ಲೇಖನಗಳು

ಒಂದಿಷ್ಟು ರಿಲ್ಯಾಕ್ಸ್ ತಗೊಳ್ಳಿ-9

“ಮಾನವೀಯತೆಯಿಂದ ಸುಂದರ ಭಾರತ”ನಮ್ಮದಾಗಬೇಕೆಂಬ ಆಶಯ ಎಲ್ಲರಿಗಿರುವ ನಿಟ್ಟಿನಲ್ಲಿ ಒಂದಷ್ಟು ಅನಿಸಿಕೆಗಳ ಹೂಗುಚ್ಛವಿಲ್ಲಿದೆ.


“ಮಾನವರಾಗೋಣ ನಾವು ಮಾನವರಾಗೋಣ..”ಹೀಗೆಂದು ಜನಮನಕೆ ಖ್ಯಾತ ಕವಿಯೋರ್ವರು ಕರೆಕೊಟ್ಟರು! ಜನರದನ್ನು ಸ್ವೀಕರಿಸಿ ಹಾಡುತಲಿರುವರು, ಜನರ ಎಚ್ಚರಿಸುತಲಿರುವರು! ಅಂದರೆ ನಾವು ಮನುಜರಾಗಿ ಹುಟ್ಟಿದರೂ ಇನ್ನೂ ಮಾನವರಾಗಲಿಲ್ಲವೆಂಬುದನು ಸಾಬೀತುಪಡಿಸಿರುವರು ಜನ! ಅಂದರೆ ನಾವಿನ್ನೂ ಮಾನವರಾಗಿಲ್ಲವೇ? ಪ್ರಾಣಿಗಳು ಪ್ರಾಣಿಗಳಾಗಿವೆ, ಕೀಟಗಳು ಕೀಟಗಳಾಗಿವೆ, ಪಕ್ಷಿಗಳು ಪಕ್ಷಿಗಳಾಗಿವೆ, ದೇಹ-ಮೂಳೆ-ಮೆದುಳು ಬೆಳೆದ ಮಾನವ ಇನ್ನೂ ಮಾನವನಾಹಗಿಲ್ಲ! ಎಂಥ ವಿಪರ್ಯಾಸವಲ್ಲವೇ? ನಾವೆಲ್ಲಾ ಆಕಾಶದಲ್ಲಿ ಹಾರಬಲ್ಲೆವು, ನೀರಿನಾಳದಲ್ಲಿ ಈಜಬಲ್ಲೆವು, ಚಳಿ-ಮಳೆ-ಬಿಸಿಲಲ್ಲೂ ಬದುಕಬಲ್ಲೆವು! ಅನ್ಯ ಗ್ರಹಗಳನ್ನೂ ಶೋಧಿಸಬಲ್ಲೆವು, ಆದರೆ ಮಾನವರಾಗಲೊಲ್ಲೆವು!!ಇಂತಹ ವಿಷಯವನ್ನೂ ಮನುಜ ಮನುಜನಿಗೆ ಕಲಿಸ ಬೇಕಾದ ಸಂಧರ್ಭ ಬಂದಿದೆಯೆಂದರೆ ಮಾನವ ಮಾನವನಾಗುವುದು ಯಾವಾಗ?

         ಇನ್ನು ನಾವು ನಮ್ಮ ದೇಶದ ಬಗ್ಗೆ ಮಾತನಾಡಿದರೆ ಪ್ರಾಥಮಿಕ ಶಾಲೆಯಿಂದಲೂ ಕಲಿಯುತ್ತಾ ಬರುತ್ತಿರುವ ವಾಕ್ಯವೊಂದಿದೆ. “ಭಾರತವು ವಿವಿಧತೆಯಿಂದ ಕೂಡಿದ ಏಕತೆಯನ್ನು ಹೊಂದಿದ ಜಾತ್ಯಾತೀತ ರಾಷ್ಟ್ರವಾಗಿದೆ”!!! ಪ್ರತಿ ವರುಷ ಹೊಸ ಬ್ಯಾಚಿನ ಮಕ್ಕಳನ್ನು ಶಾಲೆಗೆ ಸೇರಿಸಿಕೊಳ್ಳುವ ಸಂಧರ್ಭದಲ್ಲಿ ನಾಲ್ಕು ಪ್ರತಿ ಜಾತಿ-ಆದಾಯ ಪ್ರಮಾಣ ಪತ್ರಗಳನ್ನು ತಪ್ಪದೇ ತರಬೇಕೆನ್ನುವ ಅಡ್ಮಿಶನ್ ಕಾನೂನನ್ನು ನೋಡಿರುವ ನನಗೆ ಇದುವರೆಗೂ “ಜಾತ್ಯಾತೀತ” ಎಂಬ ಪದದ ಅರ್ಥಗ್ರಹಣವಾಗದೆ ಅದು ಗ್ರಹಣದಂತೆಯೇ ಗಹನವಾಗುಳಿದಿದೆ,!!

      ” ಮಾನವ ಜನ್ಮ ದೊಡ್ಡದು, ಅದ ಹಾಳು ಮಾಡಿಕೊಳ್ಳಬೇಡಿ ಹುಚ್ಚಪ್ಪಗಳಿರಾ” ಎಂದು ದಾಸರು ಹಿಂದೆಯೇ ಕರೆಯಿತ್ತಿದ್ದರೂ ನಾವು ಹೇಳುವುದು ಹೆಚ್ಚು, ಕೇಳುವುದು ಕಡಿಮೆಯಲ್ಲವೇ? ಸ್ವಚ್ಛ ಸುಂದರ ಭಾರತಕ್ಕೆ ಪ್ಲಾಸ್ಟಿಕ್ ಮಣ್ಣಿಗೆ ಹಾಕದಿರುವುದು, ಕಾಡು ಕಡಿಯದಿರುವುದು , ಗಿಡ ನೆಟ್ಟು ಬೆಳೆಸುವುದು, ಸಾವಯವ ಕೃಷಿ, ಇಂಗು ಗುಂಡಿ, ಮಳೆ ನೀರಿನ ಬಳಕೆ, ನೀರಿನ ಮಿತವ್ಯಯ, ಹಿತಮಿತ ಆಹಾರ ಸೇವನೆ, ಎಷ್ಟು ಮುಖ್ಯವೋ ಅಷ್ಟೇ ಮುಖ್ಯವಾದುದು ಎಲ್ಲ ಜಾತಿ-ಮತ-ಧರ್ಮದ ಜನರೂ ಒಗ್ಗಟ್ಟಾಗಿ “ಸರ್ವೇ ಜನಾಃ ಸುಖಿನೋ ಭವಂತುಃ” ಎಂಬ ವಾಕ್ಯವನ್ನು ಪರಿಪಾಲಿಸುತ್ತಾ ಬದುಕಿದಲ್ಲಿ ಭಾರತ ಸುಂದರ ಭಾರತವಾಗುವ ಕನಸು ಕಾಣುವುದರಲ್ಲಿ ತಪ್ಪಿಲ್ಲ.

        “ಸರ್ವ ಧರ್ಮವನ್ನು ಪ್ರೀತಿಸಿ, ನಿಮ್ಮ ಧರ್ಮವನ್ನು ಪಾಲಿಸೋಣ” ಎಂಬ ಒಂದು ಧ್ಯೇಯ ವಾಕ್ಯವನ್ನು ಭಾರತೀಯರು ಇಟ್ಟುಕೊಂಡು ಅದರಂತೆ ನಡೆದರೆ ಸಾಕು, ಭಾರತ ವಿಶಾಲ ಮನೋಭಾವದಿಂದ ಸಂತಸಭರಿತ ರಾಷ್ಟ್ರವಾಗುತ್ತದೆ. ಹಿಂದೂ, ಕ್ರೈಸ್ತ, ಮುಸಲ್ಮಾನ, ಬೌದ್ಧ, ಪಾರ್ಸಿ ಎನ್ನುವುದ ಬಿಟ್ಟು, ಭಾರತೀಯ ಎಂದು ಬದುಕಿದರೆ ಭಾರತ ಸರ್ವ ಸುಂದರವಾಗುವುದರಲ್ಲಿ ಸಂದೇಹವೇ ಇಲ್ಲ!
      
           ” ಮಾನವತೆಯ ಕಂಪ ಚೆಲ್ಲುವ ಸುಮದ ಹೃದಯಕೆ ಸ್ವಾಗತ..” ಎಂಬ ಮಾತಿನಂತೆ ಮಾನವತೆಯನು ಬೆಳಗುವ ಹೃದಯವು ತನ್ನ ಹಾಗೂ ತನ್ನ ಸುತ್ತಮುತ್ತಲಿನ ಜನರ ಹೃದಯಗಳ ಸದಾ ಸುಂದರವಾಗಿಡಬಲ್ಲುದು. ಪ್ರೀತಿ, ವಿಶ್ವಾಸ, ನಂಬಿಕೆ, ಗೌರವ, ಅಭಿಮಾನ, ಸ್ನೇಹ ಗುಣಗಳು ಕಲೆತು ಮಾನವೀಯತೆ ಅನಿಸಿಕೊಳ್ಳುತ್ತದೆ. ಇದನ್ನು ಮರೆತು ಬದುಕುವವ ಪ್ರಾಣಿಗಿಂತಲೂ ಕಡೆ, ಮರೆಯದೆ, ಮರೆತವನಂತೆ ನಟಿಸುವವನು ಮುಂದೆ ಅನುಭವಿಸುವನು. ಹಣದ ದಾಹಕ್ಕೆ ಕಟ್ಟುಬಿದ್ದು, ಏನು ಬೇಕಾದರೂ ಮಾಡಲು ಹೇಸದವನು ಮೃಗಕ್ಕಿಂತಲೂ ಕೀಳಲ್ಲವೇ? ಅಂತಹ ಜನರಿಂದ ದೇಶ ಸುಂದರವಾಗಿರಲು ಸಾಧ್ಯವೇ?
    
       ಹೆಣ್ಣು, ಹೊನ್ನು, ಮಣ್ಣಿನಾಸೆಗಾಗಿ ತನ್ನತನವನ್ನು ಮಾರಿ, ತನ್ನೊಳಗೇ ಅವಿತಿರುವ ಉತ್ತಮ ಗುಣಗಳ ದೂರ ಸರಿಸಿ, ಪರದೆಯೊಳಗೆ ಮುಖ ಹುದುಗಿಸಿ ಬದುಕುವ ಧನದಾಸೆಯ ಧುರುಳರಿರುವವರೆಗೆ ತಾಯಿ ಭಾರತಿಗದು ಕಪ್ಪು ಚುಕ್ಕೆಯೇ ಸರಿ. ಸುಂದರತೆಯ ಪ್ರತೀಕ ಪ್ರೀತಿ, ಸ್ನೇಹ, ಪರೋಪಕಾರ ಭಾವ, ಜಾತಿ-ಧರ್ಮಕ್ಕಾಗಿ ಹೊಡೆದಾಡುವುದಲ್ಲ. ಶ್ರೀಕೃಷ್ಣ, ರಾಮ,ಏಸು, ಬುದ್ಧ, ಪೈಗಂಬರ್, ಮಹಾವೀರ, ಬಸವಣ್ಣನವರು ಶಾಂತಿಯ ಸಂದೇಶವ ಸಾರಿದರು. ಸರ್ವರೊಂದೇ ಎಂದರು. ಕಷ್ಟ ಸುಖಗಳ ಅರಿತರು. ಜೀವನದ ಎಡರು ತೊಡರುಗಳ ತಿದ್ದಿ ಮನುಜರಂತೆಯೇ ಬಾಳಿ ಬದುಕಿ ಮಾನವತೆಯ ಗುಣಗಳನ್ನು ಮೈಗೂಡಿಸಿಕೊಂಡಿದ್ದಕ್ಕಾಗಿ ಅವರೆಲ್ಲ  ದೈವೀ ಶಕ್ತಿಗಳಂತೆ ಪೂಜ್ಯರಾದರು. ಮಾದರಿಯಾದರು, ಜನ ಅವರ ಸಂದೇಶಗಳ ಪಾಲಿಸಿ, ಹಂಚುವವರಾದರು. ಇದೆಲ್ಲ ಮಾನವೀಯತೆಯಿಂದ ಬದುಕಿ ಬಾಳಿದರೆ ಸಿಗುವ ಉನ್ನತ ಗೌರವದ ಪ್ರತೀಕ. ಅವರ್ಯಾರೂ ನನ್ನ ಹೆಸರಿನಲ್ಲಿ ಧರ್ಮವೊಂದನ್ನು ಹೊಸದಾಗಿ ಕಟ್ಟಿ ಜಗಳವಾಡಿರೆಂಬ ಕರೆ ಕೊಡಲಿಲ್ಲ, ಬದಲಾಗಿ ಮನುಷ್ಯರಾಗಿ ಸಹೋದರತೆ ಮೆರೆದು, ಶಾಂತಿಯಿಂದ, ಕ್ಷಮಾಗುಣ ಹೊತ್ತವರಾಗಿ, ಪರಸ್ಪರ ಸಹಕಾರದಿಂದ, ಅಹಿಂಸೆಯಿಂದ, ಬದುಕಿನ ಜಂಜಡಗಳನ್ನು ದಿಟ್ಟತನದಿಂದ ಎದುರಿಸಿ ನೆಮ್ಮದಿಯಿಂದ ಬದುಕಲು ಕರೆ ನೀಡಿದರು. ಇದುವೆ ಸುಂದರ ವಿಶ್ವಕ್ಕೆ ಸೋಪಾನ. ಅದು ಇಡೀ ವಿಶ್ವವನ್ನೇ ಅಂದಗೊಳಿಸುವುದೆಂದ ಮೇಲೆ ಭಾರತ ಅದರ ಒಂದು ಪುಟ್ಟ ಭಾಗ ಸುಂದರವಾಗದೇ!?

      ನಮ್ಮ ನಗು, ನಮ್ಮ ಜೀವನ, ನಮ್ಮ ಬದುಕು, ನಮ್ಮ ಗುಣಗಳು, ನಮ್ಮ ಅಳು ನಮ್ಮ ಕೈಯಲ್ಲೇ ಇದೆ. ನಮ್ಮ ಬದುಕು ಸದಾ ಹಸಿರಾಗಬೇಕೆಂದು ನಾವು ಬಯಸುವುದೇ ಆದಲ್ಲಿ ಮಾನವರಾಗಿ ಮಾನವೀಯತೆಯ ಮೆರೆದ ಸಾರ್ಥಕ ಬದುಕು ಬಾಳಿದರೆ ಸಾಕು ಅಷ್ಟೆ, ಭಾರತವೇನು ಇಡೀ ಜಗತ್ತೇ ಸುಂದರವಾಗಿರುತ್ತದೆ! ನಮ್ಮ ಪಕ್ಕದ ಮನೆಯವರ ಸುದ್ದಿಗೆ ನಾವು ಹೋಗದಿದ್ದರಾಯಿತು. ನಮ್ಮ ಬದುಕನ್ನೇ ಮೆಲುಕು ಹಾಕುತ್ತಾ ನಮ್ಮೊಂದಿಗೇ ನಾವು ಚಾಲೆಂಜ್ ಮಾಡಿ ಬದುಕಿದರಾಯಿತು. ಸಾಧ್ಯವಾದರೆ ಇತರ ಮನಗಳಿಗೊಂಚೂರು ಸಹಾಯ ಹಸ್ತ ಚಾಚಿದರಾಯಿತು. ಬದುಕು ಅಷ್ಟೆ, ಮೂರು ದಿನ, ಸರ್ವ ಕೋಪ,ತಾಪ, ದ್ವೇಷಗಳ ಮರೆತು ನಗುತ್ತಾ ಬಾಳೋಣ, ನಮ್ಮ ದೇಶವನ್ನೂ ನಗಿಸೋಣ, ನೀವೇನಂತೀರಿ?

@ಪ್ರೇಮ್@

ಪ್ರೇಮಾ ಉದಯ್ ಕುಮಾರ್
ಸಹಶಿಕ್ಷಕರು
ಸ.ಪ.ಪೂ.ಕಾಲೇಜು ಐವರ್ನಾಡು, ಸುಳ್ಯ ದ.ಕ

Related posts

*ಆಸೆ ಇರಲಿ ಅತಿಯಾಸೆ ಬೇಡ.*

Harshitha Harish

ಕೋವಿಡ್‌ ಹೊಡೆತಕ್ಕೆ ಪತ್ರಿಕಾ’ಲಯ’ ಮಾತ್ರವಲ್ಲ, ಪತ್ರಿಕೆಗಳೇ ‘ಲಯ’; ಬೀದಿಗೆ ಬೀಳ್ತಿರೋ ಪತ್ರಕರ್ತರು

Upayuktha

ಮಧುಮೇಹಕ್ಕೂ ಬಾಯಿಯ ಆರೋಗ್ಯಕ್ಕೂ ಸಂಬಂಧವಿದೆಯೆ?

Upayuktha