ಲೇಖನಗಳು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-6

ಆಗರ್ಭ ಶ್ರೀಮಂತರ ಮನೆಗೆ ಬಡವರು ಹೆಣ್ಣು ಕೊಡಬಾರದು-


ಈ ಮಾತನ್ನು ನಾನೇಕೆ ಹೇಳುತ್ತಿರುವೆನೆಂದರೆ ಏನೇ ಆದರೂ ತಾಯಿ ಅಥವಾ ತವರು ಮನೆಕಡೆಯವರು ಗಟ್ಟಿಯಿದ್ದರೆ ಮಾತ್ರ ಹೆಣ್ಣಿಗೆ ಹೋದ ಅಥವಾ ಸೇರಿದ ಮನೆಯಲ್ಲಿ ಗೌರವ.  ಇದು ಸಮಾಜದಲ್ಲಿ ಹಿಂದೂ, ಇಂದೂ, ಮುಂದೂ ನಾವು ನೋಡುವ ಸರ್ವೇ ಸಾಮಾನ್ಯ ಸತ್ಯ. ಅವಳನ್ನು ಕೇಳಲು ಯಾರೂ ಇಲ್ಲ ಎಂದಾಗ “ತೋಳ ಗುಂಡಿಗೆ ಬಿದ್ದಾಗ ಆಳಿಗೊಂದು ಕಲ್ಲು ” ಎಂಬಂತೆ ಬಂದವರೆಲ್ಲ ಒಂದೊಂದು ಕಲ್ಲೆಸೆಯುವವರೇ. ಹೆಣ್ಣು ಬಡವರ ಮನೆಯವಳಾದರೆ ಮದುವೆ ಮಾಡುವಾಗಲೇ ಗಂಡನ ಕುಟುಂಬದವರೆಲ್ಲ ಅವಳ ಬಳಿ ತಮಗೆ ಉಪಯೋಗವಾಗುವಂತಹ ಯಾವ್ಯಾವ ಕೆಲಸಗಳನ್ನು ಮಾಡಿಸಿಕೊಳ್ಳಬಹುದೆಂಬ ಲೆಕ್ಕಾಚಾರ ಹಾಕಿರುತ್ತಾರೆ. ಅವರ ತಂದೆ ತಾಯಿಯರಿಗಂತೂ ಅಲ್ಲೆಂದೂ ಬೆಲೆ ಸಿಗದು. ಆ ತಾತ್ಸಾರವನ್ನು ಹೆತ್ತ ಮಗಳಿಗಾಗಿ ಜೀವನವಿಡೀ ಅವರು ಸಹಿಸಿಕೊಳ್ಳ ಬೇಕಿರುತ್ತದೆ. ಗಂಡ ಒಳ್ಳೆಯವನಾದರೂ ಗಂಡನ ಕಡೆಯ ಸಂಬಂಧಿಕರಲ್ಲಿ ಹೊಟ್ಟೆಕಿಚ್ಚಿನವರು, ದುರಹಂಕಾರಿಗಳು, ಇತರರನ್ನು ಛೀಗಳೆಯಲೆಂದೇ ಹುಟ್ಟಿರುವವರು ಇದ್ದೇ ಇರುತ್ತಾರಲ್ಲವೇ?
    ಆಕಸ್ಮಾತ್ ಹೆಣ್ಣಿನಿಂದ ಅರಿಯದೇ ಏನಾದರೂ ತಪ್ಪಾದರೆ ಮುಗಿದೇ ಹೋಯ್ತು. “ನಿನಗೇನು ಗೊತ್ತು ಬೆಲೆ! ಕತ್ತೆಗೇನು ಗೊತ್ತು ಕಸ್ತೂರಿಯ ಪರಿಮಳ! ಮೊದಲೆಂದಾದರೂ ಬಳಸಿದ್ದರೆ ತಾನೇ ಗೊತ್ತಿರೋದು? ಅಲ್ಪನಿಗೆ ಐಶ್ವರ್ಯ ದೊರೆತರೆ ಅರ್ಧ ರಾತ್ರಿಯಲ್ಲೂ ಕೊಡೆ ಹಿಡ್ಕೊಂಡ್ ಹೋಗ್ತಾನಂತೆ! ಮೆಟ್ಟನ್ನು ಅಟ್ಟದ್ ಮೇಲೆ ಕೂರಿಸ್ದಂಗಾಯ್ತು! ಮಂಗನ ಕೈಲಿ ಮಾಣಿಕ್ಯ ಕೊಟ್ಟ ಹಾಗಾಯ್ತು!…” ಇವೇ ಮುಂತಾದ ಗಾದೆಗಳು ಅವಳಿಗೇ ಹುಟ್ಟಿಕೊಂಡಿದೆಯೇನೋ ಎಂಬಂತೆ ಉದುರುತ್ತಿರುತ್ತವೆ. ಅದರಲ್ಲೂ ಅತ್ತೆ, ನಾದಿನಿ, ಓರಗಿತ್ತಿಯರಿಂದ ಪ್ರತಿನಿತ್ಯ ಸಹಸ್ರ ನಾಮಾರ್ಚನೆ ತಪ್ಪಿದ್ದೇ ಅಲ್ಲ! ಬೇರೆಯವರೆಲ್ಲ ಹೊರಗೆ ಕೆಲಸಕ್ಕೆ ಹೋಗುವಾಗ ಬಡವಳಾದ ಸೊಸೆಗೆ ಕೆಲಸವಿರದಿದ್ದರೆ ಮನೆಗೆಲಸದ ಆಳಿಗಿಂತ ಕಡೆ! ಮನೆಯಲ್ಲಿನ ಜನರೆಲ್ಲರ ಸೇವೆ ಮಾಡಬೇಕು, ವೃದ್ಧ ತಂದೆ ತಾಯಿಯರ ಸೇವೆ ಮಾಡಬೇಕು, ಮಲಗಿರುವ ಅಜ್ಜ-ಅಜ್ಜಿಯರ ಸರ್ವ ಕಾರ್ಯಕ್ಕೂ ಮನೆಯ ಕೆಲಸಕ್ಕೆ ಜನ ಸಿಗುವುದಿಲ್ಲ, ಸಿಕ್ಕರೂ ಸಂಬಳ ಕೊಡಬೇಕು, ನಂಬಲಾಗದು ಎಂಬೆಲ್ಲ ಕಾರಣಕ್ಕೆ ಸಿರಿವಂತರ ಮನೆಯವರು ಮಗನಿಗೆ ಬಡವರ ಮನೆಯ ಹೆಣ್ಣುಮಗಳನ್ನು ಮದುವೆ ಮಾಡಿಕೊಳ್ಳಲು ಒಪ್ಪುತ್ತಾರೆ.
     ಕೆಲವೊಮ್ಮೆ ಮಗನಿಗೆ ಜಾತಕದ ದೋಷವಿದ್ದರೆ, ಮಗ ಬುದ್ಧಿಮಾಂದ್ಯನಾಗಿದ್ದರೆ, ವಿಕಲಾಂಗ ಚೇತನನಾಗಿದ್ದರೆ, ಜವಾಬ್ದಾರಿಯಿರದ ಪೆದ್ದನಾಗಿದ್ದರೆ, ನಪುಂಸಕನಾಗಿದ್ದರೆ ಬಡವರ ಮನೆಯ ಹೆಣ್ಣುಮಗಳು ಸಮಾಜಕ್ಕೆ ಹೆದರಿ, ತಮ್ಮ ತಂದೆ ತಾಯಿಯರ ಮರ್ಯಾದೆಗಂಜಿ ಬದುಕುವಳು, ಯಾರಲ್ಲೂ ಹೇಳಲಾರಲು ತನ್ನ ಕಷ್ಟ ಎಂದು ಸಿರಿವಂತರು ಬಡ ಹುಡುಗಿಯ ಬಾಳಿಗೆ ಕೊಳ್ಳಿಯಿಡುವವರೂ ಇದ್ದಾರೆ.
    ಪ್ರಪಂಚದಲ್ಲಿ ಎರಡು ಶೇಕಡಾದಷ್ಟು ಜನ ಒಳ್ಳೆಯವರೂ ಇರಬಹುದು. ಆದರೆ ಅದು ತೀರಾ ವಿರಳ. ಬಡ ಹುಡುಗಿಯ ಬಾಳು ಬೆಳಕಾಗಲೆಂಬ ಆಶಯ ಹೊತ್ತು, ನಮಗೆ ಬಡವರ ಸಂಬಂಧ ಆಗಬಹುದು ಎನ್ನುವ ಉದಾರತೆ ಎಷ್ಟು ಜನರಲ್ಲಿ ಕಾಣಬಹುದು?
     ಈಗೀಗ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆಯಾದ ಕಾರಣ ಮಗನಿಗೆ ನಲವತ್ತಾದರೂ ಹೆಣ್ಣು ಸಿಗದಾಗ ಹಳ್ಳಿಯ ಬಡ ಹೆಣ್ಣುಮಗಳನ್ನು ದತ್ತು ಪಡೆದ ಶಾಸ್ತ್ರ ಮಾಡಿ ಸಿರಿವಂತ ಹುಡುಗನಿಗೆ ಸಂಬಂಧಿಕರು ಸೇರಿ ಮದುವೆ ಮಾಡುವ ಕಾರ್ಯವೂ ನಡೆಯುತ್ತದೆ.
     ಸಿರಿವಂತರ ಸಹವಾಸ ಬೇಡವೆಂದರೂ ಶೋಕಿ ಜೀವನಕ್ಕೆ ಮಾರುಹೋದ ಹುಡುಗಿಯರು ಸಿರಿವಂತ ಹುಡುಗನನ್ನು ಪ್ರೀತಿಯ ಜಾಲಕ್ಕೆ ಸಿಲುಕಿಸಿ ಮೋಸ ಮಾಡುವವರೂ ಇದ್ದಾರೆ. ಕೆಲವು ಹೆಣ್ಣು ಮಕ್ಕಳು ಒಳ್ಳೆಯವರಂತೆ ನಾಟಕವಾಡಿ ಆಸ್ತಿ, ಹಣ ಸಿರಿವಂತಿಕೆ ಬಂದ ಮೇಲೆ ಬದಲಾಗಿ, ಬಡತನ ಮರೆತು ಮೆರೆವ ಸ್ವಭಾವದವರೂ ಇರುವರು. ಬುದ್ಧಿಯಿಲ್ಲದೆ ಮನೆ ಹಾಳು ಮಾಡುವವರೂ ಇರುವರು. ಹಾಗಾಗಿ ಸರಿಯಾದ, ಸಮಾನರಾದವರ ಜೊತೆಯಲ್ಲೇ ಮದುವೆ ಮಾಡಿಸುವುದು ಸೂಕ್ತ. ಏಕೆಂದರೆ ಎಲ್ಲಾ ಸಮಯದಲ್ಲಿ ಸರಿಯಾದ ಲಾಜಿಕ್ ಗಳು ಕೆಲಸ ನಡೆಸಲಾರವು. ನೀವೇನು ಹೇಳ್ತೀರಿ?
    ಗಂಡನ ಮನೆಯೆನ್ನುವುದು ನೆಮ್ಮದಿಯ ತಾಣವಾಗಿರಬೇಕೇ ಹೊರತು ಗೊಂದಲದ ಗೂಡಾಗಿರಬಾರದು! ನೆಮ್ಮದಿ ಹೆಚ್ಚಿದಷ್ಟು ಆರೋಗ್ಯವೂ ಚೆನ್ನಾಗಿರುವುದು. ನೆಮ್ಮದಿ ಇರಬೇಕೆಂದರೆ ಗಂಡ, ಗಂಡನ ಮನೆಯವರು ತಮಗೂ ಈ ಸೊಸೆಯ ಇರುವಿಕೆಯ ಅಗತ್ಯವಿದೆ, ಅವಳಿಗೂ ಹೃದಯ, ಮನಸ್ಸಿದೆ, ನಮ್ಮ ಮನೆ ಮಗಳು ಅವಳು” ಎಂದು ಅರ್ಥ ಮಾಡಿಕೊಳ್ಳಬೇಕು.
    ಬಡವರ ಹೆಣ್ಣುಮಕ್ಕಳು ಸಿರಿವಂತರ ಮನೆ ಸೇರಿದಾಗ ಆಗುವ ತೊಂದರೆಗಳನ್ನೇ ಆಧಾರವಾಗಿ ಇಟ್ಟುಕೊಂಡು ಬಡವರ ಮನೆಯ ಮಗಳನ್ನು ದುಡಿಸಲೆಂದೇ ಕೊಬ್ಬಿದ ಸೋಮಾರಿ, ಮಗನಿಗೆ ಮದುವೆ ಮಾಡಿಸುವವರಿಗೆ ಧಿಕ್ಕಾರವಿಲ್ಲವೇ? ಹೆಣ್ಣು ಬಡವಳಾದರೂ ತಾಯಿ ಮನೆಯಲ್ಲಿ ಆಕೆ ಯುವರಾಣಿಯಂತೆಯೇ ಬೆಳೆದಿರುತ್ತಾಳೆ. ತಂದೆ, ತಾಯಿ, ಸಹೋದರ, ಸಹೋದರಿಯರ ಹೃದಯ ಶ್ರೀಮಂತಿಕೆಯ ಪರಿಶುದ್ಧ ಪ್ರೀತಿ ಸಿಗುವಾಗ ಯಾವುದೇ ಹೆಣ್ಣು ಬಡವಳಲ್ಲ, ನೀವೇನಂತೀರಿ?

@ಪ್ರೇಮ್@

Related posts

ಕೊರೋನಾ ಮತ್ತು ದವಡೆಕೀಲು ಮರುಜೋಡಣೆ; ದಂತ ವೈದ್ಯರ ಸಾರ್ಥಕ ಭಾವನೆ

Upayuktha

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9

Harshitha Harish

ವಿಶ್ವ ಮೂಲವ್ಯಾಧಿ ಜಾಗೃತಿ ದಿನ- ನವೆಂಬರ್ 20

Upayuktha