ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಪದವಿ ಪ್ರದಾನ ಸಮಾರಂಭ
ನಿಟ್ಟೆ: “ವಿಶ್ವವ್ಯಾಪಿಯಾಗಿರುವ ಕೋವಿಡ್ನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳೂ ವಿವಿಧ ರೀತಿಯ ಸವಾಲುಗಳನ್ನು ಎದುರಿಸಿದೆ. ತಂತ್ರಜ್ಞಾನವು ಶೈಕ್ಷಣಿಕ ಕ್ಷೇತ್ರಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಬಹುಮುಖ್ಯ ಪಾತ್ರವಹಿಸಿದೆ. ವಿದ್ಯಾರ್ಥಿದೆಸೆಯ ಬಹುಮುಖ್ಯವಾದ ಅಂಗವೆನಿಸಿರುವ ಪದವಿಪ್ರದಾನ ಸಮಾರಂಭವನ್ನು ಕೋವಿಡ್-19ರ ಸಲುವಾಗಿ ಆನ್ಲೈನ್ ಮೂಲಕ ನಡೆಸಬೇಕಾದ ಅನಿವಾರ್ಯತೆ ಬಂದೊದಗಿರುವುದು ಖೇದಕರ” ಎಂದು ಮಂಗಳೂರಿನ ಪಿ.ಎ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಎಕೆಡೆಮಿಕ್ ಸೆನೇಟ್ ಮೆಂಬರ್ ಡಾ.ಅಬ್ದುಲ್ ಶರೀಫ್ ಅಭಿಪ್ರಾಯಪಟ್ಟರು.
ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಅಕ್ಟೋಬರ್ 31 ರಂದು ನಡೆದ 2019-2020ನೇ ಶೈಕ್ಷಣಿಕ ಸಾಲಿನ ಪದವಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
“ತಾಂತ್ರಿಕ ಬೆಳವಣಿಗೆಯೊಂದಿಗೆ ನಮ್ಮ ಪರಿಸರದ ಬಗೆಗೆ ಹೆಚ್ಚಿನ ಕಾಳಜಿ ಇಂದಿನ ದಿನಗಳಲ್ಲಿ ಅತ್ಯಗತ್ಯ. ಯುವಜನತೆ ತಮ್ಮ ಗುರಿಯ ಬಗೆಗೆ ದೃಷ್ಠಿಯನ್ನು ಕೇಂದ್ರೀಕರಿಸಿ ಸಾಧನೆಯ ಮಟ್ಟಿಲನ್ನು ಏರಬೇಕು. ಇನ್ನೊಬ್ಬರ ಚಿಂತನೆಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ನಮ್ಮಲ್ಲಿರಬೇಕು. ಇಂದು ಭಾರತವು ಇಂಟರ್ನೆಟ್ ಕ್ಷೇತ್ರದಲ್ಲಿ 5ಜಿ ಅಂತಹ ತಂತ್ರಜ್ಞಾನವನ್ನು ಪರಿಚಯಿಸಲು ಮುಂದಾಗಿದೆ. ಇಂತಹ ತಂತ್ರಜ್ಞಾನ ಕ್ರಾಂತಿಯು ದೇಶದ ಬೆಳವಣಿಗೆಗೆ ಪೂರಕವೆನಿಸಲಿದೆ. ನಮ್ಮ ಯುವಜನತೆ ನಿರಂತರ ಕಲಿಕೆಯೊಂದಿಗೆ ಸಮಾಜದ ಹೊಸ ರೀತಿಯ ಸವಾಲುಗಳಿಗೆ ಸಿದ್ಧರಾಗಬೇಕು” ಎಂದು ಅವರು ಹೇಳಿ ಪದವಿ ಗಳಿಸಿದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ನಿಟ್ಟೆ ಎಜುಕೇಶನ್ ಟ್ರಸ್ಟ್ನ ಟ್ರಸ್ಟೀ ಹಾಗೂ ನಿಟ್ಟೆ ಡೀಮ್ಡ್ ಟು ಬಿ ವಿಶ್ವವಿದ್ಯಾಲಯದ ಪ್ರೊ-ಚಾನ್ಸೆಲರ್ ವಿಶಾಲ್ ಹೆಗ್ಡೆ ತಮ್ಮ ಅಧ್ಯಕ್ಷೀಯ ನುಡಿಗಳಲ್ಲಿ “ನಮ್ಮ ಪರಿಸರದ ಬಗೆಗಿನ ಕಾಳಜಿ ವಿರಳವಾದ ಸಂದರ್ಭದಲ್ಲಿ ವಿವಿಧ ಬಗೆಯ ಪ್ರಕೃತಿ ವಿಕೋಪಗಳು ಸಂಭವಿಸುತ್ತವೆ. ಪ್ರತಿಯೋರ್ವ ಮಾನವನಿಗೂ ಸಾಮಾಜಿಕ ಬದ್ಧತೆ ಅಗತ್ಯ. ಯಶಸ್ಸಿನ ಹಿಂದೆ ಜ್ಞಾನ, ಪ್ರಾಮಾಣಿಕ ಪ್ರಯತ್ನದೊಂದಿಗೆ ಮತ್ತೊಬ್ಬರ ಚಿಂತನೆಗಳ ಆಲಿಸುವಿಕೆ ಅತ್ಯಗತ್ಯ. ವಿಚಾರಗಳನ್ನು ಮುಕ್ತವಾಗಿ ಹಂಚಿಕೊಂಡು ಸಂಯಮಯುತವಾಗಿ ನಡೆದುಕೊಂಡರೆ ಸರ್ವತೋಮುಖ ಏಳಿಗೆ ಸಾಧ್ಯ” ಎಂದು ತಿಳಿಸಿದರು.
ಪದವಿಪ್ರದಾನ ಸಮಾರಂಭದ ಸಂದರ್ಭದಲ್ಲಿ ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ವಿವಿಧ ಕೋರ್ಸ್ಗಳಲ್ಲಿ ಶೈಕ್ಷಣಿಕ ಸಾಧನೆಗೈದ ವಿದ್ಯಾರ್ಥಿಗಳಿಗೆ ಚಿನ್ನ ಹಾಗೂ ಬೆಳ್ಳಿಪದಕಗಳನ್ನು ನೀಡಿ ಸನ್ಮಾನಿಸಲಾಯಿತು. ಬಿ.ಇ, ಎಂ.ಟೆಕ್ ಹಾಗೂ ಎಂ.ಸಿ.ಎ ಪದವಿ ಮುಗಿಸಿದ ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ಡಿಗ್ರಿ ಪ್ರದಾನ ಮಾಡಲಾಯಿತು.
ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ಶರಣ್ಯಾ ವಿ ನಾಯಕ್, ಸಿವಿಲ್ ವಿಭಾಗದ ಬಿ.ಎಸ್.ಪ್ರಾರ್ಥನಾ, ಕಂಪ್ಯೂಟರ್ ಸೈನ್ಸ್ನ ಸಂಜನಾ ನಂಬಿಯಾರ್, ಇಲೆಕ್ಟ್ರಾನಿಕ್ಸ್ ವಿಭಾಗದ ಶ್ರೇಯ, ಇಲೆಕ್ಟ್ರಿಕಲ್ ವಿಭಾಗದ ಅನೂಪ್ ಶೆಟ್ಟಿ, ಇನ್ಫೋಮೇಶನ್ ಸೈನ್ಸ್ನ ದೀಪಶ್ರೀ ಎಸ್, ಮೆಕ್ಯಾನಿಕಲ್ ವಿಭಾಗದ ಹರ್ಷಿತ್ ಕುಮಾರ್, ಮತ್ತು ಎಂ.ಟೆಕ್ ವಿಭಾಗದಲ್ಲಿ ವಿಭಾ, ಮೇಘ ಮಯೂರಿ, ರಕ್ಷಿತ್, ಸುಖದಾ ಚೊಕ್ಕಾಡಿ, ನೀತಾ ಜೆನಿಸ್, ರಚನಾ ಪಿ, ಲಿಖಿತಾಶ್ರೀದೇವಿ, ಶ್ರವಣ್ ಕುಮಾರ್ ಎಂ, ನಾಗೇಶ್ ಕುಡ್ವ ಹಾಗೂ ಎಂ.ಸಿ.ಎ ವಿಭಾಗದ ಕಾವ್ಯಶ್ರೀ ಆರ್ ಭಟ್ ಚಿನ್ನದ ಪದಕ ಪಡೆದರು.
ಬಿ.ಇ ವಿಭಾಗದಲ್ಲಿ ಬಯೋಟೆಕ್ನಾಲಜಿ ವಿಭಾಗದ ದೀಕ್ಷಾ ಆರ್, ಸಿವಿಲ್ ವಿಭಾಗದ ಪೃಥ್ವಿರಾಜ್ ಅರುಣ್ ಕುಲಕರ್ಣಿ, ಕಂಪ್ಯೂಟರ್ಸೈನ್ಸ್ನ ಅಕ್ಷತಾ ವಿ ಭಟ್, ಇಲೆಕ್ಟ್ರಾನಿಕ್ಸ್ ವಿಭಾಗದ ಡೈಸಿ ಶೀತಲ್, ಇಲೆಕ್ಟ್ರಿಕಲ್ ವಿಭಾಗದ ಪುನೀತ್ ಶೆಟ್ಟಿಗಾರ್, ಇನ್ಫೋಮೇಶನ್ ಸೈನ್ಸ್ನ ಸತ್ಯಭಾಮ ಎಂ ಪ್ರಭು, ಮೆಕ್ಯಾನಿಕಲ್ ವಿಭಾಗದ ಸಾಕೇತ್ ಕುಕ್ಕಿಲ್ಲಾಯ, ಮತ್ತು ಎಂ.ಟೆಕ್ ವಿಭಾಗದಲ್ಲಿ ಅಸ್ಮಿತಾ ಎನ್.ಎಂ, ಮೋಕ್ಷಿತಾ ಎಂ, ಅಶ್ವಿತಾ ದಾಂತಿಸ್, ಜಯಶ್ರೀ ಎ, ರಖೀಬಾತನೀಮ್, ಆಕಾಶ್ ಕಜವ ಹಾಗೂ ಎಂ.ಸಿ.ಎ ವಿಭಾಗದ ಕ್ರಿಸ್ಟೀನಾ ಶಿಲ್ಪಾ ಬೆಳ್ಳಿ ಪದಕಗಳಿಸಿದರು.
ವೇದಿಕೆಯಲ್ಲಿ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ನಿಟ್ಟೆ ತಾಂತ್ರಿಕ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ನಿರಂಜನ್ ಎನ್ ಚಿಪ್ಳೂಣ್ಕರ್ ವಾರ್ಷಿಕ ವರದಿಯನ್ನು ವಾಚಿಸುವುದರೊಂದಿಗೆ ಅತಿಥಿಗಳನ್ನು ಸ್ವಾಗತಿಸಿದರು. ಉಪಪ್ರಾಂಶುಪಾಲ ಡಾ.ಶ್ರೀನಿವಾಸ್ ರಾವ್ ಬಿ.ಆರ್ ಚಿನ್ನ ಹಾಗೂ ಬೆಳ್ಳಿಯ ಪದಕಗಳಿಸಿದ ವಿದ್ಯಾರ್ಥಿಗಳ ಹೆಸರುಗಳನ್ನು ವಾಚಿಸಿದರು. ಡೆಪ್ಯೂಟಿ ಕಂಟ್ರೋಲರ್ ಆಫ್ ಎಕ್ಸಾಮಿನೇಶನ್ ಹಾಗೂ ಮೆಕ್ಯಾನಿಕಲ್ ವಿಭಾಗದ ಪ್ರೊಫೆಸರ್ ಡಾ.ಶ್ರೀನಿವಾಸ್ ಪೈ ವಂದಿಸಿದರು. ಮೆಕ್ಯಾನಿಕಲ್ ವಿಭಾಗದ ಸಹಪ್ರಾಧ್ಯಾಪಕ ಮೆಲ್ವಿನ್ ಕಾರ್ಯಕ್ರಮ ನಿರೂಪಿಸಿದರು.
(ಉಪಯುಕ್ತ ನ್ಯೂಸ್)
‘ಉಪಯುಕ್ತ ನ್ಯೂಸ್’ ಫೇಸ್ಬುಕ್ ಪುಟ ಲೈಕ್ ಮಾಡಿ
ಟ್ವಿಟರ್ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ
ಯೂಟ್ಯೂಬ್ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ