ಜೀವನ-ದರ್ಶನ

ಗೀತಾಮೃತ: ನಹಿ ಜ್ಞಾನೇನ ಸದೃಶಂ….

ಭಗವದ್ಗೀತೆಯ ಅನಂತತೆಯಲ್ಲಿ ಇದೊಂದು ಮುತ್ತು. ಜ್ಞಾನಕ್ಕೆ ಸಾಟಿಯಾದದ್ದು ಈ ಪ್ರಪಂಚದಲ್ಲಿ ಯಾವುದೂ ಇಲ್ಲವೆಂಬ ಅಭಿಪ್ರಾಯ ಶ್ರೀಕೃಷ್ಣನದು. ಅಂತೆಯೇ ಯಾವುದೇ ಕರ್ಮ ನಿರತನಾದರೂ ಮಾಡುವಂಥ ಕರ್ಮದಲ್ಲಿ ಜ್ಞಾನವಿರಬೆಕು. ತಿಳಿದು ಮಾಡುವ ಕರ್ಮ ಸಾರ್ವಕಾಲಿಕವಾಗಿ ಶ್ರೇಷ್ಠವೇ. ಆದ್ದರಿಂದ ಯಂತ್ರದಂತೆ ದುಡಿಯುವುದಕ್ಕಿಂತ ಜ್ಞಾನಿಯಾಗಿ ದುಡಿಯುವುದೇ ನಿಜವಾದ ದುಡಿಮೆ, ಇದು ಕೃಷ್ಣನ ಅಭಿಪ್ರಾಯ. ಮಾನವನ ಅಭಿವೃದ್ಧಿಗೆ ಕೃಷ್ಣನ ಕೊಡುಗೆಯನ್ನು ಅದೆಷ್ಟು ಸ್ಮರಿಸಿದರೂ ಸಾಲದು. ಕೃಷ್ಣನನ್ನು ಪ್ರೀತಿಸುವವರೂ ದ್ವೇಷಿಸುವವರೂ ಏಕಪ್ರಕಾರವಾಗಿ ಆತನ ಸಿದ್ಧಾಂತಗಳನ್ನು ಅರ್ಥೈಸಿಯೋ ಅಥವಾ ಅನರ್ಥವಾಗಿ ತಿಳಿದುಕೊಂಡೋ ಅನುಸರಿಸುತ್ತಿರುವುದು ಮಾತ್ರ ಸತ್ಯ. ಆದ್ದರಿಂದಲೇ ಕೃಷ್ಣತತ್ವ ಸಾರ್ವಕಾಲಿಕವಾಗಿ ಸರ್ವತ್ರವಾಗಿ ಪ್ರಚಲಿತವಾಗಿದೆ.

ನಾವು ನಮ್ಮ ವ್ಯವಹಾರದಲ್ಲಿ ಈ ಮಾತನ್ನು ಅಳವಡಿಸಿಕೊಂಡಾಗ ನಮ್ಮ ಉನ್ನತಿಯಾಗುವುದರಲ್ಲಿ ಸಂದೇಹವೇ ಇಲ್ಲ. ನಾವು ಯಾವಾಗ ತಿಳಿವನ್ನು ಗಳಿಸಿಕೊಂಡು ಕೆಲಸವನ್ನು ಮಾಡುವೆವೋ ಆವಾಗ ಅದರಲ್ಲಿನ ಫಲಿತಾಂಶವೇ ಬೇರೆ. ಯಾವಾಗ ಬರಿದೆ ಇನ್ನೊಬ್ಬರ ಆದೇಶಗಳಿಗನುಗುಣವಾಗಿ ಕೆಲಸ ಮಾಡುತ್ತೇವೋ ಆವಾಗ ಅದರ ಫಲಿತಾಂಶವೇ ಬೇರೆ. ತಿಳಿವಿಂದ ಮಾಡುವ ಕೆಲಸದಿಂದ ನಾವು ಒಂದು ಕಾಲಕ್ಕೆ ಎಲ್ಲರಿಗೂ ನಾಯಕನಾಗಬಹುದು. ತಿಳಿವಿರದೆ ಮಾಡುವ ಕೆಲಸದಿಂದ ನಾವು ಯಾವಾಗಲೂ ಇನ್ನೊಬ್ಬರ ಕೈಕೆಳಗೇ ದುಡಿಯಬೇಕಾಗಬಹುದು. ಎಲ್ಲ ದಾರಿಗಳನ್ನು ಕೃಷ್ಣ ತೆರೆದಿಟ್ಟಿದ್ದಾನೆ ಆಯ್ದುಕೊಳ್ಳುವ ಸ್ವಾತಂತ್ರ್ಯವನ್ನು ನಮಗೇ ಬಿಟ್ಟು.

ಇನ್ನು ಈ ಜ್ಞಾನದ ಸೊಬಗನ್ನು ನೋಡಬೇಕಾದರೆ, ಅದನ್ನು ಗಳಿಸಿದವನ ಅನುಭವವನ್ನೇ ಕೇಳಬೇಕು. ಉದಾಹರಣೆಗೆ ಒಂದು ಸಮಾರಂಭದ ಊಟದಲ್ಲಿ ಸಾಮಾನ್ಯನೊಬ್ಬನು ಮಾಡುವ ಊಟಕ್ಕೂ ಪಾಕಪ್ರವೀಣನಾದವನು ಮಾಡುವ ಊಟಕ್ಕೂ ವ್ಯತ್ಯಾಸವಿದೆ. ಸಾಮಾನ್ಯರಿಗೆ ನಾಲಗೆಗೆ ರುಚಿಯಾದದ್ದು ಮಾತ್ರ ಅನುಭವವಾದರೆ, ಪಾಕತಜ್ಞನಿಗೆ ಅಂದರೆ ಅಡುಗೆಯ ತಿಳಿವುಳ್ಳವನಿಗೆ ಪ್ರತಿಯೊಂದು ವ್ಯಂಜನದಲ್ಲೂ ಅದರ ಗುಣಾವಗುಣಗಳನ್ನು ತಿಳಿದುಕೊಳ್ಳುವ ಅಂತೆಯೇ ಆಸ್ವಾದಿಸುವ ಅವಕಾಶವಿರುತ್ತದೆ. ಹಾಗೆಯೇ ಒಂದು ಸಂಗೀತವನ್ನು ಕೇಳುವಾಗಲೂ ಸಂಗೀತದ ತಿಳಿವುಳ್ಳವನಿಗೂ ತಿಳಿವಿರದವನಿಗೂ ಆಗುವ ಸುಖದಲ್ಲಿ ಬಹಳ ವ್ಯತ್ಯಾಸವಿರುತ್ತದೆ. ಹಾಗೆಂದು ಜ್ಞಾನ ಅಲ್ಪವಾದರೂ ಕಷ್ಟವೇ.

ನಮ್ಮ ಶರೀರದಲ್ಲಾಗುವ ಏರುಪೇರುಗಳನ್ನು ನಮ್ಮ ಅಲ್ಪಜ್ಞಾನದಿಂದ ಅರ್ಥೈಸಿಕೊಂಡು ನಾವು ಗೊಂದಲಕ್ಕೊಳಗಾಗಿ ದುಷ್ಪರಿಣಾಮಗಳು ಆಗುವುದೂ ಉಂಟು. ಒಂದು ವಿಷಯದ ಬಗ್ಗೆ ಪೂರ್ಣಜ್ಞಾನ ಇದ್ದಾಗ ಮಾತ್ರ ಗೊಂದಲಗಳಿರುವುದಿಲ್ಲ. ಅಲ್ಪಜ್ಞಾನವು ಸರ್ವದಾ ಅಪಾಯಕಾರಿಯೇ. ನಾವು ದೇವರ ಸ್ತೋತ್ರಗಳನ್ನು, ಮಂತ್ರಗಳನ್ನು ದಿನಾಲೂ ಹೇಳುತ್ತಿದ್ದರೂ ಅದರ ಅರ್ಥ ತಿಳಿದಾಗ ಅದರಲ್ಲಿರುವ ಸೌಂದರ್ಯವೇ ನಮ್ಮನ್ನು ಇನ್ನೂ ಹೆಚ್ಚಿನ ಜ್ಞಾನ ಗಳಿಸಿಕೊಳ್ಳಲು ಪ್ರೇರೇಪಿಸುತ್ತದೆ. ತಿಳಿದು ಕಾಯಕ ಮಾಡುವ ಕಾರ್ಮಿಕ ಒಂದುದಿನ ನಾಯಕನಾಗಬಹುದು. ತಿಳಿದು ಮಾಡುವ ಶ್ರಮದ ರೈತ ಒಂದುದಿನ ಭೂಮಾಲಕನಾಗಬಹುದು. ತಿಳಿದು ಮಾಡುವ ಚಾಲಕ ಒಂದುದಿನ ವಾಹನ ಮಾಲಕನಾಗಬಹುದು… ಅದಿಲ್ಲ ಅವರು ಪರಾವಲಂಬಿಯೇ ಆಗಿರಬೇಕಾಗಹುದು. ಅದಕ್ಕೇ ಕೃಷ್ಣ ಹೇಳಿದ್ದು ‘ಕರ್ಮಕ್ಕಿಂತಲೂ ಜ್ಞಾನ ಮಿಗಿಲು’ ಎಂದು. ಅದಕ್ಕಿಂತಲೂ ತಿಳಿದು ಮಾಡುವ ಕರ್ಮವಂತೂ ಸರ್ವಶ್ರೇಷ್ಠವೆಂದು. ತಿಳಿವನ್ನು ಗಳಿಸೋಣ… ತಿಳಿವೆಂಬ ದೋಣಿಯಿಂದ ಸಂಸಾರವೆಂಬ ಸಾಗರವನು ಕೃಷ್ಣನೆಂಬ ನಾವಿಕನ ಸಹಾಯದಿಂದ ಸುರಕ್ಷಿತವಾಗಿ ದಾಟೋಣ..
ಕೃಷ್ಣಂ ವಂದೇ ಜಗದ್ಗುರುಂ
**********
-ಬಾಲಕೃಷ್ಣ ಸಹಸ್ರಬುಧ್ಯೆ ಮುಂಡಾಜೆ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ರಾಷ್ಟ್ರೀಯ ಸುದ್ದಿಗಳು, ವಿಚಾರಧಾರೆಗಳಿಗೆ ಮೀಸಲಾದ ಜಾಲತಾಣ- ಉಪಯುಕ್ತ.ಭಾರತಕ್ಕೆ ಭೇಟಿ ನೀಡಿ

Related posts

ಬಾಳಿಗೆ ಬೆಳಕು: ಸಾರ್ವಕಾಲಿಕ ಸತ್ಯ, ತಿಳಿದರೆ ಆಗುವೆವು ಸತ್ವ-ಶಕ್ತಿಯುತ

Upayuktha

ಬಾಳಿಗೆ ಬೆಳಕು: ಹಾಸಿಗೆ ಇದ್ದಷ್ಟೆ ಕಾಲು ಚಾಚು

Upayuktha

ಯದ್ಯದಾಚರತಿ… ನಾಯಕನ ಅನುಸರಿಸಿ ನಡೆವರು ಹಿಂಬಾಲಕರು…

Upayuktha