ಕ್ಷೇತ್ರಗಳ ವಿಶೇಷ ಹಬ್ಬಗಳು-ಉತ್ಸವಗಳು

ಒಂಬತ್ತು ದಿನಕ್ಕೆ 9 ದುರ್ಗಾ ದರ್ಶನ: ಶ್ರೀ ದುರ್ಗಾ ದೇವಸ್ಥಾನ, ಕುಂಜೂರು

ಶರನ್ನವರಾತ್ರಿ ಪುಣ್ಯಕಾಲ

ಪುರಾತನ ಸತ್ಯ, ಮಣ್ಣಿನ ಮಹತ್ವಿಕೆ, ಗಾಢವಾದ ನಂಬಿಕೆ-ನಡವಳಿಕೆಗಳಿಗೆ ಆಶ್ರಯಸ್ಥಾನವಾಗಿರುವ ಶ್ರದ್ಧಾಸ್ಥಾನಗಳಲ್ಲಿ‌ ದುರ್ಗಾ ಸನ್ನಿಧಾನಗಳು ಪ್ರಧಾನವಾಗಿವೆ. ನಮ್ಮ ಜಿಲ್ಲೆಯ ಪ್ರಸಿದ್ಧ ಶಕ್ತಿ ಉಪಾಸನಾ ದೇವಾಯತನಗಳಲ್ಲಿ ಎಲ್ಲೂರು ಗ್ರಾಮದ ಕುಂಜೂರು ಶ್ರೀ ದುರ್ಗಾ ದೇವಸ್ಥಾನ ಒಂದು.

ಎಲ್ಲೂರಿನ ಮಹತೋಭಾರ ಶ್ರೀ ವಿಶ್ವೇಶ್ವರ ದೇವಸ್ಥಾನದ ವತಿಯಲ್ಲಿ 1919 (ಇವತ್ತಿಗೆ ನೂರೊಂದು ವರ್ಷ ಹಿಂದೆ) ರಲ್ಲಿ ಪ್ರಕಟವಾದ “ಎಲ್ಲೂರು ಮಹಾತ್ಮ್ಯಂ” ಸಂಸ್ಕೃತ ಶ್ಲೋಕಗಳ ಸಣ್ಣ ಪುಸ್ತಕದ ಮೂಲ ಸ್ಕಾಂದ ಪುರಾಣದ ಸಹ್ಯಾದ್ರಿ ಖಂಡದಲ್ಲಿದೆ ಎಂಬ ಮಾಹಿತಿಯನ್ನು ನೀಡುತ್ತದೆ. ಈ ಎಲ್ಲೂರು ಮಹಾತ್ಮ್ಯೆಯಲ್ಲಿ ಕುಂಜಪುರ (ಕುಂಜೂರು) ಕ್ಷೇತ್ರದ ಕಲ್ಪನೆ ಪರಮಾದ್ಭುತವಾದುದು ಎಂದೆನ್ನಲಾಗಿದೆ. ಭಾರ್ಗವ ಋಷಿಯು ಒತ್ತೊತ್ತಾಗಿ ಮರಗಳು ಬೆಳೆದಿರುವ ಕುಂಜ ಹಾಗೂ ಬದಿಯಲ್ಲಿ ಬಹಳ ಅಗಲಕ್ಕೆ ಹರಿಯುತ್ತಿದ್ದ ವಾರುಣೀ ಎಂಬ ನದಿಯನ್ನು ಲಕ್ಷ್ಯವಾಗಿರಿಸಿಕೊಂಡು ನದಿಯನ್ನು ಮುಚ್ಚಿ ಮಹಾಯಾಗವನ್ನು ಮಾಡಿ ಭೂಮಿಯನ್ನು ಪವಿತ್ರೀಕರಿಸಿ ದುರ್ಗಾ ಶಕ್ತಿಯನ್ನು ಸಂಕಲ್ಪಸಿದನೆಂಬ ಉಲ್ಲೇಖವಿದೆ. ಇದು ಕುಂಜೂರು ದುರ್ಗಾ ದೇವಸ್ಥಾನಕ್ಕಿರುವ ಪೌರಾಣಿಕ ಹಿನ್ನೆಲೆ.

ಸುಂದರ ದುರ್ಗಾ ಮೂರ್ತಿ:
ಸುಮಾರು ಒಂದು ಸಾವಿರದ ಇನ್ನೂರು ವರ್ಷ (9ನೇ ಶತಮಾನದ ನಿರ್ಮಿತಿ) ಪ್ರಾಚೀನವಾದ ದೇವಾಲಯದ ಮೂಲಸ್ಥಾನ ದುರ್ಗಾ ಮೂರ್ತಿ ಸುಂದರ, ಚಿತ್ತಾಕರ್ಷಕ. ಮಿತಾಲಂಕಾರದ ಕುಸುರಿಗಳುಳ್ಳ ಕರಿಶಿಲೆಯ ಮೂರ್ತಿ ಸ್ಕಂದ ಭಂಗದಲ್ಲಿದೆ. ಮುಖವು ವೃತ್ತಾಕಾರವಾಗಿದ್ದು, ಶಂಕುವಿನಾಕಾರದ ಕಿರೀಟವಿದೆ. ಮಹಿಷನ ತಲೆಯ ಮೇಲೆ ಕಾಲನ್ನಿಟ್ಟು ನಿಂತ ನಿರ್ದೇಶವಿದೆ. ಮಹಿಷಾಸುರನ ವಧಾನಂತರದಲ್ಲಿ‌ ಸಾವಧಾನ‌ಳಾಗಿ ನಿಂತ ನಿಲುವು ಮೋಹಕ ಎಂದು ಖ್ಯಾತ ಇತಿಹಾಸ ತಜ್ಞ ಡಾ.ಗುರುರಾಜ ಭಟ್ಟರು ನಿರೂಪಿಸಿದ್ದಾರೆ.

ನಾಲ್ಕು ಕೈಗಳುಳ್ಳ ಈ ದುರ್ಗಾ ಬಿಂಬದ ಮೇಲಿನ ಬಲಕೈಯಲ್ಲಿ ಪ್ರಯೋಗಚಕ್ರ, ಮೇಲಿನ ಎಡ ಕೈಯಲ್ಲಿ ಶಂಖ, ಕೆಳಗಿನ ಎಡ ಕೈಯಲ್ಲಿ ಯಾವ ಆಯುಧವೂ ಇಲ್ಲ (ಏನೋ ಹಿಡಿದಂತಿದೆ). ಕೆಳಗಿನ ಬಲಕೈಯಲ್ಲಿ ತ್ರಿಶೂಲವನ್ನು ಹಿಡಿದಂತಿದೆ .ಈ ಶಿಲಾಪ್ರತಿಮೆಯ ನಿರ್ಮಾಣ ಶೈಲಿಯನ್ನು ವಿಶೇಷವಾಗಿ ಗುರುತಿಸಿರುವ ಇತಿಹಾಸಕಾರ ಗುರುರಾಜ ಭಟ್ಟರು ಉಡುಪಿ ಜಿಲ್ಲೆಯ ಐತಿಹಾಸಿಕ ಮಹತ್ವದ ಹಾಗೂ ಅಪೂರ್ವವೆಂದು ಗುರುತಿಸಬಹುದಾದ ಕೆಲವೇ ಪ್ರತಿಮೆಗಳಲ್ಲಿ ಇದು ಒಂದು ಎಂದು ವಿವರಿಸಿದ್ದರು. ಪಂಚಲೋಹದ ಸುಮಾರು 10 ಇಂಚು ಎತ್ತರದ ಉತ್ಸವಮೂರ್ತಿಯೂ ಚತುರ್ಬಾಹುವಾಗಿದ್ದು ಕ್ರಿ.ಶ.14-15 ನೇ ಶತಮಾನದ ನಿರ್ಮಿತಿ ಎನ್ನಲಾಗಿದೆ.

ಉಪಸ್ಥಾನ ಬಲಮುರಿ ಗಣಪತಿ ಪ್ರಾಚೀನತೆಯ ದೃಷ್ಟಿಯಲ್ಲಿ ಕ್ರಿ.ಶ. 9-10 ಶತಮಾನದಷ್ಟು ಪ್ರಾಚೀನವಾದುದು. ಅಲಂಕಾರ ರಹಿತವಾದ ಕುಬ್ಜ ಗಣಪತಿ ಕುಳಿತ ಭಂಗಿಯಲ್ಲಿದೆ. ಒಂದು ಅಡಿ ಎತ್ತರವಿದೆ. ತಾಯಿ ಮತ್ತು ಮಗ ಇಬ್ಬರ ದಿವ್ಯ ಸನ್ನಿಧಿಗಳಿರುವುದು ಒಂದು ವಿಶೇಷವಾದರೆ ಗಣಪ ಬಲಮುರಿಯಾಗಿದ್ದು ಪ್ರಭಾವಶಾಲಿ ಶಕ್ತಿಯುತನು- ಅನುಗ್ರಹಕಾರಕನು ಎಂದು ನಂಬಲಾಗಿದೆ.

ಸಂತಾನ, ವಿವಾಹ ಪ್ರತಿಬಂಧಕಗಳನ್ನು ನಿವಾರಿಸುವ ಸನ್ಮಂಗಳಗಳನ್ನು ಅನುಗ್ರಹಿಸುವ ದುರ್ಗಾ ಮಾತೆ ಶರಣಾಗಿ ಬಂದವರ ದುರ್ಗಮ ದುರಿತಗಳನ್ನು ನಿವಾರಿಸುವ ಕುಂಜೂರಮ್ಮ ಎಂಬುದು ನಂಬಿಕೆ, ಅದರಂತೆ ಭಕ್ತರು ನಡೆದುಕೊಳ್ಳುತ್ತಾರೆ.

ದುರ್ಗಾನಮಸ್ಕಾರ, ಹೂವಿನಪೂಜೆ, ಕುಂಕುಮಾರ್ಚನೆ, ಚಂಡಿಕಾಹೋಮ ಸಹಿತ ವಿವಿಧ ದುರ್ಗಾ ಸಂಬಂಧಿಯಾಗಗಳು ಸೇವಾರೂಪದಲ್ಲಿ ನಿರಂತರ ನಡೆಯುತ್ತಿದೆ. ಗಣಪತಿಗೆ ರಂಗಪೂಜೆ, ಕಡುಬುಸೇವೆ, ದುರ್ಗೆಗೆ ಮಧುರಪಾಯಸ ವಿಶೇಷ ಸೇವೆಗಳು.

2004ರಲ್ಲಿ ಜೀರ್ಣೋದ್ಧಾರ ನೆರವೇರುತ್ತದೆ. ಬಳಿಕ ದೇವಾಲಯ ಮತ್ತಷ್ಟು ಜನಪ್ರಿಯವಾಗಿದೆ. ವಿಜೃಂಭಣೆಯ ವಾರ್ಷಿಕ ನಡಾವಳಿ, ನವರಾತ್ರಿ ಆಚರಣೆಗಳೆಲ್ಲ ವೈಭವದಿಂದ ನಡೆಯುತ್ತವೆ. ಇಲ್ಲಿಯ ವ್ಯವಸ್ಥಿತ ಅನ್ನಸಂತರ್ಪಣೆ ಜನಪ್ರಿಯವಾಗಿದೆ. ಆದರೆ ಈ ವರ್ಷ ಸರಕಾರದ ಸೂಚನೆಯಂತೆ ಅನ್ನಸಂತರ್ಪಣೆಗಳಿಲ್ಲ.ಸರಳ ನವರಾತ್ರಿ ಪೂಜೆ, ಹೋಮಗಳೊಂದಿಗೆ ಮಾತ್ರ ನಡೆಯುತ್ತಿದೆ.

ಕುಂಜೂರು: ಎಲ್ಲೂರು ಗ್ರಾಮ, ಕಾಪು ತಾಲೂಕು, ಉಡುಪಿ ಜಿಲ್ಲೆಯಲ್ಲಿದೆ. ಉಡುಪಿ-ಮಂಗಳೂರು ಹೆದ್ದಾರಿಯಲ್ಲಿ ಉಚ್ಚಿಲದಲ್ಲಿ ಇಳಿದು ಪೂರ್ವಾಭಿಮುಖವಾಗಿ ಎರಡು ಕಿಮೀ ಬಂದು ರೈಲ್ವೇ ಸೇತುವೆಯ ಬಳಿಕ ಬಲಕ್ಕೆ ತಿರುಗಿದರೆ ನೇರವಾಗಿ ಒಂದು ಕಿಮೀ ಕ್ರಮಿಸಿ ದೇವಸ್ಥಾನ ತಲುಪಬಹುದು.

-ಕೆ.ಎಲ್. ಕುಂಡಂತಾಯ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಈದ್‌ ಮಿಲಾದ್: ಸಮಗ್ರ ಜೀವನ ವ್ಯವಸ್ಥೆ ರೂಪಿಸಿದ ಅದ್ಭುತ ಪ್ರವಾದಿಯವರ ಜನ್ಮದಿನ

Upayuktha

ಮೊಗ್ರದಲ್ಲಿ ಕಾಲಾವಧಿ ಜಾತ್ರೆ

Upayuktha

ಮನೆಯೇ ಮೊದಲ ಯೋಗ ಚಾವಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೂ.21ರಂದು 6ನೇ ವಿಶ್ವ ಯೋಗ ದಿನಾಚರಣೆ

Upayuktha