ಕತೆ-ಕವನಗಳು

ನಿರೀಕ್ಷೆ

ಕಣ್ಣಂಚಿನಲ್ಲಿ ಹೊಸ ಕನಸುಗಳ ಹೊತ್ತು


ಬಚ್ಚಿಟ್ಟುಕೊಂಡ ನವಭಾವಗಳ ಬದಿ ಗೆರೆದು
ಬರುವ ನಾಳೆಗಳನ್ನು ಹಸನಾಗಿಸುವ ಸಲುವಾಗಿ
ಬಂದಿರುವೆ, ಈ ಸ್ವಪ್ನ ಲೋಕಕಿಂದು ||

      ಬದುಕೆಂಬ ಪುಸ್ತಕದಿ ಚಿತ್ತಾರ ಬರೆದಿರಲು
ಬಣ್ಣಗಳ ನಾನಿಂದು ತುಂಬಲೇ ಬೇಕಿದೆ.
ನನ್ನೊಳಗೆ ಅವಿತಿರುವ ನವಿರಾದ ನವಿಲೊಂದು
ಗರಿಗೆದರಿ ನರ್ತಿಸಲು ಕಾತರಿಸುತಿದೆ ||
           
         ಅಲ್ಲೊಂದು ಅಂಜಿಕೆ , ಏನೋ ಕಳವಳ
ಮುಂದಿರಲು ನೂರಾರು ಕವಲುದಾರಿ
ಯೋಚಿಸಲೇ ಬೇಕು ಹಲವು ಬಾರಿ ||

      ಸಾಧಿಸುವ ಛಲವೊಂದು ಚಿಗುರೊಡೆದು ಹೆಮ್ಮರವಾಗುವ ಹಂಬಲದಿ
ಕಾರಂಜಿಯಂತೆ ಕಂಗಳಲಿ ಜಿನುಗಿರಲು
ಮುನ್ನುಗ್ಗಬೇಕಿಂದು ದಿಗ್ವಿಜಯ ಪಥದಿ ||
     
ನೆಲೆಯಾಗಿ ಸಲಹಿರಲು  ಸ್ಫೂರ್ತಿಯ ಸೆಲೆಯೊಂದು
ಕಮರದೇ ಹೋಗಲಿ ಕನಸುಗಳ ನಾಳೆ
ಬೆಸೆಯಲಿ ಭವಿಷ್ಯದಿ ಸಫಲತೆಯ ಸಂಕೋಲೆ !!

🖋️ ಸಂಧ್ಯಾಕುಮಾರಿ ಎಸ್ ,ವಿಟ್ಲ

Related posts

ಕವನ: || ಬಡತನದ ಸಿರಿ ||  

Upayuktha

ಮಕ್ಕಳ ಕವನ: ರಕ್ಷಾ ಬಂಧನ

Upayuktha

ಕವನ: ಅಪ್ಪನೆಂಬ ವಿಶ್ವಾಸ

Upayuktha