ಗ್ರಾಮಾಂತರ ಸ್ಥಳೀಯ

ರಂಗಸಿರಿಯಿಂದ ಆನ್ಲೈನ್ ಸುಗಮ ಸಂಗೀತ ಕಾರ್ಯಾಗಾರ

ಬದಿಯಡ್ಕ: ಕೊರೋನಾ ಲಾಕ್ ಡೌನ್ ಜನಜೀವನಕ್ಕೆ ಹೊಸತೊಂದು ದಿಶೆಯನ್ನೇ ತೋರಿದೆ. ತಂತ್ರಜ್ಞಾನವನ್ನು ಬಳಸಿ ಈ ಅಡೆತಡೆಗಳ ಸವಾಲನ್ನು ಮೀರಿ ಸಮಾಜ ಸಹಜತೆಯತ್ತ ಸಾಗುತ್ತಿದೆ. ಈಗಾಗಲೇ ಶಿಕ್ಷಣವು ಆನ್ಲೈನ್ ಮೂಲಕ ನಡೆಯುತ್ತಿದೆ. ಸಾಹಿತ್ಯ ಸಾಂಸ್ಕøತಿಕ ಸಾಮಾಜಿಕ ಕ್ಷೇತ್ರಗಳಲ್ಲಿ ತನ್ನ ಚಟುವಟಿಕೆಗಳ ಮೂಲಕವೇ ಚಿರಪರಿಚಿತವಾಗಿರುವ ಬದಿಯಡ್ಕದ ರಂಗಸಿರಿ ಸಾಂಸ್ಕೃತಿಕ ವೇದಿಕೆಯು ಈ ವರ್ಷ ಮನೆಮನಗಳಲ್ಲಿ ರಂಗಸಿರಿ ಮರ ಬೆಳೆಸುವ ಮೂಲಕ ತನ್ನ ‘ರಂಗಸಿರಿ ಮರ ಸುಂದರ ಪರಿಸರ’ ಯೋಜನೆಯನ್ನು ಮುಂದುವರಿಸಿದೆ.

ಸುಗಮಸಂಗೀತ, ಭಜನೆ ತರಗತಿಗಳನ್ನು ಆನ್ಲೈನ್ ಮುಖಾಂತರವೇ ನಡೆಸಲಾರಂಭಿಸಿದೆ. ‘ರಂಗಸಿರಿ ಭಾವಸಿರಿ’ ‘ರಂಗಸಿರಿ ಭಜನಸಿರಿ’ ಕಾರ್ಯಕ್ರಮಗಳು ಯೂಟ್ಯೂಬ್ ಮುಖಾಂತರ ಲೋಕಾರ್ಪಣೆಗೊಂಡಿವೆ. ಈ ಸಾಲಿಗೆ ಮತ್ತೊಂದು ಸೇರ್ಪಡೆ “ಆನ್ಲೈನ್ ಸುಗಮಸಂಗೀತ ಕಾರ್ಯಾಗಾರ”. ಇದು ಕಾಸರಗೋಡು ಜಿಲ್ಲೆಯಲ್ಲಿಯೇ ಮೊತ್ತಮೊದಲ ಆನ್ಲೈನ್ ಸುಗಮಸಂಗೀತ ಕಾರ್ಯಾಗಾರವಾಗಿದೆ. ರಂಗಸಿರಿಯ ದಶಮಾನೋತ್ಸವದ ಸಂದರ್ಭದಲ್ಲಿ ಇದೊಂದು ದಾಖಲಾರ್ಹ ಕಾರ್ಯಕ್ರಮವಾಗಿ ಮೂಡಿಬಂದಿದೆ.

ರಂಗಸಿರಿಯ ಸುಗಮ ಸಂಗೀತ ಶಿಕ್ಷಕಿ ಡಾ. ಸ್ನೇಹಾ ಪ್ರಕಾಶ್ ಅವರ ನಿರ್ದೇಶನನದಲ್ಲಿ ಈ ಶಿಬಿರವು ಆನ್ಲೈನ್ ಮುಖಾಂತರ ಸುಸಜ್ಜಿತವಾಗಿ ನಡೆಯಿತು. ಶಿಬಿರವು ಸಂಪೂರ್ಣ ಉಚಿತವಾಗಿ ನಡೆಸಲಾಯಿತು. ಶಿಬಿರಕ್ಕೆ ಸೇರಲಿಚ್ಚಿಸಿದ ಮಂದಿಗಳನ್ನು ವಾಟ್ಸಾಪ್ ಮುಖಾಂತರ ಒಂದೇ ವೇದಿಕೆಯಲ್ಲಿ ತರಲಾಯಿತು. ಅಲ್ಲಿ ತಮ್ಮ ಪರಿಚಯ, ಸಂಗೀತ ಕ್ಷೇತ್ರದ ಕುರಿತಾದ ಸಂಶಯ ನಿವಾರಣೆ, ಶ್ರುತಿ ಸಾಧನೆ, ಭಾವನೆ, ಉಸಿರಾಟದ ಹತೋಟಿಗಾಗಿ ಚಿಕ್ಕ ಪುಟ್ಟ ವ್ಯಾಯಾಮ ಸಹಿತವಾದ ಅರಿವುಗಳನ್ನು ವೀಡಿಯೋ ಮುಖಾಂತರ ನೀಡಲಾಗುತ್ತಿತ್ತು.

ವೀಡಿಯೋಗಳನ್ನು, ಶಿಬಿರದ ಚಟುವಟಿಕೆಗಳನ್ನು ಅದಕ್ಕಾಗಿಯೇ ತೆರೆಯಲಾಗಿದ್ದ ಯೂಟ್ಯೂಬ್ ಮಾಧ್ಯಮದಲ್ಲಿ ಪ್ರಕಟಿಸಿ, ಲೋಕದ ಮುಂದಿಡಲಾಗಿತ್ತು. ಅಲ್ಲದೆ ಶಿಬಿರಾರ್ಥಿಗಳಿಗೆ ಉತ್ಸಾಹ ತುಂಬುವಂತೆ ಮನೆಗೆಲಸಗಳನ್ನು ನೀಡಿ, ತೆರೆಯಲ್ಲೇ ಶಿಬಿರಾರ್ಥಿಗಳ ಕ್ರಿಯಾಶೀಲತೆಯ ಕಡೆಗೆ ಅಂಕ ನೀಡುವಿಕೆಯೂ ನಡೆಯಿತು. ಈ ಶಿಬಿರ ಸುಮಾರು ಒಂದು ತಿಂಗಳ ಪ್ರಕ್ರಿಯೆಯಾಗಿ ನಡೆಯಿತು.

ಕಾಸರಗೋಡು ಹಾಗೂ ಕರ್ನಾಟಕದ ವಿವಿಧ ಕಡೆಗಳಲ್ಲಿನ 34 ಮಂದಿ ನೋಂದಣಿ ಮಾಡಿದ್ದರು. ಶಿಬಿರದ ಮುಖಾಮುಖಿ ಹಂತವನ್ನು ಗೂಗಲ್ ಮೀಟ್ ಮೂಲಕ ನಡೆಸಲಾಯಿತು. ಶಿಬಿರಕ್ಕಾಗಿಯೇ ರಚಿಸಲ್ಪಟ್ಟ ಅನ್ನಪೂರ್ಣ ಬೆಜಪ್ಪೆಯವರ ನಿಸರ್ಗ ಕವನಕ್ಕೆ ತಾವೇ ಸ್ವರಸಂಯೋಜಿಸಿ ಡಾ.ಸ್ನೇಹಾಪ್ರಕಾಶ್ ಕಲಿಸಿಕೊಟ್ಟರು. ಶಿಬಿರಾರ್ಥಿಗಳ ಒಂದು ತಿಂಗಳ ಕಾಲದ ಒಟ್ಟಂದಿನ ಸ್ಪಂದನೆ, ಕ್ರಿಯಾಶೀಲತೆ ಗಮನಿಸಿ ಶ್ರೇಣೀಕರಣ ಮಾಡಲಾಯಿತು.

ಭಾಗವಹಿಸಿದವರಿಗೆ ಚತುರ ಶಿಬಿರಾರ್ಥಿ, ಸಕ್ರಿಯ ಶಿಬಿರಾರ್ಥಿ ಹಾಗೂ ಶಿಬಿರಾರ್ಥಿಗಳೆಂಬ ವರ್ಗೀಕರಣ ನಡೆಸಿ, ಇ ಪ್ರಮಾಣಪತ್ರವನ್ನು ನೀಡಲಾಯಿತು. ಡಾ. ಸ್ನೇಹಾ ಪ್ರಕಾಶ್ ಪೆರ್ಮುಖ ತರಬೇತಿ ನೀಡಿದರು. ರಂಗಸಿರಿಯ ಕಾರ್ಯದರ್ಶಿ ಶ್ರೀಶ ಕುಮಾರ ಪಂಜಿತ್ತಡ್ಕ, ಉದಯ ಕಂಬಾರ್ ತಾಂತ್ರಿಕ ಸಹಕಾರ ನೀಡಿದರು. ರಂಗಸಿರಿ ಅಧ್ಯಕ್ಷೆ ಪ್ರಭಾವತಿ ಕೆದಿಲಾಯ ಪುಂಡೂರು ಉಪಸ್ಥಿತರಿದ್ದರು.

****

“ಕಾರ್ಯಾಗಾರಕ್ಕೆ ಮುಂಚಿತವಾಗಿಯೇ ತೊಡಗಿದ ಪ್ರಕ್ರಿಯೆಗಳಲ್ಲಿ ಓರ್ವ ಹಾಡುಗಾರನಿಗೆ ಬೇಕಾದ ಅಡಿಪಾಯವೆನಿಸುವ ಶ್ರುತಿ ಸಾಧನೆ, ಭಾವನೆ, ಉಸಿರಾಟದ ಹತೋಟಿ ಕುರಿತಾದ ಅರಿವು ನೀಡಿದ್ದು ತುಂಬಾ ಉಪಯುಕ್ತವಾಯಿತು.”
-ಜ್ಯೋತ್ಸ್ನಾ ಕಡಂದೇಲು, ಶಿಬಿರಾರ್ಥಿ (ವೃತ್ತಿ: ಶಿಕ್ಷಕಿ)

“ಸ್ವರಾವಳಿಗಳನ್ನು ಅಭ್ಯಾಸ ಮಾಡುವ ಕ್ರಮ, ಉಸಿರಿನ ಹತೋಟಿ, ಭಾವನೆ ಇತ್ಯಾದಿ ವಿಚಾರಗಳು ತಿಳಿದವು. ಪೂರ್ವಭಾವಿಯಾಗಿ ನೀಡುತ್ತಿದ್ದ ಜ್ಞಾನ ಹಾಗೂ ಜೊತೆಗಿದ್ದ ಮನೆಗೆಲಸವು ನಮ್ಮ ಉತ್ಸಾಹ ಹೆಚ್ಚುವಂತೆ ಮಾಡುತ್ತಿತ್ತು.”
-ಅನ್ವಿತಾ ತಲ್ಪನಾಜೆ, ಶಿಬಿರಾರ್ಥಿ.

“ಕಾರ್ಯಾಗಾರ ಒಂದು ತಿಂಗಳ ಪ್ರಕ್ರಿಯೆಯಾಗಿ ನಡೆದದ್ದು ಬಹಳ ಸುವ್ಯವಸ್ಥಿತವಾಗಿ, ಫಲಪ್ರದವಾಗಿತ್ತು. ಇದರಂಗವಾಗಿಯೇ 20 ದಿನಗಳಲ್ಲಿ ವಿವಿಧ ವೀಡಿಯೋ ಮುಖಾಂತರ ಡಾ.ಸ್ನೇಹಾ ಪ್ರಕಾಶ್ ಅವರು ತಮ್ಮ ಅತ್ಯಮೂಲ್ಯ ಅನುಭವಗಳನ್ನು ನಮಗೆ ನೀಡಿದ್ದಾರೆ. ಒಂದು ಜ್ಞಾನ ಹೇಳಿಕೊಟ್ಟಾಗ ಅದರಿಂದ ಬಹುಮುಖೀ ಪ್ರಯೋಜನ ಆಗುತ್ತಿತ್ತು. ಉದಾಹರಣೆಗೆ ಉಸಿರಾಟದ ವ್ಯಾಯಾಮದಿಂದ ಏಕಾಗ್ರತೆಯೂ ಸಾಧನೆಯಾಯಿತು.”
-ಚಂದನ.ಟಿ.ಎಸ್, ಶಿವಮೊಗ್ಗ, ಶಿಬಿರಾರ್ಥಿ

(ಉಪಯುಕ್ತ ನ್ಯೂಸ್)

‘ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

 

ಟ್ವಿಟರ್‌ನಲ್ಲಿ ಉಪಯುಕ್ತ ನ್ಯೂಸ್ ಫಾಲೋ ಮಾಡಿ

 

ಯೂಟ್ಯೂಬ್‌ನಲ್ಲಿ ಉಪಯುಕ್ತ ನ್ಯೂಸ್ ವೀಕ್ಷಿಸಿ

 

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

 

ನಿಮ್ಮ ಮೆಚ್ಚಿನ ಉಪಯುಕ್ತ ನ್ಯೂಸ್ ಈಗ ಗೂಗಲ್ ನ್ಯೂಸ್ App ನಲ್ಲೂ ಲಭ್ಯ. ಈ ಲಿಂಕ್ ಕ್ಲಿಕ್ ಮಾಡಿ ಫಾಲೋ ಮಾಡಿ.

Related posts

ಕುತ್ಲೂರಿನಲ್ಲಿ ಹುಲಿ ಪ್ರತ್ಯಕ್ಷ, ಗ್ರಾಮದಲ್ಲಿ ಆತಂಕ

Upayuktha

ವಿವೇಕಾನಂದ ಕಾಲೇಜಿನಲ್ಲಿ ‘ವಿವೇಕಾನಂದ ಜಯಂತಿ ಸಾಹಿತ್ಯ-ಸಾಂಸ್ಕೃತಿಕ ಸ್ಪರ್ಧೆ’: ಮಂಗಳೂರಿನ ಕೆನರಾ ಕಾಲೇಜಿಗೆ ಸಮಗ್ರ ಪ್ರಶಸ್ತಿ

Upayuktha

ಮೀಟರ್ ರೀಡರ್‌ಗಳ ವಜಾ: ಮೆಸ್ಕಾಂ ವಿರುದ್ಧ ಸಿಐಟಿಯು ಪ್ರತಿಭಟನೆ

Upayuktha