ನಗರ ಸ್ಥಳೀಯ

ನೀರಿನ ದರ ಏರಿಕೆ ಬಗ್ಗೆ ಆತಂಕ ಬೇಡ: ನೂತನ ಮೇಯರ್ ದಿವಾಕರ್ ಪಾಂಡೇಶ್ವರ

ಮಂಗಳೂರು: ಪಾಲಿಕೆ ಆಡಳಿತಾಧಿಕಾರಿ ಅವಧಿಯಲ್ಲಿ ಏರಿಕೆಯಾಗಿರುವ ಕುಡಿಯುವ ನೀರಿನ ದರ ಸಂಬಂಧಿಸಿ ಮಂಗಳೂರು ಜನತೆ ಗಾಬರಿಗೊಳ್ಳುವ ಅವಶ್ಯಕತೆ ಇಲ್ಲ ಎಂದು ನೂತನ ಮೇಯರ್ ದಿವಾಕರ್ ಪಾಂಡೇಶ್ವರ ಹೇಳಿದರು.

ನೂತನ ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಪಾಲಿಕೆ ಮಂಗಳಾ ಸಭಾಂಗಣದಲ್ಲಿ ಮಾತನಾಡಿದ ಅವರು, ಸಂಸದರು, ಶಾಸಕರು ಹಾಗೂ ಪಾಲಿಕೆಯ ಹಿರಿಯ ಸದಸ್ಯರ ಜತೆ ಚರ್ಚಿಸಿ ಮುಂದಿನ ಸಭೆಯಲ್ಲಿಯೇ ನೀರಿನ ದರ ಏರಿಕೆ ಕುರಿತಂತೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಪಾಲಿಕೆಯಲ್ಲಿ ಪ್ರತಿಪಕ್ಷವನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಮಗೆ ದೊರಕಿರುವ ವಿಶ್ವಾಸ, ಪ್ರೀತಿಗೆ ಕಪ್ಪುಚುಕ್ಕೆ ಬರದಂತೆ ಮಂಗಳೂರಿನ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ವ್ಯಾಪಾರ ಪರವಾನಿಗೆಯಲ್ಲಿ ತ್ಯಾಜ್ಯ ಶುಲ್ಕ ಹೆಚ್ಚಿರುವ ಬಗ್ಗೆಯೂ ದೂರು ಇದ್ದು, ಈ ಬಗ್ಗೆಯೂ ಸಹ ಕ್ರಮ ಕೈಗೊಳ್ಳುವುದಾಗಿ ನೂತನ ಮೇಯರ್ ತಿಳಿಸಿದರು.

ಸಾಮಾನ್ಯ ಕಾರ್ಯಕರ್ತನಾಗಿದ್ದ ತನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಬಿಜೆಪಿಗೆ ಚಿರಋಣಿ ಎಂದು ಹೇಳಿದ ಅವರು, ಪಕ್ಷದ ಹಿರಿಯ ನಾಯಕರಿಗೆ ವಂದನೆ ಸಲ್ಲಿಸಿದರು.

ಉಪ ಮೇಯರ್ ವೇದಾವತಿ ಮಾತನಾಡಿ, ಸಾಮಾನ್ಯ ಕಾರ್ಯಕರ್ತಳಾಗಿದ್ದ ತನ್ನನ್ನು ಈ ಮಟ್ಟಕ್ಕೆ ಬೆಳೆಸಿದ ಪಕ್ಷ ಹಾಗೂ ನಾಯಕರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರಲ್ಲದೆ, ಪ್ರಾಮಾಣಿಕವಾಗಿ ತನ್ನ ಕರ್ತವ್ಯವನ್ನು ನಿರ್ವಹಿಸುವುದಾಗಿ ಭರವಸೆ ನೀಡಿದರು.

ನೂತನ ಮೇಯರ್ ಹಾಗೂ ಉಪ ಮೇಯರ್‌ರವರಿಗೆ ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ಭರತ್ ಶೆಟ್ಟಿ, ಪಾಲಿಕೆಯ ಹಿರಿಯ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ಶಶಿಧರ ಹೆಗ್ಡೆ ಮೊದಲಾದವರು ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದರು.

ಪ್ರತಿದಿನ 5 ವಾರ್ಡ್‌ಗೆ ಭೇಟಿ
ಪ್ರತಿ ದಿನ ಪಾಲಿಕೆಯ 5 ವಾರ್ಡ್‌ಗಳಿಗೆ ಭೇಟಿ ನೀಡಿ ಜನರ ಸಮಸ್ಯೆ ಹಾಗೂ ಬೇಡಿಕೆಗೆ ಸ್ಪಂದಿಸುತ್ತೇನೆ ಎಂದು ನೂತನ ಮೇಯರ್ ಹೇಳಿದರು.

ಪುಟ್ಟ ಸಮಸ್ಯೆಗೆ ಚೇಂಬರ್‌ಗೆ ಬನ್ನಿ!
ಸಣ್ಣ ಪುಟ್ಟ ಸಮಸ್ಯೆಗಳ ಕುರಿತು ತಿಂಗಳಿಗೊಮ್ಮೆ ನಡೆಯಲಿರುವ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚಿಸಿ ಸಮಯ ವ್ಯರ್ಥ ಮಾಡದಂತೆ ನೂತನ ಮೇಯರ್ ದಿವಾಕರ ಪಾಂಡೇಶ್ವರ ಅವರು ಸದಸ್ಯರಲ್ಲಿ ವಿನಂತಿ ಮಾಡಿದರು. ಅಂತಹ ಸಮಸ್ಯೆಗಳಿದ್ದರೆ ನೇರವಾಗಿ ತನ್ನ ಚೇಂಬರ್‌ಗೆ ಬಂದು ಚರ್ಚಿಸಿದರೆ ಕ್ರಮ ಕೈಗೊಳ್ಳುತ್ತೇನೆ ಎಂದರು.

(ಉಪಯುಕ್ತ ನ್ಯೂಸ್)

ನಿಮ್ಮೂರಿನ ತಾಜಾ ಸುದ್ದಿಗಳಿಗಾಗಿ ಭೇಟಿ ನೀಡಿ: upayuktha.com

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

Related posts

ಬೆಂಗಳೂರು ನಗರ ಕಸಾಪ ವತಿಯಿಂದ ಕುವೆಂಪು ಜನ್ಮ ದಿನಾಚರಣೆ

Upayuktha

ಬೆಳ್ತಂಗಡಿ ಘಟಕದ ಗೃಹರಕ್ಷಕ ಅಪ್ಪು ಇವರಿಗೆ ಮುಖ್ಯಮಂತ್ರಿ ಚಿನ್ನದ ಪದಕ

Upayuktha

ಅಕ್ರಮ ಮದ್ಯ ಮಾರಾಟ; ಗ್ರಾ.ಪಂ ಸದಸ್ಯೆ ಸಹಿತ ಇಬ್ಬರ ಬಂಧನ

Upayuktha