ದೇಶ-ವಿದೇಶ ಪ್ರಮುಖ

‘ಮಹಾ ನಾಟಕ’: ಅಳಿಯ ಅಜಿತ್ ಜತೆ 10-11 ಶಾಸಕರಿರಬಹುದು ಎಂದ ಶರದ್ ಪವಾರ್

ಶಿವಸೇನೆ ಒಡೆಯಲು ಬಿಜೆಪಿ ಯತ್ನ: ಉದ್ಧವ್ ಠಾಕ್ರೆ ಆರೋಪ

ದಿಲ್ಲಿಯಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಎನ್‌ಸಿಪಿ ವರಿಷ್ಠ ಶರದ್ ಪವಾರ್ ಮತ್ತು ಶಿವಸೇನೆ ವರಿಷ್ಠ ಉದ್ಧವ್ ಠಾಕ್ರೆ (ಚಿತ್ರ: ಎಎನ್‌ಐ)

ಹೊಸದಿಲ್ಲಿ: ಎನ್‌ಸಿಪಿಯ 10-11 ಶಾಸಕರು ಅಜಿತ್ ಪವಾರ್ ಜತೆ ಬೆಂಬಲಕ್ಕೆ ನಿಂತಿದ್ದಾರೆ ಎಂದು ಪಕ್ಷದ ವರಿಷ್ಠ ಶರದ್ ಪವಾರ್ ಹೇಳಿದ್ದಾರೆ. ಇದು ಪಕ್ಷ ಅಧಿಕೃತ ನಿಲುವಿಗೆ ವಿರುದ್ಧವಾಗಿದ್ದು, ‘ಅಶಿಸ್ತು’ ಎಂದು ಪರಿಗಣಿಸಬೇಕಾಗುತ್ತದೆ ಎಂದಿದ್ದಾರೆ.

ಶಿವಸೇನಾ ವರಿಷ್ಠ ಉದ್ಧವ್ ಠಾಕ್ರೆ ಜತೆ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪವಾರ್, ಪಕ್ಷ ಕಾರ್ಯಕರ್ತರಾಗಲಿ, ನಾಯಕರಾಗಲಿ ಎನ್‌ಸಿಪಿ-ಬಿಜೆಪಿ ಸರಕಾರವನ್ನು ಬೆಂಬಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿಯ ದೇವೇಂದ್ರ ಫಡ್ನವಿಸ್ ಎರಡನೇ ಅವಧಿಗೆ ಮುಖ್ಯಮಂತ್ರಿಯಾಗಿ ಹಾಗೂ ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಿಗೇ ಶರದ್ ಪವಾರ್ ಮತ್ತು ಉದ್ಧವ್ ಠಾಕ್ರೆ ಈ ಪತ್ರಿಕಾಗೋಷ್ಠಿ ನಡೆಸಿದ್ದಾರೆ.

ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟಕ್ಕೆ 170 ಶಾಸಕರ ಬೆಂಬಲವಿದೆ ಎಂದು ಪವಾರ್ ಹೇಳಿಕೊಂಡರು.

ಕಳೆದ ತಿಂಗಳು ನಡೆದ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ 105 ಸ್ಥಾನಗಳನ್ನು ಗೆದ್ದ ಬಿಜೆಪಿ ಏಕೈಕೊ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಶಿವಸೇನೆ 56 ಸ್ಥಾನಗಳೊಂದಿಗೆ ಎರಡನೇ ದೊಡ್ಡ ಪಕ್ಷವಾಗಿತ್ತು. ಎನ್‌ಸಿಪಿ 54 ಸೀಟುಗಳನ್ನು ಗೆದ್ದಿತ್ತು. 44 ಸ್ಥಾನಗಳನ್ನು ಗೆದ್ದ ಕಾಂಗ್ರೆಸ್ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುವಂತಾಯಿತು. ಇತರರು 29 ಸ್ಥಾನಗಳನ್ನು ಗೆದ್ದಿದ್ದರು. ವಿಧಾನಸಭೆಯಲ್ಲಿ ಬಹುಮತಕ್ಕೆ 144 ಸ್ಥಾನಗಳು ಬೇಕಾಗುತ್ತವೆ.

ಶರದ್ ಪವಾರ್‌ ಅಳಿಯನೂ ಆಗಿರುವ ಅಜಿತ್ ಪವಾರ್‌ ಎನ್‌ಸಿಪಿಯಲ್ಲಿ ಕ್ಷಿಪ್ರ ಕ್ರಾಂತಿ ನಡೆಸಿ ಬಿಜೆಪಿ ಜತೆ ಕೈಜೋಡಿಸಿ ಇದೀಗ ಉಪಮುಖ್ಯಮಂತ್ರಿಯೂ ಆಗಿದ್ದಾರೆ. ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾಗಿದ್ದ ಅಜಿತ್ ಪವಾರ್‌ ನಿನ್ನೆ ಈ ಕ್ಷಣದ ವರೆಗೂ ಆ ಹುದ್ದೆಯಲ್ಲಿದ್ದಾರೆ. ಆದರೆ ಬದಲಾದ ರಾಜಕೀಯ ಪರಿಸ್ಥಿತಿಯಲ್ಲಿ ಎನ್‌ಸಿಪಿ ನುತನ ಶಾಸಕಾಂಗ ಪಕ್ಷದ ನಾಯಕನನ್ನು ಆರಿಸುವುದಾಗಿ ಹೇಳಿದೆ.

ಬಂಡಾಯ ಶಾಸಕರು ಪಕ್ಷದಿಂದ ಹೊರ ನಡೆದಲ್ಲಿ ಸದಸ್ಯತ್ವ ಕಳೆದುಕೊಂಡು ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹರಾಗಲಿದ್ದಾರೆ ಎಂದು ಶರದ್ ಪವಾರ್ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಒಬ್ಬ ಎನ್‌ಸಿಪಿ ಶಾಸಕ, ತಮ್ಮನ್ನು ಅಜಿತ್ ಪವಾರ್ ಕರೆದಿದ್ದರು; ಇತರ ಎನ್‌ಸಿಪಿ ಶಾಸಕರನ್ನು ರಾಜಭವನಕ್ಕೆ ಕರೆದೊಯ್ದರು ಎಂದು ತಿಳಿಸಿದರು.

‘ಪ್ರಮಾಣವಚನ ಸಮಾರಂಭ ಪೂರ್ಣಗೊಳ್ಳುವ ವರೆಗೂ ನಮಗೆ ಏನಾಗುತ್ತಿದೆ ಎಂಬುದೇ ತಿಳಿಯಲಿಲ್ಲ. ವಿಷಯ ತಿಳಿದ ಕೂಡಲೇ ಪವಾರ್ ಸಹೇಬ್ ಬಳಿ ಓಡಿ, ನಾನು ನಿಮ್ಮ ಜತೆ ಹಾಗೂ ಎನ್‌ಸಿಪಿ ಜತೆಗೆ ಇರುವುದಾಗಿ ತಿಳಿಸಿದೆ’ ಎಂದು ಶಾಸಕ ತಿಳಿಸಿದರು.

ಎನ್‌ಸಿಪಿ-ಶಿವಸೇನೆ ಮತ್ತು ಕಾಂಗ್ರೆಸ್‌ ಮೈತ್ರಿ ಸರಕಾರವನ್ನು ಬೆಂಬಲಿಸುವ ಶಾಸಕರ ಪಟ್ಟಿಯನ್ನು ಅಜಿತ್ ಪವಾರ್‌ ಬಳಸಿಕೊಂಡಿರಬಹುದು ಎಂದು ಶರದ್ ಪವಾರ್ ಸಂದೇಹ ವ್ಯಕ್ತಪಡಿಸಿದರು.

‘ತಮ್ಮ ಎಲ್ಲ ಶಾಸಕರು ಸಹಿಮಾಡಿದ ಪತ್ರಗಳನ್ನು ಪಕ್ಷಗಳು ಸಿದ್ಧಪಡಿಸಿ ಇಟ್ಟುಕೊಂಡಿದ್ದವು. ಎನ್‌ಸಿಪಿ ಪಟ್ಟಿ ಅಜಿತ್ ಪವಾರ್ ಕೈಯ್ಯಲ್ಲಿತ್ತು. ಅದವರು ಅದೇ ಪಟ್ಟಿಯನ್ನು ತಮ್ಮ ಬೆಂಬಲಿಗರ ಪಟ್ಟಿ ಎಂದು ರಾಜ್ಯಪಾಲರಿಗೆ ನೀಡಿರಬಹುದು. ನಾವು ರಾಜ್ಯಪಾಲರ ಜತೆ ಚರ್ಚಿಸುತ್ತೇವೆ’ ಎಂದು ಶರದ್ ಪವಾರ್ ಹೇಳಿದರು.

ಶಿವಸೇನೆಯನ್ನು ಒಡೆಲು ಬಿಜೆಪಿ ಹವಣಿಸುತ್ತಿದೆ ಎಂದು ಪಕ್ಷದ ವರಿಷ್ಠ ಉದ್ಧವ್ ಠಾಕ್ರೆ ಆರೋಪಿಸಿದರು. “ಮೊದಲು ಇವಿಎಂ ತಿರುಚುವ ಆಟವಾಡಿದರು. ಈಗ ಪಕ್ಷ ಒಡೆಯುವ ಆಟವಾಡುತ್ತಿದ್ದಾರೆ. ಇನ್ನು ಮುಂದೆ ಚುನಾವಣೆಗಳ ಅಗತ್ಯವೇ ಇಲ್ಲ ಎಂದು ನಾನು ಭಾವಿಸುತ್ತೇನೆ’ ಛತ್ರಪತಿ ಶಿವಾಜಿ ಮಹಾರಾಜರಿಗೆ ವಂಚಿಸಿ ಬೆನ್ನಿಗೆ ಇರಿದರು ಎಂಬುದು ಎಲ್ಲರಿಗೂ ತಿಳಿದಿದೆ. ಅದೇ ರೀತಿ ಈಗ ನಮಗೂ ಆಗಿದೆ. ಅವರು ಶಿವಸೇನೆಯನ್ನು ಒಡೆಯಲು ಯತ್ನಿಸಲಿ. ಮಹಾರಾಷ್ಟ್ರ ಸುಮ್ಮನೆ ನಿದ್ರಿಸುತ್ತಲೇ ಇರದು’ ಎಂದು ಠಾಕ್ರೆ ಎಚ್ಚರಿಸಿದರು.

Related posts

ಐಪಿಪಿಬಿ ಹೊಸ ಡಿಜಿಟಲ್ ಪಾವತಿ ಆಪ್‌ ‘ಡಾಕ್‌ ಪೇ’ ಬಿಡುಗಡೆ

Upayuktha

ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಕೋವಿಡ್ ಪಾಸಿಟಿವ್

Harshitha Harish

ಪಂಜಾಬ್ ಗ್ರಾಮದೊಳಗೆ ಶಸ್ತ್ರಾಸ್ತ್ರ ಬೀಳಿಸಿದ ಪಾಕ್ ಡ್ರೋನ್‌ಗಳು

Upayuktha