂಕ್ರಾಮಿಕದ ವಿರುದ್ಧ ಹೋರಾಟದಲ್ಲಿ ಮಗ್ನವಾಗಿದ್ದರೆ ದುಷ್ಟರು, ದುರುಳರು ಇಂತಹ ಸನ್ನಿವೇಶದಲ್ಲೂ ತಮ್ಮ ಬೇಳೆ ಬೇಯಿಸಿಕೊಳ್ಳುವ ಮತ್ತು ಇತರರನ್ನು ಹೇಗೆ ದೋಚಬಹುದು ಎಂಬ ಕುತಂತ್ರಗಳನ್ನು ಹೆಣೆಯುತ್ತಲೇ ಇರುತ್ತಾರೆ.
ಭಾರತವಿಡೀ ಲಾಕ್ಡೌನ್ಗೆ ಒಳಗಾಗಿರುವ ಈ ಸಂದರ್ಭದಲ್ಲಿ ಜನತೆ ದೈನಂದಿನ ಜೀವನವನ್ನು ಸುಗಮವಾಗಿ ನಡೆಸಲು ಒದ್ದಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಸರಕಾರ ಕೂಡ ಹಲವು ರಿಯಾಯಿತಿಗಳನ್ನು ನೀಡಿ ಜನರ ಸಂಕಷ್ಟ ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.
ಈಗಾಗಲೇ ಎಲ್ಲ ಸಾಲಗಳಿಗೆ ಕಂತುಗಳನ್ನು ಪಾವತಿಸಲು ಮೂರು ತಿಂಗಳ ರಿಯಾಯಿತಿಯನ್ನು ಸರಕಾರ ಘೋಷಿಸಿದೆ. ಇಎಂಐಗಳನ್ನು ಮುಂದೂಡಲು ಅವಕಾಶ ಕಲ್ಪಿಸಿದೆ. ಭಾರತೀಯ ರಿಸರ್ವ್ ಬ್ಯಾಂಕ್ ಈ ಬಗ್ಗೆ ಎಲ್ಲ ಬ್ಯಾಂಕ್ಗಳಿಗೆ ನಿರ್ದೇಶನಗಳನ್ನು ನೀಡಿದೆ.
ಈ ನಿರ್ದೇಶನಗಳನ್ನು ಕೆಲವು ಬ್ಯಾಂಕ್ಗಳು ಯಥಾವತ್ ಪಾಲಿಸಿದರೆ, ಇನ್ನು ಕೆಲವು ಬ್ಯಾಂಕ್ಗಳು ತಮ್ಮ ಗ್ರಾಹಕರಿಂದ ಕೋರಿಕೆಗಳು ಬಂದರೆ ಮಾತ್ರ ಇಎಂಐಗಳನ್ನು ಮುಂದೂಡುವ ಆಯ್ಕೆ ಒದಗಿಸಿವೆ. ಈ ಅವಕಾಶವನ್ನೇ ಸೈಬರ್ ಅಪರಾಧಿಗಳು ದುರುಪಯೋಗಪಡಿಸಿಕೊಳ್ಳಲು ಹವಣಿಸುತ್ತಿದ್ದಾರೆ.
There's is a new cyber fraud that's come to light. Modus operandi is,customers get calls requesting for OTP to postpone their EMI. Once OTP is shared,amount is withdrawn. Requesting all to spread this message .@CyberDost .@CybercrimeCID .@KarnatakaVarthe .@BlrCityPolice .@bommai
— D Roopa IPS (@D_Roopa_IPS) April 5, 2020
ರಾಜ್ಯ ರೈಲ್ವೇ ಐಜಿಪಿ ಹಾಗೂ ಬಂದೀಖಾನೆಗಳ ಮಾಜಿ ನಿರ್ದೇಶಕಿಯಾಗಿರುವ ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು, ಹೊಸದೊಂದು ಸೈಬರ್ ಅಪರಾಧ ವಿಧಾನವೊಂದು ಚಾಲ್ತಿಯಲ್ಲಿದೆ ಎಂದು ಟ್ವೀಟ್ ಮಾಡಿದ್ದು, ಈ ಬಗ್ಗೆ ಎಲ್ಲರೂ ಜಾಗೃತರಾಗಿರುವಂತೆ ಸೂಚಿಸಿದ್ದಾರೆ.
ಬ್ಯಾಂಕ್ಗಳ ಗ್ರಾಹಕರಿಗೆ ಬ್ಯಾಂಕ್ಗಳೇ ಕಳುಹಿಸಿದ ಮಾದರಿಯಲ್ಲಿ ಸಂದೇಶವೊಂದು ಬರುತ್ತದೆ. ಅದರಲ್ಲಿ ನಿಮ್ಮ ಇಎಂಐಗಳನ್ನು ಮುಂದೂಡಲು ಮೊಬೈಲ್ ಸಂಖ್ಯೆ ಖಚಿತಪಡಿಸಿ ಎಂದು ಕೇಲಲಾಗಿರುತ್ತದೆ. ಗ್ರಾಹಕರು ಅದಕ್ಕೆ ಮರು ಉತ್ತರಿಸಿ ಮೊಬೈಲ್ ಸಂಖ್ಯೆ ಖಚಿತಪಡಿಸಲು ಹೊರಟರೆ ಒಂದು ಒಟಿಪಿ ಬರುತ್ತದೆ. ಈ ಓಟಿಪಿಯನ್ನು ತಮಗೆ ತಿಳಿಸುವಂತೆ ಸಂದೇಶ ಕಳುಹಿಸಿದವರು ಕೋರುತ್ತಾರೆ. ಗ್ರಾಹಕರೇನಾದರೂ ಒಟಿಪಿಯನ್ನು ಹಂಚಿಕೊಂಡಿದ್ದೇ ಆದರೆ ಟೋಪಿ ಬೀಳುವುದು ಗ್ಯಾರಂಟಿ.
ಸೈಬರ್ ಅಪರಾಧಿಗಳ ಹೊಸ ಕಾರ್ಯವಿಧಾನದ ಮಾಹಿತಿಯನ್ನೇ ಡಿ ರೂಪಾ ಅವರು ಟ್ವೀಟ್ ಮೂಲಕ ಹಂಚಿಕೊಂಡು ಜರಲ್ಲಿ ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.
ತಮ್ಮ ಟ್ವಿಟ್ ಸಂದೇಶವನ್ನು ಅವರು ಸೈಬರ್ ದೋಸ್ತ್, ಸೈಬರ್ ಕ್ರೈಮ್ ಇಸಿಐಡಿ, ಕರ್ನಾಟಕ ವಾರ್ತೆ, ಬೆಂಗಳೂರು ಸಿಟಿ ಪೊಲೀಸ್ ಮತ್ತು ಗೃಹಸಚಿವರ ಬಸವರಾಜ್ ಬೊಮ್ಮಾಯಿ ಅವರ ಟ್ವಿಟರ್ ಖಾತೆಗಳಿಗೆ ಟ್ಯಾಗ್ ಮಾಡಿ ಸರಕಾರದ ಮತ್ತು ಪೊಲೀಸ್ ಆಡಳಿತದ ಗಮನ ಸೆಳೆದಿದ್ದಾರೆ.
ಜನತೆ ಇಂತಹ ಸಂದೇಶಗಳು ಬಂದರೆ ಜಾಗರೂಕತೆಯಿಂದ ವ್ಯವಹರಿಸುವುದು ಒಳಿತು. ಒಂದೊಮ್ಮೆ ಬ್ಯಾಂಕುಗಳೇ ಸಂದೇಶ ಕಳುಹಿಸಿದ್ದಾದರೆ ಅದನ್ನು ಅಧಿಕೃತ ಮೂಲಗಳಿಂದ ಖಚಿತಪಡಿಸಿಕೊಂಡು ವ್ಯವಹರಿಸಬೇಕಾಗಿದೆ.
(ಉಪಯುಕ್ತ ನ್ಯೂಸ್)
ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ