ಮೂಗಿನಿಂದ ರಕ್ತಸ್ರಾವವಾಗುವುದನ್ನು ಆಂಗ್ಲಭಾಷೆಯಲ್ಲಿ ಎಪಿಸ್ಟಾಕ್ಸಿಸ್ ಎಂದು ಕರೆಯುತ್ತಾರೆ. ಮೂಗಿನೊಳಗಿನಿಂದ ಹರಿದು ಬರುವ ರಕ್ತ ಮುಂಭಾಗದ ಹೊರಳೆಗಳ ಮುಖಾಂತರ ಹೆಚ್ಚಾಗಿ ಬರುತ್ತದೆ. ಇದನ್ನು ಮುಂಭಾಗದ ಮೂಗಿನ ರಕ್ತಸ್ರಾವ ಎಂದೂ, ಹಿಂಭಾಗದಲ್ಲಿ ಬಾಯಿಯೊಳಗೆ ಉಂಟಾಗುವ ರಕ್ತಸ್ರಾವವನ್ನೂ ಹಿಂಭಾಗದ ಮೂಗಿನ ರಕ್ತಸ್ರಾವ ಎಂದೂ ಕರೆಯುತ್ತಾರೆ. ಮೂಗಿನಲ್ಲಿ ರಕ್ತಸ್ರಾವ ಸರ್ವೇ ಸಾಮಾನ್ಯವಾಗಿದ್ದು, ಶೇಕಡಾ 60ರಷ್ಟು ಮಂದಿ ಜೀವನದಲ್ಲಿ ಒಮ್ಮೆಯಾದರೂ ಈ ಅನುಭವವನ್ನು ಹೊಂದಿರುತ್ತಾರೆ. ಹೆಚ್ಚಿನ ರಕ್ತಸ್ರಾವಗಳು ತನ್ನಿಂತಾನೇ ನಿಲ್ಲುತ್ತವೆ.
ಕೇವಲ 10 ಶೇಕಡಾ ವ್ಯಕ್ತಿಗಳಲ್ಲಿ ಗಂಭೀರ ಪರಿಣಾಮ ಉಂಟುಮಾಡುತ್ತದೆ. ಹಾಗೆಂದ ಮಾತ್ರಕ್ಕೆ ಮಾರಣಾಂತಿಕವಾಗುವ ಸಾಧ್ಯತೆ ಬಹಳ ಕಡಮೆ. ಎರಡು ಲಕ್ಷ ಸಾವಿನಲ್ಲಿ ಒಂದೆರಡು ಮಂದಿ ಮೂಗಿನ ರಕ್ತಸ್ರಾವದಿಂದ ಸಾವನ್ನಪ್ಪುವ ಸಾಧ್ಯತೆ ಇರುತ್ತದೆ. ಅತಿಯಾದ ರಕ್ತಸ್ರಾವವಾದಲ್ಲಿ ವೈದ್ಯಕೀಯ ನೆರವು ಅತೀ ಅಗತ್ಯ. ಅದೇ ರೀತಿ ಅತಿಯಾದ ರಕ್ತಸ್ರಾವ ಮೂಗಿನ ಹಿಂಭಾಗದಿಂದ ಉಂಟಾದಲ್ಲಿ ಹೊಟ್ಟೆಯೊಳಗೆ ರಕ್ತ ಸೇರಿಕೊಂಡು ವಾಂತಿ, ವಾಕರಿಕೆ ಉಂಟಾಗುವ ಸಾಧ್ಯತೆ ಇರುತ್ತದೆ.
ರಕ್ತಸ್ರಾವಕ್ಕೆ ಕಾರಣಗಳು ಏನು?:
ಸಾಮಾನ್ಯವಾಗಿ ರಕ್ತಸ್ರಾವಕ್ಕೆ ಉಂಟಾಗುವ ಕಾರಣಗಳನ್ನು ಸ್ಥಳೀಯ ಕಾರಣಗಳು ಮತ್ತು ಇತರ ದೈಹಿಕ ಕಾರಣಗಳು ಎಂದು ವಿಂಗಡಿಸಲಾಗಿದೆ.
ಸ್ಥಳೀಯ ಕಾರಣಗಳು: ಮೊಂಡು ವಸ್ತುಗಳಿಂದ ಮೂಗಿಗೆ ಉಂಟಾದ ಗಾಯಗಳು (ಬಾಕ್ಸಿಂಗ್, ಹೊಡೆದಾಟ, ಗುದ್ದಾಟ ಇತ್ಯಾದಿ), ಮೂಗಿನ ಹೊಳ್ಳೆಯೊಳಗೆ ಅತಿಯಾಗಿ ಕೈ ಬೆರಳು ಹಾಕುವುದರಿಂದ, ಸಣ್ಣ ಮಕ್ಕಳಲ್ಲಿ ಪೆನ್ಸಿಲ್, ರಬ್ಬರ್ ಇತ್ಯಾದಿ ವಸ್ತುಗಳನ್ನು ತುರುಕುವುದರಿಂದ, ಮೂಗಿನ ಒಳಗಿನ ಸೋಂಕು, ವಿಪರೀತ ಚಳಿಯಿಂದಾಗಿ ಮೂಗಿನೊಳಗಿನ ನುಣುಪಾದ ಚರ್ಮ ಬಿರುಕುಗೊಂಡು, ಅತಿಯಾದ ಔಷಧಿಗಳ ಸಿಂಪಡಣೆ (ನೇಸಲ್ ಸ್ಪ್ರೇ) ಬಳಕೆಯಿಂದ, ಅತಿಯಾದ ಸ್ಟಿರಾಯ್ಡ್ ಸಿಂಪಡಿಕೆ, ಮೂಗಿನೊಳಗೆ ಹಾಕಿದ ಟ್ಯೂಬ್ಗಳಿಂದ, ಮೂಗಿನೊಳಗೆ ಏನಾದರೂ ಆಪರೇಷನ್ ಮಾಡಿದ್ದಲ್ಲಿ, ಮೂಗಿನೊಳಗೆ ಏನಾದರೂ ಮಾಂಸದ ಗಡ್ಡೆಗಳು ಬೆಳೆದಿದ್ದಲ್ಲಿ, ಯಾವುದಾದರೂ ಆನುವಂಶಿಕವಾದ ಮೂಗಿನೊಳಗಿನ ತೊಂದರೆಗಳು ಅಥವಾ ಮೂಗಿನ ಮಧ್ಯಭಾಗದ ಮೂಳೆಯಲ್ಲಿನ ದೋಷದಿಂದ, ಅತಿಯಾದ ಎತ್ತರದ ಪ್ರದೇಶಕ್ಕೆ ಹೋದಾಗ ಹೊರಗಿನ ಒತ್ತಡದ ವ್ಯತ್ಯಾಸದಿಂದಲೂ ಮೂಗಿನೊಳಗೆ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ.
ಇತರ ದೈಹಿಕ ಕಾರಣಗಳು : ಅತಿಯಾದ ರಕ್ತದೊತ್ತಡವಿದ್ದಲ್ಲಿ ತನ್ನಿಂತಾನೇ ಮೂಗಿನ ಹೊಳ್ಳೆಗಳಿಂದ ರಕ್ತ ಒಸರುವ ಸಾಧ್ಯತೆ ಇರುತ್ತದೆ. ಇದು ಅತೀ ಸಾಮಾನ್ಯವಾದ ಕಾರಣವಾಗಿರುತ್ತದೆ. ತಕ್ಷಣವೇ ವೈದ್ಯರನ್ನು ಕಾಣತಕ್ಕದ್ದು. ಅತಿಯಾದ ಶೀತ ನೆಗಡಿ, ಅತಿಯಾದ ಆಲ್ಕೋಹಾಲ್ ಸೇವನೆ, ರಕ್ತಹೀನತೆ, ರಕ್ತ ಹೆಪ್ಪುಗಟ್ಟದಿರುವ ಖಾಯಿಲೆಗಳು, ಯಕೃತ್ತಿನ ತೊಂದರೆಗಳು, ಹೃದಯ ವೈಫಲ್ಯ, ರಕ್ತದ ಕ್ಯಾನ್ಸರ್, ರಕ್ತ ತಟ್ಟೆಗಳ ಸಂಖ್ಯೆಯಲ್ಲಿ ಇಳಿಮುಖ, ಆಸ್ಟರಿನ್ ಎಂಬ ಮಾತ್ರೆಯ ಸೇವನೆ, ರಕ್ತ ಹೆಪ್ಪುಗಟ್ಟದಿರದಂತೆ ತೆಗೆದುಕೊಳ್ಳುವ ಮಾತ್ರೆಗಳು, ವಿಟಮಿನ್ ಸಿ ಮತ್ತು ಕೆ ಇದರ ಕೊರತೆ, ಕುಸುಮರೋಗ, ರಕ್ತನಾಳಗಳಿಗೆ ಸಂಬಂಧಿಸಿದ ರೋಗಗಳು, ಗರ್ಭಿಣಿಯರಲ್ಲಿ ಅತಿಯಾದ ರಕ್ತದೊತ್ತಡ ಮುಂತಾದ ಕಾರಣಗಳಿಂದಲೂ ಮೂಗಿನಲ್ಲಿ ರಕ್ತಸ್ರಾವವಾಗುವ ಸಾಧ್ಯತೆ ಇರುತ್ತದೆ.
ಮೂಗಿನ ಒಳಭಾಗದಲ್ಲಿ ಅತ್ಯಂತ ನುಣುಪಾದ ಚರ್ಮದ ಪೊರೆಯಿರುತ್ತದೆ. ಇದರಲ್ಲಿ ಅತೀ ಹೆಚ್ಚು ಚಿಕ್ಕ ಚಿಕ್ಕ ರಕ್ತನಾಳಗಳ ಗುಚ್ಛಗಳು ತುಂಬಿರುತ್ತದೆ. ಮೇಲೇ ತಿಳಿಸಿದ ಕಾರಣಗಳಿಂದ ರಕ್ತನಾಳಗಳು ಒಡೆದುಕೊಂಡು ತನ್ನಿಂತಾನೇ ರಕ್ತ ಒಸರಲು ಆರಂಭವಾಗಿತ್ತದೆ. ತಕ್ಷಣವೇ ವೈದ್ಯರ ಬಳಿ ತೋರಿಸಿ ಯಾವ ಕಾರಣದಿಂದ ರಕ್ತಸ್ರಾವವಾಗುತ್ತದೆ ಎಂದು ಅರಿತುಕೊಂಡು ಸೂಕ್ತ ಚಿಕಿತ್ಸೆ ತೆಗೆದುಕೊಳ್ಳತಕ್ಕದ್ದು. ಸಾಮಾನ್ಯವಾಗಿ ಹತ್ತು ವರ್ಷದೊಳಗಿನ ಮಕ್ಕಳಲ್ಲಿ ಮತ್ತು 50 ವರ್ಷ ದಾಟಿದ ಹಿರಿಯ ನಾಗರೀಕರಲ್ಲಿ ಈ ಮೂಗಿನ ರಕ್ತಸ್ರಾವ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮೂಗಿನ ಹೊರಭಾಗದಿಂದ ಬರುವ ರಕ್ತಸ್ರಾವದಿಂದ ಹೆಚ್ಚಿನ ಪ್ರಾಣಪಾಯವಿಲ್ಲ, ಆದರೆ ಒಳಭಾಗದಿಂದ ಹೆಚ್ಚಿನ ರಕ್ತಸ್ರಾವವಾದಲ್ಲಿ, ಬಾಯಿಯೊಳಗೆ ಹೆಪ್ಪುಗಟ್ಟಿಕೊಂಡು ಸರಾಗ ಉಸಿರಾಟಕ್ಕೆ ತೊಂದರೆಯಾಗಿ, ಗಾಳಿ ಕೊಳವೆಗಳು (ಟ್ರೆಕಿಯಾ) ಮುಚ್ಚಿಕೊಂಡು ಮಾರಣಾಂತಿಕವಾಗುವ ಸಾಧ್ಯತೆಯೂ ಇರುತ್ತದೆ.
ಚಿಕಿತ್ಸೆ ಹೇಗೆ:
ಹೆಚ್ಚಿನ ಸಂದರ್ಭಗಳಲ್ಲಿ ಮೂಗಿನ ಹೊರಳೆಗಳ ಮೇಲೆ ಮೆದುವಾಗಿ ಒತ್ತಿ ಹಿಡಿದು, ಒತ್ತಡ ಹಾಕಿದಲ್ಲಿ ರಕ್ತಸ್ರಾವ ನಿಲ್ಲುತ್ತದೆ. 5 ರಿಂದ 10 ನಿಮಿಷಗಳ ಕಾಲ ಒತ್ತಡ ಹಾಕತಕ್ಕದ್ದು. ಐಸ್ಗಡ್ಡೆಗಳಿಂದ ಕೂಡ ರಕ್ತಸ್ರಾವವನ್ನು ಕಡಮೆ ಮಾಡಬಹುದು. ಐಸ್ಗಡ್ಡೆಗಳನ್ನು ಕರವಸ್ತ್ರದಲ್ಲಿ ಒತ್ತಿಹಿಡಿದಲ್ಲಿ ರಕ್ತನಾಳಗಳು ಕುಗ್ಗಿಕೊಂಡು ರಕ್ತಸ್ರಾವ ಕಡಮೆಯಾಗುತ್ತದೆ. ತಲೆಯನ್ನು ಮುಂಭಾಗಕ್ಕೆ ಬಾಗಿಸಿದಲ್ಲಿ ಉಸಿರಾಡಲು ತೊಂದರೆಯಾಗದು. ಅತಿಯಾದ ರಕ್ತ ಹೊಟ್ಟೆಯೊಳಗೆ ಹೋಗಿ ಹೆಪ್ಪುಗಟ್ಟಿದಲ್ಲಿ ವಾಂತಿ, ವಾಕರಿಕೆ ಉಂಟಾಗುವ ಸಾಧ್ಯತೆಯೂ ಇದೆ. ರಕ್ತಸ್ರಾವವಾಗಲು ನಿರ್ದಿಷ್ಟ ಕಾರಣಗಳನ್ನು ಅರಿತುಕೊಂಡು ಚಿಕಿತ್ಸೆ ನೀಡತಕ್ಕದ್ದು. ಒತ್ತಡ ಹಾಕಿದರೂ ರಕ್ತಸ್ರಾವ ನಿಲ್ಲದಿದ್ದಲ್ಲಿ, ರಕ್ತ ಹೆಪ್ಪುಗೊಳ್ಳುವ ದ್ರಾವಣದಲ್ಲಿ ಹತ್ತಿಯನ್ನು ಸೋಕಿಸಿ ಮೂಗಿನ ಹೊರಳೆಗಳೊಳಗೆ ನಡುವೆ ಒತ್ತಡದಿಂದ ಹಿಡಿಯತಕ್ಕದ್ದು ಮತ್ತು ವೈದ್ಯರ ಸಲಹೆ ಅತೀ ಅಗತ್ಯ. ವೈದ್ಯರು ನಿಮ್ಮ ದೇಹ ಸ್ಥಿತಿ, ರಕ್ತದೊತ್ತಡ ಮತ್ತು ದೇಹದ ಇತರ ಅಂಗಾಂಗಗಳನ್ನು ಪರೀಕ್ಷಿಸಿ, ಕೂಲಕುಂಷವಾಗಿ ನಿಮ್ಮ ಚರಿತ್ರೆಯನ್ನು ವಿಚಾರಿಸಿ, ಯಾವ ಕಾರಣದಿಂದ ರಕ್ತಸ್ರಾವವಾಗಿದೆ ಎಂದು ತಿಳಿದುಕೊಂಡು ಸೂಕ್ತ ಚಿಕಿತ್ಸೆ ನೀಡುತ್ತಾರೆ.
ಯಾವಾಗ ವೈದ್ಯರನ್ನು ಕಾಣಬೇಕು?
1. 10 ರಿಂದ 15 ನಿಮಿಷಗಳ ಕಾಲ ಮೂಗಿನ ಮೇಲೆ ಒತ್ತಡ ಹಾಕಿದ ಬಳಿಕವೂ ರಕ್ತ ಸ್ರಾವ ಮುಂದುವರಿದಲ್ಲಿ.
2. ಪದೇ ಪದೇ ರಕ್ತಸ್ರಾವವಾದಲ್ಲಿ.
3. ಅತಿಯಾದ ರಕ್ತಸ್ರಾವ ಮತ್ತು 100 ಮಿ.ಲೀಗಿಂತ ಜಾಸ್ತಿ ರಕ್ತಸ್ರಾವವಾದಲ್ಲಿ.
4. ಮುಖಕ್ಕೆ ಅಥವಾ ಮೂಗಿನ ಮೇಲ್ಭಾಗಕ್ಕೆ ಏಟಾಗಿ ರಕ್ತಸ್ರಾವವಾದಲ್ಲಿ.
5. ಮೂಗಿನೊಳಗಿನ ರಕ್ತಸ್ರಾವ ಮೂಗಿನ ಹಿಂಭಾಗದಲ್ಲಿ ಉಂಟಾಗಿ ನಿಮ್ಮ ಉಸಿರಾಟಕ್ಕೆ ತೊಂದರೆ ಉಂಟು ಮಾಡಿದಾಗ.
6. ಹೊಸದಾದ ಔಷಧಿಯನ್ನು ತೆಗೆದುಕೊಂಡ ಬಳಿಕ ರಕ್ತಸ್ರಾವ ಉಂಟಾದಲ್ಲಿ.
7. ಮೂಗಿನ ರಕ್ತಸ್ರಾವದ ಜೊತೆಗೆ ದೇಹದ ಇತರ ಭಾಗದಲ್ಲಿ ಒಸಡಿನಲ್ಲಿ ರಕ್ತ ಅಥವಾ ಚರ್ಮದೊಳಗೆ ರಕ್ತಸ್ರಾವವಾಗಿ, ಮೈ ಮೇಲೆ ಚಿಕ್ಕ ಚಿಕ್ಕ ಕಪ್ಪು ಕಲೆಗಳು ಕಾಣಿಸಿಕೊಂಡಲ್ಲಿ.
8. ಮೂಗಿನ ರಕ್ತಸ್ರಾವವಾಗಿ ನಿಮಗೆ ಉಸಿರಾಡಲು ಕಷ್ಟವಾದಲ್ಲಿ, ತಲೆಸುತ್ತು ಬಂದಲ್ಲಿ.
ಮೇಲೆ ತಿಳಿಸಿದ ಎಲ್ಲಾ ಸನ್ನಿವೇಶಗಳಲ್ಲಿ ವೈದ್ಯರ ಸಲಹೆ ಮತ್ತು ಚಿಕಿತ್ಸೆ ಅತೀ ಅಗತ್ಯ.
ರಕ್ತಸ್ರಾವವಾದಾಗ ನೀವು ಮಾಡಬೇಕಾದ ಕರ್ತವ್ಯಗಳು:
1. ಮೂಗಿನ ಹೊರಳೆಗಳ ಮೇಲೆ ಮೆದುವಾಗಿ ಒತ್ತಡ ಹಾಕತಕ್ಕದ್ದು. ಸರಾಗವಾಗಿ, ಉಸಿರಾಡತಕ್ಕದ್ದು. ನಿಶ್ಚಿಂತೆಯಿಂದ ಕುಳಿತು, ನಮ್ಮ ದೇಹ ಮತ್ತು ತಲೆಯನ್ನು ಮುಂಭಾಗಕ್ಕೆ ಸ್ವಲ್ಪ ಬಾಗಿಸಬೇಕು. ದಯವಿಟ್ಟು ಉದ್ದಂಡವಾಗಿ ಮಲಗಬೇಡಿ ಅಥವಾ ಕಾಲುಗಳ ನಡುವೆ ತಲೆಯನ್ನು ಇಟ್ಟು ಚಿಂತಿಸುತ್ತಾ ಕಾಲಹರಣ ಮಾಡಬೇಡಿ.
2. ಬಾಯಿಯ ಮುಖಾಂತರ ಉಸಿರಾಡತಕ್ಕದ್ದು.
3. ದಯವಿಟ್ಟು ಮೂಗಿನೊಳಗೆ ಒತ್ತಡ ಜಾಸ್ತಿಯಾಗದಂತೆ ನೋಡಿಕೊಳ್ಳಿ. ಸೀನುವಾಗ ಜಾಗ್ರತೆಯಿಂದಿರಬೇಕು. ಮೂಗನ್ನು ಜೋರಾಗಿ ಕಿವುಚುವುದು ಅಥವಾ ಮಸಾಜು ಮಾಡುವುದನ್ನು ತಪ್ಪಿಸಬೇಕು. ಮೂಗಿನ ಒಳಗಿನ ಒತ್ತಡ ಜಾಸ್ತಿಯಾಗುವ ಯಾವುದೇ ಕ್ರಿಯೆಗಳನ್ನು ಮಾಡಬಾರದು. ಸೀನುವಾಗ ಬಾಯಿ ತೆರೆದು ಸೀನತಕ್ಕದ್ದು.
4. ರಕ್ತಸ್ರಾವ ನಿಂತಕೂಡಲೇ ಬಿಸಿಯಾದ ನೀರಿನಿಂದ ಸ್ನಾನ ಮಾಡುವುದು ಅಥವಾ ಅತಿಯಾದ ಬಿಸಿಯಾದ ಆಹಾರ ಸೇವನೆವನ್ನು ತಪ್ಪಿಸತಕ್ಕದ್ದು. ಹಾಗೇ ಮಾಡಿದಲ್ಲಿ ಪುನಃ ರಕ್ತಸ್ರಾವವಾಗುವ ಸಾಧ್ಯತೆ ಇದೆ.
5. ಧೂಮಪಾನ ಮಾಡುವುದರಿಂದ, ಮೂಗಿನ ಒಳಭಾಗವನ್ನು ಮತ್ತಷ್ಟು ಒಣಗಿಸಿ ರಕ್ತಸ್ರಾವವಾಗುವಂತೆ ಪ್ರಚೋದಿಸಬಹುದು.
6. ಯಾವುದಾದರೂ ಔಷಧಿಯನ್ನು ಸೇವಿಸಿದಲ್ಲಿ ಅಥವಾ ಮೂಗಿನೊಳಗೆ ಯಾವುದಾದರೂ ಅಲರ್ಜಿಯಾಗದಂತೆ ಔಷಧಿ ಸಿಂಪಡಿಣೆ ಮಾಡಿದಲ್ಲಿ ತಕ್ಷಣವೇ ಅದನ್ನು ನಿಲ್ಲಿಸಿ ಯಾವುದೇ ಕಾರಣಕ್ಕೂ ಪುನಃ ಬಳಸಬೇಡಿ ಅತಿಯಾದ ಔಷಧಿ ಸೇವನೆ ಅಥವಾ ಸಿಂಪಡಣೆ ಮತ್ತಷ್ಟು ರಕ್ತಸ್ರಾವವಾಗಲು ಪ್ರಚೋದನೆ ನೀಡಬಹುದು.
7. ಮೂಗಿನಲ್ಲಿ ರಕ್ತಸ್ರಾವವಾಗುವುದರ ಜೊತೆಗೆ ದೇಹದ ಇನ್ನಿತರ ಭಾಗಗಳಲ್ಲಿ ಲಕ್ಷಣಗಳು ಕಾಣಿಸಿಕೊಂಡಲ್ಲಿ ತಕ್ಷಣವೇ ವೈದ್ಯರ ಭೇಟಿ ಅಗತ್ಯ. ವಸಡಿನಲ್ಲಿ ರಕ್ತ ಒಸರುವುದು, ದೇಹದ ಚರ್ಮದ ಕೆಳಗೆ ತನ್ನಿಂತಾನೇ ರಕ್ತನಾಳಗಳ ಒಡೆದು, ಚಿಕ್ಕ ಚಿಕ್ಕ ರಕ್ತದ ಕಲೆಗಳು ಕಾಣಿಸಿಕೊಳ್ಳುವುದು. ಮೊಣಕೈ ಹಿಂಭಾಗ, ಹೊಟ್ಟೆಯ ಭಾಗದಲ್ಲಿ ಕಪ್ಪು ಕಲೆಗಳು ಕಾಣಿಸಿಕೊಂಡಲ್ಲಿ ಒಂದು ಕ್ಷಣವೂ ತಡಮಾಡಬಾರದು.
8. ಯಾವುದೇ ಕಾರಣಕ್ಕೂ ಸ್ವಯಂ ಔಷಧಿಗಾರಿಕೆ ಮಾಡಬಾರದು. ಹಳ್ಳಿಮದ್ದು, ಅಜ್ಜಿಮದ್ದು ಮತ್ತು ಗಿಡಮೂಲಿಕೆಗಳ ಔಷಧಿಗಾರಿಕೆ ಖಂಡಿತವಾಗಿಯೂ ಒಳ್ಳೆಯದಲ್ಲ. ವೈದ್ಯರ ಬಳಿ ಸಂದರ್ಶಿಸಿ, ಸೂಕ್ತ ಮಾರ್ಗದರ್ಶನ ಮತ್ತು ಔಷಧಿ ತೆಗೆದುಕೊಳ್ಳತಕ್ಕದ್ದು.
ಕೊನೆಮಾತು:
ಮೂಗು ನಮ್ಮ ದೇಹದ ಅವಿಬಾಜ್ಯ ಅಂಗ. ನಾವು ಉಸಿರಾಡುವಾಗ ಒಳತೆಗೆದುಕೊಡ ಒಣ ಗಾಳಿಯನ್ನು ಬಿಸಿಯಾಗಿಸಿ ಮತ್ತು ಒಣಗಾಳಿಯನ್ನು ಒದ್ದೆಯಾಗಿಸಿ ಶ್ವಾಸಕೋಶಕ್ಕೆ ತಲುಪಿಸುವ ಗುರುತರವಾದ ಕಾರ್ಯವನ್ನು ಮೂಗು ಮಾಡುತ್ತದೆ. ಮೂಗಿನ ಒಳಗೆ ಅತೀ ತೆಳುವಾದ ಚರ್ಮದ ಪದರಗಳಿದ್ದು ಅದರಲ್ಲಿ ಚಿಕ್ಕ ಚಿಕ್ಕ ರಕ್ತನಾಳಗಳು ಬಹಳಷ್ಟು ಇರುತ್ತದೆ. ನಾವು ಜಾಸ್ತಿಯಾಗಿ ಒಣ ಗಾಳಿಯನ್ನು ಒಳತೆಗೆದುಕೊಂಡಾಗ (ಚಳಿಗಾಲದ ಸಮಯದಲ್ಲಿ) ಈ ಚರ್ಮದ ಪದರಗಳು ಬಿರಿದುಕೊಂಡು, ರಕ್ತನಾಳಗಳು ಒಡೆದುಕೊಂಡು ರಕ್ತಸ್ರಾವವಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ. ಈ ರಕ್ತಸ್ರಾವ ಎನ್ನುವುದು ಬಹಳ ಮಜುಗರ ತರುವ ಮತ್ತು ಅತಿಯಾದ ಕಿರಿಕಿರಿ ಉಂಟು ಮಾಡುವ ಒಂದು ದೇಹ ಸ್ಥಿತಿಯಾಗಿರುತ್ತದೆ. ಮಾರಣಾಂತಿಕವಲ್ಲದಿದ್ದರೂ ದೈನಂದಿನ ಚಟುವಟಿಕೆಗಳನ್ನು ಮಾಡದಂತೆ ತೊಂದರೆ ಕೊಡುವ ಸಾಧ್ಯತೆಯೂ ಇರುತ್ತದೆ. ಬರೀ ರಕ್ತಸ್ರಾವ ಎಂದು ಮೂಗು ಮುರಿದರೆ ಮತ್ತು ನಿರ್ಲಕ್ಷ ಮಾಡಿದರೆ ಪ್ರಾಣಕ್ಕೂ ಕುತ್ತು ತರುವ ಸಾಧ್ಯತೆಯೂ ಇದೆ. ಒಟ್ಟಿನಲ್ಲಿ ತಕ್ಷಣವೇ ವೈದ್ಯರನ್ನು ಕಂಡು ರಕ್ತಸ್ರಾವವಾಗಲು ಕಾರಣಗಳನ್ನು ತಿಳಿದು, ಸೂಕ್ತ ಚಿಕಿತ್ಸೆಯನ್ನು ಸಕಾಲದಲ್ಲಿ ತೆಗೆದುಕೊಳ್ಳುವುದರಲ್ಲಿಯೇ ಜಾಣತನ ಅಡಗಿದೆ.
– ಡಾ|| ಮುರಲೀ ಮೋಹನ್ ಚೂಂತಾರು
ಸುರಕ್ಷಾದಂತ ಚಿಕಿತ್ಸಾಲಯ
ಹೊಸಂಗಡಿ – 671323
ಮೊ : 09845135787